ಬೇಂದ್ರೆ, ಕುವೆಂಪು ಸಾಹಿತ್ಯಕ್ಕೆ ಹೊಸ ನೆಲೆಗಳನ್ನು ನೀಡಿದ್ದ ನಾಡೋಜ ಡಾ.ಜಿ.ಕೃಷ್ಣಪ್ಪ: ನಾಡೋಜ ಡಾ.ಮಹೇಶ ಜೋಶಿ ನುಡಿ ನಮನ

ಬೆಂಗಳೂರು: ಮಂಡ್ಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಳ್ಳುವ ಕೆಲವು ದಿನಗಳ ಹಿಂದಷ್ಟೇ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಗೆ ಭೇಟಿ ನೀಡಿ ಸುದೀರ್ಘವಾಗಿ ನನ್ನೊಂದಿಗೆ ಬೇಂದ್ರೆ ಕಾವ್ಯದ ನೆಲೆಗಳನ್ನು ಚರ್ಚಿಸಿದ್ದ ಬೇಂದ್ರೆ ಕೃಷ್ಣಪ್ಪ ‘ ಎಂದೇ ಹೆಸರಾಗಿದ್ದ ಡಾ.ಜಿ.ಕೃಷ್ಣಪ್ಪ ಇನ್ನಿಲ್ಲ ಎನ್ನುವ ಸುದ್ದಿ ನಿಜಕ್ಕೂ ಆಘಾತಕಾರಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಕಂಬನಿ ಮಿಡಿದರು. ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜನೆಗೊಂಡಿದ್ದ ಡಾ.ಜಿ.ಕೃಷ್ಣಪ್ಪನವರ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡುತ್ತಿದ್ದರು.

ಡಾ.ಜಿ.ಕೃಷ್ಣಪ್ಪನವರ  ‘ನಾಕುತಂತಿ ಒಂದು ಟಿಪ್ಪಣಿ’ ಮತ್ತು ‘ಬೇಂದ್ರ ಕಂಡ ಬೆಳಗು’ ಎರಡೂ ಪುಸ್ತಕಗಳು ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾದವು. ‘ನಾಕುತಂತಿ-50’ ರ ಕುರಿತು ಸಾಹಿತ್ಯ ಸಮ್ಮೇಳನದಲ್ಲಿ ಅವರೇ ಮಾತನಾಡಬೇಕು ಎನ್ನುವುದು ನಮ್ಮ  ಆಸೆಯಾಗಿತ್ತು,  ಆದರೆ ಆರೋಗ್ಯದ ಸಮಸ್ಯೆ ಅವರನ್ನು ಮಂಡ್ಯಕ್ಕೆ ಬರದಂತೆ ತಡೆಯಿತು. ‘ನಿಮ್ಮ ಮಾತುಗಳ ವಿಡಿಯೋ ಕಳುಹಿಸಿ’ ಎಂದು ವಿನಂತಿಸಿಕೊಂಡೆ. ಮಗನ ಸಹಾಯ ಪಡೆದು ಹದಿಮೂರು ನಿಮಿಷಗಳ ವಿಡಿಯೋ ಅವರು ಕಳುಹಿಸಿದರು. ಅದನ್ನು ಸಮ್ಮೇಳನದಲ್ಲಿ ಪ್ರದರ್ಶನ ಮಾಡಿದೆವು.  ಇದು ಅವರಿಗೆ ಬಹಳ ಸಂತೋಷವನ್ನು ಕೊಟ್ಟಿತ್ತು. ಬಹಳ ವಿವರವಾಗಿ ನಂತರದ ದಿನಗಳಲ್ಲಿ ಬೇಂದ್ರೆ ಕುರಿತು ನನ್ನ ಜೊತೆಯಲ್ಲಿ ಮಾತನಾಡಿದ್ದರು. ಬೇಂದ್ರೆ ಕಾವ್ಯದ ಮಾಂತ್ರಿಕತೆ ಹಿಡಿಯಬಲ್ಲ ಜಾದೂಗಾರ ಎನ್ನಿಸಿಕೊಂಡ ಅವರು ಕುವೆಂಪು ಅವರನ್ನು ಆಳವಾಗಿ ಕೃಷ್ಣಪ್ಪ ಓದಿ ಕೊಂಡಿದ್ದರು. ಕುವೆಂಪು ಪದಸಂಪತ್ತಿನ ಕುರಿತ ಅವರ ಅಂಕಣ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗುತ್ತಿತ್ತು. ಜೈಮಿನಿ ಭಾರತ, ಗಿರಿಜಾ ಕಲ್ಯಾಣಗಳನ್ನು ಹೊಸಗನ್ನಡಕ್ಕೆ ತಂದಿದ್ದ ಕೃಷ್ಣಪ್ಪನವರು ‘ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ- ಒಂದು ಅಧ್ಯಯನ’ ಎಂಬ ವಿಷಯದಲ್ಲಿ ಡಾಕ್ಟರೇಟ್ ಪಡೆದಿದ್ದರು ಎಂದು ನಾಡೋಜ ಡಾ.ಮಹೇಶ ಜೋಶಿ ಅವರ ಕೊಡುಗೆಗಳನ್ನು ವಿವರಿಸಿದರು.

ಕನ್ನಡ  ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಎನ್.ಎಸ್. ಶ್ರೀಧರಮೂರ್ತಿಯವರು ಮಾತನಾಡಿ ಉತ್ಕಟ ಸಾಹಿತ್ಯ ಪ್ರೇಮಿಯಾದ ಕೃಷ್ಣಪ್ಪನವರ ನೀಡುತ್ತಿದ್ದ ಹೊಳಹುಗಳು ಅದ್ಭುತ. ಅಕಾಡಮಿಕ್ ಜಾರ್ಗನ್ ಗಳನ್ನು ಮುರಿದು ಅವರು ವಿಮರ್ಶೆಯನ್ನು ಹೊಸ ರೂಪದಲ್ಲಿ ಕಟ್ಟಿದರು. ಅವರ ಮಾತುಗಳನ್ನು ಏಕಾಂತದಲ್ಲಿ  ಹಲವು ಗಂಟೆಗಳನ್ನು ಕೇಳುವ ಅದೃಷ್ಟ ನನಗೆ ಸಿಕ್ಕಿತ್ತು. ಅವರ ಹಲವು ಕೃತಿಗಳನ್ನು ಹಸ್ತಪ್ರತಿಯಲ್ಲಿಯೇ ಓದುವ ಸೌಭಾಗ್ಯ ನನಗೆ ದೊರಕಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಅವರ ತುಂಬು ಪ್ರೀತಿ ನನಗೆ ಅಖಂಡವಾಗಿ ಮೂವತ್ತು ವರ್ಷಗಳ ಕಾಲ ದೊರಕಿತ್ತು ಎನ್ನುವುದು ಈಗ ‘ಭುವನದ ಭಾಗ್ಯ’ ಎನ್ನಿಸುತ್ತದೆ ಎಂದು ತಮ್ಮ ಒಡನಾಟದ ನೆನಪುಗಳನ್ನು ಹಂಚಿಕೊಂಡರು.

ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು, ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು, ನೇ.ಭ.ರಾಮಲಿಂಗ ಶೆಟ್ಟಿ ಮತ್ತು ಪರಿಷತ್ತಿನ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಎನ್.ಎಸ್.ಶ್ರೀಧರ ಮೂರ್ತಿ(ಸಂಚಾಲಕರು, ಪ್ರಕಟಣಾ ವಿಭಾಗ)

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)