ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿತ :  ನಾಡೋಜ ಡಾ.ಮಹೇಶ ಜೋಶಿ ಆತಂಕ

ಬೆಂಗಳೂರು : ಪ್ರಥಮ್ ಎಂಬ ಸ್ವಯಂ ಸೇವಾ ಸಂಸ್ಥೆ ವಾರ್ಷಿಕ ಶೈಕ್ಷಣಿಕ ಪ್ರಗತಿ ಸಮೀಕ್ಷಾ ವರದಿಯ ಪ್ರಕಾರ ಸರ್ಕಾರಿ ಶಾಲೆಗಳಲ್ಲಿನ ದಾಖಲಾತಿಯ ಪ್ರಮಾಣ ಹಿಮ್ಮುಖವಾಗಿರುವುದು ಆತಂಕತದ ಬೆಳವಣಿಗೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ. ಕನ್ನಡ ಉಳಿದು ಬೆಳೆಯುತ್ತಿರುವುದು ಸರ್ಕಾರಿ ಶಾಲೆಗಳ ಮೂಲಕ. ಇಲ್ಲಿನ ದಾಖಲಾತಿ ಇಳಿಮುಖವಾದರೆ ಕನ್ನಡದ ಅಸ್ವಿತ್ವಕ್ಕೆ ಕಂಟಕ ಉಂಟಾಗಲಿದೆ ಎನ್ನುವ ಆತಂಕವನ್ನು ಅವರು ವ್ಯಕ್ತ ಪಡಿಸಿದ್ದಾರೆ. ರಾಜ್ಯ ಸರ್ಕಾರ ಇದರ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅವರು ಆಗ್ರಹ ಪಡಿಸಿದ್ದಾರೆ. ಸಮೀಕ್ಷೆಯಲ್ಲಿ ಮೂರನೆಯ ತರಗತಿಯಲ್ಲಿ ಓದುವ ಶೇ 7.1ರಷ್ಟು ವಿದ್ಯಾರ್ಥಿಗಳಿಗೆ ಒಂದೇ ಒಂದು ಅಕ್ಷರವನ್ನು ಓದಲು ಬರುವುದಿಲ್ಲವೆನ್ನುವ ಅಂಶ ಇನ್ನಷ್ಟು ಆತಂಕಕಾರಿಯಾಗಿದೆ. ಶೇ 19.3 ರಷ್ಟು ವಿದ್ಯಾರ್ಥಿಗಳು ಪದಗಳನ್ನು ಓದಲು ಕಷ್ಟಪಡುತ್ತಿದ್ದಾರೆ ಎನ್ನುವಂತಹ ಅಂಶಗಳು ಸೂಕ್ತ ಶಿಕ್ಷಕರು ದೊರಕುತ್ತಿಲ್ಲವೆನ್ನುವ ಸ್ಥಿತಿಯನ್ನು ಸೂಚಿಸುತ್ತದೆ. ನಿರರ್ಗಳವಾಗಿ ಓದಬಲ್ಲ ಮಕ್ಕಳ ಸಂಖ್ಯೆ ಶೇ 21.5 ಮಾತ್ರ ಎಂದರೆ ಭವಿಷ್ಯದಲ್ಲಿ ಕನ್ನಡದ ಸ್ಥಿತಿ ಅಪಾಯಕಾರಿ ಎಂದೇ ಹೇಳಬಹುದು. ಈ ಕುರಿತು ಚರ್ಚೆಗಳು ನಡೆಯಬೇಕಾದ ಅಗತ್ಯವಿದೆ ಎಂದು ನಾಡೋಜ ಡಾ. ಮಹೇಶ ಜೋಶಿಯವರು ಅಭಿಪ್ರಾಯ ಪಟ್ಟಿದ್ದಾರೆ.

ಕರ್ನಾಟಕ ಪ್ರೌಡಶಾಲೆಗಳ ಶೇ 94.5ರಷ್ಟು ಮಕ್ಕಳು ಡಿಜಿಟಲ್ ಸಾಕ್ಷರತೆಗೆ ತೆರೆದುಕೊಂಡಿರುವುದು ಮಕ್ಕಳು ಸರ್ಕಾರಿ ಶಾಲೆಗಳಿಂದ ದೂರ ಉಳಿಯಲು ಕಾರಣ ಎಂಬ ಅಂಶವು ಸಮೀಕ್ಷೆಯಲ್ಲಿ ದಾಖಲಾಗಿದೆ ಎನ್ನುವುದರ ಕುರಿತು ಗಮನ ಸೆಳೆದಿರುವ ನಾಡೋಜ ಡಾ.ಮಹೇಶ ಜೋಶಿಯವರು ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಗಟ್ಟಿಯಾಗಬೇಕಾದ ಅಗತ್ಯವನ್ನು ಇದು ಸೂಚಿಸುತ್ತದೆ. ಇವತ್ತು 14ರಿಂದ 16ರ ವಯೋಮಾನದ ಶೇ 70ರಷ್ಟು ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದರೂ ಅವರಲ್ಲಿ ಶೇ 82ರಷ್ಟು ಜನರ ಆಯ್ಕೆ ಇಂಗ್ಲೀಷ್ ಆಗಿದೆ ಎನ್ನುವುದು. ಭವಿಷ್ಯದಲ್ಲಿ ಅವರೆಲ್ಲರೂ ಕನ್ನಡದಿಂದ ದೂರವಾಗುವ ಸಾಧ್ಯತೆಯನ್ನು ಬಿಂಬಿಸುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸುವ ಕುರಿತು ಸಮೀಕ್ಷೆ ‘ಎಚ್ಚರಿಕೆ ಗಂಟೆ’ಯನ್ನು ಬಾರಿಸಿದ್ದು ನಾವೆಲ್ಲರೂ ಕೂಡಲೇ ಕಾರ್ಯ ಪ್ರವೃತ್ತರಾಗಬೇಕಿದ್ದು ‘ಕನ್ನಡ ಸಾಹಿತ್ಯ ಪರಿಷತ್ತು’ಇಂತಹ ಪ್ರಯತ್ನದ ಮಂಚೂಣಿಯಲ್ಲಿರಲಿದೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ  ಸಾಹಿತ್ಯ  ಪರಿಷತ್ತಿನ ನಿಬಂಧನೆಯಲ್ಲಿ ಪ್ರಕಟಿಸಿರುವ ಧ್ಯೇಯೋದ್ದೇಶ (4)ರಲ್ಲಿ “ಕನ್ನಡ ಶಾಲೆಗಳ ಪುನಶ್ಚೇತನ: ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಗುಣಮಟ್ಟದ ಶಿಕ್ಷಣ ಕೊಡುವ ಸ್ಥಿತಿಯಲ್ಲಿಲ್ಲದ ಕನ್ನಡ ಶಾಲೆಗಳನ್ನು ಗುರುತಿಸಿ ಅವುಗಳ ಪುನಶ್ಚೇತನಕ್ಕೆ ಅವಶ್ಯಕವೆನಿಸಿದಲ್ಲಿ ಸರ್ಕಾರ  ಹಾಗೂ ಸಂಘ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಶ್ರಮಿಸುವುದು” ಎನ್ನುವ ಅಂಶವಿದ್ದು,  ಇದೇ ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಿ ಅನೇಕ ಸರಣಿ ಕಾರ್ಯಕ್ರಮಗಳನ್ನು ರೂಪಿಸಿದ್ದು ರಾಜ್ಯಮಟ್ಟದಲ್ಲಿ ಗಣ್ಯರ ಸಮಾವೇಶವನ್ನು ಕೂಡ ನಡೆಸಿದೆ ಎಂದು ಹೇಳಿರುವ ನಾಡೋಜ ಡಾ.ಮಹೇಶ ಜೋಶಿಯವರು ಈ ಕುರಿತು 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ದಲ್ಲಿ ‘ರಾಜ್ಯದಲ್ಲಿರುವ ಸರ್ಕಾರದ ಎಲ್ಲಾ ಕನ್ನಡ ಶಾಲೆಗಳಿಗೆ ಶಿಕ್ಷಕರ ನೇಮಕಾತಿ, ಕಟ್ಟಡ, ವಾಚನಾಲಯ, ಆಟದ ಮೈದಾನ ಸೇರಿದಂತೆ ಇತರೆ ಮೂಲಸೌಕರ್ಯಗಳನ್ನು ಒದಗಿಸುವ ಮತ್ತು ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿಯ ಕ್ರಮಕ್ಕೆ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು, ಕನ್ನಡೇತರ ಶಾಲೆಗಳಿಗೆ ಕನ್ನಡ ಶಿಕ್ಷಕರನ್ನು ಕಡ್ಡಾಯವಾಗಿ ನೇಮಕ ಮಾಡಬೇಕು’ ಎನ್ನುವ ನಿರ್ಣಯವನ್ನು ತೆಗೆದು ಕೊಂಡಿದ್ದು ಇದರ ಅನುಷ್ಟಾನಕ್ಕಾಗಿ ಅಧ್ಯಕ್ಷರಾದ ಗೊ.ರು.ಚನ್ನಬಸಪ್ಪನವರ ನೇತೃತ್ವದಲ್ಲಿ  ಬರಹಗಾರರ, ಶಿಕ್ಷಣ ತಜ್ಞರರ ನಿಯೋಗವನ್ನು ಕರೆದುಕೊಂಡು ಹೋಗಿ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಸಚಿವರನ್ನು ಭೇಟಿ  ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ಎನ್.ಎಸ್.ಶ್ರೀಧರ ಮೂರ್ತಿ(ಸಂಚಾಲಕರು, ಪ್ರಕಟಣಾ ವಿಭಾಗ)

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)