ಬೆಂಗಳೂರು : ಜನ ಸಾಮಾನ್ಯರಲ್ಲಿ ಅದರಲ್ಲಿಯೂ ವಿಶೇಷವಾಗಿ ಕನ್ನಡ ಯುವಜನತೆಯಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಕುರಿತು ಆಸಕ್ತಿ ಮೂಡಿಸಲು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿದ್ದ ಬಿ.ಎಂ.ಶ್ರೀಯವರು ರೂಪಿಸಿದ ಮುಖ್ಯ ಯೋಜನೆ ಕನ್ನಡ ಸಾಹಿತ್ಯ ಪರೀಕ್ಷೆಗಳು. 1940ರ ಜೂನ್ ತಿಂಗಳಿನಿಂದ `ಕನ್ನಡ ಅಣುಗ’, ಕನ್ನಡ ಕಾವ, ಕನ್ನಡ ಜಾಣ ಪರೀಕ್ಷೆಗಳು ಆರಂಭವಾದವು. 1948ರಲ್ಲಿ `ಅಣುಗ’ವನ್ನು ಕೈ ಬಿಡಲಾಯಿತು. 1966ರಲ್ಲಿ ‘ಕನ್ನಡ ರತ್ನ’ ಪರೀಕ್ಷೆ ಆರಂಭವಾಗಿದ್ದು, 1992ರಲ್ಲಿ ಕನ್ನಡ ಪ್ರವೇಶ ಆರಂಭವಾಯಿತು. ಈ ಎಲ್ಲಾ ಪರೀಕ್ಷೆಗಳು ಲಕ್ಷಾಂತರ ಕನ್ನಡಿಗರಲ್ಲಿ ಭಾಷೆ ಮತ್ತು ಸಾಹಿತ್ಯದ ಕುರಿತು ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದ್ದು, ನಿರಂತರವಾಗಿ ನಡೆದುಕೊಂಡು ಬರುತ್ತಿವೆ.
ಈ ವರ್ಷ ಕನ್ನಡ ಸಾಹಿತ್ಯ ಪರಿಷತ್ತು ೨೦೨೪-೨೫ನೇ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳನ್ನು ೨೦೨೫ ಫೆಬ್ರವರಿ ೦೭, ೦೮ ಮತ್ತು ೦೯ರಂದು ಒಟ್ಟು ೩ ದಿನಗಳ ಕಾಲ ರಾಜ್ಯದ ೧೮ ಕೇಂದ್ರಗಳಲ್ಲಿ ನಡೆಸಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಹ ಅಭ್ಯರ್ಥಿಗಳಿಗೆ ಮೇಲ್ಕಂಡ ಪರೀಕ್ಷೆಗಳ ಪ್ರವೇಶ ಪತ್ರಗಳನ್ನು ನೊಂದಾಯಿತ ಅಂಚೆ ಮೂಲಕ ಕಳುಹಿಸಲಾಗಿದೆ. ದಿನಾಂಕ ೦೧-೦೨-೨೦೨೫ರ ನಂತರವೂ ಪ್ರವೇಶ ಪತ್ರ ತಲುಪದಿದ್ದರೆ ಈ ಬಗ್ಗೆ ಅಭ್ಯರ್ಥಿಗಳು ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು-೧೮ ಇಲ್ಲಿ ವಿಚಾರಿಸಬಹುದು. ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ೦೮೦-೨೬೬೧೨೯೯೧, ೨೬೬೨೩೫೮೪, ೨೬೫೨೩೮೬೭
ಅಭ್ಯರ್ಥಿಗಳು ಪ್ರವೇಶ ಪತ್ರ ಮತ್ತು ಪರೀಕ್ಷಾ ಕೇಂದ್ರಗಳ ವಿಳಾಸವನ್ನು ಅಂತರ್ಜಾಲ ತಾಣ www.kasapa.in ಮೂಲಕ ಸಹ ಪಡೆದುಕೊಳ್ಳಬಹುದು ಎಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ.
ಪ್ರತಿಕ್ರಿಯೆ