ನಿಬಂಧನೆಗಳು ೧೯೧೫

ಮೊಟ್ಟ ಮೊದಲಿನ ಪರಿಷತ್ತಿನ ನಿಬಂಧನೆಗಳು (೧೯೧೫ ಮೇ ೫)

ನಿಬಂಧನೆಗಳ ರಚನೆಯ ಹಿನ್ನೆಲೆ

ಪರಿಷತ್ತಿನ ನಿಬಂಧನೆಗಳ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಒಂದೇ ದಿನದಲ್ಲಿ ಸಿದ್ದಪಡಿಸಲಾಯಿತು. ವಿದ್ವಾಂಸರ ಮಂಡಳಿಯೊಂದು ಸಮ್ಮೇಳನದ ಸಭೆಯಲ್ಲೇ ರೂಪುಗೊಂಡು ಆ ಸಮಿತಿ ನಿಬಂಧನೆಗಳನ್ನು ರಚಿಸಿ ಮಂಡಿಸಿತು. ಚರ್ಚೆಯಾಗಿ ಅಂಗೀಕಾರ ಆಯಿತು. ಅತ್ಯಲ್ಪ ಕಾಲದಲ್ಲಿ ರೂಪಿತವಾದ ನಿಬಂಧನೆಗಳು ಸಮಗ್ರವಾಗಿ ಮಂಡನೆ ಆಯಿತು. ಅದರ ಹಿನ್ನೆಲೆಯನ್ನು ಇಲ್ಲಿ ಕೊಡಲಾಗಿದೆ.

ಶ್ರೀಮನ್ಮಹಾರಾಜರವರ ವರ್ಧಂತೀ ಮಹೋತ್ಸವದ ಕಾಲದಲ್ಲಿ  ಸಂದ ೧೯೧೪ನೆಯ ಇಸವಿಯ ಸಂಪದಭ್ಯುದಯ ಸಮಾಜದ ವಾರ್ಷಿಕ  ಸಮ್ಮೇಳನದಲ್ಲಿ ಕರ್ಣಾಟಕ  ಭಾಷಾ ಸಂಸ್ಕರಣ  ವಿಷಯವೂ ಕರ್ಣಾಟಕ  ಗ್ರಂಥಾವಳಿಯ ವೃದ್ಧಿಯ  ವಿಷಯವೂ ಚರ್ಚಿತವಾಗಿ, ಕರ್ಣಾಟಕ ಭಾಷೆಯಲ್ಲಿ  ವಿವಿಧ ಗ್ರಂಥಗಳನ್ನು ರಚಿಸುವವರ ಪ್ರೋತ್ಸಾಹಕ್ಕಾಗಿ ಸ್ವತಂತ್ರಾಧಿಕಾರವುಳ್ಳ ಪರಿಷತ್ತೊಂದು ಇರಬೇಕು,  ಮತ್ತು ಸರ್ಕಾರದವರು ಆ ಪರಿಷತ್ತನ್ನು ಅಂಗೀಕರಿಸಿ ಅದಕ್ಕೆ ವಿಶೇಷ ಸಹಾಯವನ್ನು ಮಾಡುವುದು ಉಚಿತವೆಂದು ಸಂಪದಭ್ಯುದಯ ಸಮಾಜವು ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ತೀರ್ಮಾನವಾಯಿತು.

ಈ ತೀರ್ಮಾನವನ್ನು ಅನುಸರಿಸಿ ೧೯೧೪ನೆಯ ಇಸವಿ ಅಕ್ಟೋಬರ್ ೩೧ರಲ್ಲಿ ಸಂಪದಭ್ಯುದಯ ಸಮಾಜದ ವಿದ್ಯಾವಿಷಯಕ ಮಂಡಲಿಯವರು ಉಪಸಮಿತಿಯೊಂದನ್ನು ನಿರ್ಮಿಸಿ…..

“ಮ|| ರಾವ್ ಬಹದೂರ್ ಎಂ. ಶಾಮರಾವ್ ಎಂ.ಎ. ಮ|| ಕರ್ಪೂರ ಶ್ರೀನಿವಾಸರಾವ್ ಬಿ.ಎಸ್.ಸಿ., ಎಲ್.ಸಿ. ಇ. ಮ|| ಪಿ.ಎಸ್. ಅಚ್ಯುತರಾವ್, ಎಲ್.ಎಂ.ಎಸ್. ಎಂಬುವವರು ಉಪ ಸಂದವರಾಗಿ ಸೇರಿ ಕನ್ನಡ ನಾಡುಗಳ ಪ್ರಮುಖರನ್ನು ಬೆಂಗಳೂರಿಗೆ ಆಹ್ವಾನ ಮಾಡಿ,  ಕರ್ಣಾಟಕ ಭಾಷಾ ಪರಿಷ್ಕರಣಕ್ಕೂ ಕರ್ಣಾಟಕ ಗ್ರಂಥಾಭಿವೃದ್ಧಿಗೂ  ಅನುಕೂಲವಾಗುವಂತೆ  ಸಂಘವೊಂದನ್ನು  ಏರ್ಪಡಿಸುವ ಕಾರ್ಯವನ್ನು  ನಿರ್ವಹಿಸಬೇಕು” ಎಂದು ತೀರ್ಮಾನಿಸಿದರು.

ಈ ಉಪ ಸಂಘದವರು ಮುಂದೆ ಎದುರಿಸುವ  ಐದು ವಿಷಯಗಳನ್ನು ಗುರಿಯಲ್ಲಿಟ್ಟುಕೊಂಡು  ಉಪನ್ಯಾಸಗಳನ್ನು ಬರೆದು ಕಳುಹಿಸಬೇಕೆಂದು  ವಿದ್ವಾಂಸರುಗಳನ್ನು ಪ್ರಾರ್ಥಿಸಿದರು. ಆ ವಿಷಯಗಳು ಯಾವುವೆಂದರೆ….

ಎ) ಬೇರೆ ಬೇರೆ ಕರ್ಣಾಟಕ ಪ್ರಾಂತಗಳಲ್ಲಿರುವ ವಿದ್ವಾಂಸರುಗಳಲ್ಲಿ  ಐಕಮತ್ಯವನ್ನೂ ಪರಸ್ಪರ ಸಹಾಯ ಬುದ್ಧಿಯನ್ನೂ  ಹುಟ್ಟಿಸುವುದಕ್ಕಾಗಿ  ಮಾಡತಕ್ಕ ಉತ್ತಮೋಪಾಯಗಳು.

ಬಿ) ಬೇರೆ ಬೇರೆ ಕರ್ಣಾಟಕ ಪ್ರಾಂತಗಳ  ಗ್ರಾಂಥಿಕ ಭಾಷಾರೂಪಗಳಲ್ಲಿ ಕಾಣಬರುವ  ಪರಸ್ಪರ ಭೇದಗಳನ್ನು ಹೋಗಲಾಡಿಸಿ ಏಕರೂಪತೆಯನ್ನು  ವ್ಯವಸ್ಥೆ ಮಾಡುವುದಕ್ಕೆ  ಬೇಕಾಗುವ  ಉಪಾಯಗಳು.

ಸಿ)  ನಾನಾ ಪ್ರಾಂತಗಳ ಕನ್ನಡ ವಿದ್ಯಾರ್ಥಿಗಳಿಗೆ ವಿದ್ಯಾಶಾಲೆಗಳಲ್ಲೆಲ್ಲಾ  ಪಾಠದ ಪುಸ್ತಕಗಳು ಒಂದೇ ಆಗುವಂತೆ ಏರ್ಪಡಿಸಿಕೊಳ್ಳುವುದಕ್ಕೆ ಬೇಕಾಗುವ ಪ್ರಯತ್ನಗಳು.

ಡಿ) ಕರ್ಣಾಟಕದ ನಾನಾ  ಪ್ರಾಂತಗಳಲ್ಲಿರುವ ಸಾಮಾನ್ಯ ಜನರಿಗೆ ಪ್ರಯೋಜನವುಂಟಾಗುವಂತೆ ಲೋಕ ವ್ಯವಹಾರಜ್ಞಾನವನ್ನು ಸುಲಭವಾಗಿ ಬೋಧಿಸುವ  ಸಣ್ಣಸಣ್ಣ ಪುಸ್ತಕಗಳನ್ನು ಬರೆಯಿಸಿ  ಪ್ರಚಾರ ಮಾಡುವುದಕ್ಕೆ ಬೇಕಾಗುವ  ಉತ್ತಮೋಪಾಯಗಳು.

ಇ) ಕರ್ಣಾಟಕದ ನಾನಾ ಪ್ರಾಂತಗಳಲ್ಲಿರುವ ಜನರ ಉಪಯೋಗಕ್ಕಾಗಿ  ಬರೆಯುವ ಭೌತಿಕಾದಿ ಶಾಸ್ತ್ರಗ್ರಂಥಗಳಲ್ಲಿ ಪ್ರಯೋಗಿಸಬೇಕಾದ ಪಾರಿಭಾಷಿಕ ಶಬ್ದಗಳನ್ನು ನಿರ್ಣಯಿಸುವುದಕ್ಕೆ ಏರ್ಪಡಿಸಬೇಕಾಗಿರುವ ಉತ್ತಮೋಪಾಯಗಳು.

೧೯೧೫ನೆಯ  ಮಾರ್ಚಿ ೨೭ರಲ್ಲಿ ಉಪಸಂಘದ ಸಭೆಯು ಕೂಡಿತ್ತು. ಅದರಲ್ಲಿ ೧೯೧೫ನೆಯ  ಮೇ ೩ನೆಯ ತಾರೀಖಿನಲ್ಲಿ ಸಮ್ಮೇಳನದ ಕಾರ್ಯವು ಪ್ರಾರಂಭವಾಗಬೇಕೆಂದು  ತೀರ್ಮಾನವಾಯಿತು.

ಉಪಸಂಘವು ನಿಯಮಿಸಿದ ವಿಷಯಗಳನ್ನು ಕುರಿತು ೩೧ ಲೇಖನಗಳು ಆಹ್ವಾನಿತರಿಂದ ಬಂದುವು.  ಇವುಗಳಲ್ಲಿ ೭ ಇಂಗ್ಲಿಷು ಭಾಷೆಯಲ್ಲಿದ್ದುವು.  ಸಮ್ಮೇಳನದ ಸುದ್ದಿಯು ಕರ್ಣಾಟಕ ವಿದ್ವನ್ಮಂಡಲಿಗೆ ಪರಮ ಸಂತೋಷವನ್ನುಂಟು ಮಾಡಿತು,  ಮತ್ತು ಬಹು ಜನ ದೊಡ್ಡ ಮನುಷ್ಯರು ತಾವಾಗಿಯೇ ತಂತಮ್ಮ ಉಪನ್ಯಾಸಗಳನ್ನು  ಕಳುಹಿಸಿಕೊಟ್ಟರು.

ಮೂರನೇ ದಿನದ (೫-೫-೧೯೧೫) ಕಾರ್ಯಕಲಾಪಗಳಲ್ಲಿ ನಿಬಂಧನೆಗಳನ್ನು ಸಭೆಯಲ್ಲಿ ಮಂಡಿಸಲಾಯಿತು. ಅದೇ ಹಜಾರದಲ್ಲಿ  ಮೂರನೆಯ ದಿನವೂ  ಸಮ್ಮೇಳನವು ಅಪರಾಹ್ನ  ೩ ಗಂಟೆಗೆ ಸರಿಯಾಗಿ  ಸೇರಿತು. ಮ|| ಕರ್ಪೂರ ಶ್ರೀನಿವಾಸರಾಯರು  ಆಗ್ರಾಸನವನ್ನು ಅಲಂಕರಿಸಬೇಕೆಂದು ಡಾಕ್ಟರ್ ಅಚ್ಯುತರಾಯರವರು ಸಭೆಗೆ ಬಿನ್ನವಿಸಲು ಸಭೆಯವರೆಲ್ಲರೂ ಹರ್ಷಾತಿಶಯದ ಕಲಕಲದೊಡನೆ  ಒಪ್ಪಿದರು.

ನಿಬಂಧನೆ ಸಮಿತಿ  ಮುಂದಿಟ್ಟ  ನಿಯಮಾವಳಿ  ಅಂಗೀಕಾರವಾದವು.

ನಿಬಂಧನೆಗಳು  (೧೯೧೫)

  1. ಹೆಸರು ಈ ಸಂಘಕ್ಕೆ ಕರ್ಣಾಟಕ ಸಾಹಿತ್ಯ ಪರಿಷತ್ತು (ಕನ್ನಡ ಅಕ್ಯಾಡೆಮಿ) ಎಂದು ಹೆಸರಿರತಕ್ಕುದು.
  2. ಮುಖ್ಯ ಕಾರ್ಯಸ್ಥಾನ ಈ ಪರಿಷತ್ತಿನ ಮುಖ್ಯ ಕಾರ್ಯಸ್ಥಾನವು ಬೆಂಗಳೂರಿನಲ್ಲಿರತಕ್ಕುದು.

III. ಉದ್ದೇಶ  –  ಕರ್ಣಾಟಕ ಭಾಷಾ  ಪರಿಷ್ಕರಣವೂಕರ್ಣಾಟಕ ಗ್ರಂಥಾಭಿವೃದ್ಧಿಯೂ ಈ ಪರಿಷತ್ತಿನ ಉದ್ದೇಶವಾಗಿರುತ್ತದೆ.

ಈ ಉದ್ದೇಶವನ್ನು ಸಾಧಿಸುವ ಮಾರ್ಗದಲ್ಲಿ ಮುಖ್ಯವಾದುವು  ಯಾವುವೆಂದರೆ –

(೧) ಪಂಡಿತರೊಪ್ಪುವಂತೆ  ಕರ್ಣಾಟಕ ವ್ಯಾಕರಣ, ಕರ್ಣಾಟಕ  ಭಾಷಾ ಚರಿತ್ರೆ, ಕರ್ಣಾಟಕ ನಿಘಂಟುಗಳನ್ನು ಬರೆಯಿಸುವುದು ಅಥವಾ ಅವುಗಳನ್ನು ಬರೆಯುವವರಿಗೆ ಸಹಾಯವನ್ನು  ಮಾಡುವುದು.

(೨) ನವೀನ ಶಾಸ್ತ್ರಗಳಿಗೆ ಸಂಬಂಧಪಟ್ಟ  ಕನ್ನಡ ಗ್ರಂಥಗಳಲ್ಲಿ  ಪ್ರಯೋಗಿಸಲು ಯೋಗ್ಯವಾದ ಪಾರಿಭಾಷಿಕ  ಶಬ್ದಗಳ ಕೋಶವನ್ನು  ಪ್ರಕಟಿಸುವುದು.

(೩) ತತ್ವವಿಚಾರ, ಭೌತಿಕಶಾಸ್ತ್ರ, ಚರಿತ್ರೆ ಸಾಹಿತ್ಯ ಇವೇ ಮೊದಲಾದ ವಿಷಯಗಳಿಗೆ ಸಂಬಂಧಪಡುವ ಗ್ರಂಥಗಳನ್ನು ಬರೆಯುವುದಕ್ಕೆ ಪ್ರೋತ್ಸಾಹವನ್ನುಂಟು ಮಾಡುವುದೂ ಅಲ್ಲದೆ  ಅವುಗಳನ್ನು ಪ್ರಕಟಪಡಿಸುವುದು.

(೪) ಕನ್ನಡ ಭಾಷೆಗೂ  ಕನ್ನಡ ಗ್ರಂಥಗಳಿಗೂ  ಸಂಬಂಧಪಟ್ಟ ಎಲ್ಲಾ ಚರ್ಚಾಂಶಗಳನ್ನೂ  ವಿಚಾರಮಾಡಿ  ನಿರ್ಣಯಿಸುವುದು.

(೫) ಕನ್ನಡವನ್ನುಳಿದು  ಇತರ ಭಾಷೆಗಳಲ್ಲಿರುವ ಉತ್ತಮಗ್ರಂಥಗಳನ್ನು  ಕನ್ನಡಿಸಿ ಪ್ರಕಟಿಸುವುದು;

(೬) ಉತ್ಕೃಷ್ಟವಾದ ಪ್ರಾಚೀನ ಗ್ರಂಥಗಳನ್ನೂ, ಕನ್ನಡಸಂಸ್ಥಾನಗಳ  ಚಾರಿತ್ರವನ್ನು ಒಳಗೊಂಡಿರುವ ಗ್ರಂಥಗಳನ್ನೂ ಸಂಗ್ರಹಿಸಿ  ಅವನ್ನು ಪರಿಷ್ಕರಿಸಿ ಪ್ರಕಟಿಸುವುದೂ ಅಲ್ಲದೆ, ಕನ್ನಡದೇಶಗಳ ಪೂರ್ವಸ್ಥಿತಿಯನ್ನು ವಿಶದಗೊಳಿಸುವ ವಸ್ತುಗಳನ್ನು ಕೂಡಿಟ್ಟು,  ಅವುಗಳನ್ನು ಕಾಪಾಡುವುದಕ್ಕಾಗಿ ಪ್ರಾಚೀನ ವಸ್ತುಸಂಗ್ರಹಾಲಯವನ್ನೇರ್ಪಡಿಸುವುದು ;

(೭)  ಕರ್ಣಾಟಕ  ಭಾಷಾ ಸಂಸ್ಕರಣ, ಕರ್ಣಾಟಕ  ಗ್ರಂಥಾಭಿವೃದ್ಧಿಗಳನ್ನು  ಕುರಿತು ಪಂಡಿತರಿಂದ ರಚಿತವಾದ ಉಪನ್ಯಾಸಗಳನ್ನು ಒಳಗೊಂಡ ಪತ್ರಿಕೆಗಳನ್ನು ಪ್ರಕಟಿಸುವುದು.

(೮) ಕನ್ನಡ ಗ್ರಂಥಕರ್ತೃಗಳಿಗೆ, ಮುದ್ರಿತವಾದ  ಕೆಲವು ಗ್ರಂಥ ಪ್ರತಿಗಳನ್ನು ಕೊಂಡುಕೊಳ್ಳುವುದರಿಂದಾಗಲೀ, ಅಥವಾ ಗ್ರಂಥಗಳನ್ನು ಅಚ್ಚು ಹಾಕಿಸುವುದಕ್ಕಾಗಿ  ಹಣವನ್ನು ಮುಂಗಡವಾಗಿ ಕೊಡುವುದರಿಂದಾಗಲಿ  ಅಥವಾ ಅವರಿಂದ ಗ್ರಂಥವನ್ನು ಪ್ರಕಟಿಸುವ ಸ್ವಾತಂತ್ರ್ಯವನ್ನು (Copy – Right) ಕೊಂಡುಕೊಳ್ಳುವುದರಿಂದಾಗಲಿ ಪ್ರೋತ್ಸಾಹವನ್ನುಂಟುಮಾಡುವುದೂ ಅಲ್ಲದೆ, ಗ್ರಂಥಗಳನ್ನು ಬರೆದು ತಾವೇ ತಮ್ಮ ಖರ್ಚಿನಿಂದ ಪ್ರಕಟಪಡಿಸುವ  ಗ್ರಂಥಕರ್ತರುಗಳಿಗೆ  ಬಿರುದುಗಳನ್ನಾಗಲಿ ಸಂಭಾವನೆಯನ್ನಾಗಲಿ ಕೊಡುವುದು;

(೯) ಕರ್ಣಾಟಕ ಭಾಷೆಗೂ ಸಾಹಿತ್ಯಕ್ಕೂ ಸಂಬಂಧಿಸಿದ  ಅಪೂರ್ವ ಪರಿಶೋಧನ ಕಾರ್ಯದಲ್ಲಿ  ನಿರತರಾಗಿರುವ ಕನ್ನಡ ಅಥವಾ ಸಂಸ್ಕೃತ ವಿದ್ವಾಂಸರುಗಳಿಗೆ ಪಂಡಿತ ವೇತನಗಳನ್ನು ಕೊಡುವುದು :

(೧0) ಕರ್ಣಾಟಕ ಭಾಷೋನ್ನತಿಗೂ, ಕರ್ಣಾಟಕ ಗ್ರಂಥಾಭಿವೃದ್ಧಿಗೂ ಸಂಬಂಧಪಡುವ ವಿಷಯಗಳನ್ನು ಆಯಾ   ಸರ್ಕಾರದವರ ಪರಾಮರ್ಶಕ್ಕೆ ತಂದು ಅವನ್ನು ತೃಪ್ತಿಕರವಾಗಿ ವ್ಯವಸ್ಥೆ ಮಾಡಿಸಿಕೊಳ್ಳುವುದಕ್ಕೆ  ತಕ್ಕ ಏರ್ಪಾಡುಗಳನ್ನು ಮಾಡುವುದು.

(೧೧) ಕನ್ನಡ ಮಾತನಾಡುವ  ಪ್ರದೇಶಗಳಲ್ಲಿ ಸಾಧ್ಯವಾದಷ್ಟು ಸ್ಥಳಗಳಲ್ಲಿ ಕರ್ಣಾಟಕ  ವಾಚನಾಲಯಗಳನ್ನೂ, ಕರ್ಣಾಟಕ ಪುಸ್ತಕಭಂಡಾರಗಳನ್ನೂ ಸ್ಥಾಪಿಸುವುದು.

(೧೨) ಕನ್ನಡನಾಡುಗಳ ಪ್ರಮುಖರುಗಳ ಸಭೆಗಳನ್ನು ಆಗಾಗ ಏರ್ಪಡಿಸುವುದು ;  ಮತ್ತು ಸಮರ್ಥರಾದ  ವಿದ್ವಾಂಸರುಗಳಿಂದ  ಉಪನ್ಯಾಸಗಳನ್ನು ಮಾಡಿಸುವುದು.

(೧೩)  ಕರ್ಣಾಟಕ  ಭಾಷೋನ್ನತಿಗೂ, ಕರ್ಣಾಟಕ  ಗ್ರಂಥಾಭಿವೃದ್ಧಿಗೂ ಆವಶ್ಯಕವಾದ  ಇತರ ಪ್ರಯತ್ನಗಳನ್ನು ನಡೆಸುವುದು.

  1. ಪರಿಷತ್ತಿನ ರಚನಾ ಕ್ರಮ ಈ ಕರ್ಣಾಟಕ ಸಾಹಿತ್ಯ ಪರಿಷತ್ತು ಪೋಷಕರನ್ನೂ, ಉಪಪೋಷಕರನ್ನೂ, ಪ್ರದಾತೃಗಳನ್ನೂ, ಆಶ್ರಯದಾತರನ್ನೂ, ಆಜೀವ ಸಾಮಾಜಿಕರನ್ನೂಸಾಮಾನ್ಯ ಸಾಮಾಜಿಕರನ್ನೂ, ಒಂದನೆಯ ಮತ್ತು ಎರಡನೆಯ ವರ್ಗದ ಸನ್ಮಾನ್ಯ ಸಾಮಾಜಿಕರನ್ನೂ ಒಳಗೊಂಡಿರುತ್ತದೆ.

ರಾಜ್ಯಗಳನ್ನಾಳುವ ಪ್ರಭುಗಳು,  ಉನ್ನತ  ಪದವಿಯಲ್ಲಿರುವವರು, ಪ್ರಸಿದ್ಧ ವಂಶೀಯರು ಇವರು ಮಾತ್ರವೇ ಮಹಾ ಪೋಷಕರು ಆಗತಕ್ಕುದು.

ಒಂದು ಸಾವಿರ ರೂಪಾಯಿಗಳಿಗೆ ಕಡಿಮೆ ಇಲ್ಲದಂತೆ ದ್ರವ್ಯವನ್ನು ಕೊಡುವವರು ಪ್ರದಾತೃಗಳಾಗಿ, (Donors), ೫00 ರೂಪಾಯಿಗಳಿಗೆ  ಕಡಿಮೆ ಇಲ್ಲದಂತೆ ಹಣವನ್ನು ಕೊಡುವವರು, ಆಶ್ರಯದಾತರಾಗಿ  (Supporters) ೫0 ರೂಪಾಯಿಗಳಿಗೆ  ಕಡಿಮೆಯಾಗದಂತೆ ದ್ರವ್ಯವನ್ನು ಕೊಡುವವರು  ಆಜೀವ ಸಾಮಾಜಿಕರಾಗಿ, ವಿಶೇಷ ಪಾಂಡಿತ್ಯದಿಂದಲೂ ಸಾಮರ್ಥ್ಯದಿಂದಲೂ ಪ್ರಖ್ಯಾತಿಗೊಂಡಿರುವುದರಿಂದ ಅಪೇಕ್ಷಿತರಾದವರು ಸನ್ಮಾನ್ಯ ಸಾಮಾಜಿಕರಾಗಿ, ವರ್ಷಕ್ಕೆ ೧೨ ರೂಪಾಯಿಗಳಿಗೆ ಕಡಿಮೆಯಿಲ್ಲದೆ  ಚಂದಾಕೊಡುವವರು ೧ನೇ ವರ್ಗದ  ಸಾಮಾನ್ಯ ಸಾಮಾಜಿಕರಾಗಿ, ವರ್ಷಕ್ಕೆ ೪ ರೂಪಾಯಿಗಳಿಗೆ ಕಡಿಮೆಯಾಗದಂತೆ ಚಂದಾ ಕೊಡುವವರು ೨ನೇ ವರ್ಗದ ಸಾಮಾನ್ಯ ಸಾಮಾಜಿಕರಾಗಿ ಭಾವಿಸಲ್ಪಡತಕ್ಕದ್ದು.

  1. ೨ನೆಯ ವರ್ಗದ ಸಾಮಾನ್ಯ ಸಾಮಾಜಿಕರು ಹೊರತು ಮಿಕ್ಕ ಸಾಮಾಜಿಕರೆಲ್ಲರಿಗೂ  ಪರಿಷತ್ತಿನ ಸಾಮಾನ್ಯ ಸಭೆಗಳಲ್ಲಿ ತಮ್ಮ ಅಭಿಮತವನ್ನು  ತಿಳಿಸುವ ಸ್ವಾತಂತ್ರ್ಯವಿರತಕ್ಕದ್ದುಮತ್ತು ಪರಿಷತ್ತಿನಿಂದ ಪ್ರಕಟವಾಗುವ ಗ್ರಂಥಗಳ ಮತ್ತು ಪತ್ರಿಕೆಗಳ  ಒಂದೊಂದು ಪ್ರತಿಯು ಅವರಿಗೆ ಉಚಿತವಾಗಿ ದೊರೆಯುವುದು.
  1. ಪರಿಷತ್ತಿನ ಸಾಮಾನ್ಯ ಸಭೆಯಲ್ಲಿ ೨ನೆಯ ವರ್ಗದ ಸಾಮಾನ್ಯ ಸಾಮಾಜಿಕರಿಗೆ ತಮ್ಮ ಅಭಿಮತವನ್ನು ಸೂಚಿಸುವ ಅಧಿಕಾರವಿರುವುದಿಲ್ಲಆದರೆ ಪರಿಷತ್ತಿನ ಪತ್ರಿಕೆಯ ಒಂದೊಂದು ಪ್ರತಿಯೂ ಅವರಿಗೆ ಉಚಿತವಾಗಿ ದೊರೆಯುವುದು.

VII. ಕಾರ್ಯನಿರ್ವಾಹಕ ಮಂಡಲಿ ಕರ್ಣಾಟಕ ಸಾಹಿತ್ಯ ಪರಿಷತ್ತಿನ ಎಲ್ಲಾ ಆಡಳಿತಗಳನ್ನೂ ನಿಯಮಾನುಸಾರವಾಗಿ  ಚುನಾಯಿಸಲ್ಪಟ್ಟ  ಕಾರ್ಯನಿರ್ವಾಹಕ  ಮಂಡಲಿಯು ನಡೆಯಿಸತಕ್ಕದ್ದು.

VIII. ಕಾರ್ಯ ನಿರ್ವಾಹಕ ಮಂಡಲಿಯಲ್ಲಿ ಒಬ್ಬರು ಅಧ್ಯಕ್ಷರು (Presidentಒಬ್ಬರು ಉಪಾಧ್ಯಕ್ಷರು (Vice Presidentಒಬ್ಬರು ಸಾಮಾನ್ಯ ಕೋಶಾಧ್ಯಕ್ಷರು  (Honorary Treasurerಒಬ್ಬರು ಸಾಮಾನ್ಯ ಕಾರ್ಯದರ್ಶಿಗಳು (Honorary  Secrertary)ಇವರ ಜತೆಗೆ ಬ್ಯಾಲಟ್  (Ballot) ಮೂಲಕ  ಚುನಾಯಿಸಲ್ಪಟ್ಟ  ೩0 ಮಂದಿ ಸಾಮಾಜಿಕರೂ ಇರತಕ್ಕದ್ದು –  ಕರ್ಣಾಟಕ ಸಾಹಿತ್ಯ ಪರಿಷತ್ತಿನ ಎಲ್ಲಾ ಆಡಳಿತಗಳನ್ನೂ ನಿಯಮಾನುಸಾರವಾಗಿ  ಚುನಾಯಿಸಲ್ಪಟ್ಟ  ಕಾರ್ಯನಿರ್ವಾಹಕ  ಮಂಡಲಿಯು ನಡೆಯಿಸತಕ್ಕದ್ದು.

  1. ಅಧ್ಯಕ್ಷರೂ, ಉಪಾಧ್ಯಕ್ಷರೂ, ಸಾಮಾನ್ಯ ಕೋಶಾಧ್ಯಕ್ಷರೂ, ಸಾಮಾನ್ಯ ಕಾರ್ಯದರ್ಶಿಗಳೂ ಬೆಂಗಳೂರಿನ ನಿವಾಸಿಗಳಾಗಿಯೇ ಇರತಕ್ಕುದು. 0 ಮಂದಿ ಸಾಮಾಜಿಕರುಗಳಲ್ಲಿ ಮೈಸೂರು ಸಂಸ್ಥಾನಕ್ಕೆ ೧೨ ಮಂದಿ, ಬೊಂಬಾಯಿ ಅಧಿಪತ್ಯಕ್ಕೆ  ೮ ಮಂದಿ, ಮದರಾಸು ಅಧಿಪತ್ಯಕ್ಕೆ ಐವರುಹೈದರಾಬಾದು ಸಂಸ್ಥಾನಕ್ಕೆ ಇಬ್ಬರು, ದಕ್ಷಿಣ ಮಹಾರಾಷ್ಟ್ರ ಸಂಸ್ಥಾನಗಳಿಗೆ ಇಬ್ಬರು, ಕೊಡಗಿಗೆ ಒಬ್ಬರು ಇರಬೇಕಲ್ಲದೆ  ಇವರು ಆಯಾಪ್ರಾಂತಗಳ ಸಾಮಾಜಿಕರಿಂದ ಬ್ಯಾಲಟ್ ಮೂಲಕ ಆರಿಸಲ್ಪಟ್ಟವರಾಗಿರಬೇಕು.

 

  1. ಕಾರ್ಯನಿರ್ವಾಹಕ ಮಂಡಲಿಯಲ್ಲಿ ಚರ್ಚಿಸಲ್ಪಡುವ ವಿಷಯಗಳೆಲ್ಲವೂ  ಬಹುಮತಾನುಸಾರವಾಗಿಯೇ ತೀರ್ಮಾನವಾಗತಕ್ಕುವುಯಾವುದಾದರೂ ಒಂದು ಸಭೆಯಲ್ಲಿ ಭಿನ್ನಾಭಿಪ್ರಾಯವು ಹುಟ್ಟಿ ಉಭಯಪಕ್ಷದ  ಸಾಮಾಜಿಕರುಗಳ ಸಂಖ್ಯೆಯು ಸಮವಾದಲ್ಲಿ ಆಯಾ ಸಭೆಯ ಅಗ್ರಾಸನಾಧಿಪತಿಗಳಿಗೆ ಆ ವಿಷಯವನ್ನು ನಿರ್ಣಯಿಸುವ  ಅಧಿಕಾರವಿರತಕ್ಕುದು.

 

  1. ಪರಿಷತ್ತಿನ ಪ್ರಥಮ ವರ್ಷದಲ್ಲಿ ಮಾತ್ರ ಎರಡನೆಯ ವರ್ಗದ ಸಾಮಾನ್ಯ ಸಾಮಾಜಿಕರುಗಳಿಗೂ ಕಾರ್ಯನಿರ್ವಾಹಕ ಮಂಡಲಿಯ ಸಾಮಾಜಿಕರನ್ನು ಚುನಾಯಿಸುವ ಅಧಿಕಾರವಿರತಕ್ಕುದು.

 

XII. ಕಾರ್ಯನಿರ್ವಾಹಕ  ಮಂಡಲಿಯು ೩ ತಿಂಗಳಿಗೆ  ಒಂದು ಸಲವಾದರೂ ಸಭಾಕಾರ್ಯಕ್ಕೆ ಸೇರತಕ್ಕುದು.

XIII. ಕಾರ್ಯನಿರ್ವಾಹಕ  ಮಂಡಲಿಯ ಸಭೆಗೆ ಕಾರ್ಯನಿರ್ವಾಹಕ್ಕೋಸ್ಕರ ಐವರು ಸಾಮಾಜಿಕರಾದರೂ ಬಂದಿರಬೇಕುಈ ಐವರಲ್ಲಿ ಮೂವರು  ಪರಿಷತ್ತಿನ ಅಧಿಕಾರಿಗಳಾಗಿರದೇ ಇರಬೇಕು.

XIV. ಕಾರ್ಯನಿರ್ವಾಹಕ  ಮಂಡಲಿಯ ಎಲ್ಲಾ ಸಭೆಗಳಲ್ಲಿಯೂ  ಅವುಗಳ ಹಿಂದಿನ ಸಭೆಯ ನಡೆವಳಿಕೆಗಳನ್ನು  ಓದಿ ಅವುಗಳನ್ನು ವಿಮರ್ಶೆ ಮಾಡಕ್ಕುದು.

  1. ಪರಿಷತ್ತಿನ ವಿವಿಧ ಕಾರ್ಯಗಳನ್ನು ನೆರವೇರಿಸುವುದಕ್ಕಾಗಿ, ಕಾರ್ಯನಿರ್ವಾಹಕ ಮಂಡಲಿಯ ಉಪಸಂಘಗಳನ್ನು ಏರ್ಪಡಿಸಿಕೊಳ್ಳುವ ಅಧಿಕಾರವನ್ನು ಹೊಂದಿರತಕ್ಕುದು.

XVI. ಪರಿಷತ್ತಿಗೆ ಸೇರಬೇಕೆನ್ನುವವರ ಪ್ರಾರ್ಥನಾಪತ್ರಗಳನ್ನು ಪರಿಷತ್ತಿನ ಸಾಮಾಜಿಕರುಗಳಲ್ಲಿ ಇಬ್ಬರಾದರೂ  ಅನುಮೋದಿಸಬೇಕು, ಮತ್ತು ಕಾರ್ಯನಿರ್ವಾಹಕ ಮಂಡಲಿಗೆ  ಬಂದಿರುವ ಸಾಮಾಜಿಕರಲ್ಲಿ ಮೂರರಲ್ಲಿ  ಒಂದು  ಪಾಲಿಗಿಂತಲೂ ಹೆಚ್ಚು ಮಂದಿ ಆಕ್ಷೇಪಿಸಿದಲ್ಲಿ, ಅಂತಹವರನ್ನು ಪರಿಷತ್ತಿಗೆ  ಸೇರಿಸಕೂಡದು.

XVII. ಪರಿಷತ್ತಿನ ಸಾಮಾನ್ಯ ಸಭೆಗೆ ಬಂದಿರುವವರಲ್ಲಿ ಮುಕ್ಕಾಲು ಪಾಲಿನಷ್ಟು ಸಾಮಾಜಿಕರು ಅನುಮತಿಸಿದ ಹೊರತು  ಯಾರನ್ನೂ ಸಾಮಾನ್ಯ ಸಾಮಾಜಿಕರನ್ನಾಗಿ ಪರಿಷತ್ತಿಗೆ ಸೇರಿಸಿಕೊಳ್ಳಕೂಡದು. ಸನ್ಮಾನ್ಯ ಸಾಮಾಜಿಕರಿಂದ ಚಂದಾವನ್ನು ವಸೂಲುಮಾಡಕೂಡದುಅವರಿಗಿರುವ ಹಕ್ಕುಗಳೂ  ಕರ್ತವ್ಯಗಳೂ ಯಾವುವೆಂದರೆ

(೧) ಪರಿಷತ್ತಿನ ಸಭೆಗಳಲ್ಲಿ ತಮ್ಮ ಅಭಿಮತವನ್ನು ಸೂಚಿಸುವುದು.

(೨)  ಪರಿಷತ್ತಿನಿಂದ ಪ್ರಕಟಿತವಾದ ಗ್ರಂಥಗಳಲ್ಲಿಯೂ ಪತ್ರಿಕೆಗಳಲ್ಲಿಯೂ ಒಂದೊಂದನ್ನು  ಉಚಿತವಾಗಿ ಪಡೆಯುವುದು.

(೩)  ಪರಿಷತ್ತಿನ ಪುಸ್ತಕ ಭಂಡಾರದಿಂದ ಪುಸ್ತಕಗಳನ್ನು  ನಿಯಮಾನುಸಾರವಾಗಿ ಎರವಲಾಗಿ ತೆಗೆದುಕೊಳ್ಳುವುದು.

(೪) ಪರಿಷತ್ತಿನ  ಅಭಿಪ್ರಾಯಕ್ಕಾಗಿ  ಕಳುಹಿಸಿಕೊಡುವ ಗ್ರಂಥಗಳನ್ನು ಓದಿ ಅವುಗಳ ಗುಣದೋಷಗಳನ್ನು ವಿಮರ್ಶಿಸಿ ಪರಿಷತ್ತಿನ ಅಧಿಕಾರಿಗಳಿಗೆ  ತಿಳಿಸುವುದು.

XVIII. ಪರಿಷತ್ತಿನ ಸಾಮಾಜಿಕರುಗಳಲ್ಲಿ ಯಾರಾದರೂ ಕ್ರಿಮಿನಲ್  ಕೋರ್ಟಿನಲ್ಲಿ ಅಪರಾಧಿಯೆಂದು ಶಿಕ್ಷಿಸಲ್ಪಟ್ಟರೂ, ಕೆಟ್ಟ ನಡತೆಯವರೆಂದು ನಿರ್ಣಯಿಸಲ್ಪಟ್ಟರೂ, ಅಥವಾ ಇತರ ಕಾರಣಗಳಿಂದ ಪರಿಷತ್ತಿನ ಸಾಮಾಜಿಕರಾಗಿರಲು ಅನರ್ಹರೆಂದು ವಿಧಿಸಲ್ಪಟ್ಟರೂ, ಪರಿಷತ್ತಿನ ವಾರ್ಷಿಕ ಸಭೆಗೆ ಬಂದಿರುವ ಸಾಮಾಜಿಕರಲ್ಲಿ ಹೆಚ್ಚುಮಂದಿ ಅವರ ಹೆಸರನ್ನು ತೆಗೆದು  ಹಾಕಬೇಕೆಂದು ಅಭಿಪ್ರಾಯಪಟ್ಟಲ್ಲಿ ಅಂಥವರ ಹೆಸರನ್ನು  ಪರಿಷತ್ತಿನ ಪಟ್ಟಿಯಿಂದ ತೆಗೆದು ಹಾಕತಕ್ಕುದು.

XIX. ಪರಿಷತ್ತಿನ ಧನ ಪೋಷಕರು ಮುಂತಾದವರುಗಳಿಂದಲೂ, “ಉಯಿಲು” ಗಳ ಮೂಲಕವೂ, ಪರಿಷತ್ತಿನಿಂದ ಪ್ರಕಟವಾಗುವ ಗ್ರಂಥಗಳ ಮಾರಾಟದಿಂದಲೂ  ಇತರ ವಿಧಗಳಲ್ಲಿಯೂ ದೊರೆಯುವ ಧನವು ಪರಿಷತ್ತಿನ ಆಸ್ತಿಯಾಗಿರತಕ್ಕದು.

  1. ಚಾಲ್ತಿ ಖರ್ಚುಗಳಿಗಾಗಿ ಇಪ್ಪತ್ತೈದು ರೂಪಾಯಿಗಳು ಸಾಮಾನ್ಯ ಕಾರ್ಯದರ್ಶಿಗಳ ವಶದಲ್ಲಿರತಕ್ಕದ್ದು. ಮಿಕ್ಕ ಪರಿಷತ್ತಿನ ಧನವೆಲ್ಲವೂ ಸಾಮಾನ್ಯ ಕೋಶಾಧ್ಯಕ್ಷರ ಅಧೀನದಲ್ಲಿರತಕ್ಕುದು. ಕಾರ್ಯನಿರ್ವಾಹಕ ಮಂಡಲಿಯ ಅನುಮತಿಯಿಲ್ಲದೆ ಯಾವ ವ್ಯಯವನ್ನೂ  ಮಾಡಕೂಡದು ; ಪರಿಷತ್ತಿನ ಸಾಮಾನ್ಯ ಸಭೆಯ ಅನುಮತಿಯಿಲ್ಲದೆ  ಪರಿಷತ್ತಿನ ಸ್ವತ್ತನ್ನು ಆಧಾರ ಮಾಡಕೂಡದುಮಾರಲೂ ಕೂಡದು.

 

XXI. ಪರಿಷತ್ತಿನ ಲೆಕ್ಕಗಳನ್ನು  ಪರಿಶೀಲಿಸಿ ಪರಿಷತ್ತಿನ ಮುಂದಿನ ವಾರ್ಷಿಕ ಸಭೆಗೆ ತಮ್ಮ ರಿಪೋರ್ಟನ್ನು ಒಪ್ಪಿಸುವುದಕ್ಕಾಗಿ  ಪ್ರತಿ ವರ್ಷದ ವಾರ್ಷಿಕ ಸಭೆಯಲ್ಲಿಯೂ ಇಬ್ಬರು ಆಯವ್ಯಯ ಶೋಧಕರುಗಳನ್ನು ನೇಮಿಸತಕ್ಕುದುಪರಿಷತ್ತಿನ ಲೆಕ್ಕಗಳನ್ನು ಸಾಮಾಜಿಕರುಗಳಲ್ಲಿ ಯಾರು ಬೇಕಾದರೂ ನೋಡಬಹುದು.

XXII. ಪರಿಷತ್ತಿನ  ಕೆಲಸಗಳೆಲ್ಲವೂ ಅಧ್ಯಕ್ಷರ, ಉಪಾಧ್ಯಕ್ಷರ ಮತ್ತು ಸನ್ಮಾನ್ಯ ಕಾರ್ಯದರ್ಶಿಗಳ  ಮೇಲ್ವಿಚಾರಣೆಯಲ್ಲಿ ನಡೆಯತಕ್ಕುದು.

XXIII. ಪರಿಷತ್ತಿನ ಮುಖ್ಯವಾದ  ಆಡಳಿತಗಳಲ್ಲಿ ಎಂದರೆ ಲೇವಾದೇವಿಗಳಲ್ಲಿಯೂ, ಕೋರ್ಟಿನ ವ್ಯಾಜ್ಯಗಳಲ್ಲಿಯೂ  ಅಧ್ಯಕ್ಷರಾಗಲಿ, ಉಪಾಧ್ಯಕ್ಷರಾಗಲಿ ಅಥವಾ ಸನ್ಮಾನ್ಯ ಕಾರ್ಯದರ್ಶಿಗಳಾಗಲಿ  ಪರಿಷತ್ತಿನ ಪರವಾಗಿ  ತಮ್ಮ ರುಜುವನ್ನು ಹಾಕಿ, ಪರಿಷತ್ತಿನ ಮುದ್ರೆಯನ್ನು ಒತ್ತಿ  ಕಾರ್ಯವನ್ನು ನಿರ್ವಹಿಸತಕ್ಕುದು.

XXIV. ಪರಿಷತ್ತಿನ ಎಲ್ಲಾ ರಸೀದಿ ಚಲನ್ಗಳಿಗೂ ಸಾಮಾನ್ಯ ಕಾರ್ಯದರ್ಶಿಗಳೂ, ಸಾಮಾನ್ಯ ಕೋಶಾಧ್ಯಕ್ಷರೂ ರುಜುಗಳನ್ನು  ಹಾಕತಕ್ಕುದುಇವರಿಬ್ಬರ ರುಜುಗಳು ಇಲ್ಲದ ರಸೀದಿಗಳೂ ಚಲನ್ಗಳೂ ಸ್ಥಿರಪಡಲಾರವು.

XXV. ಈ ನಿಬಂಧನೆಗಳಿಗೆ ವಿರೋಧವಿಲ್ಲದಂತೆ  ಆವಶ್ಯಕವಾದಾಗಲೆಲ್ಲಾ ಉಪನಿಬಂಧನೆಗಳನ್ನು ಮಾಡಿಕೊಳ್ಳುವ  ಅಧಿಕಾರವು ಕಾರ್ಯನಿರ್ವಾಹಕ  ಮಂಡಲಿಗೆ ಇರತಕ್ಕುದು. ಕಾರ್ಯನಿರ್ವಾಹಕ ಮಂಡಲಿಯಲ್ಲಿ ಬಹುಮಂದಿ ಸಾಮಾಜಿಕರು ಒಪ್ಪಿದಕೂಡಲೇ ಈ ಉಪನಿಬಂಧನೆಗಳು  ಜಾರಿಗೆ ಬರತಕ್ಕುದು ಮತ್ತು ಪರಿಷತ್ತಿನ ವಾರ್ಷಿಕ ಸಭೆಯು ಕೂಡುವವರೆಗೂ ಜಾರಿಯಲ್ಲಿರತಕ್ಕುದು.

XXVI. ಪರಿಷತ್ತಿನ ಕೆಲಸಗಳನ್ನು ನಿರ್ವಹಿಸುವುದಕ್ಕಾಗಿ ಬೇಕಾಗುವ ನೌಕರರನ್ನೂ ಸೇವಕರನ್ನೂ ನೇಮಿಸಿಕೊಳ್ಳುವುದಕ್ಕೂದಂಡಿಸುವುದಕ್ಕೂ, ತೆಗೆದುಹಾಕುವುದಕ್ಕೂ ಮತ್ತು ಅವರ ಸಂಬಳಗಳನ್ನು, ಬಹುಮಾನಗಳನ್ನೂ, ಭತ್ಯವನ್ನೂ ಗೊತ್ತುಮಾಡುವುದಕ್ಕೂ ಕಾರ್ಯನಿವಾಹಕ ಮಂಡಲಿಗೆ  ಅಧಿಕಾರವಿರತಕ್ಕುದು. ಆದರೆ ಕಾರ್ಯನಿರ್ವಾಹಕ  ಮಂಡಲಿಯವರ ಸಭೆಗಳಲ್ಲಿ, ಸಂಬಳ, ಬಹುಮಾನ, ಅಥವಾ ಭತ್ಯೆಗಳ ವಿಷಯವಾಗಿ  ಚರ್ಚೆನಡೆಯುತ್ತಿರುವಾಗಇವುಗಳನ್ನು ಹೊಂದತಕ್ಕವರು  ಯಾವ ವಿಧದಲ್ಲಿಯೂ  ತಮ್ಮ ಅಭಿಮತವನ್ನು ಸೂಚಿಸಕೂಡದು.

XXVII. ಪರಿಷತ್ತಿನ ಸಾಮಾನ್ಯ ಸಭೆಗಳ ನೋಟೀಸುಗಳನ್ನು ಸಾಮಾಜಿಕರುಗಳಿಗೆ ಅಂತಹ ಸಭೆಗಳು ಕೊಡುವುದಕ್ಕೆ  ಒಂದು ತಿಂಗಳು  ಮುಂಚಿತವಾಗಿ ಕಳುಹಿಸಿಕೊಡತಕ್ಕುದು.

XXVIII. ಪರಿಷತ್ತಿನ ರಚನಾಕ್ರಮವನ್ನು ಆ ಕುರಿತೇ ಆಗಲಿ  ನಿಬಂಧನೆಗಳನ್ನು ಕುರಿತೇ ಆಗಲಿ, ಕಾರ್ಯನಿರ್ವಾಹಕ ಕ್ರಮವನ್ನು ಕುರಿತೇ ಆಗಲಿ, ಸಾಮಾಜಿಕರು ಸೂಚಿಸಬೇಕೆಂದಿರುವ  ಬದಲಾವಣೆಗಳನ್ನು ಸಾಮಾನ್ಯ ಸಭೆಯ ನೋಟೀಸನ್ನು ಪಡೆದ ಒಂದು ವಾರದೊಳಗಾಗಿ ಲಿಖಿತದ ಮೂಲಕ  ಸನ್ಮಾನ್ಯ  ಕಾರ್ಯದರ್ಶಿಗಳಿಗೆ ಶ್ರುತಪಡಿಸತಕ್ಕುದು ಮತ್ತು ಸನ್ಮಾನ್ಯ ಕಾರ್ಯದರ್ಶಿಗಳು ಆ ಸೂಚನೆಗಳನ್ನು ಇತರ ಸಾಮಾಜಿಕರುಗಳಿಗೆ ಸಮ್ಮೇಳನದ  ತಾರೀಖಿಗೆ  ಕನಿಷ್ಠಪಕ್ಷ ಹತ್ತು ದಿವಸಗಳಿಗೆ  ಮುಂಚೆಯೇ ತಿಳಿಸತಕ್ಕುದು.

XXIX. ವಾರ್ಷಿಕ ಸಮ್ಮೇಳನವು ನಡೆಯಬೇಕಾಗಿರುವ ಸ್ಥಳದಲ್ಲಿಯೇ ಇಂತಹ ಸಾಮಾನ್ಯ ಸಭೆಯೂ ನಡೆಯತಕ್ಕುದು. ಈ ಸಭೆಯಲ್ಲಿ ನಡೆಯಬೇಕಾದ ಕಾರ್ಯಗಳ ವಿವರವೇನೆಂದರೆ

(೧) ಕಾರ್ಯನಿರ್ವಾಹಕ ಮಂಡಲಿಯವರು  ಒಪ್ಪಿಸುವ ವಾರ್ಷಿಕ ರಿಪೋರ್ಟನ್ನೂ ಆಯವ್ಯಯ ಶೋಧಕರುಗಳು ಒಪ್ಪಿಸುವ ಆಯವ್ಯಯದ ಪಟ್ಟಿಗಳನ್ನೂ   ಅಂಗೀಕರಿಸುವ ವಿಚಾರ –

(೨) ಮುಂದಿನ ವರುಷದ ಆಯವ್ಯಯದ ಪಟ್ಟಿಯ ವ್ಯವಸ್ಥೆ.

(೩) ಕಾರ್ಯನಿರ್ವಾಹಕ ಮಂಡಲಿಯ ಅಧಿಕಾರಿಗಳನ್ನೂ ಸಾಮಾಜಿಕರನ್ನೂ ಚುನಾಯಿಸುವುದು.

(೪) ಬರವಣಿಗೆಯ ಮೂಲಕ ಕಾಲನಿಯಮಕ್ಕೆ ಅನುಸಾರವಾಗಿ ತಿಳಿಸಿರುವ ಇತರ ವಿಷಯಗಳ ವಿಚಾರ.

XXX.  ವಾರ್ಷಿಕ ಸಮ್ಮೇಳನ ಕಾಲದಲ್ಲಿ ವಿದ್ವಾಂಸರು ಉಪನ್ಯಾಸ ಮಾಡುವಂತೆಯೂ, ಇತರ ಪ್ರೌಢ ಲೇಖನಗಳನ್ನು ಓದುವಂತೆಯೂ ಕಾರ್ಯನಿರ್ವಾಹಕರ ಮಂಡಲಿಯವರು ಏರ್ಪಡಿಸತಕ್ಕುದೂ  ಅಲ್ಲದೆ   ತಾವು ಅಂಗೀಕರಿಸಿರುವ ಉಪನ್ಯಾಸಗಳೂ ಪ್ರೌಢಲೇಖನಗಳೂ ಇಂತಿಂತಿರುವುದೆಂದು ಸಮ್ಮೇಳನದ  ತಾರೀಖಿಗೆ ಮುಂಚೆಯೇ ಪ್ರಸಿದ್ಧ ಪಡಿಸತಕ್ಕುದು.

XXXI.  ಕಾರ್ಯನಿರ್ವಾಹಕ ಮಂಡಲಿಗೆ ಅವಶ್ಯವೆಂದು  ಕಾಣಬಂದಾಗ  ಆಗಲಿ, ಅಥವಾ ತಮ್ಮ   ಅಭಿಮತವನ್ನು ಸೂಚಿಸುವ ಹಕ್ಕುಳ್ಳ ಸಾಮಾಜಿಕರುಗಳಲ್ಲಿ ಎಂಟರಲ್ಲೊಂದು ಪಾಲಿಗೆ ಕಡಿಮೆಯಿಲ್ಲದಷ್ಟು  ಮಂದಿ ಸಾಮಾಜಿಕರು ಅಪೇಕ್ಷಿಸಿದಾಗ ಆಗಲಿಪರಿಷತ್ತಿನ ವಿಶೇಷ ಸಭೆಗಳನ್ನು ಏರ್ಪಡಿಸತಕ್ಕುದು.

ಉಪ ನಿಬಂಧನೆಗಳು (೧೯೧೫)

(೧) ಆವಶ್ಯಕತೆ ತೋರಿದಾಗ  ಉಪಸಂಘಗಳನ್ನೂ ಅವುಗಳ ಪ್ರವರ್ತಕರೊಡನೆ   (Conveners)  ನಿಯಮಿಸಲು ಕಾರ್ಯನಿರ್ವಾಹಕ ಮಂಡಲಿಗೆ ಅಧಿಕಾರವಿರತಕ್ಕುದು. ಈ ಉಪಸಂಘಗಳಲ್ಲಿ ಪ್ರತಿಯೊಂದರಲ್ಲಿಯೂ ಕಾರ್ಯನಿರ್ವಾಹಕ  ಮಂಡಲಿಯ ಸಾಮಾಜಿಕರೊಬ್ಬರಾದರೂ ಇದ್ದೇ ಇರಬೇಕು.  ಸಾಮಾಜಿಕರಲ್ಲದ ಪ್ರಾಜ್ಞರನ್ನು ಈ ಉಪಸಂಘಗಳಿಗೆ ಸೇರಿಸಬಹುದು.

(೨) ಉಪಸಂಘಗಳಿಗೆ ಸೇರಲ್ಪಟ್ಟ  ಪ್ರಾಜ್ಞರಿಗೆ  ಯಥೋಚಿತವಾಗಿ ವೇತನಗಳನ್ನೂ  ಕೊಡಲು ಕಾರ್ಯನಿರ್ವಾಹಕ ಮಂಡಲಿಗೆ ಅಧಿಕಾರವಿರತಕ್ಕುದು.

(೩) ಪ್ರಸಿದ್ಧ ಪಂಡಿತರನ್ನು ಪರಿಷತ್ತಿಗೆ ಸನ್ಮಾನ್ಯ  ಸಾಮಾಜಿಕರನ್ನಾಗಿ ಸೇರಿಸಿಕೊಳ್ಳಬೇಕೆಂದು  ಪರಿಷತ್ತಿನ ಸಾಮಾನ್ಯ ಸಭೆಗೆ  ಶಿಫಾರಸ್ಸು ಮಾಡುವುದಕ್ಕೆ ಕಾರ್ಯನಿರ್ವಾಹಕ ಮಂಡಲಿಗೆ  ಸ್ವಾತಂತ್ರ್ಯವಿರತಕ್ಕುದು.

(೪) ಕಾರ್ಯನಿರ್ವಾಹಕ  ಮಂಡಲಿಯಲ್ಲಿ  ಯಾವುದಾದರೂ ಒಂದು ಸ್ಥಾನವು  ಖಾಲಿಯಾದರೆ (Vacant) ಮುಂದಿನ ವಾರ್ಷಿಕ ಸಭೆಯವರೆಗೂ ಹಂಗಾಮಿಯಾಗಿ ಇತರರನ್ನು ಆಸ್ಥಾನದಲ್ಲಿ ನೇಮಿಸಿಕೊಳ್ಳುವ ಅಧಿಕಾರವು ಕಾರ್ಯನಿರ್ವಾಹಕ  ಮಂಡಲಿಗೆ ಇರತಕ್ಕುದು.

(೫) ಪರಿಷತ್ತಿನ ಕೆಲಸಗಳನ್ನು ಸನ್ಮಾನ್ಯ  ಕಾರ್ಯದರ್ಶಿಯವರು ನಡೆಯಿಸತಕ್ಕುದು ಮತ್ತು ಕಾರ್ಯನಿರ್ವಾಹಕರ  ಮಂಡಲಿಯ ಮೇಲ್ವಿಚಾರಣೆಗೆ ಒಳಪಟ್ಟು ಪರಿಷತ್ತಿನ  ಆಫೀಸಿನ ನೌಕರರ ಮೇಲ್ವಿಚಾರಣೆಯನ್ನೂ ನೋಡಿಕೊಳ್ಳತಕ್ಕುದು.  ಪರಿಷತ್ತಿಗೆ ಸಂಬಂಧಪಟ್ಟ  ಲಿಖಾವಟ್ಟನ್ನೂ, ಚಾಲ್ತಿ ಕೆಲಸಗಳನ್ನೂ ತಮ್ಮ ರುಜುವನ್ನು ಹಾಕಿ ಸಾಮಾನ್ಯ ಕಾರ್ಯದರ್ಶಿಯವರೇ  ನಡೆಯಿಸತಕ್ಕುದು.

ಕರ್ನಾಟಕ ಸಾಹಿತ್ಯ ಪರಿಷತ್ತಿಗೆ  ಸೇರಿ ರುಜು ಮಾಡಿದವರಿಗೆಲ್ಲಾ ಅಭಿಮತ  ಪ್ರದರ್ಶಕಪತ್ರಗಳು  ಕೊಡಲ್ಪಟ್ಟುವು.  ಸಭೆಯವರ ಅನುಮತಿಯನ್ನೂ ಪಡೆದು  ಆಗ್ರಾಸನಾಧಿಪತಿಗಳು ಮೆ|| ಜಹಗೀರ್ದಾರ್, ಎಂ.ಎ., ಎಲ್.ಎಲ್.ಬಿ. ಅವರನ್ನೂ ಮ||  ಬಿ. ಕೃಷ್ಣಪ್ಪ ಎಂ.ಎ. ಅವರನ್ನೂ ಮ|| ಆರ್. ಎಚ್. ದೇಶಪಾಂಡೆ ಎಂ.ಎ. ಅವರ ಮೇಲ್ವಿಚಾರಣೆಯಲ್ಲಿ ಅಭಿಮತ ಪ್ರದರ್ಶಕ ಪತ್ರಗಳ ಎಣಿಕೆಯಿಂದ ಕಾರ್ಯನಿರ್ವಾಹಕ ಮಂಡಲಿಯವರನ್ನು  ನಿರ್ಣಯಿಸುವ  ಕಾರ್ಯಕ್ಕೆ ನಿಯಮಿಸಿದರು. ನಿಯಮಿತರಾದ ಅಧಿಕಾರಿಗಳೂ  ಸಾಮಾಜಿಕರೂ ಯಾರು ಯಾರೆಂದರೆ….

ಪರಿಷತ್ತಿನ ಕಾರ್ಯಕಾರಿ ಸಮಿತಿ (೧೯೧೫)

ಅಧ್ಯಕ್ಷರು-ರಾಜಮಂತ್ರಪ್ರವೀಣ ಮ|| ಎಚ್.ವಿ. ನಂಜುಂಡಯ್ಯನವರು, ಎಂ.ಎ., ಎಂ.ಎಲ್.ಸಿ.ಐ.ಇ.

ಉಪಾಧ್ಯಕ್ಷರು – ರಾಜಬಹದೂರ್  ಎಂ. ಶಾಮರಾಯರವರು, ಎಂ.ಎ.

ಸಾಮಾನ್ಯ ಕೋಶಾಧ್ಯಕ್ಷರು – ಡಾಕ್ಟರ್ ಪಿ.ಎಸ್.  ಅಚ್ಯುತರಾಯರು

ಸಾಮಾನ್ಯ ಕಾರ್ಯದರ್ಶಿಗಳು-ಬಿ. ಕೃಷ್ಣಪ್ಪನವರು, ಎಂ.ಎ.

ಸಾಮಾಜಿಕರು – () ಮೈಸೂರು ಸಂಸ್ಥಾನಕ್ಕೆ

ಮ|| ಸರ್ದಾರ್ ಎಂ. ಕಾಂತರಾಜೇ ಅರಸಿನವರು, ಬಿ.ಎ., ಸಿ. ಎಸ್.ಐ.

ದಿವಾನ್ ಬಹದೂರ್ ರಾಜಸಭಾಭೂಷಣ ಕೆ. ಪಿ. ಪುಟ್ಟಣ್ಣ ಶೆಟ್ಟಿಯವರು

ಕರ್ಪೂರ ಶ್ರೀನಿವಾಸರಾಯವರು, ಬಿ.ಎಸ್.ಸಿ., ಎಲ್.ಸಿ.ಇ.

ಎಚ್. ಲಿಂಗರಾಜೇ ಅರಸಿನವರು

ಎಂ. ವೆಂಕಟಕೃಷ್ಣಯ್ಯನವರು

ಸಿ. ಕೃಷ್ಣರಾಯರು ಬಿ.ಎ.

ಆರ್. ನರಸಿಂಹಾಚಾರ್ಯರು, ಎಂ.ಎ.

ಆರ್. ರಘುನಾಥರಾಯರು, ಬಿ.ಎ.

ಬಿ. ಸುಬ್ಬರಾಯರು, ಬಿ.ಎ.

ಎಂ. ಲಕ್ಷ್ಮೀನಾರಾಯಣಪ್ಪನವರು   ಬಿ.ಎ.

ಸಿ. ವಾಸುದೇವಯ್ಯನವರು

ಪಂಡಿತ ಕವಿತಿಲಕ  ಅಯ್ಯಾಶಾಸ್ತ್ರಿಗಳವರು

 () ಬೊಂಬಾಯಿ ಅಧಿಪತ್ಯಕ್ಕೆ

ಮ||  ವಿ.ಬಿ. ಜೋಶಿಯವರು ಬಿ.ಎ.

ಎನ್.ಜಿ. ಕರ್ಗುದರಿಯವರು, ಬಿ.ಎ.ಎಲ್.ಬಿ.

ಆರ್. ಎಸ್. ನರಗುಂದಕರವರು

ಆರ್.ಎ. ಜಹಗೀರ್ದಾರ್, ಎಂ.ಎ. ಎಲ್.ಎಲ್.ಬಿ.

ಆರ್.ಎಸ್.  ಚಿಕ್ಕೋಡಿಯವರು ಬಿ.ಎ.

ಮ||  ಕೆ.ಎಚ್. ಮುದವೇಡಕರ್  ಅವರು

ಪಿ.ಜಿ.  ಹಳಕಟ್ಟಿಯವರು , ಬಿ.ಎ. ಎಲ್.ಎಲ್.ಬಿ.

ವಿ.ಬಿ.  ಆಲೂರವರು, ಬಿ.ಎ. ಎಲ್.ಎಲ್.ಬಿ.

() ಮದರಾಸಿನ ಅಧಿಪತ್ಯಕ್ಕೆ

ಮ|| ಬಿ. ರಾಮರಾಯರು, ಎಂ.ಎ. ಎಲ್.ಎಲ್.ಬಿ.

ರಾಜಗೋಪಾಲಕೃಷ್ಣರಾಯರು

ಎಚ್.  ತಿಮ್ಮಕೃಷ್ಣರಾಯರು

ಎಂ.ಡಿ. ಅಳಸಿಂಗರಾಚಾರ್ಯರು

ಎ. ವೆಂಕಟರಾಯರು, ಬಿ.ಎ, ಎಲ್.ಟಿ.

(ದಕ್ಷಿಣ ಮಹಾರಾಷ್ಟ್ರ ಸಂಸ್ಥಾನಗಳಿಗೆ

ಮ|| ಟಿ.ಎಸ್.  ಚಿಕ್ಕೋಡಿಯವರು

ಆರ್.ಎಸ್.  ಮಂಗಸೂಲಿಯವರು

(ಹೈದರಾಬಾದು ಕರ್ಣಾಟಕಕ್ಕೆ

ಮ|| ಕೃಷ್ಣಯ್ಯಂಗಾರ್ಯರವರು

ಆರ್. ತಾತ ಅವರು, ಎಂ.ಎ. ಎಲ್.ಟಿ.

(೬) ಕೊಡಗು ಪ್ರಾಂತ್ಯಕ್ಕೆ

ಮ|| ರಾವ್ ಬಹದೂರ್ ರಾಜಕಾರ್ಯ ಪ್ರಸಕ್ತ ಎ. ಮುತ್ತಣ್ಣನವರು

ಅಗ್ರಾಸನಾಧಿಪತಿಗಳ ಇಚ್ಛಾನುಸಾರವಾಗಿ ಸನ್ಮಾನ್ಯ ಕಾರ್ಯದರ್ಶಿಗಳು ಕರ್ಣಾಟಕ ಸಾಹಿತ್ಯ ಪರಿಷತ್ತಿನ  ಸಾಮಾಜಿಕರ ವಿವರವನ್ನು   ಸಭೆಗೆ ಬಿನ್ನವಿಸಿದರು. ಮ|| ಕರ್ಪೂರ ಶ್ರೀನಿವಾಸರಾಯರೂ ರೂ. ೫00ನ್ನು ಉಚಿತ ಧನವಾಗಿಕೊಟ್ಟು ಆಶ್ರಯದಾತರಾಗಿರುವರೆಂತಲೂ, ೪೧ ಮಂದಿ ಆಜೀವ ಸಾಮಾಜಿಕರಾಗಿರುವರೆಂತಲೂ, ೪೨ ಮಂದಿ  ಪ್ರಥಮ ವರ್ಗ ಸಾಮಾನ್ಯ  ಸಾಮಾಜಿಕರಾಗಿರುವರೆಂತಲೂ, ೨0 ಮಂದಿ ದ್ವಿತೀಯ ವರ್ಗದ ಸಾಮಾನ್ಯ ಸಾಮಾಜಿಕರಾಗಿರುವರೆಂತಲೂ, ವಾಗ್ದಾನವಾಗಿರುವ ಉಚಿತ  ಧನದ ಮೊತ್ತವು ರೂ. ೨,000 ಆಗುವುದೆಂತಲೂ  ವಾರ್ಷಿಕ ಚಂದಾ ಹಣದ ಮೊತ್ತವು ರೂ. ೬೨೪ ಆಗುವುದೆಂತಲೂ  ಶ್ರುತಪಡಿಸಿದರು.

೧೯೧೫ರ ನಿಬಂಧನೆಗಳಿಗೆ ತಿದ್ದುಪಡಿಗಳು

೧೯೧೫ರಲ್ಲಿ ರಚಿತವಾದ ನಿಬಂಧನೆಗಳು ಮೊದಲನೇ ವರ್ಷದ ವಾರ್ಷಿಕ ಸಭೆಯಲ್ಲಿ (೧೯೧೬) ತಿದ್ದುಪಡಿಗಳಿಗೆ ಒಳಗಾದವು. ಅವುಗಳ ವಿವರ ಹೀಗಿವೆ:

ಮೊದಲನೇ ದಿನದ ಸಭೆ (೧೯೧೬)

  1. ಕರ್ಣಾಟಕ ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಭೆಯು ೧೯೧೬ನೆಯ ಇಸವಿಯ ಮೇ ತಿಂಗಳ ೬ನೆಯ ಮತ್ತು ೭ನೆಯ ತಾರೀಖುಗಳಲ್ಲಿ ಪ್ರಾತಃಕಾಲ ೮ ಗಂಟೆಗೆ ಸರಿಯಾಗಿ ಬೆಂಗಳೂರಿನ ಕೋಟೆಯಲ್ಲಿರುವ  ಗೌರ್ನಮೆಂಟ್ ಆಂಗ್ಲೋವರ್ನಾಕ್ಯುಲರ್ ಸ್ಕೂಲಿನಲ್ಲಿ  ನಡೆಯಿತು.
  1. ಪರಿಷತ್ತಿನ ಉಪಾಧ್ಯಕ್ಷರಾದ ರಾವ್ ಬಹದ್ದೂರ್ ಮ|| ಎಂ. ಶಾಮರಾವ್, ಎಂ.ಎ, ಅವರು ಅಗ್ರಾಸನವನ್ನು ಅಲಂಕರಿಸಿದರು.

III.ಮುಂದೆ ವಿವರಿಸಿರುವ ಕೆಲಸವು ನಡೆಯಿತು.

(೧)  ಈಗಿರುವ  IV ನೆಯ ನಿಬಂಧನೆಯಲ್ಲಿ ಮುಂದೆ ವಿವರಿಸುವ ತಿದ್ದುಪಾಟುಗಳು ಆವಶ್ಯಕಗಳಾಗಿವೆ ಎಂದು ಮ|| ಬಿ. ರಾಮರಾವ್, ಎಂ.ಎ. ಎಲ್.ಎಲ್.ಬಿ. ಅವರು ಸಕಾರಣವಾಗಿ ತೋರಿಸಲು, ಮ|| ಬಾ ಸುಬ್ಬರಾವ್, ಬಿ.ಎ.  ಅವರು ಅವುಗಳನ್ನು ಅನುಮೋದಿಸಿದರು. ಅವುಗಳು ಸಭೆಯವರಿಂದ  ಅಂಗೀಕರಿಸಲ್ಪಟ್ಟವು.

ಇವು ಯಾವುವೆಂದರೆ

(ಎ)  “ಪೋಷಕರು”, “ಉಪಪೋಷಕರು” ಎಂಬ ಪದಗಳಿಗೆ ಪ್ರತಿಯಾಗಿ  “ಮಹಾ ಪೋಷಕರು”,  “ಪೋಷಕರು” ಎಂಬ ಪದಗಳು ಉಪಯೋಗಿಸಲ್ಪಡಬೇಕು.

(ಬಿ)   “ಪ್ರದಾತೃಗಳು” ಎಂಬ ಪದಕ್ಕೆ ಬದಲಾಗಿ  “ಉದ್ಧಾರಕರು” ಎಂಬ ಪದವು ಇರಬೇಕು.

(ಸಿ)   “ಪ್ರದಾತೃಗಳು”  ಎಂಬ ಹೆಸರನ್ನು ೫00 ರೂಪಾಯಿಗಳಿಗೆ ಕಡಿಮೆಯಿಲ್ಲದಂತೆ ಧನಸಹಾಯವನ್ನು  ಮಾಡುವವರಿಗೇ ಇಡಬೇಕು.

(ಡಿ)   ೨೫0 ರೂಪಾಯಿಗಳಿಗೆ ಕಡಿಮೆ  ಇಲ್ಲದಂತೆ  ಧನಸಹಾಯವನ್ನು  ಮಾಡುವ ಮೆಂಬರುಗಳ ಹೊಸ ತರಗತಿಯೊಂದನ್ನು ಏರ್ಪಡಿಸಿ, ಆ ತರಗತಿಯವರಿಗೆ “ಆಶ್ರಯದಾತರು” ಎಂಬ ಹೆಸರನ್ನು ಇಡಬೇಕು.

೨. ಈಗಿರುವ iv ನೆಯ ನಿಬಂಧನೆಗೆ ಹೊಸ ತರಗತಿಯೊಂದನ್ನು ಸೇರಿಸಿ,  ಅದನ್ನು ಕೆಳಗೆ ತೋರಿಸುವಂತೆ  ಬದಲಾಯಿಸುವುದು ಉಚಿತವೆಂದು  ಮ|| ಬಿ.ವಿ. ರಾಮರಾವ್  ಎಂ.ಎ. ಎಲ್.ಎಲ್.ಬಿ. ಅವರು ತೋರಿಸಲು  ಮ|| ಬಿ.  ರಾಮರಾವ್ ಬಿ.ಎ. ಅವರು  ಅದನ್ನು ಅನುಮೋದಿಸಿದರು.

ಯಾವುವೆಂದರೆ:

(ಎ) ಆಜೀವ ಸದಸ್ಯರುಗಳಲ್ಲಿ ಎರಡು ತರಗತಿಗಳಿರಬೇಕು. ಮೊದಲನೆಯ ತರಗತಿಯವರು ೧00 ರೂಪಾಯಿಗಳನ್ನು, ಎರಡನೆಯ  ತರಗತಿಯವರು ೫0 ರೂಪಾಯಿಗಳನ್ನು ಕೊಡಬೇಕು.

ಈ ಸಲಹೆಯ ವಿಷಯದಲ್ಲಿ  ಚರ್ಚೆಯು ವಿಶೇಷವಾಗಿ ನಡೆಯಿತು. ಮ|| ರಾ|| ಲಕ್ಷ್ಮೀನರಸಿಂಹರಾಯರು ಆಜೀವಸದಸ್ಯರುಗಳಲ್ಲಿ ಎರಡು ತರಗತಿಗಳನ್ನು ಏರ್ಪಡಿಸುವುದು ಉಚಿತವಾಗಿ ತೋರುವುದಿಲ್ಲವೆಂದು ವಾದಿಸಿದರು.  ಹೀಗೆಯೇ ಚರ್ಚೆಯು ಇನ್ನೂ  ನಡೆದ ಬಳಿಕ, ೧00 ರೂಪಾಯಿಗಳಿಗೆ ಕಡಿಮೆಯಿಲ್ಲದಂತೆ ಧನಸಹಾಯವನ್ನು ಮಾಡುವವರಿಗೆ “ಸಹಾಯಕರು” ಎಂಬ ಹೆಸರನ್ನು, ೫0 ರೂಪಾಯಿಗಳಿಗೆ ಕಡಿಮೆಯಿಲ್ಲದಂತೆ  ಧನಸಹಾಯವನ್ನು ಮಾಡುವವರಿಗೆ ಈಗಿನಂತೆ ಮುಂದೆಯೂ  “ಆಜೀವ ಸದಸ್ಯರು” ಎಂಬ ಹೆಸರನ್ನು ಇಡತಕ್ಕುದು ಎಂದು ತೀರ್ಮಾನವಾಯಿತು.

(ಬಿ) ಈಗ ಪ್ರಥಮ ದ್ವಿತೀಯ ವರ್ಗಗಳ  ಸಾಧಾರಣ ಸದಸ್ಯರು  ಕೊಡಬೇಕಾಗಿರುವ  ೧೨ ಮತ್ತು ೪ ರೂಪಾಯಿಗಳ ವಾರ್ಷಿಕ ಚಂದಾ ಮೊಬಲಗುಗಳನ್ನು ೬ ಮತ್ತು ೩ ರೂಪಾಯಿಗಳಿಗೆ ಇಳಿಸಬೇಕು.

ಸ್ವಲ್ಪ   ಚರ್ಚೆಯು ನಡೆದ ಮೇಲೆ ಈ ಸಲಹೆಯನ್ನು ಸಲಹೆದಾರರು ಹಿಂದಕ್ಕೆ ತೆಗೆದುಕೊಂಡರು.

(ಸಿ) ೧೯೧೫ನೆಯ ಇಸವಿಯ ಮೇ ತಾರೀಖು ೩ರಲ್ಲಿ ಪ್ರಾರಂಭವಾದ ಪರಿಷತ್ತಿನ ಪ್ರಥಮ ವರ್ಷದೊಳಗೆ  ಪರಿಷತ್ತಿಗೆ ಸೇರಿದ ಪ್ರಥಮ ದ್ವಿತೀಯ ವರ್ಗಗಳ  ಸಾಧಾರಣ ಸದಸ್ಯರು  ಆಜೀವ ಸದಸ್ಯರಾಗಲು  ಇಷ್ಟಪಡುವುದಾದರೆ,  ಅಂತಹವರು ತಾವು ತಮ್ಮ ಇಷ್ಟವನ್ನು  ಪ್ರದರ್ಶಿಸುವವರೆಗೂ ಕೊಟ್ಟಿರುವ  ಚಂದಾ ಮೊಬಲಗನ್ನು ಕಳೆದು ಉಳಿಯುವ ಮೊಬಲಗನ್ನು ಈ ನಿಬಂಧನೆಯು ಜಾರಿಗೆ ಬಂದ ತಾರೀಖಿನ ಲಾಗಾಯಿತು ಒಂದು ವರ್ಷದೊಳಗಾಗಿ ಕೊಟ್ಟು ಆಜೀವ ಸದಸ್ಯರಾಗಲು  ಅವಕಾಶವನ್ನು ಕೊಡಬೇಕು.

ಇದೂ ಅಂಗೀಕೃತವಾಯಿತು.

(ಡಿ) ಕನ್ನಡವಲ್ಲದ ಬೇರೆ  ಭಾಷೆಯಲ್ಲಿ  ಪಾಂಡಿತ್ಯವನ್ನು ಪಡೆದಿರುವ ಮತ್ತು ಕನ್ನಡದೇಳಿಗೆಯಲ್ಲಿ ಆಸಕ್ತರಾಗಿರುವ ಮಹನೀಯರಿಗೋಸ್ಕರ ಯಾವ ವಿಧವಾದ ಚಂದಾ  ಮೊಬಲಗನ್ನೂ ಕೊಡಬೇಕಾಗಿಲ್ಲದ ಹೊಸ ತರಗತಿಯೊಂದನ್ನು   ಏರ್ಪಡಿಸಿ,  ಆ ತರಗತಿಯವರಿಗೆ ವಿಶಿಷ್ಟ ಸದಸ್ಯರು  ಎಂಬ ಹೆಸರನ್ನು ಕೊಡತಕ್ಕದ್ದು.

ಇದೂ ಅಂಗೀಕೃತವಾಯಿತು.

ಈ ಸಮಯದಲ್ಲಿ ಪರಿಷತ್ತಿನ ಅಧ್ಯಕ್ಷರು ಬಂದು  ಅಗ್ರಾಸನವನ್ನಲಂಕರಿಸಿದರು.

(೩) ಈಗಿರುವ   iv ನೆಯ ಮತ್ತು v ನೆಯ  ನಿಬಂಧನೆಗಳಲ್ಲಿ  ಮುಂದೆ ವಿವರಿಸುವ  ತಿದ್ದುಪಾಟುಗಳು ಸಭೆಯ ಆಲೋಚನೆಗೆ  ತರಲ್ಪಟ್ಟುವು….

(ಎ) ಎರಡನೆಯ ವರ್ಗದ ಸಾಧಾರಣ ಸದಸ್ಯರಿಗೆ ಪರಿಷತ್ತಿನ  ಸಾಧಾರಣ ಸಭೆಗಳಲ್ಲಿ ತಮ್ಮ ಅಭಿಮತಗಳನ್ನು ಸೂಚಿಸುವ ಅಧಿಕಾರವನ್ನು ಕೊಡತಕ್ಕುದು.

ಈ ವಿಷಯದಲ್ಲಿ  ಕೆಲವು ನಿರ್ಬಂಧಗಳಿರುವುದು ಉತ್ತಮವೆಂದು ಮ|| ಕರಣೀಕ ಕೃಷ್ಣಮೂರ್ತಿಗಳು ಅಭಿಪ್ರಾಯಪಟ್ಟರು. ಮೂರುವರ್ಷಗಳವರೆಗೂ ದ್ವಿತೀಯ ವರ್ಗದಲ್ಲಿ ಸಾಧಾರಣ  ಸದಸ್ಯರಾಗಿದ್ದ ಮೇಲೆ ಈ ಅಧಿಕಾರವು  ಬರುವಂತೆ ವಿಧಿಸುವುದು ಉಚಿತವೆಂದು ಮ|| ಆರ್. ಎ. ಜಹಗೀದ್ದಾರರವರು  ಅಭಿಪ್ರಾಯಪಟ್ಟರು.

ಹೀಗೆಯೇ ಚರ್ಚೆಯು  ಕೆಲವು ಕಾಲಗಳವರೆಗೆ ನಡೆದ ಮೇಲೆ v ನೆಯ ನಿಬಂಧನೆಯನ್ನು ಈ ಕೆಳಗೆ ವಿವರಿಸುವಂತೆ  ಬದಲಾಯಿಸುವುದು ಉಚಿತವೆಂದು ತೀರ್ಮಾನಿಸಲಾಯಿತು.  ಎಂತೆಂದರೆ-

“ಪರಿಷತ್ತಿನ ಎಲ್ಲ ಸಭೆಗಳಲ್ಲಿಯೂ ಪರಿಷತ್ತಿನ ಎಲ್ಲಾ ಸದಸ್ಯರುಗಳಿಗೂ ತಂತಮ್ಮ ಅಭಿಮತವನ್ನು   ಸೂಚಿಸುವ ಅಧಿಕಾರವಿರತಕ್ಕುದು: ಪರಂತು  ದ್ವಿತೀಯವರ್ಗದ  ಸಾಧಾರಣ ಸದಸ್ಯರುಗಳಿಗೆ  ಈ ಅಧಿಕಾರವು  ಅವರು ಪರಿಷತ್ತಿಗೆ ಸೇರಿದ ತಾರೀಖು ಲಾಗಾಯಿತು ಒಂದು ವರ್ಷವಾದ ಹೊರತು ಇರಕೂಡದು.”

(ಬಿ) ಈಗಿರುವ   iv ನೆಯ  ನಿಬಂಧನೆಯನ್ನು ಈ ಕೆಳಗೆ ವಿವರಿಸುವಂತೆ  ಬದಲಾಯಿಸಬೇಕೆಂಬ  ಸಲಹೆ ಪರ್ಯಾಲೋಚನೆಗೆ ಬಂತು. ಎಂತೆಂದರೆ- “ಪರಿಷತ್ತಿನ  ಸದಸ್ಯರುಗಳೆಲ್ಲರೂ ಪರಿಷತ್ಪತ್ರಿಕೆಯ ಒಂದೊಂದು  ಪ್ರತಿಯನ್ನು ಉಚಿತವಾಗಿ  ಹೊಂದುವ ಹಕ್ಕನ್ನು  ಪಡೆದಿರಬೇಕು. ಪರಿಷತ್ತಿನಿಂದ ಪ್ರಕಟವಾಗುವ ಇತರ ಸ್ತಕಗಳ ವಿಷಯದಲ್ಲಿ ಕಾರ್ಯನಿರ್ವಾಹಕ  ಮಂಡಲಿಯು ಕಾಲಕಾಲಕ್ಕೆ ನಿರ್ಣಯಿಸುವ  ದರಗಳ ಪ್ರಕಾರವಾಗಿಯೋ, ಉಚಿತವಾಗಿಯೋ  ಸದಸ್ಯರುಗಳು ಒಂದೊಂದು ಪ್ರತಿಯನ್ನು ಹೊಂದುವ ಹಕ್ಕುಳ್ಳವರಾಗಿರಬೇಕು.

ಇದು ಅಂಗೀಕೃತವಾಯಿತು.

(೪) ಪರಿಷತ್ತಿನ ಗೌರವ ಕಾರ್ಯದರ್ಶಿಗಳ ಜತೆಗೆ ಗೌರವ ಸಹಾಯಕ  ಕಾರ್ಯದರ್ಶಿಗಳೊಬ್ಬರು ಇರಬೇಕು.  ಮತ್ತು ಬೆಂಗಳೂರಲ್ಲದ  ಇತರ ಸ್ಥಳಗಳ ಕಾರ್ಯನಿರ್ವಾಹಕರಾಗಿ ಒಬ್ಬರೋ ಅಥವಾ  ಒಬ್ಬರಿಗಿಂತ ಹೆಚ್ಚಾಗಿಯೋ ವ್ಯವಹಾರದ  ಗೌರವ ಕಾರ್ಯದರ್ಶಿಗಳು  ನಿಯಮಿಸಲ್ಪಡಬೇಕು”ಎಂಬ ಸಲಹೆಯು ಸಭೆಯ ಪರ್ಯಾಲೋಚನೆಗೆ  ತರಲ್ಪಟ್ಟಿತು.

ಮ|| ಕರಣೀಕ ಕೃಷ್ಣಮೂರ್ತಿಗಳು ಗೌರವಕಾರ್ಯದರ್ಶಿಗಳ ಜತೆಗೆ ಗೌರವ ಸಹಾಯಕ ಕಾರ್ಯದರ್ಶಿಗಳೊಬ್ಬರು ಇರುವುದಕ್ಕೆ ಬದಲಾಗಿ ಇಬ್ಬರು ಜಂಟಿ ಗೌರವ ಕಾರ್ಯದರ್ಶಿ ಗಳಿರುವುದೇ ಮೇಲು ಎಂಬ ತಿದ್ದುಪಾಟನ್ನು ಸಭೆಯ ಮುಂದಕ್ಕೆ ತಂದರು ; ಇದನ್ನು ಮ|| ಎಚ್. ಚೆನ್ನ ಕೇಶವಯ್ಯಂಗಾರ್ಯರು ಅನುಮೋದಿಸಿದರು.

ಈ ತಿದ್ದುಪಾಟು ಅಂಗೀಕೃತವಾಯಿತು.

ಪತ್ರವ್ಯವಹಾರದ ಕಾರ್ಯದರ್ಶಿಗಳ ವಿಷಯದಲ್ಲಿ ಮದರಾಸು  ಪ್ರಾಂತ್ಯಕ್ಕೊಬ್ಬರು ಮುಂಬಯಿ ಪ್ರಾಂತ್ಯಕ್ಕೊಬ್ಬರು  ಇದ್ದರೆ ಸಾಕೆಂತಲೂ, ಈ ಕಾರ್ಯದರ್ಶಿಗಳನ್ನು ಮದರಾಸು ಮುಂಬಯಿ ಪ್ರಾಂತದವರೇ ಬೇರೆ ಬೇರೆಯಾಗಿ  ತಮತಮಗೆ ಬೇಕಾದವರನ್ನು ಚುನಾಯಿಸಿಸಿ ಅವರ ಹೆಸರುಗಳನ್ನು ಪರಿಷತ್ತಿನ ಕಾರ್ಯದರ್ಶಿಗಳಿಗೆ ತಿಳಿಯಪಡಿಸುವುದೇ ಉತ್ತಮವೆಂತಲೂ ಸಭೆಯವರಲ್ಲಿ ಅನೇಕರು ಅಭಿಪ್ರಾಯಪಟ್ಟರು.

ತಿದ್ದುಪಾಟು ಆದಮೇಲೆ  viii ನೆಯ ನಿಬಂಧನೆಯು ಈ ಕೆಳಗೆ ವಿವರಿಸಿರುವಂತೆ ನಿಂತಿತು. ಎಂತೆಂದರೆ -”ಕಾರ್ಯ ನಿರ್ವಾಹಕ ಮಂಡಲಿಯಲ್ಲಿ ಮೂವತ್ತು ಮಂದಿ  ಮೆಂಬರುಗಳ ಜತೆಗೆ ಒಬ್ಬರು ಅಧ್ಯಕ್ಷರು,  ಒಬ್ಬರು ಉಪಾಧ್ಯಕ್ಷರು  ಇಬ್ಬರು ಜಂಟಿ  ಗೌರವ ಕಾರ್ಯದರ್ಶಿಗಳು,  ಒಬ್ಬರು ಗೌರವ ಕೋಶಾಧ್ಯಕ್ಷರು ಇರತಕ್ಕುದು.  ಈ ಮೇಲ್ಕಂಡವರೆಲ್ಲರೂ ಬ್ಯಾಲಟ್ ಮೂಲಕವಾಗಿಯೇ ಚುನಾಯಿಸಲ್ಪಡಬೇಕು. “

ಈಗಿನ ನಿಬಂಧನೆಗಳಲ್ಲಿ ಉಪಯೋಗಿಸಿರುವ  “ಗೌರವ ಕಾರ್ಯದರ್ಶಿ”  ಎಂಬುದಕ್ಕೆ ಬದಲಾಗಿ “ಜಂಟಿ ಗೌರವ ಕಾರ್ಯದರ್ಶಿಗಳು” ಎಂಬುದನ್ನು  ಅವಶ್ಯವಾದೆಡೆಯಲ್ಲೆಲ್ಲ ಉಪಯೋಗಿಸತಕ್ಕುದು ಎಂದು ತೀರ್ಮಾನವಾಯಿತು.

(೫) ಈ ಕೆಳಗೆ ಕೊಟ್ಟಿರುವ ವಾಕ್ಯವು ix ನೆಯ  ನಿಬಂಧನೆಯ ಜತೆಗೆ ಸೇರಬೇಕೆಂದು ತೀರ್ಮಾನಿಸಲಾಯಿತು. ಅವುದೆಂದರೆ – “ಕಾರ್ಯನಿರ್ವಾಹಕ ಮಂಡಲಿಯವರು ವರ್ಷದವರೆಗೋ  ಅಥವಾ ಹೊಸ ಮೆಂಬರುಗಳು ನಿಯಮಿತರಾಗುವವರೆಗೂ ಅಧಿಕಾರದಲ್ಲಿರತಕ್ಕುದು.

(೬) ಈಗಿರುವ  xi ನೆಯ ನಿಬಂಧನೆಯು ವಜಾಮಾಡಲ್ಪಡಬೇಕೆಂದು ತೀರ್ಮಾನವಾಯಿತು.

ಮೊದಲನೆಯ ದಿನದ ಸಭೆಯು ಇಲ್ಲಿಗೆ ನಿಂತಿತು.

ಎರಡನೆಯ ದಿವಸದ ಸಭೆ (೧೯೧೬) ನಿಬಂಧನೆಯ ತಿದ್ದುಪಡಿಗಳು

  1. ಮೊದಲನೆಯ ದಿನದ ಸಭೆಗೆ ಬಂದಿದ್ದ ಸದಸ್ಯರುಗಳು ಸ್ವಲ್ಪ ಹೆಚ್ಚು ಕಡಿಮೆಯಾಗಿ  ಎಲ್ಲರೂ ಈ ದಿನದ ಸಭೆಗೂ  ದಯಮಾಡಿಸಿದ್ದರು.
  2. ಮುಂದೆ  ವಿವರಿಸುವ ಸಲಹೆಗಳು ಸಭೆಯ ಪರ್ಯಾಲೋಚನೆಗೆ  ಬಂದು ಅಲ್ಲಲ್ಲಿ  ಕೆಳಗೆ ತೋರಿಸಿರುವಂತೆ  ವ್ಯವಸ್ಥೆ ಮಾಡಲ್ಪಟ್ಟುವು.

(೧) ಕಾರ್ಯನಿರ್ವಾಹಕ ಮಂಡಲಿಯವರಿಗೆ ಉಚಿತವೆಂದು ತೋರುವಂತೆ ಪ್ರಸಿದ್ಧರಾದ ಪಂಡಿತರನ್ನು  ಐದು ಮಂದಿಗೆ ಮೀರದ ಹಾಗೆ ಕಾರ್ಯನಿರ್ವಾಹಕ ಮಂಡಲಿಗೆ ಸೇರಿಸಿಕೊಳ್ಳುವುದಕ್ಕೆ ಅಧಿಕಾರವಿರಬೇಕು ; ಹೀಗೆ   ಸೇರಿಸಲ್ಪಟ್ಟ  ಪಂಡಿತ ಸದಸ್ಯರುಗಳಿಂದ ಚಂದಾ ಮೊಬಲಗು ಯಾವುದನ್ನೂ ವಸೂಲು ಮಾಡಲವಶ್ಯವಿಲ್ಲ,  ಮತ್ತು ಈ ಪಂಡಿತ ಸದಸ್ಯರುಗಳು  ಮತ್ತೊಂದು ವಾರ್ಷಿಕ ಸಭೆಯಲ್ಲಿ  ಬೇರೊಂದು ಕಾರ್ಯನಿರ್ವಾಹಕ  ಮಂಡಲಿಯು ಚುನಾಯಿಸಲ್ಪಡುವವರೆಗೂ ಮೆಂಬರುಗಳಾಗಿರತಕ್ಕುದು.”

 ಈ ಮೇಲಣ ಸಲಹೆಯನ್ನು ಮ|| ಬಿ. ರಾಮರಾಯರವರು ಪರ್ಯಾಲೋಚನೆಗೆ ತರಲು, ಮ|| ಎಸ್.  ಎಸ್. ಸೆಟ್ಲೂರವರು ಅನುಮೋದಿಸಿದರು. ಮತ್ತು ಮ|| ಕರ್ಪೂರ ಶ್ರೀನಿವಾಸರಾಯರು ಸಮರ್ಥಿಸಿದರು.

ಇದು ಅಂಗೀಕೃತವಾಯಿತು.

(೨)  ೧೯೧೩-೧೯೧೬ನೆಯ  XII ನೆಯ  ನಿಬಂಧನೆಗೆ ಮುಂದೆ ಡುವ ವಾಕ್ಯವನ್ನು  ಸೇರಿಸತಕ್ಕದ್ದು. ಯಾವುದೆಂದರೆ –

“ವರ್ಷದ ಮಧ್ಯದ ಕಾರ್ಯನಿರ್ವಾಹಕ ಮಂಡಲಿಯ ಸೇರಣೆಯು  (Meeting) ಸಾಧ್ಯವಾಗುವ ಮಟ್ಟಿಗೂ  ದಸರಾ ರಜದಲ್ಲಿ ನಡೆಯಬೇಕು.

 ಅಂಗೀಕೃತವಾಯಿತು.

(೩) ಕಾರ್ಯನಿರ್ವಾಹಕ ಮಂಡಲಿಯ ವರ್ಷ ಮಧ್ಯದ  ಸಭೆಯಲ್ಲದ ಇತರ ಸಭೆಗಳ  ಕಾರ್ಯವಿವರದ ಪಟ್ಟಿಯಲ್ಲಿ (Agenda paper) ಕಾಣಬರುವ ವಿಷಯಗಳಲ್ಲಿ  ಯಾವುದನ್ನಾದರೂ  ವರ್ಷಮಧ್ಯದ ಸಭೆಯ ಪರ್ಯಾಲೋಚನೆಗೆ ಮೆಂಬರುಗಳು ಇಡಿಸಿಕೊಳ್ಳಬಹುದು. ಆದರೆ ಹಾಗೆ ಮಾಡಬೇಕೆಂದು ಕೇಳುವವರ ಸಂಖ್ಯೆಯು ಕಾರ್ಯನಿರ್ವಾಹಕ ಮಂಡಲಿಯ ಸದಸ್ಯರುಗಳ ಒಟ್ಟು ಸಂಖ್ಯೆಯಲ್ಲಿ  ಕಾಲುಪಾಲಿಗಿಂತ ಕಡಿಮೆಯಾಗಿರಕೂಡದು.” ಈ ಸಲಹೆಯನ್ನು ಮ|| ಬಿ. ಸುಬ್ಬರಾಯರು ಅನುಮೋದಿಸಿದರು. ಮತ್ತು ಮ|| ಆಲೂರವರು ಸಮರ್ಥಿಸಿದರು.

ಅಂಗೀಕೃತವಾಯಿತು.

(೪) “ಬ್ಯಾಂಕಿನಿಂದ ಹಣವನ್ನು ತೆಗೆಯುವಾಗ ಮಾತ್ರ ಗೌರವ ಕೋಶಾಧ್ಯಕ್ಷರೂ ಜಂಟಿ ಗೌರವ ಕಾರ್ಯದರ್ಶಿಗಳಿಬ್ಬರಲ್ಲಿ ಒಬ್ಬರೂ ರುಜುಹಾಕಬೇಕೆಂತಲೂ,  ಇತರ ಸಂದರ್ಭಗಳಲ್ಲಿ ಮೂವರಲ್ಲಿ ಯಾರಾದರೂ ಒಬ್ಬರು ರುಜು ಹಾಕಿದರೆ ಸಾಕು ಎಂತಲೂ ಅರ್ಥ ಬರುವ  ಹಾಗೆ ಈಗಿರುವ   XxIv ನೆಯ  ನಿಬಂಧನೆಯನ್ನು  ಬದಲಾಯಿಸತಕ್ಕುದು.”

  ಅಂಗೀಕೃತವಾಯಿತು

(೫) “ಈಗಿರುವ   XxvII ನೆಯ  ನಿಬಂಧನೆಯಲ್ಲಿ “ಒಂದು  ತಿಂಗಳು” ಎಂದಿರುವುದನ್ನು “ಮೂರು ತಿಂಗಳು” ಎಂದು ಬದಲಾಯಿಸತಕ್ಕುದು.”

  ಅಂಗೀಕೃತವಾಯಿತು.

(೫) “ಕರ್ಣಾಟ ಭಾಷೆಯ ಏಳಿಗೆಗಾಗಿ ಹುಟ್ಟಿರುವ ಇತರ ಸಂಘಗಳನ್ನು ಈ ಕರ್ಣಾಟಕ ಸಾಹಿತ್ಯ ಪರಿಷತ್ತು ತನ್ನ ಜತೆಗೆ ಕಾರ್ಯನಿರ್ವಾಹಕ್ಕಾಗಿ ಸೇರಿಸಿಕೊಳ್ಳುವುದಕ್ಕೆ ಅವಶ್ಯವಾಗಿರುವ  ನಿಬಂಧನೆಗಳನ್ನು ನಿರ್ಣಯಿಸಿ ರಿಪೋರ್ಟ್ ಮಾಡುವುದಕ್ಕಾಗಿ ಧಾರವಾಡದ ಮ|| ಆರ್. ಎಚ್. ದೇಶಪಾಂಡೆಯವರೂ, ಬಿಜಾಪುರದ ರಾವ್ ಸಾಹೇಬ್ ಮ|| ರಾವೇಂದ್ರರಾವ್ ಕೆಂಭಾವಿಯವರೂ,  ಮುಂಬಯಿಯ ಮ|| ಎಸ್ ಸೆಟ್ಲೂರವರೂ, ಮದರಾಸಿನ ಮ|| ಬಿ. ರಾಮರಾಯರೂ, ಮಂಗಳೂರಿನ ಮ|| ಎ. ವೆಂಕಟರಾಯರವರೂ, ಬೆಂಗಳೂರಿನ ಮ|| ಕರ್ಪೂರ ಶ್ರೀನಿವಾಸರಾಯರೂ, ಮ|| ಎಂ. ಎಸ್. ಪುಟ್ಟಣ್ಣನವರೂ,  ಮ|| ಟಿ.  ಲಕ್ಷ್ಮೀನರಸಿಂಹರಾಯರವರೂ ಸೇರಿದ ಉಪಸಂಘವೊಂದು ಏರ್ಪಡಿಸಲ್ಪಡಬೇಕು.”

ಮೇಲಣ ಸಲಹೆಯನ್ನು  ಮ|| ಬಿ. ರಾಮರಾಯರವರು ಪರ್ಯಾಲೋಚನೆಗೆ ತರಲು, ಮ|| ಟಿ. ಲಕ್ಷ್ಮೀನರಸಿಂಹರಾಯರು  ಅನುಮೋದಿಸಿದರು. ಮತ್ತು ಮ|| ಎ. ವೆಂಕಟರಾಯರವರು ಸಮರ್ಥಿಸಿದರು.

ಅಂಗೀಕೃತವಾಯಿತು.

(೭) “ಪರಿಷತ್ತಿಗೆ ಪ್ರತಿನಿಧಿಗಳನ್ನು ಕಳುಹಿಸದೆ ಇರುವ ಕನ್ನಡ ನಾಡುಗಳಲ್ಲಿ – ಮುಖ್ಯವಾಗಿ ಹೈದರಾಬಾದಿನ ಪಶ್ಚಿಮ  ಪ್ರಾಂತಗಳಲ್ಲಿ  ಮತ್ತು ದಕ್ಷಿಣ ಮಹಾರಾಷ್ಟ್ರದ  ನಾಡುಗಳಲ್ಲಿ – ಸಂಚಾರಮಾಡಿ (ಎ) ಪರಿಷತ್ತಿಗೆ ಹೊಸ ಸದಸ್ಯರುಗಳನ್ನು  ಸೇರಿಸುವುದಕ್ಕೂ , (ಬಿ) ಪ್ರಾದೇಶಿಕ ಸರ್ಕಾರಗಳ  ಸಹಾನುಭೂತಿಯನ್ನೂ ಸಹಾಯವನ್ನೂ ಸಂಪಾದಿಸುವುದಕ್ಕೂ  (ಸಿ) ಉಚಿತವಾದ ಇತರ ವಿಧಗಳಲ್ಲಿ ಪರಿಷತ್ತಿನ ಉದ್ದೇಶಗಳನ್ನು ನೆರವೇರಿಸುವುದಕ್ಕೂ ಪರಿಷತ್ತಿನ  ಸದಸ್ಯರುಗಳಲ್ಲಿ ಇಬ್ಬರನ್ನು  ಚುನಾಯಿಸಿ ಕಳುಹಿಸತಕ್ಕುದು ಮತ್ತು ಆವಶ್ಯವಾಗಿದ್ದಲ್ಲಿ ಅವರ ವೆಚ್ಚಗಳನ್ನು ಪರಿಷತ್ತಿನ  ಧನದಿಂದ ಕೊಡತಕ್ಕುದು.”

ಮೇಲಣ ಸಲಹೆಯನ್ನು ಮ|| ಆರ್.ಎಚ್. ದೇಶಪಾಂಡೆಯವರು, ಸಭೆಯ ಮುಂದೆ ತರಲು, ಮ|| ಎಂ. ಎಸ್. ಪುಟ್ಟಣ್ಣನವರು ಅನುಮೋದಿಸಿದರು. ಮತ್ತು ಬಾ ಸುಬ್ಬರಾಯರು  ಸಮರ್ಥಿಸಿದರು. ಅಂಗೀಕೃತವಾಯಿತು.

ಮ|| ಆರ್.  ಎಚ್. ದೇಶಪಾಂಡೆಯವರ ಜತೆಗೆ ಕಾರ್ಯನಿರ್ವಾಹಕ ಮಂಡಲಿಯವರು ಚುನಾಯಿಸುವ   ಸದಸ್ಯರೊಬ್ಬರನ್ನು ಸೇರಿಸಿ,. ಈ ಇಬ್ಬರು ಸದಸ್ಯರನ್ನೂ, ಅವಶ್ಯಕವಾದಲ್ಲಿ ಅವರ ವೆಚ್ಚಗಳನ್ನು ಪರಿಷತ್ತಿನವರೇ ಕೊಟ್ಟು, ಮೇಲ್ಕಂಡ  ನಾಡುಗಳಿಗೆ ಕಳುಹಿಸತಕ್ಕುದೆಂದೂ ತೀರ್ಮಾನವಾಯಿತು.

  1. ಡಾಕ್ಟರ್ ಪಿ.ಎಸ್. ಅಚ್ಯುತರಾಯರೂ ಮ|| ಬಿ. ದಾಸಪ್ಪನವರೂ ಪರಿಷತ್ತಿನ ಚಾಲತಿ ವರ್ಷದ ಲೆಕ್ಕಗಳನ್ನು ಪರೀಕ್ಷಿಸಲಿಕ್ಕೆ ಆಯವ್ಯಯ ಶೋಧಕರಾಗಿ (Auditors) ನಿಯಮಿಸಲ್ಪಟ್ಟರು.

vii.  ಸಭೆಯಲ್ಲಿದ್ದ ಸದಸ್ಯರುಗಳಿಗೆಲ್ಲಾ ಅಭಿಮತ  ಪ್ರದರ್ಶನಾರ್ಥವಾಗಿ ಅಭಿಮತ ನಿದರ್ಶಕ ಪತ್ರಗಳನ್ನು (Voting Paper)   ಕೊಟ್ಟು, ಅವುಗಳನ್ನು ಅವರಿಂದ ತೆಗೆದುಕೊಂಡ ಮೇಲೆ ಮ|| ಬಿ. ರಾಮರಾಯರೂ ಮ|| ಆರ್. ಎ. ಜಹಗೀರ್ದಾರವರೂ ಅಭಿಮತಗಳ ಎಣಿಕೆಗಾಗಿ  ನಿಯಮಿಸಲ್ಪಟ್ಟರು. ಅಭಿಮತ ಪ್ರದರ್ಶನದ ಫಲಿತಾಂಶವು ಹೇಗಿತ್ತೆಂದರೆ

 

ಪರಿಷತ್ತಿನ ಕಾರ್ಯಕಾರಿ ಸಮಿತಿ (೧೯೧೬)

ಅಧ್ಯಕ್ಷರು

ರಾಜಮಂತ್ರ ಪ್ರವೀಣ ಎಚ್.ವಿ. ನಂಜುಂಡಯ್ಯ, ಎಂ..,  ಎಂ.ಎಲ್.ಸಿ.,.. ಅವರು.

ಉಪಾಧ್ಯಕ್ಷರು

ರಾವ್ ಬಹದ್ದೂರ್   ಎಂ. ಶಾಮರಾವ್ ಎಂ.. ಯವರು

ಜಂಟಿ ಗೌರವ ಕಾರ್ಯದರ್ಶಿಗಳು

  ಬಿ. ಕೃಷ್ಣಪ್ಪ ಎಂ.

ಬಿ. ವೆಂಕಟನಾರಣಪ್ಪ  ಎಂ.,

ಗೌರವ ಕೋಶಾಧ್ಯಕ್ಷರು

ಟಿ. ಲಕ್ಷ್ಮೀನರಸಿಂಹ್ಮರಾಯರು ಬಿ.. ಬಿ.ಎಲ್.

ಕಾರ್ಯನಿರ್ವಾಹಕ ಮಂಡಲಿಯ ಮೈಸೂರು ಸಂಸ್ಥಾನದ ೧೨ ಮಂದಿ

ಸದಸ್ಯರುಗಳು

೧. ಸರದಾರ್ ಎ. ಕಾಂತರಾಜೇ ಅರಸಿವರು, ಬಿ.ಎ. ಸಿ.ಎಸ್.ಐ.

೨. ರಾಜಸಭಾಭೂಷಣ ಕರ್ಪೂರ  ಶ್ರೀನಿವಾಸರಾವ್, ಬಿ.ಎಸ್.ಸಿ. ಎಲ್.ಸಿ.ಇ.

೩. ರಾವ್ ಬಹದ್ದೂರ್  ಕೆ. ಕೃಷ್ಣಯ್ಯಂಗಾರ್ಯರು, ಬಿ,ಎ.,  ಎಲ್.ಸಿ.ಇ.

೪. ಸಿ. ಕೃಷ್ಣರಾಯರು, ಬಿ.ಎ.

೫. ಎ. ವೆಂಕಟಕೃಷ್ಣಯ್ಯನವರು

೬. ರಾವ್ ಬಹದ್ದೂರ್  ಪ್ರಾಕ್ತನ ವಿಮರ್ಶ  ವಿಚಕ್ಷಣ  ಆರ್. ನರಸಿಂಹಾಚಾರ್ಯ ಎಂ.ಎ.

೭. ಎಂ.ಎಸ್. ಟ್ಟಣ್ಣನವರು, ಬಿ.ಎ,

೮. ಬಾಪು ಸುಬ್ಬರಾಯರು ಬಿ.ಎ.

೯. ಆರ್. ರಘುನಾಥರಾಯರು, ಬಿ.ಎ.

೧0.ಎಂ. ಕರಣೀಕ ಕೃಷ್ಣಮೂರ್ತಿಯವರು

೧೧.ಕವಿತಿಲಕ ಪಂಡಿತ ಅಯ್ಯಾಶಾಸ್ತ್ರಿಗಳು

೧೨.ಎಚ್. ಚೆನ್ನಕೇಶವಯ್ಯಂಗಾರ್ಯರು

 

ಮುಂಬಯಿ ಅಧಿಪತ್ಯದ  ೮ ಮಂದಿ ಕಾ.ನಿ. ಮಂ. ಸದಸ್ಯರುಗಳು

೧. ರಾವ್ ಬಹದ್ದೂರ್  ವಿ.ಬಿ. ಜೋಶಿ ಬಿ.ಎ. ಅವರು ಧಾರವಾಡ

೨. ರಾ.ಹ.  ದೇಶಪಾಂಡೆ ಎಂ.ಎ.ಅವರು ಧಾರವಾಡ

೩. ನಾರಾಯಣ  ಗುರುನಾಥ ಕರಗುದರಿ ಬಿ.ಎ. ಎಲ್.ಎಲ್. ಬಿ. ಅವರು ಧಾರವಾಡ

೪. ವಿ.ಬಿ. ಆಲೂರ್, ಬಿ.ಎ. ಎಲ್.ಎಲ್.ಬಿ. ಅವರಿ ಧಾರವಾಡ

೫. ಎಸ್.ಎಸ್. ಸೆಟ್ಲೂರ್ ಬಿ.ಎ. ಎಲ್.ಎಲ್.ಬಿ.ಅ ವರು ಮುಂಬಯಿ

೬. ಆರ್.ಎ. ಜಹಗೀರ್ದಾರ್ ಎಂ.ಎ.

೭. ಆರ್. ಬಿ. ಪೋಟದಾರ್ ಬೆಳಗಾಮು

೮. ಪಿ.ಜಿ. ಹಳಕಟ್ಟಿ, ಬಿ.ಎ. ಎಲ್.ಎಲ್.ಬಿ.ಅವರು ಬೆಳಗಾಮು

ಮದರಾಸು  ಅಧಿಪತ್ಯದ ೫ ಮಂದಿ ಕಾ.ನಿ.ಮಂ. ಸದಸ್ಯರುಗಳು

೧. ಬಿ. ರಾಮರಾವ್,  ಎಂ.ಎ. ಎಲ್.ಎಲ್.ಬಿ, ಮದರಾಸು

೨.ಆರ್. ತಾತ, ಎ.ಎ. ಎಲ್.ಟಿ.,ಮದರಾಸು

೩.ಎನ್. ರಾಜಗೋಪಾಲಕೃಷ್ಣರಾವ್ ಉಡುಪಿ

೪.ಪಿ. ಮಂಗೇಶರಾವ್, ಬಿ.ಎ. ಎಲ್.ಟಿ. ಮಂಗಳೂರು

೫.ಎ. ವೆಂಕಟೇಶರಾವ್, ಬಿ.ಎ. ಎಲ್.ಟಿ. ಮಂಗಳೂರು

ಷರಾ – ಹೈದರಾಬಾದು, ದಕ್ಷಿಣ ಮಹಾರಾಷ್ಟ್ರದ ಸಂಸ್ಥಾನಗಳು, ಕೊಡಗು- ಈ ಪ್ರಾಂತಗಳಿಗಾಗಿ  ಕಾರ್ಯನಿರ್ವಾಹಕ  ಮಂಡಲಿಯಲ್ಲಿ ಈ ವರ್ಷವೂ ಹಿಂದಿನ  ವರ್ಷದವರೇ ಸದಸ್ಯರಾಗಿರುವರು. (ನಿಬಂಧನೆ IX)

VIII. ಅಗ್ರಾಸನಾಧಿಪತಿಗಳಿಗೆ ವಂದನೆಗಳನ್ನು ಸಮರ್ಪಿಸಿದ  ತರುವಾಯ ಸಭೆಯು ಬರಖಾಸ್ತಾಯಿತು.

ಪರಿಷತ್ತಿನ ಪ್ರಾರಂಭದ ವರ್ಷಗಳಲ್ಲಿ ಸಮ್ಮೇಳನಗಳು ನಡೆಯುವಾಗಲೇ ವಾರ್ಷಿಕಸಭೆ ನಡೆದು ವರದಿ ಮತ್ತು ಲೆಕ್ಕಪತ್ರಗಳು ಮಂಡನೆ ಆಗುತ್ತಿದ್ದವು ಮತ್ತು ಕಾರ್ಯಕಾರಿಸಮಿತಿಗೆ ಸದಸ್ಯರು ಆಯ್ಕೆಯಾಗುತ್ತಿದ್ದರು. ಪ್ರತಿವರ್ಷವೂ ಚುನಾವಣೆ ಇರುತ್ತಿತ್ತು. ಸಮ್ಮೇಳನಕ್ಕೆ ಬಂದ ಗಣ್ಯರು ಸಕಲ ಸದಸ್ಯರ ಸಭೆಗೂ ಬಂದಿರುತ್ತಿದ್ದರು. ಈ ಬಗ್ಗೆ ಕೃಷ್ಣಸೂಕ್ತಿಪತ್ರಿಕೆಯ ಕಡೇಕಾರು ರಾಜಗೋಪಾಲಕೃಷ್ಣರಾಯರು ಆಕ್ಷೇಪಣೆ ಎತ್ತಿದರು. ಸದಸ್ಯರಲ್ಲದವರು ಸಕಲ ಸದಸ್ಯರ ಸಭೆಗೆ ಬರತಕ್ಕದ್ದಲ್ಲವೆಂದು ಪ್ರತಿಪಾದಿಸಿದರು. (ಶ್ರೀಕೃಷ್ಣಸೂಕ್ತಿ ಜುಲೈ ೧೯೧೭) ಅನಂತರದಲ್ಲಿ ಕಾಲಕಾಲಕ್ಕೆ ನಿಬಂಧನೆಗಳು ತಿದ್ದುಪಡಿಗಳನ್ನು ಹೊಂದಿವೆ. ಈಗ ಸಮ್ಮೇಳನ ಮತ್ತು ಸಕಲ ಸದಸ್ಯರ ಸಭೆಗಳು ಪ್ರತ್ಯೇಕವಾಗಿ ಬೇರೆಬೇರೆ ಸ್ಥಳಗಳಲ್ಲಿ ಬೇರೆಬೇರೆ ಕಾಲಗಳಲ್ಲಿ ನಡೆಯುತ್ತವೆ.

Tag: Nibandhanegalu 1915, nibandanegalu 1915

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)