ಪ್ರಸಕ್ತ ನಿಬಂಧನೆಗಳು

೧೯೯೮ರಿಂದ ಈಗ ಚಾಲ್ತಿಯಲ್ಲಿರುವ ನಿಬಂಧನೆಗಳು

(ಮೈಸೂರು ಸಂಸ್ಥಾನದ ಸಾರ್ವಜನಿಕ ಸಂಘಗಳ ಸಂಬಂಧವಾದ  ಕಾನೂನಿನ ಮೇರೆಗೆ ಸರ್ಕಾರದಲ್ಲಿ ರಿಜಿಸ್ಟರಾಗಿದೆ. ರಿ. ನಂಬರು ೩೨೮/೧೯೧೫-೧೬ : ದಿನಾಂಕ ೧೨.೧೧.೧೯೧೫)

(ಪರಿಷತ್ತಿನ ಸ್ಥಾಪನೆ ದಿನಾಂಕ :  ೫-೫-೧೯೧೫)

[ದಿನಾಂಕ ೨೫-೧೧-೧೯೭೩,  ೯-೭-೧೯೮೩, ೧೫-೫-೧೯೮೮ ಹಾಗೂ ೩0-೯-೧೯೯0ರಂದು ಸೇರಿದ್ದ ಪರಿಷತ್ತಿನ ವಿಶೇಷ  ಸಕಲ ಸದಸ್ಯರ  ಸಭೆಯಲ್ಲಿ ತಿದ್ದುಪಡಿಯಾಗಿ ಅಂಗೀಕಾರವಾಗಿದ್ದು, ಕರ್ನಾಟಕ  ಸೊಸೈಟಿಗಳ ರಿಜಿಸ್ಟ್ರಾರ್ ಅವರಲ್ಲಿ ಕ್ರಮವಾಗಿ ಸಂಖ್ಯೆ ಸಿ. ನಂ.ಎ.ಎಂ.ಆರ್ ೨೩೫-೭೩-೭೪, ದಿನಾಂಕ ೮-೩-೧೯೭೪ ಎಂ.ಎಂ.ಆರ್.  ೮೫, ೮೩-೮೪ ದಿನಾಂಕ ೨೧-೧೧-೧೯೮೩ ಹಾಗೂ ಎ.ಎಂ.ಆರ್. ೮೩, ೮೮-೮೯ ದಿನಾಂಕ ೩0-೬-೧೯೮೮ ಹಾಗೂ ಎ.ಎಂ.ಆರ್.  ೧೩0/೯೧-೯೨   ದಿನಾಂಕ ೨೬-೧೧-೧೯೯೧  ಹಾಗೂ  ದಿನಾಂಕ  ೨೮-೯-೧೯೯೭ರಂದು ಸೇರಿದ್ದ ಪರಿಷತ್ತಿನ  ವಿಶೇಷ ಸಕಲ  ಸದಸ್ಯರ ಸಭೆಯಲ್ಲಿ ತಿದ್ದುಪಡಿಯಾಗಿ, ಅಂಗೀಕಾರವಾಗಿದ್ದು,   ಕರ್ನಾಟಕ ಸೊಸೈಟಿಗಳ ರಿಜಿಸ್ಟ್ರಾರ್ ಅವರಲ್ಲಿ ಸಂಖ್ಯೆ ಎ.ಎಂ.ಆರ್ ೭೯/೯೭-೯೮ರ ದಿನಾಂಕ ೧೫-೪-೧೯೯೮ರ ಪ್ರಕಾರ ಒಪ್ಪಿಗೆ ಪಡೆದಿದೆ.]

ನಿಬಂಧನೆಗಳು

ಹೆಸರು

೧. (ಎ) ಈ ಸಂಸ್ಥೆಯ ಹೆಸರು ಕನ್ನಡ ಸಾಹಿತ್ಯ ಪರಿಷತ್ತು ಎಂದು ಇರತಕ್ಕದ್ದು.

 (ಆ) ಈ ನಿಬಂಧನೆಗಳಲ್ಲಿ ಮಂದೆ ಇದನ್ನು “ಪರಿಷತ್ತು” ಎಂದು ಕರೆಯಲಾಗುವುದು.

ವ್ಯಾಪ್ತಿ

೨. ಪರಿಷತ್ತಿನ ಕಾರ್ಯವ್ಯಾಪ್ತಿ ಕರ್ನಾಟಕ ಮತ್ತು ಕನ್ನಡ ಭಾಷೆ ಬಳಕೆಯಲ್ಲಿ ಇರುವ ಎಲ್ಲಾ ಪ್ರದೇಶಗಳನ್ನೂ ಒಳಗೊಂಡಿರಬೇಕು.

ಕಾರ್ಯಾಲಯ

೩. ಪರಿಷತ್ತಿನ  ಕೇಂದ್ರ ಕಾರ್ಯಾಲಯವು ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು – ೫೬0 0೧೮ರಲ್ಲಿ ಇರತಕ್ಕದ್ದು.

ಉದ್ದೇಶ

೪. ಕನ್ನಡ ಭಾಷೆ,  ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜನಪದ ಇವುಗಳ ರಕ್ಷಣೆ, ಪ್ರಸಾರ ಮತ್ತು ಅಭಿವೃದ್ಧಿ ಆಗಿರತಕ್ಕದ್ದು.

ಕಾರ್ಯಸಾಧನೆ

೫. (ಎ) ನಾಲ್ಕನೆಯ ನಿಬಂಧನೆಯಲ್ಲಿ ನಿರೂಪಿತವಾದ ಪರಿಷತ್ತಿನ ಉದ್ದೇಶ ಸಾಧನೆಗೆ ಈ  ಕೆಳಗೆ ಕಾಣಿಸಿರುವ  ಕಾರ್ಯಗಳನ್ನು ಕೈಗೊಳ್ಳತಕ್ಕದ್ದು.

(ಆ) ಸಮ್ಮೇಳನ, ಸಾಹಿತ್ಯೋತ್ಸವ, ನಾಡಹಬ್ಬ  ಮುಂತಾದ  ಉತ್ಸವಗಳು, ಉಪನ್ಯಾಸಗಳು, ಸ್ಪರ್ಧೆಗಳು , ಕಲಾ ಪ್ರದರ್ಶನಗಳು ಹಾಗೂ ವಿಚಾರ ಸಂಕಿರಣಗಳು, ಗೋಷ್ಠಿಗಳು, ಕಮ್ಮಟ, ಕಾರ್ಯಾಗಾರಗಳು, ಕನ್ನಡ ಶಾಲೆಗಳ ಸ್ಥಾಪನೆ , ಅವುಗಳಿಗೂ ಮತ್ತು ಸಾಕ್ಷರತಾ ಪ್ರಚಾರಕ್ಕೂ ಪ್ರೋತ್ಸಾಹ.

(ಇ)  ಓಲೆ ಪ್ರತಿಗಳ ಸಂಗ್ರಹ, ಹಳೆಯ ಗ್ರಂಥಗಳ ಪ್ರಕಟಣೆ,  ತಾಮ್ರಪಟ, ಶಿಲಾಶಾಸನಪ್ರತಿಗಳು,  ಐತಿಹಾಸಿಕ ಕಾಗದಪತ್ರಗಳು,  ನಾಣ್ಯಗಳು, ಇತ್ಯಾದಿ ಪ್ರಾಚ್ಯವಸ್ತುಗಳ ಸಂಗ್ರಹ.

(ಈ) ಸಂಶೋಧನಾ ಶಾಖೆಯ ಏರ್ಪಾಡು, ಸಾಹಿತ್ಯ, ಕಲೆ, ಇತಿಹಾಸ, ಸಂಸ್ಕೃತಿಗಳಿಗೆ ಸಂಬಂಧಿಸಿದಂತೆ  ಸಂಶೋಧನೆ ನಡೆಸಲು ವ್ಯವಸ್ಥೆ ಸಂಶೋಧಕರಿಗೆ ಸೌಕರ್ಯ.

(ಉ) ವ್ಯಾಕರಣ, ನಿಘಂಟು, ಚರಿತ್ರೆ, ವಿಜ್ಞಾನ, ಸಮಾಜವಿಜ್ಞಾನ, ಮಾನವಿಕ, ಪರಿಶೋಧನೆ, ತತ್ವವಿಚಾರ, ಪಾರಿಭಾಷಿಕಕೋಶ,  ಸಾಹಿತ್ಯ, ಕಲೆ, ಧರ್ಮ, ದರ್ಶನ ಇತ್ಯಾದಿ ವಿಷಯಗಳನ್ನು ಕುರಿತು ಗ್ರಂಥ ಪ್ರಕಟಣೆಗೆ  ಸಹಾಯ ಪ್ರಚಾರ ಮತ್ತು ಮಾರಾಟ.

(ಊ)  ವಿವಿಧ ವಿಷಯಗಳ ಉತ್ತಮ ಗ್ರಂಥಗಳನ್ನು ಇತರ ಭಾಷೆಗಳಿಂದ  ಕನ್ನಡಕ್ಕೆ ಉತ್ತಮ ಕನ್ನಡಗ್ರಂಥಗಳನ್ನು ಇತರ ಭಾಷೆಗಳಿಗೆ  ಭಾಷಾಂತರ  ಮಾಡಿಸುವುದು, ಪ್ರಕಟಿಸುವುದು, ಪ್ರಚಾರ ಮತ್ತು ಮಾರಾಟ ಮಾಡುವುದು.

(ಋ)  ಸಾಹಿತ್ಯ, ಶಾಸನಶಾಸ್ತ್ರ, ಪತ್ರಿಕೋದ್ಯಮ, ಗಮಕ, ಸಂಗೀತ,  ಜಾನಪದ ತರಗತಿಗಳು ಮತ್ತು ಪರೀಕ್ಷೆಗಳು, ಸ್ಪರ್ಧೆಗಳ ಏರ್ಪಾಟು.

(ಋೂ) ಪರಿಷತ್ತಿನ  ಕಾರ್ಯಕಲಾಪಗಳ ಪ್ರಸಾರಕ್ಕೆ ಮತ್ತು ಸಾಹಿತ್ಯ ಕಲೆಗಳ  ಉತ್ಕರ್ಷಕ್ಕೆ “ಕನ್ನಡ ನುಡಿ” (ಮಾಸಿಕ) ಮತ್ತು “ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ” (ಷಾಣ್ಮಾಸಿಕ) ಮೊದಲಾದ ನಿಯತಕಾಲಿಕೆಗಳನ್ನು ಪ್ರಕಟಿಸತಕ್ಕದ್ದು.

(ಎ)  ಕರ್ನಾಟಕ ಗಡಿನಾಡು ಹೊರನಾಡು ಪ್ರದೇಶಗಳ ಅಭಿವೃದ್ಧಿಗೆ ಶ್ರಮಿಸಬೇಕು.

(ಏ) ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗಾಗಿ ಸರಕಾರ ಮತ್ತು ಇತರ ಸಂಸ್ಥೆಗಳು ಕೈಗೊಳ್ಳುವ  ಕಾರ್ಯದಲ್ಲಿ  ಸಹಕರಿಸುವುದು ಮತ್ತು ಸಲಹೆ ಸೂಚನೆಗಳನ್ನು  ಕೊಡುವುದು.

. ಪಾಂಡಿತ್ಯ ಪೋಷಣೆ

(ಅ) ಭಾಷೆ,  ಸಾಹಿತ್ಯ ಇತಿಹಾಸ, ಕಲೆ ಶಾಸ್ತ್ರ, ದರ್ಶನ ಮುಂತಾದ  ಕ್ಷೇತ್ರಗಳಲ್ಲಿ ವಿಶೇಷ ಜ್ಞಾನಾನುಭವವುಳ್ಳ ಹಿರಿಯ ವಿದ್ವಾಂಸರನ್ನೂ ಸಾಹಿತಿಗಳನ್ನೂ ಆಗಾಗ ಒಂದೊಂದು ಕಡೆ ಸೇರಿಸಿ ವಿಚಾರ ವಿನಿಮಯಕ್ಕೆ ಅವಕಾಶ ಕಲ್ಪಿಸುವುದು.

(ಆ) ಪ್ರೌಢ ಗ್ರಂಥಗಳ ನಿರ್ಮಾಪಕರಿಗೆ ಪ್ರೊತ್ಸಾಹ ಮತ್ತು ಧನಸಹಾಯ  ನೀಡುವುದು.

(ಇ) ಕನ್ನಡದ ಹಿರಿಯ ವಿದ್ವಾಂಸರಿಗೂ ಸಾಹಿತಿಗಳಿಗೂ ಸನ್ಮಾನ, ಪ್ರಶಸ್ತಿ, ಬಹುಮಾನ, ಗೌರವ ಸದಸ್ಯತ್ವ (ಫೆಲೋಷಿಫ್) ನೀಡುವುದು

(ಈ) ಉದಯೋನ್ಮುಖ  ಲೇಖಕರಿಗೆ ಪ್ರೋತ್ಸಾಹ ನೀಡುವುದು. ಇವುಗಳಲ್ಲದೆ ಮೂಲ ಉದ್ದೇಶಗಳನ್ವಯ ಇಂಥ ಇತರ ಕಾರ್ಯಗಳನ್ನೂ ಪರಿಷತ್ತು ಕೈಗೊಳ್ಳತಕ್ಕದ್ದು.

. ಅಂಗರಚನೆ

ಪರಿಷತ್ತಿನ  ಉದ್ದೇಶಗಳನ್ನು ಅಂಗೀಕರಿಸಿ ಅದರೊಡನೆ ಸಹಕರಿಸಲು ಬದ್ಧರಾಗುವ ಕನ್ನಡ  ಸಂಸ್ಥೆಗಳು ಮತ್ತು ೧೮  ವರ್ಷಗಳ ಮೇಲ್ಪಟ್ಟ  ವಯಸ್ಸಿನ  ಕನ್ನಡ ಓದು ಬರಹ ಬಲ್ಲ  ಎಲ್ಲ ವ್ಯಕ್ತಿಗಳೂ ಸದಸ್ಯತ್ವವನ್ನು ಪಡೆಯಬಹುದು.

ಸದಸ್ಯರಲ್ಲಿ ಈ ಕೆಳಕಂಡಂತೆ ವರ್ಗಗಳಿರತಕ್ಕದ್ದು

ಅ) ಪೋಷಕರು ರೂ. ೧0,000

ಆ) ದಾತೃಗಳು ರೂ. ೫,000

ಇ) ಆಜೀವ ಸದಸ್ಯರು ರೂ. ೨೫0

ಈ) ವಾರ್ಷಿಕ ಸದಸ್ಯರುರೂ. ೫0

ಉ) ಪೋಷಕ ಸಂಸ್ಥೆಗಳು ರೂ. ೨೫,000

ಊ) ದಾತೃಸಂಸ್ಥೆಗಳು ರೂ. ೧0,000

ಋ) ಆಜೀವ ಸಂಸ್ಥೆಗಳು ರೂ. ೨,೫00

ಋೂ) ವಾರ್ಷಿಕ ಸದಸ್ಯ ಸಂಸ್ಥೆಗಳು ರೂ. ೨೫0

 ಎ) ಸದಸ್ಯರಾಗುವವರು ಸದಸ್ಯತ್ವದ ಶುಲ್ಕದ ಜೊತೆಗೆ  (ಹತ್ತು) ರೂ. ೧0- ಪ್ರವೇಶ ಶುಲ್ಕವನ್ನು ಕೊಡತ್ಕಕದ್ದು

ಏ) ಸದಸ್ಯತ್ವವನ್ನು  ಮುಂದುವರಿಸಿಕೊಳ್ಳದಿರುವ ವ್ಯಕ್ತಿಯು ಮತ್ತು ಸಂಸ್ಥೆಯು ಮರು ಪ್ರವೇಶಕ್ಕೆ ಹತ್ತು ರೂಪಾಯಿ ಪ್ರವೇಶ ಧನವನ್ನು  ಕೊಡತಕ್ಕದ್ದು.

ಐ) ವಾರ್ಷಿಕ  ಸದಸ್ಯರ ಶುಲ್ಕ ಹಾಗೂ ವಾರ್ಷಿಕ ಸದಸ್ಯ ಸಂಸ್ಥೆಗಳ ಶುಲ್ಕವನ್ನು ಹೊರತುಪಡಿಸಿ ಉಳಿದ ಎಲ್ಲ ವರ್ಗದ ಸದಸ್ಯತ್ವದ ಶುಲ್ಕವನ್ನು  ಸ್ಥಾಯಿನಿಧಿಗೆ ಸೇರಿಸತಕ್ಕದ್ದು. ಸ್ಥಾಯಿನಿಧಿಯ ಹಣವನ್ನು ಯಾವ  ಕಾರಣದಿಂದಲೂ ಸರ್ವಸದಸ್ಯರ ಸಭೆಯ ಅನುಮತಿ ಇಲ್ಲದೇ ಬಳಸತಕ್ಕದ್ದಲ್ಲ. ಈ ನಿಧಿಯಿಂದ ಬರುವ ಬಡ್ಡಿಯನ್ನು  ಮಾತ್ರ ಪರಿಷತ್ತಿನ ಚಟುವಟಿಕೆಗಳಿಗೆ ಬಳಸತಕ್ಕದ್ದು.

೮.   ಸದಸ್ಯರಾಗಿ ಸೇರಲು ಬಯಸುವ ವ್ಯಕ್ತಿ ಅಥವಾ ಸಂಸ್ಥೆಯು ಪರಿಷತ್ತಿನಿಂದ ಪಡೆದ ಅಧಿಕೃತ ಅಪೇಕ್ಷಾ   ಪತ್ರದಲ್ಲಿ (ಅರ್ಜಿಯಲ್ಲಿ) ವಿವರವಾಗಿ ೭ನೆಯ  ನಿಬಂಧನೆಯಲ್ಲಿ ಕಾಣಿಸಿರುವ  ಆಯಾವರ್ಗದ  ಸದಸ್ಯತ್ವಕ್ಕಾಗಿ  ಕೊಡತಕ್ಕ ಸದಸ್ಯತ್ವಶುಲ್ಕ ಮತ್ತು ಪ್ರವೇಶ ಶುಲ್ಕಗಳೊಡನೆ  ಪರಿಷತ್ತಿಗೆ ಸಲ್ಲಿಸತಕ್ಕದ್ದು.  ಅಂತಹವರನ್ನು ಆಯಾ ವರ್ಗದ  ಸದಸ್ಯರನ್ನಾಗಿ ಸೇರಿಸಿಕೊಳ್ಳಲು ಕಾರ್ಯಕಾರಿ ಸಮಿತಿಗೆ ಅಧಿಕಾರವಿರತಕ್ಕದ್ದು. ಸಕಾರಣವಾಗಿ ಅಪೇಕ್ಷಾಪತ್ರವನ್ನು  ತಿರಸ್ಕರಿಸಿದರೆ ಸದಸ್ಯತ್ವದ ಶುಲ್ಕವನ್ನು ಹಿಂದಿರುಗಿಸತಕ್ಕದ್ದು.

ಆ) ಪರಿಷತ್ತಿನ ವಾರ್ಷಿಕ ಸದಸ್ಯತ್ವದ ಅವಧಿ ಏಪ್ರಿಲ್ ೨ರಿಂದ ಮಾರ್ಚ್ ೩೧ರವರೆಗೆ  ಇರತಕ್ಕದ್ದು. ವರ್ಷದ ನಡುವೆ  ಯಾವಾಗ ಸದಸ್ಯರಾದರೂ ಆ ವರ್ಷಕ್ಕೆ ಸದಸ್ಯತ್ವ ಮತ್ತು ಸದಸ್ಯತ್ವದ ಹಕ್ಕುಬಾಧ್ಯತೆಗಳು ಸಲ್ಲತಕ್ಕದ್ದು.

ಇ)  ವಾರ್ಷಿಕ ಸದಸ್ಯರು ಮತ್ತು ಸಂಘ ಸಂಸ್ಥೆಗಳು ಸದಸ್ಯತ್ವದ ಶುಲ್ಕವನ್ನು ಪ್ರವೇಶ ಧನವಿಲ್ಲದೆ  ಆ ವರ್ಷದ ಏಪ್ರಿಲ್ ತಿಂಗಳ ಅಂತ್ಯದೊಳಗಾಗಿ ಸಲ್ಲಿಸಿ ಸದಸ್ಯತ್ವವನ್ನು ಮುಂದುವರಿಸಿಕೊಳ್ಳಬಹುದು. ಹಾಗೆ ಮುಂದುವರಿಸಿಕೊಳ್ಳದಿದ್ದರೆ  ಸದಸ್ಯತ್ವವು ರದ್ದಾಗುತ್ತದೆ.

ಈ) ಎಲ್ಲ ವರ್ಗಗಳ ಸದಸ್ಯರು ತಮ್ಮ ಸದಸ್ಯತ್ವದ ಶುಲ್ಕವನ್ನು ಒಂದೇ ಕಂತಿನಲ್ಲಿ  ಸಲ್ಲಿಸಬೇಕು.

ಉ) ಸದಸ್ಯರು ಗುರುತಿನ ಚೀಟಿಯನ್ನು  ಕಡ್ಡಾಯವಾಗಿ  ಪಡೆದಿರಬೇಕು.  ಗುರುತಿನ ಚೀಟಿ  ಇಲ್ಲದ ಸದಸ್ಯರಿಗೆ ಮತದಾನದಲ್ಲಾಗಲೀ ಸಕಲ ಸದಸ್ಯರ ಸಭೆಯಲ್ಲಾಗಲೀ  ಭಾಗವಹಿಸುವ ಅವಕಾಶವಿರುವುದಿಲ್ಲ.

ಊ) ಸದಸ್ಯ ಅಥವಾ ಸದಸ್ಯ  ಸಂಸ್ಥೆಯ  ವರ್ತನೆಯು ಪರಿಷತ್ತಿನ ಘನತೆ ಗೌರವಗಳಿಗೆ ಹಾಗೂ ಧ್ಯೇಯೋದ್ದೇಶಗಳಿಗೆ ವಿರೋಧವೆಂದು ಕಂಡು ಬಂದರೆ ಅಂತಹ ಸದಸ್ಯ ಅಥವಾ ಸದಸ್ಯ ಸಂಸ್ಥೆಯ ವಿವರಣೆಯನ್ನು ಪಡೆದು ಪರಿಶೀಲನೆ ಮಾಡಿ ಸದಸ್ಯತ್ವವನ್ನು ಮೂರು  ವರ್ಷಗಳ ಕಾಲ ಅಮಾನತ್ತು ಮಾಡುವ ಅಧಿಕಾರವು ಕಾರ್ಯಕಾರಿ ಸಮಿತಿಗೆ ಇರತಕ್ಕುದ್ದು. ಇಂತಹ ನಿರ್ಣಯವನ್ನು ಮುಂಬರುವ  ವಾರ್ಷಿಕಾಧಿವೇಶನಕ್ಕೆ ತಿಳಿಸತಕ್ಕುದು.

ಋ) ಒಮ್ಮೆ ಅಂಗೀಕೃತವಾದ ಸದಸ್ಯತ್ವದ ಹಣವನ್ನು ಯಾವುದೇ ಕಾರಣದಿಂದ ಹಿಂದಿರುಗಿಸತಕ್ಕದ್ದಲ್ಲ.

ಋೂ) ಸದಸ್ಯ, ಸದಸ್ಯ  ಸಂಸ್ಥೆಯು  ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ  ಕೊಟ್ಟಲ್ಲಿ ಅದನ್ನು ಅಂಗೀಕರಿಸುವ ಅಧಿಕಾರ ಕಾರ್ಯಕಾರಿ ಸಮಿತಿಗೆ  ಇರತಕ್ಕದ್ದು.

. ಸದಸ್ಯ ಮತ್ತು ಸಂಸ್ಥೆಯ ಹಕ್ಕುಬಾಧ್ಯತೆಗಳು

ಅ)  ಸದಸ್ಯತ್ವ ಅಂಗೀಕಾರವಾದ ದಿನದಿಂದ ಸದಸ್ಯತ್ವದ ಎಲ್ಲಾ ಹಕ್ಕುಗಳು ೩೨ನೆಯ  ನಿಬಂಧನೆಗೆ ಒಳಪಟ್ಟು ಅವರಿಗೆ ಬರತಕ್ಕದ್ದು.

ಆ) ಪರಿಷತ್ತಿನ ಉತ್ಸವ, ಉಪನ್ಯಾಸ  ಗೋಷ್ಠಿ, ಸಮ್ಮೇಳನ ಇತ್ಯಾದಿ  ಕಾರ್ಯಗಳಲ್ಲಿ ನಿಯಮಾನುಸಾರ ಭಾಗವಹಿಸುವ ಅಧಿಕಾರವಿರತಕ್ಕದ್ದು.

ಇ) ಪುಸ್ತಕಭಂಡಾರ, ವಾಚನಾಲಯ ಮೊದಲಾದ ಸೌಕರ್ಯಗಳನ್ನು ನಿಯಮಾನುಸಾರ ಪಡೆಯಲು ಅಧಿಕಾರವಿರತಕ್ಕದ್ದು

ಈ)  ಸದಸ್ಯರು ಪರಿಷತ್ತಿನ ಪ್ರಕಟಣೆಗಳ ಪ್ರತಿ ಶೀರ್ಷಿಕೆಯ ಒಂದೊಂದು ಪ್ರತಿಯನ್ನು  ಮುಕ್ಕಾಲು  ಬೆಲೆಗೆ ಪಡೆಯಲು ಹಕ್ಕುದಾರರಾಗಿರತಕ್ಕದ್ದು,  ಸರ್ಕಾರದ ಸಹಾಯಧನ ಪಡೆದು ಕಡಿಮೆ  ಬೆಲೆ  ನಿಗದಿಗೊಳಿಸಿದ  ಪ್ರಕಟಣೆಗಳು ಹಾಗೂ ಪರಿಷತ್ತು ನಡೆಸುವ ಪರೀಕ್ಷೆಗಳ  ಪಠ್ಯಸ್ತಕಗಳು ಹಾಗೂ ಪರಿಷತ್ಪತ್ರಿಕೆಗೆ  ಮೇಲಿನ ನಿಯಮ ಅನ್ವಯಿಸುವುದಿಲ್ಲ.

ಉ)  “ಕನ್ನಡ ನುಡಿ” ಪತ್ರಿಕೆಯನ್ನು ಉಚಿತವಾಗಿ  ಪಡೆಯತಕ್ಕದ್ದು.

ಊ) ವಾರ್ಷಿಕ ಸಭೆಗಳಲ್ಲೂ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರ ಆಯ್ಕೆಯಲ್ಲಿಯೂ  ಸಕಲ ಸದಸ್ಯರ ಸಾಮಾನ್ಯ  ಅಥವಾ ವಿಶೇಷ ಸಭೆಯ ಕಾರ್ಯಕಲಾಪಗಳ ನಿರ್ಣಯಗಳ ಬಗ್ಗೆಯೂ ೩೨ನೆಯ ನಿಬಂಧನೆಗೆ  ಒಳಪಟ್ಟು ಮತಕೊಡುವ  ಅಧಿಕಾರವಿರತಕ್ಕದ್ದು.

೧0. ಸಕಲ ಸದಸ್ಯರ ಸಭೆಗಳಲ್ಲಿ ಭಾಗವಹಿಸುವುದಕ್ಕಾಗಿಯೂ  ಮತದಾನ ಮಾಡುವುದಕ್ಕಾಗಿಯೂ  ಪ್ರತಿಯೊಂದು ಸದಸ್ಯ ಸಂಸ್ಥೆಯು ಒಬ್ಬ  ಕನ್ನಡ  ಓದು ಬರಹ  ಬಲ್ಲ ಪ್ರತಿನಿಧಿಯನ್ನು ಕಳಿಸಬಹುದು. ಸದಸ್ಯ ಸಂಸ್ಥೆಯ ಅಧಿಕಾರಿಗಳು ಅಂಥ ಪ್ರತಿನಿಧಿಯ ಹೆಸರು ಸಭೆಯು  ನಡೆಯುವ ೧೫ ದಿನಗಳ ಮುಂಚಿತವಾಗಿ ಪರಿಷತ್ತಿಗೆ ಲಿಖಿತ ರೂಪದಲ್ಲಿ  ತಿಳಿಸಿರಬೇಕು.  ಅಂಥ ಪ್ರತಿನಿಧಿಗೆ ಚುನಾವಣೆಗಳಲ್ಲಿ ಅಭ್ಯರ್ಥಿಯಾಗಿ  ನಿಲ್ಲಲು ಅವಕಾಶವಿರುವುದಿಲ್ಲ. ಆದರೆ ಅಂಥ ಪ್ರತಿನಿಧಿಯು  ಪರಿಷತ್ತಿನ ಸದಸ್ಯನಾಗಿದ್ದರೆ ಆ ಕಾರಣದಿಂದ ಅಭ್ಯರ್ಥಿಯಾಗಿ ನಿಲ್ಲಬಹುದು. ಮತ ನೀಡುವ  ಸಂದರ್ಭದಲ್ಲಿ ಪರಿಷತ್ತಿನ ಸ್ವತಃ ಸದಸ್ಯನಾಗಿದ್ದರೆ ಅದರ  ಒಂದು ಮತವನ್ನೂ  ಹಾಗೆಯೇ ಸದಸ್ಯ ಸಂಸ್ಥೆಯ ಪರವಾಗಿ  ಆಗಮಿಸಿದ್ದರೆ  ಅದರ ಪರವಾಗಿ ಇನ್ನೊಂದು ಮತವನ್ನೂ ನೀಡುವ ಅಧಿಕಾರವಿರತಕ್ಕದ್ದು.

೧೧.ಕಾರ್ಯಕಾರಿ ಸಮಿತಿ

ಪರಿಷತ್ತಿನ  ಆಡಳಿತಗಳನ್ನೆಲ್ಲಾ ಈ ಮುಂದಿನಂತೆ  ಉಚಿತವಾಗಿ ಕಾರ್ಯಕಾರಿ ಸಮಿತಿ ನಡೆಸತಕ್ಕದ್ದು. ಅಧ್ಯಕ್ಷರು  ಅದರ ಪ್ರತಿನಿಧಿಯಾಗಿ ಕಾರ್ಯಗಳನ್ನು ನಡೆಸತಕ್ಕದ್ದು. ಕಾರ್ಯಕಾರಿ ಸಮಿತಿಯಲ್ಲಿ ಈ ಕೆಳಗಿನಂತೆ ಸದಸ್ಯರಿರತಕ್ಕದ್ದು.

ಅ) ಅಧ್ಯಕ್ಷರು ೧

ಆ) ಗೌರವ ಕಾರ್ಯದರ್ಶಿಗಳು ೨

ಇ) ಗೌರವ  ಕೋಶಾಧ್ಯಕ್ಷರು ೧

ಈ) ಜಿಲ್ಲಾಟಕಗಳ ಚುನಾಯಿತ  ಅಧ್ಯಕ್ಷರು ೨೭

ಉ) ಗಡಿನಾಡ ಘಟಕಗಳ ಚುನಾಯಿತ ಅಧ್ಯಕ್ಷರು ೫

(ತಮಿಳುನಾಡು, ಆಂಧ್ರ, ಕೇರಳ, ಮಹಾರಾಷ್ಟ್ರ ಮತ್ತು ಗೋವಾ)

ಊ) ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರು ೧

ಋ) ನಿಕಟಪೂರ್ವ ಸಮ್ಮೇಳನಾಧ್ಯಕ್ಷರು ೧

ಋೂ) ಕನ್ನಡ ಅಧ್ಯಯನ ವ್ಯವಸ್ಥೆಯುಳ್ಳ ವಿಶ್ವವಿದ್ಯಾನಿಲಯದ ಪ್ರತಿನಿಧಿ

(ಕನ್ನಡ ಅಕ್ಷರಾನುಕ್ರಮಣಿಕೆಯಲ್ಲಿ) ೨

ಎ) ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ೧

ಏ) ಮಹಿಳಾ ಸಾಹಿತಿ ೧

ಐ) ಪರಿಶಿಷ್ಟ ಜಾತಿ ಪ್ರತಿನಿಧಿ ೧

ಒ) ಸಂಘ ಸಂಸ್ಥೆಗಳ ಪ್ರತಿನಿಧಿ ೧

ಒಟ್ಟು    ೪೪

೧೨.   ಅ)  ಮೇಲಿನ ಆ,ಇ, ಗಳನ್ನು ಅಧ್ಯಕ್ಷರು ನಾಮಕರಣ ಮಾಡಿಕೊಳ್ಳತಕ್ಕದ್ದು. ಏ, ಐ,  ಒ, ಗಳನ್ನು ಕಾರ್ಯಕಾರಿ  ಸಮಿತಿಯು ಆರಿಸಬೇಕು.

ಅ) ಮೊದಲನೆಯ  ಕಾರ್ಯಕಾರಿ ಸಮಿತಿಯು ಅಸ್ತಿತ್ವಕ್ಕೆ ಬರಬೇಕಾದರೆ ಕಾರ್ಯಕಾರಿ  ಸಮಿತಿಯ ಚುನಾಯಿತ ಸದಸ್ಯ ಸಂಖ್ಯೆಯ ಮೂರನೇ ಒಂದು ಭಾಗದಷ್ಟಾದರೂ ಇರಬೇಕು

೧೩.  ಅ)  ಪರಿಷತ್ತಿನ ಅಧ್ಯಕ್ಷರು, ಜಿಲ್ಲಾ ಘಟಕದ ಅಧ್ಯಕ್ಷರು ನೇರ ಮತದಾನದ ಮೂಲಕ ಆಯ್ಕೆಯಾಗತಕ್ಕದ್ದು. ಚುನಾವಣಾ ಉಪಬಂಧನೆಗಳಿಗನುಗುಣವಾಗಿ  ಕರ್ನಾಟಕ ರಾಜ್ಯದಲ್ಲಿರುವ ಪರಿಷತ್ತಿನ ಸದಸ್ಯರು ನೇರ ಮತದಾನದ ಮೂಲಕ ಮತ ಚಲಾಯಿಸತಕ್ಕದ್ದು. ಗಡಿನಾಡ ಘಟಕಗಳಿರುವ  ರಾಜ್ಯಗಳ ಸದಸ್ಯರೂ ಸೇರಿದಂತೆ  ಕರ್ನಾಟಕದ ಹೊರಗಡೆ  ಇರುವ ಸದಸ್ಯರು ಅಂಚೆ ಮೂಲಕ ಮತಚಲಾಯಿಸತಕ್ಕದ್ದು.  ಈ ಚುನಾವಣೆ ನಡೆದ ಎರಡು ತಿಂಗಳೊಳಗಾಗಿ  ಜಿಲ್ಲೆಗಳಲ್ಲಿ ಜಿಲ್ಲಾ ಘಟಕಗಳು ಗಡಿನಾಡ ಘಟಕಗಳು ರಚಿತವಾಗಿ ಪರಿಷತ್ತು ಸೂಚಿಸುವ ಕೆಲಸ ಕಾರ್ಯಗಳನ್ನು ನಡೆಸತಕ್ಕದ್ದು. ಜಿಲ್ಲಾ ಘಟಕದ  ಅಧ್ಯಕ್ಷರು ಮತ್ತು ಗಡಿನಾಡ  ಘಟಕದ ಅಧ್ಯಕ್ಷರು ಅಧಿಕಾರ ಪ್ರಯುಕ್ತ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿರತಕ್ಕದ್ದು.

ಆ) ಪರಿಷತ್ತಿನ  ಕಾರ್ಯಕಾರಿ ಸಮಿತಿಯ ಅವಧಿ ಮೂರು ವರ್ಷಗಳು ಇರತಕ್ಕದ್ದು.

೧೪. ಜಿಲ್ಲಾ ಘಟಕಗಳು

ಅ) ಕರ್ನಾಟಕ ಕಂದಾಯ  ಜಿಲ್ಲೆಗಳಲ್ಲಿ ತಲಾ ಒಂದು ಜಿಲ್ಲಾ ಘಟಕವನ್ನು ರಚಿಸತಕ್ಕದ್ದು. ಕಂದಾಯ ಜಿಲ್ಲೆಗಳಿಗೆ ತಾಲ್ಲೂಕುಗಳಿಗಿರುವಂತೆ ಬೆಂಗಳೂರು ನಗರ ಜಿಲ್ಲೆಗೆ ವಿಧಾನಸಭಾ ಕ್ಷೇತ್ರವನ್ನು ಒಂದು ತಾಲ್ಲೂಕಾಗಿ  ಪರಿಗಣಿಸತಕ್ಕದ್ದು, ವಿಧಾನಸಭಾ ಕ್ಷೇತ್ರದ ಪ್ರತಿನಿಧಿಗಳನ್ನು   “ಕ್ಷೇತ್ರ ಪ್ರತಿನಿಧಿ”ಗಳೆಂದು ಕರೆಯತಕ್ಕದ್ದು.

ಆ) ಜಿಲ್ಲಾ ಟಕಗಳ ಕಾರ್ಯಕಾರಿ ಸಮಿತಿಯ ಸ್ವರೂಪ ಈ ಕೆಳಕಂಡಂತೆ ಇರತಕ್ಕದ್ದು

೧) ಅಧ್ಯಕ್ಷರು ೧

೨) ಗೌರವ ಕಾರ್ಯದರ್ಶಿಗಳು ೨

೩) ಗೌರವ  ಕೋಶಾಧ್ಯಕ್ಷರು ೧

೪) ತಾಲ್ಲೂಕು  ಅಧ್ಯಕ್ಷರುಗಳು / ಕ್ಷೇತ್ರದ ಅಧ್ಯಕ್ಷರು ಆಯಾ         ಜಿಲ್ಲೆಯಲ್ಲಿರುವಂತೆ

೫) ಮಹಿಳಾ ಪ್ರತಿನಿಧಿ ೧

೬) ಪರಿಶಿಷ್ಟ ಜಾತಿ ಪ್ರತಿನಿಧಿ ೧

೭) ಸಂಘ ಸಂಸ್ಥೆಗಳ ಪ್ರತಿನಿಧಿ ೧

೮) ಜಿಲ್ಲಾ ವಾರ್ತಾಧಿಕಾರಿ ೧

      ೯) ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ೧

    ೧0) ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷರು ೧

(ಇ) ಪರಿಷತ್ತಿನ   ಜಿಲ್ಲಾ ಘಟಕಗಳ ಚಟುವಟಿಕೆಗಳಿಗೆ ನೆರವಾಗುವ  ಆ ಜಿಲ್ಲೆಯ ಗಣ್ಯರನ್ನು ಜಿಲ್ಲಾ ಘಟಕಗಳ ಕಾರ್ಯಕಾರಿ ಸಮಿತಿಗೆ,  “ವಿಶೇಷ ಆಹ್ವಾನಿತ”ರನ್ನಾಗಿ  ಕರೆಯಲು ಅವಕಾಶವಿರತಕ್ಕದ್ದು.

೪.  ಗಡಿ ಜಿಲ್ಲಾ ಘಟಕಗಳಿಗೆ ಗಡಿ ಪ್ರದೇಶದ ಇಬ್ಬರು ಪ್ರತಿನಿಧಿಗಳನ್ನು  ವಿಶೇಷ ಆಹ್ವಾನಿತರನ್ನಾಗಿ ಕರೆಯಬಹುದು.

(ಈ) ಮೇಲಿನಂತೆ ಘಟಕಗಳನ್ನು ರಚಿಸಿ ಅದಕ್ಕೆ ಕೇಂದ್ರ ಅಧ್ಯಕ್ಷರ  ಅನುಮತಿ ಪಡೆದು ಅನಂತರ ಪ್ರಕಟಿಸತಕ್ಕದ್ದು, ಯಾವುದೇ ಬದಲಾವಣೆಗೆ ಕೇಂದ್ರ ಅಧ್ಯಕ್ಷರ  ಪೂರ್ವಭಾವಿ  ಒಪ್ಪಿಗೆ ಪಡೆಯತಕ್ಕದ್ದು.

(ಉ) ಯಾವುದೇ ಕಾರಣಕ್ಕೆ ಅವರ ಪರಿಷತ್ ಸದಸ್ಯತ್ವ ರದ್ದಾದರೆ ಜಿಲ್ಲಾ ಘಟಕದ ಸದಸ್ಯತ್ವವೂ  ರದ್ದಾಗುತ್ತದೆ.  ಜಿಲ್ಲಾ ಘಟಕಗಳಿಗೆ ನೇಮಕವಾಗಿರುವ  ಕಾಲದಲ್ಲಿ ಹಾಗೆ ನೇಮಕವಾಗುವವರು  ಪರಿಷತ್ತಿನ ಸದಸ್ಯರಾಗಿರತಕ್ಕದ್ದು.

(ಊ) ಜಿಲ್ಲಾ ಸಮಿತಿಯ ಕಾರ್ಯಸ್ಥಳವು  ಸಾಧ್ಯವಾದಷ್ಟೂ ಜಿಲ್ಲಾ ಕೇಂದ್ರವೇ ಆಗಿರತಕ್ಕದ್ದು

(ಋ)  ಜಿಲ್ಲಾ ಘಟಕಗಳು- ಹಣಕಾಸು, ಆಸ್ತಿ, ಠೇವಣಿ,  ಕಾರ್ಯಕ್ರಮಗಳು ಮೊದಲಾದ ವಿಷಯಗಳಲ್ಲಿ ಪರಿಷತ್ತಿನ ನೀತಿ  ನಿರ್ದೇಶನಕ್ಕೆ ಒಳಪಟ್ಟಿರಬೇಕು.

(ಋೂ) ಜಿಲ್ಲಾ ಘಟಕಗಳು ಅವುಗಳ ವ್ಯಾಪ್ತಿಯಲ್ಲಿ ನಡೆಸಲಾಗುವ ಕಾರ್ಯಕ್ರಮಗಳ ವರದಿಯನ್ನು ಪರಿಷತ್ತಿನ ಕೇಂದ್ರ ಕಛೇರಿಗೆ ಕ್ರಮವಾಗಿ  ಕಳುಹಿಸತಕ್ಕದ್ದು. ಲೆಕ್ಕಪತ್ರಗಳ ವಿವರಗಳನ್ನು ಮೂರು ತಿಂಗಳಿಗೊಂದಾವರ್ತಿ ಕಳುಹಿಸುವುದಲ್ಲದೆ ಮಾರ್ಚ್ ತಿಂಗಳಾದ ಮೇಲೆ ಚಾರ್ಟರ್ಡ್ ಅಕೌಂಟೆಂಟ್ರಿಂದ ಆಡಿಟ್ ಮಾಡಿಸಿ  ಜಿಲ್ಲಾ  ಕಾರ್ಯಕಾರಿ ಸಮಿತಿ ಸದಸ್ಯರ ಸಭೆ ಕರೆದು, ಆ ಸಮಿತಿಯಿಂದ  ಲೆಕ್ಕಪತ್ರಗಳಿಗೆ ಒಪ್ಪಿಗೆ  ಪಡೆದು ಆಡಿಟ್ ರಿಪೋರ್ಟ್ ಮತ್ತು ಓಚರುಗಳ ಸಹಿತವಾದ ವರ್ಷದ  ಲೆಕ್ಕಗಳನ್ನು ಆಯಾ ವರ್ಷದ ಮೇ ತಿಂಗಳ ಕೊನೆಯೊಳಗಾಗಿ  ಪರಿಷತ್ತಿಗೆ ಕಳುಹಿಸಬೇಕು.

೧೫. ತಾಲ್ಲೂಕು / ಕ್ಷೇತ್ರ  ಘಟಕಗಳು 

(ಅ) ಜಿಲ್ಲಾ  ಘಟಕದ ಅಧ್ಯಕ್ಷರು ಪ್ರತಿ ತಾಲ್ಲೂಕುಗಳಲ್ಲಿ / ಕ್ಷೇತ್ರಗಳಲ್ಲಿ ಆಯಾ ತಾಲ್ಲೂಕಿನ ಸದಸ್ಯರೊಡನೆ  ಸಮಾಲೋಚಿಸಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಘಟಕವನ್ನು ರಚಿಸತಕ್ಕದ್ದು.  ಘಟಕದ ಕಾರ್ಯಕಾರಿ ಸಮಿತಿ ಈ ಕೆಳಕಂಡಂತಿರತಕ್ಕದ್ದು.

(ಆ) ಅಧ್ಯಕ್ಷರು ೧

      ಗೌರವ ಕಾರ್ಯದರ್ಶಿಗಳು೨

      ಗೌರವ  ಕೋಶಾಧ್ಯಕ್ಷರು೧

      ಪರಿಶಿಷ್ಟ ಜಾತಿ ಪ್ರತಿನಿಧಿ೧

      ಮಹಿಳಾ ಪ್ರತಿನಿಧಿ೧

      ಸಂಘ ಸಂಸ್ಥೆಗಳ ಪ್ರತಿನಿಧಿ ೧

      ತಾಲ್ಲೂಕು ಶಿಕ್ಷಣಾಧಿಕಾರಿಗಳು ೧

      ನಿಕಟಪೂರ್ವ ಅಧ್ಯಕ್ಷರು ೧

      ಇತರ ಸದಸ್ಯರು ೬

(ಇ) ಇತರ ಸದಸ್ಯರನ್ನು ನಾಮಕರಣ ಮಾಡಿಕೊಳ್ಳುವಾಗ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರಕ್ಕೆ ಹಾಗೂ ಪ್ರಾದೇಶಿಕ ಗಡಿ ಪ್ರದೇಶಕ್ಕೆ ಪ್ರಾತಿನಿಧ್ಯ ಸಿಗುವಂತೆ ನೋಡಿಕೊಳ್ಳಬೇಕು.

(ಈ) ಕಾರ್ಯಕಾರಿ ಸಮಿತಿಯ ಸದಸ್ಯರು ಪರಿಷತ್ತಿನ ಸದಸ್ಯರಾಗಿರಬೇಕು.

(ಉ) ಲೆಕ್ಕಪತ್ರ, ಕಾರ್ಯಕ್ರಮಗಳು ಇತ್ಯಾದಿ ವಿಚಾರಗಳಿಗೆ ಜಿಲ್ಲಾ ಘಟಕದ  ನಿಯಮಗಳೇ ತಾಲ್ಲೂಕು ಘಟಕಗಳಿಗೂ ಅನ್ವಯಿಸುತ್ತವೆ.

೧೬ಗಡಿನಾಡ ಘಟಕಗಳು

(ಅ) ಗಡಿನಾಡ ಘಟಕಗಳಲ್ಲಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ ಈ ರಾಜ್ಯಗಳಲ್ಲಿ ಕನಿಷ್ಠ ೧00 (ಒಂದು ನೂರು) ಮಂದಿ ಪರಿಷತ್ ಆಜೀವ ಸದಸ್ಯರಿದ್ದರೆ ಅಲ್ಲಿ ಗಡಿನಾಡ ಘಟಕಗಳನ್ನು  ರಚಿಸತಕ್ಕದ್ದು.  ಇಂತಹ ಗಡಿನಾಡ ಘಟಕ ಒಂದು ರಾಜ್ಯಕ್ಕೆ ಒಂದೇ ಇರತಕ್ಕದ್ದು. ಗಡಿನಾಡ ಘಟಕದ  ಅಧ್ಯಕ್ಷರನ್ನು  ಆಯಾ ಘಟಕದ ಸದಸ್ಯರು ಅಂಚೆ ಮೂಲಕ ಮತ ಚಲಾಯಿಸಿ ಆಯ್ಕೆ ಮಾಡತಕ್ಕದ್ದು.  ಲೆಕ್ಕಪತ್ರ   ಕಾರ್ಯಕ್ರಮಗಳು  ಇತ್ಯಾದಿ ವಿಚಾರಗಳಿಗೆ ಜಿಲ್ಲಾ ಘಟಕದ ನಿಯಮಗಳೇ  ಇದಕ್ಕೂ ಅನ್ವಯಿಸುತ್ತವೆ. ಉಳಿದಂತೆ ಗಡಿನಾಡ ಘಟಕಗಳ ಉಪ ನಿಬಂಧನೆಗಳನ್ನು  ಅನುಸರಿಸತಕ್ಕದ್ದು.

(ಆ) ಭಾರತದ ಇತರ ರಾಜ್ಯಗಳಲ್ಲಿ ೫00 ಮಂದಿ ಪರಿಷತ್  ಆಜೀವ ಸದಸ್ಯರಿದ್ದರೆ  ಆಯಾ ರಾಜ್ಯಗಳಲ್ಲಿ ಹೊರನಾಡ ವಿಶೇಷ ಘಟಕ ತೆರೆಯಬಹುದು.  ಇಂತಹ ಘಟಕ ಒಂದು ರಾಜ್ಯಕ್ಕೆ  ಒಂದೇ ಇರತಕ್ಕದ್ದು.

೧೭.   ಜಿಲ್ಲಾ ಘಟಕ, ತಾಲ್ಲೂಕು ಘಟಕ ಹಾಗೂ ಗಡಿನಾಡ ಘಟಕ ಕ್ಷೇತ್ರ ಘಟಕಗಳ ಕಾರ್ಯಕಾರಿ ಸಮಿತಿ ಸಭೆಗಳು ವರ್ಷದಲ್ಲಿ ಕನಿಷ್ಠ ಮೂರು ಸಲ ಸೇರಬೇಕು.

೧೮ಕಾರ್ಯಕಾರಿ ಸಮಿತಿ ಅಧ್ಯಕ್ಷರ ಮತ್ತು   ಸದಸ್ಯರ ಆಯ್ಕೆ

(ಅ) ಪರಿಷತ್ತಿನ ಅಧ್ಯಕ್ಷರನ್ನು ಪರಿಷತ್ತಿನ ಮತದಾರರ ಪಟ್ಟಿಯಲ್ಲಿರುವ ಎಲ್ಲ ಸದಸ್ಯರೂ ಚುನಾಯಿಸತಕ್ಕದ್ದು.  ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ನಿಲ್ಲುವವರು ಕನ್ನಡ ಬಲ್ಲವರಾಗಿದ್ದು, ಚುನಾವಣಾ ತಾರೀಖಿಗೆ ಹತ್ತು ವರ್ಷ ಹಿಂದಿನಿಂದ ಸತತವಾಗಿ   ಪರಿಷತ್ತಿನ ಸದಸ್ಯರಾಗಿರತಕ್ಕದ್ದು. ಅಧ್ಯಕ್ಷತೆಗೆ ನಿಲ್ಲುವವರು ಕನ್ನಡ ಭಾಷೆ ಸಾಹಿತ್ಯ, ಸಂಸ್ಕೃತಿಗಳಲ್ಲಿ ಸಾಕಷ್ಟು ಸೇವೆ ಮಾಡಿರುವವರಾಗಿರತಕ್ಕದ್ದು.

(ಆ) ಪರಿಷತ್ತಿನ ಅಧ್ಯಕ್ಷರ ಅಧಿಕಾರವಧಿ ಮೂರು ವರ್ಷ ಮಾತ್ರ ಇರತಕ್ಕದ್ದು. ಒಂದು ಸಾರಿ ಅಧ್ಯಕ್ಷರಾಗಿ  ಚುನಾಯಿತರಾದವರು ಮುಂದಿನ ಅವಧಿಯ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಆದರೆ ಮುಂದಿನ ಅವಧಿ ಕಳೆದ ನಂತರ  ಮತ್ತೆ ಅವರು ಸ್ಪರ್ಧಿಸುವುದಕ್ಕೆ  ಅವಕಾಶವಿರತಕ್ಕದ್ದು. (ಒಂದು ಅವಧಿಯಲ್ಲಿ ಯಾವುದೇ ಕಾರಣದಿಂದ ಅಧ್ಯಕ್ಷ ಸ್ಥಾನ ತೆರವಾದರೂ ಅದು ಅವರ ಪೂರ್ಣ ಅವಧಿಯೆಂದೇ ಅರ್ಥ) ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಕೋಶಾಧ್ಯಕ್ಷರು ತಮ್ಮ ಅಧಿಕಾರಾವಧಿಯಲ್ಲಿ ಬೆಂಗಳೂರಿನಲ್ಲಿಯೇ ವಾಸಿಸಬೇಕು.

(ಇ) ಯಾವ ಕಾರಣದಿಂದಲಾದರೂ ಕಾರ್ಯಕಾರಿಸಮಿತಿ ಚುನಾವಣೆ ತಡವಾದರೆ  ಮುಂದೆ ಚುನಾವಣೆ ನಡೆಯುವವರೆಗೆ  ಹಿಂದಿನ ಕಾರ್ಯಕಾರಿ ಸಮಿತಿಯೇ ಪರಿಷತ್ತಿನ ಕಾರ್ಯವನ್ನು ನಿರ್ವಹಿಸತಕ್ಕದ್ದು. ಈ ರೀತಿ ಮುಂದುವರಿದ ಅವಧಿ ಆರುತಿಂಗಳುಗಳಿಗೆ ಮೀರತಕ್ಕದ್ದಲ್ಲ.

(ಈ) ಯಾವ ಕಾರಣದಿಂದಲಾದರೂ  ಅಧ್ಯಕ್ಷ ಸ್ಥಾನ ತೆರವಾದಾಗ ಇನ್ನುಳಿದ  ಅವಧಿಯವರೆಗೆ  ಪರಿಷತ್ತಿನ ಕಾರ್ಯಕಾರಿ ಸಮಿತಿ, ಕಾರ್ಯಕಾರಿ ಸಮಿತಿಯ ಚುನಾಯಿತ ಸದಸ್ಯರಲ್ಲಿ ಯಾರನ್ನಾದರೂ ಒಬ್ಬರನ್ನು ಅಧ್ಯಕ್ಷರನ್ನಾಗಿ ಆರಿಸತಕ್ಕದ್ದು.

(ಉ) ಅಧ್ಯಕ್ಷರು, ಕಾರ್ಯಕಾರಿ ಸಮಿತಿಯ  ಗಮನಕ್ಕೆ ತರುವುದರ ಮೂಲಕ ತಾತ್ಕಾಲಿಕವಾಗಿ (ಆರು ತಿಂಗಳಿಗೆ ಕಡಿಮೆಯಿಲ್ಲದೆ ಒಂದು ವರ್ಷಕ್ಕೆ ಹೆಚ್ಚಾಗದ ಅವಧಿಯಲ್ಲಿ) ಕಾರ್ಯನಿರ್ವಹಿಸಲು ಸಾಧ್ಯವಾಗದಿದ್ದಲ್ಲಿ  ಆ ಕಾಲ ಪರ್ಯಂತ  ಕಾರ್ಯಕಾರಿ ಸಮಿತಿಯ ಸದಸ್ಯರಲ್ಲಿ ಒಬ್ಬರಿಗೆ  ಆ ಅಧಿಕಾರವನ್ನು ವಹಿಸಿಕೊಡಲು  ಅಧ್ಯಕ್ಷರಿಗೆ ಅಧಿಕಾರವಿರುತ್ತದೆ.

(ಊ) ಒಂದು ವರ್ಷಕ್ಕೆ ಮೀರಿ ಅಧ್ಯಕ್ಷರು ಗೈರು ಹಾಜರಾಗುವುದಾದರೆ ಆ ಸ್ಥಾನ ತೆರಪಾಗಿದೆ ಎಂದೇ ಪರಿಗಣಿಸತಕ್ಕದ್ದು.

೧೯. ಕಾರ್ಯದರ್ಶಿಗಳ  ಮತ್ತು ಕೋಶಾಧ್ಯಕ್ಷರ ಆಯ್ಕೆ

(ಅ) ಇಬ್ಬರು ಕಾರ್ಯದರ್ಶಿಗಳನ್ನೂ, ಒಬ್ಬರು ಕೋಶಾಧ್ಯಕ್ಷರನ್ನೂ ಆರಿಸಿಕೊಳ್ಳುವ ಅಧಿಕಾರ ಅಧ್ಯಕ್ಷರಿಗೆ ಇರತಕ್ಕದ್ದು. ಅವರು ಪರಿಷತ್ತಿನ ಸದಸ್ಯರಾಗಿರತಕ್ಕದ್ದು.

() ಕಾರ್ಯಕಾರಿ ಸಮಿತಿಯ ಸಭೆ : ಕಾರ್ಯಕಾರಿ ಸಮಿತಿಯ ಸಭೆ ವರ್ಷಕ್ಕೆ ಕನಿಷ್ಠಪಕ್ಷ ನಾಲ್ಕು ಸಲ ಸೇರತಕ್ಕದ್ದು.

(ಇ) ಪರಿಷತ್ತಿನ ಅಧ್ಯಕ್ಷರೇ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸತಕ್ಕದ್ದು. ಅವರು ಹಾಜರಿಲ್ಲದಿರುವಾಗ  ಕಾರ್ಯಕಾರಿ ಸಮಿತಿಯಲ್ಲಿ ಹಾಜರಿರುವ  ಸದಸ್ಯರೊಬ್ಬರನ್ನು ಆ ಸಭೆಗೆ ಅಧ್ಯಕ್ಷರನ್ನಾಗಿ ಆರಿಸಿ ಸಭೆಯನ್ನು ನಡೆಸತಕ್ಕದ್ದು.

(ಈ) ಚುನಾವಣೆಯಾದ ಮೇಲೆ ಹೊಸ ಕಾರ್ಯಕಾರಿ ಸಮಿತಿಯು,  ಫಲಿತಾಂಶ ಪ್ರಕಟಿಸಿದ ಒಂದು  ತಿಂಗಳೊಳಗಾಗಿ ಬೆಂಗಳೂರಿನಲ್ಲಿ  ಸೇರತಕ್ಕದ್ದು.

0. ತಿಳಿವಳಿಕೆ

(ಅ) ಕಾರ್ಯಕಾರಿ ಸಮಿತಿಯ ಸಾಮಾನ್ಯ ಸಭೆಗಳನ್ನು   ಕುರಿತು ತಿಳಿವಳಿಕೆ ಪತ್ರಗಳನ್ನು  ಹದಿನೈದು ದಿನಗಳಿಗೆ ಮುಂಚೆ ಸದಸ್ಯರಿಗೆ ಕಳುಹಿಸಿಕೊಡತಕ್ಕದ್ದು.

(ಆ) ಜರೂರು ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿ  ಸೇರುವ ಸಮಯವನ್ನು ಇಷ್ಟುಮಟ್ಟಿಗೆ ಪೂರ್ವಭಾವಿಯಾಗಿ ಸದಸ್ಯರಿಗೆ ತಿಳಿಯಪಡಿಸಬೇಕೆಂಬ  ಕಾಲ ವ್ಯವಧಾನದ ನಿರ್ಬಂಧವಿಲ್ಲ. ಜರೂರು  ಸಂದರ್ಭವನ್ನು  ನಿರ್ಧರಿಸುವ ಅಧಿಕಾರ ಅಧ್ಯಕ್ಷರಿಗೆ ಇರತಕ್ಕದ್ದು.

೨೧. ಅವಶ್ಯ ಸಂಖ್ಯೆ

(ಅ)  ಕಾರ್ಯಕಾರಿ ಸಮಿತಿಯ  ಸಭೆಗೆ  ಕಾರ್ಯನಿರ್ವಹಣಾಧಿಕಾರವಿರುವುದಕ್ಕೆ ಒಟ್ಟು ಮೂರನೇ    ಒಂದು ಭಾಗದಷ್ಟು  ಸದಸ್ಯರಾದರೂ ಬಂದಿರಬೇಕು.

(ಆ) ಈ ಆವಶ್ಯಕ ಸಂಖ್ಯೆಯಷ್ಟು ಮಂದಿ ಸದಸ್ಯರು ಬರದೆ ಇದ್ದರೆ ಕಾರ್ಯಕಾರಿ ಸಮಿತಿಯ ಸಭೆಯನ್ನು ಒಂದು ಗಂಟೆಯ ಕಾಲ ಮುಂದೂಡಿ  ಆಗ  ಆವಶ್ಯ ಸಂಖ್ಯೆ ಇರಲಿ, ಇಲ್ಲದಿರಲಿ, ಹಿಂದಿನ ಸಭೆಗೆ ಗೊತ್ತಾಗಿದ್ದ ಕಾರ್ಯವಿವರಗಳನ್ನು  ಪರ್ಯಾಲೋಚಿಸಲು ಕಾರ್ಯಕಾರಿ ಸಮಿತಿಗೆ ಅಧಿಕಾರವಿರತಕ್ಕದ್ದು. ಆದರೆ ಇತರ ವಿಷಯಗಳು  ಪರಿಶೀಲನೆಗೆ  ಬರುವ ಹಾಗಿಲ್ಲ.

೨೨. ಸದಸ್ಯ ಸ್ಥಾನದ ತೆರವು

(ಅ)  ಕಾರ್ಯಕಾರಿ ಸಮಿತಿಯ ಚುನಾಯಿತ ಸದಸ್ಯರ  ಸ್ಥಾನಗಳಲ್ಲಿ ಯಾವುದಾದರೂ ತೆರಪಾದರೆ  ಆ ಸ್ಥಾನಕ್ಕೆ ಕಾರ್ಯಕಾರಿ ಸಮಿತಿ ಮತ್ತೊಬ್ಬ ಸದಸ್ಯರನ್ನು  ಉಳಿದ ಕಾಲಾವಧಿಯವರೆಗೆ ನಾಮಕರಣ ಮಾಡಿಕೊಳ್ಳತಕ್ಕದ್ದು.  ನಾಮಕರಣ  ಸದಸ್ಯರು ಕನಿಷ್ಠ ೫ ವರ್ಷ ಹಿಂದಿನಿಂದಲೂ ಸತತವಾಗಿ  ಸದಸ್ಯರಾಗಿರತಕ್ಕದ್ದು.

(ಆ) ಯಾವ ಕಾಲದಲ್ಲಾಗಲೀ ಕಾರ್ಯಕಾರಿ ಸಮಿತಿಯ ಯಾವ ಅಧಿಕಾರ ಸ್ಥಾನವಾಗಲೀ ತೆರಪಾಗಿ ನಿಂತಿದೆ ಎಂಬ ಕಾರಣದಿಂದ  ಆ ಕಾಲದಲ್ಲಿ ಆ ಸಮಿತಿ ನಡೆಸುವ ಕಾರ್ಯಗಳು  ಅಕ್ರಮಗಳೆನಿಸಲಾರವು.

೨೩. ಉಪಸಮಿತಿಗಳು

ಪರಿಷತ್ತಿನ ವಿವಿಧ ಕಾರ್ಯಕಲಾಪಗಳನ್ನು ನಿರ್ವಹಿಸುವುದಕ್ಕೆ ಕಾರ್ಯಕಾರಿ ಸಮಿತಿ ಇತರ ಉಪಸಮಿತಿಗಳನ್ನು ನಿಯಮಿಸಿ ಕಾರ್ಯಭಾಗವನ್ನು  ಆ ಉಪಸಮಿತಿಗಳಿಗೆ ವಹಿಸಬಹುದು, ಎಲ್ಲಾ  ಉಪಸಮಿತಿಗಳ ನಡವಳಿಕೆಗಳನ್ನೂ ಸ್ಥಿರೀಕರಣಕ್ಕಾಗಿ ಕಾರ್ಯಕಾರಿ ಸಮಿತಿಯ ಮುಂದೆ ಇಡತಕ್ಕದ್ದು.

೨೪. ಸೇವಾ ಸಿಬ್ಬಂದಿ

ಪರಿಷತ್ತಿನ ಕೆಲಸಗಳನ್ನು ನಿರ್ವಹಿಸುವುದಕ್ಕಾಗಿ ಬೇಕಾಗುವ  ನೌಕರರನ್ನು ನೇಮಿಸುವುದಕ್ಕೂ ದಂಡಿಸುವುದಕ್ಕೂ  ತೆಗೆದು ಹಾಕುವುದಕ್ಕೂ ಅವರ ಸಂಬಳಗಳನ್ನೂ ಬಹುಮಾನಗಳನ್ನು ಗೊತ್ತುಮಾಡುವುದಕ್ಕೂ ಕಾರ್ಯಕಾರಿ ಸಮಿತಿಗೆ  ಅಧಿಕಾರವಿರತಕ್ಕದ್ದು.

     ೨೫.  ಪರಿಷತ್ತಿನ  ಲೆಕ್ಕಪತ್ರಗಳ ಉಸ್ತುವಾರಿಯನ್ನು  ನಿರ್ವಹಿಸಲು ಕರ್ನಾಟಕ ಸರ್ಕಾರದ ಲೆಕ್ಕಪತ್ರ ಇಲಾಖೆಯ ಒಬ್ಬರು ಲೆಕ್ಕಪತ್ರ ಅಧೀಕ್ಷಕರನ್ನು ಪ್ರತಿನಿಯೋಜನೆಯ ಮೇರೆಗೆ  ನಿಯಮಿಸಿಕೊಳ್ಳತಕ್ಕದ್ದು.

೨೬. ಉಪ ನಿಬಂಧನೆಗಳು

ಅ)  ಈ ನಿಬಂಧನೆಗಳಿಗೆ ವಿರೋಧವಿಲ್ಲದಂತೆ ಅವಶ್ಯವಿದ್ದಾಗ ಉಪ ನಿಬಂಧನೆಗಳನ್ನು ಮಾಡಿಕೊಳ್ಳುವ ಅಥವಾ ಬದಲಾಯಿಸುವ ಅಧಿಕಾರ ಕಾರ್ಯಕಾರಿ ಸಮಿತಿಗೆ ಇರತಕ್ಕದ್ದು.  ಹೀಗೆ ಮಾರ್ಪಾಟಾದ ಉಪನಿಬಂಧನೆಗಳ  ವಿವರಗಳನ್ನು ಮುಂದಿನ “ಕನ್ನಡ ನುಡಿ”ಯಲ್ಲಿ  ಪ್ರಕಟಿಸತಕ್ಕದ್ದು. ಮತ್ತು ಮುಂದಿನ  ಸಕಲ ಸದಸ್ಯರ ಅಧಿವೇಶನದಲ್ಲಿ ಸಭೆಯ ಗಮನಕ್ಕೆ ತರತಕ್ಕದ್ದು.

ಆ)  ಈ ನಿಬಂಧನೆ ಅವಾ  ಉಪನಿಬಂಧನೆಗಳಲ್ಲಿ ಯಾವುದಾದರೂ ತಿದ್ದುಪಡಿ ಅಥವಾ ಬದಲಾವಣೆ ಆದರೆ ತತ್ಪೂರ್ವ ನಡೆದ ಕಾರ್ಯಕ್ರಮಗಳು ಅಕ್ರಮಗಳೆನಿಸಲಾರವು.

೨೭. ಹಣಕಾಸು ಸಮಿತಿ

ಅ) ಪರಿಷತ್ತಿನ ಹಣಕಾಸು ನಿರ್ವಹಣೆ ಹಣಕಾಸು ಸಮಿತಿಗೆ ಸೇರಿದ್ದು. ಹಣಕಾಸು ಸಮಿತಿಯ ರಚನೆ, ಕಾರ್ಯವ್ಯಾಪ್ತಿ ಈ ಸಂಬಂಧವಾದ ಉಪನಿಬಂಧನೆಗಳಿಗೆ ಅನುಗುಣವಾಗಿ  ಇರತಕ್ಕದ್ದು.  ಕಾರ್ಯವ್ಯಾಪ್ತಿ ಈ ಕೆಳಕಂಡಂತಿರತಕ್ಕದ್ದು.

ಆ) ಹಣಕಾಸು ಸಮಿತಿಗೆ ಪರಿಷತ್ತಿನ ಅಧ್ಯಕ್ಷರೇ ಅಧ್ಯಕ್ಷರಾಗಿರತಕ್ಕದ್ದು.  ಪರಿಷತ್ತಿನ ಉಳಿದ ಪದಾಧಿಕಾರಿಗಳು, ಕರ್ನಾಟಕ ಸರ್ಕಾರದ ಕನ್ನಡ  ಮತ್ತು  ಸಂಸ್ಕೃತಿ   ಇಲಾಖೆಯ ಕಾರ್ಯದರ್ಶಿ ಅಥವಾ ಅವರ ಪ್ರತಿನಿಧಿ, ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಅಥವಾ ಅವರ ಪ್ರತಿನಿಧಿ, ಪರಿಷತ್ತಿನ ಕಾರ್ಯಕಾರಿ ಸಮಿತಿ ಆರಿಸಿದ ಕಾರ್ಯಕಾರಿ ಸಮಿತಿಯ ಇಬ್ಬರು ಸದಸ್ಯರು ಮತ್ತು ಕರ್ನಾಟಕ ಸರ್ಕಾರದ ಲೆಕ್ಕಪತ್ರ ಇಲಾಖೆಯಿಂದ ಪ್ರತಿನಿಯೋಜನೆ ಮೇಲೆ ನಿಯಮಿಸಿಕೊಂಡಿರುವ ಲೆಕ್ಕಪತ್ರ ಅಧೀಕ್ಷಕರು ಇವರುಗಳು ಈ ಸಮಿತಿಯ ಸದಸ್ಯರಾಗಿರತಕ್ಕದ್ದು.

ಇ) ಪರಿಷತ್ತಿನ ಕೋಶಾಧ್ಯಕ್ಷರು ಈ ಸಮಿತಿಯ ಸಂಚಾಲಕರಾಗಿ ಕಾರ್ಯ ನಿರ್ವಹಿಸತಕ್ಕದ್ದು.

ಈ) ಹಣಕಾಸು ಸಮಿತಿ ವಾರ್ಷಿಕ ಪರಿಶೋಧಿತ ಲೆಕ್ಕಪತ್ರಗಳನ್ನು ಅನುಮೋದಿಸಿ ಕಾರ್ಯಕಾರಿ ಸಮಿತಿಗೆ ಶಿಫಾರಸು ಮಾಡತಕ್ಕದ್ದು.

ಉ) ಕಟ್ಟಡಗಳು,  ಪ್ರಕಟಣೆಗಳು, ಕಾರ್ಯಕ್ರಮಗಳು, ಹೊಸ ಹುದ್ದೆಗಳ ಸೃಷ್ಟಿ ಹಾಗೂ  ಇನ್ನಿತರ ಹಣಕಾಸಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ತೀರ್ಮಾನ  ಕೈಗೊಂಡು ಕಾರ್ಯಕಾರಿ ಸಮಿತಿಗೆ ಶಿಫಾರಸು ಮಾಡಬೇಕು.

ಊ) ಪರಿಷತ್ತಿನ ಪ್ರತಿ ತಿಂಗಳ ಆದಾಯ ವೆಚ್ಚವನ್ನು ಪರಿಶೀಲಿಸತಕ್ಕದ್ದು.

ಋ) ಹಣಕಾಸು ಸಮಿತಿಯ ಸಭೆಗೆ ಐದು ಮಂದಿ ಸದಸ್ಯರ ಹಾಜರಾತಿ ಆವಶ್ಯಕ.

೨೮. ಪ್ರಕಟಣಾ ಸಮಿತಿ

ಅ) ಪರಿಷತ್ತಿನ ಗ್ರಂಥ ಪ್ರಕಟಣಾಕಾರ್ಯ, ಪ್ರಕಟಣಾ ಸಮಿತಿಗೆ ಸೇರಿದ್ದು. ಪ್ರಕಟಣಾ  ಸಮಿತಿಯ ರಚನೆ ಮತ್ತು ಕಾರ್ಯವ್ಯಾಪ್ತಿ ಈ ಸಂಬಂಧವಾದ  ಉಪ ನಿಬಂಧನೆಗಳಿಗೆ  ಅನುಗುಣವಾಗಿ ಇರತಕ್ಕದ್ದು.

ಆ) ಗ್ರಂಥ ಪ್ರಕಟಣಾ ಸಮಿತಿಗೆ ಪರಿಷತ್ತಿನ ಅಧ್ಯಕ್ಷರೇ ಅಧ್ಯಕ್ಷರಾಗಿರತಕ್ಕದ್ದು.  ಕರ್ನಾಟಕ  ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು  ಅಥವಾ ಅವರ ಪ್ರತಿನಿಧಿ, ಪರಿಷತ್ತಿನ ಇತರ ಪದಾಧಿಕಾರಿಗಳು, ಸಮ್ಮೇಳನಾಧ್ಯಕ್ಷರು, ಕಾರ್ಯಕಾರಿ ಸಮಿತಿ ಆರಿಸುವ ಇಬ್ಬರು ಸಾಹಿತಿಗಳು, ಕಾರ್ಯಕಾರಿ ಸಮಿತಿ ಸಭೆಯ  ಚುನಾಯಿತ ಸದಸ್ಯರಲ್ಲಿ ಒಬ್ಬರು- ಇವರು ಈ ಸಮಿತಿಯ ಸದಸ್ಯರಾಗಿರತಕ್ಕದ್ದು.

ಇ) ಅಧ್ಯಕ್ಷರು ಸೂಚಿಸುವ ಕಾರ್ಯದರ್ಶಿಗಳಲ್ಲಿ ಒಬ್ಬರು ಈ ಸಮಿತಿಯ ಸಂಚಾಲಕರಾಗಿ ಕಾರ್ಯನಿರ್ವಹಿಸತಕ್ಕದ್ದು.

ಈ) ಪ್ರಕಟಣಾ ಸಮಿತಿ ಸಭೆಗೆ ಐದು ಮಂದಿ ಹಾಜರಾತಿ ಆವಶ್ಯಕ.

ಉ) ಪ್ರಕಟಣಾ ಸಮಿತಿ ಪರಿಷತ್ತಿನಿಂದ  ಪ್ರಕಟಿಸಬಹುದಾದ ಪುಸ್ತಕಗಳನ್ನು ಆರಿಸಿ ಕಾರ್ಯಕಾರಿ ಸಮಿತಿಗೆ  ಶಿಫಾರಸು ಮಾಡುವುದು.

ಊ) ಪ್ರಕಟಣೆಗೆ ಬಂದ ಹಸ್ತಪ್ರತಿಗಳನ್ನು ತಜ್ಞರ  ಪರಿಶೀಲನೆಗೆ ಒಪ್ಪಿಸಿ,  ಅವರ ಅಭಿಪ್ರಾಯವನ್ನು  ತರಿಸಿಕೊಂಡು  ಪರಿಶೀಲಿಸುವುದು

೨೯. ವಾರ್ಷಿಕ ಸಭೆ, ಕಾಲ, ಸ್ಥಾನ

ಅ) ವಾರ್ಷಿಕ ಸಭೆ ಸೆಪ್ಟೆಂಬರ್ ತಿಂಗಳೊಳಗಾಗಿ ಸಾಮಾನ್ಯವಾಗಿ ಬೆಂಗಳೂರಿನಲ್ಲಿ ನಡೆಯತಕ್ಕದ್ದು.  ಬೇರೆ ಊರುಗಳಲ್ಲಿಯೂ ವಾರ್ಷಿಕ ಸಭೆ ನಡೆಯಬಹುದು. ವಾರ್ಷಿಕ ಸಭೆ ಮತ್ತು ಇತರ ಸಭೆಗಳಲ್ಲಿ  ಪರಿಷತ್ ಅಧ್ಯಕ್ಷರೇ  ಅಧ್ಯಕ್ಷತೆಯನ್ನು ವಹಿಸತಕ್ಕದ್ದು.  ಪರಿಷತ್ ಅಧ್ಯಕ್ಷರ ಗೈರು ಹಾಜರಿಯಲ್ಲಿ ಸಭೆಯಲ್ಲಿ ಹಾಜರಿರುವ  ಸದಸ್ಯರಲ್ಲಿ ಒಬ್ಬರನ್ನು  ಸಭಾಧ್ಯಕ್ಷತೆಗೆ  ಚುನಾಯಿಸಿ ಕಾರ್ಯಕಲಾಪವನ್ನು ನಡೆಸತಕ್ಕದ್ದು.

) ತಿಳುವಳಿಕೆ

  ವಾರ್ಷಿಕ ಸಭೆಯ ತಿಳಿವಳಿಕೆ  ಪತ್ರವನ್ನು ಅಂಥ ಸಭೆ ಸೇರುವುದಕ್ಕೆ ನಾಲ್ಕು ವಾರ ಮುಂಚಿತವಾಗಿ ಸದಸ್ಯರಿಗೆ ಕಳಿಸತಕ್ಕದ್ದು.

) ಸದಸ್ಯರ ಸೂಚನೆಗೆ ಕಾಲ

ಪರಿಷತ್ತಿನ ಕಾರ್ಯಕಲಾಪಗಳ ಬಗ್ಗೆ ಸೂಚನೆಗಳನ್ನು ಸೂಚಿಸುವ ಸದಸ್ಯರು ವಾರ್ಷಿಕ ಸಭೆಗೆ ಗೊತ್ತಾಗಿರುವ ದಿವಸಕ್ಕೆ ಕನಿಷ್ಠ ಪಕ್ಷ ಎರಡು ವಾರಗಳಿಗೆ  ಕಡಿಮೆಯಿಲ್ಲದಷ್ಟು ಮುಂಚಿತವಾಗಿ ಪರಿಷತ್ತಿನ ಕಚೇರಿಗೆ ಮುಟ್ಟುವಂತೆ ಕಳುಹಿಸತಕ್ಕದ್ದು.

0. ಕಾರ್ಯಸೂಚಿ

ವಾರ್ಷಿಕ  ಸಕಲ  ಸದಸ್ಯರ ಸಭೆಯಲ್ಲಿ ನಡೆಯತಕ್ಕ ಕಾರ್ಯಕಲಾಪಗಳು

ಅ)ಕಾರ್ಯಕಾರಿ ಸಮಿತಿ ಒಪ್ಪಿಸುವ  ವಾರ್ಷಿಕ ವರದಿಯನ್ನೂ  ಅಧಿಕೃತ ಲೆಕ್ಕಪರಿಶೋಧಕರಿಂದ ಪರಿಶೀಲಿಸಿದ ಆಯವ್ಯಯ ಲೆಕ್ಕದ ಪಟ್ಟಿಗಳನ್ನೂ  ಅಂಗೀಕರಿಸುವುದು.

ಆ) ಮುಂದಿನ ಒಂದು ವರ್ಷದ ಆಯವ್ಯಯ  ಅಂದಾಜು ಪಟ್ಟಿಯ ಅಂಗೀಕಾರ.

ಇ) ಮುಂದಿನ ವರ್ಷಕ್ಕೆ  ಲೆಕ್ಕಪರಿಶೋಧಕರ ನೇಮಕ.

ಈ) ಕಾರ್ಯಕಾರಿ ಸಮಿತಿಯ ಸೂಚನೆಗಳು.

ಉ) ಸದಸ್ಯರು ನಿಯಮಾನುಸಾರ ಕಳಿಸುವ ಸೂಚನೆಗಳು.

೩೧. ಸಕಲ ಸದಸ್ಯರ ಸಭೆಯ ನಿರ್ದಿಷ್ಟ ಸಂಖ್ಯೆ.

      ಪ್ರತಿಯೊಂದು  ಸಕಲ ಸದಸ್ಯರ ಸಭೆಯಲ್ಲಿಯೂ ೧00 ಮಂದಿ ಕಡಿಮೆ ಇಲ್ಲದಂತೆ, ಸದಸ್ಯರು ಹಾಜರಿರಬೇಕು. ಯಾವ ಸಭೆಯಲ್ಲೇ ಆಗಲಿ ಕ್ಲುಪ್ತ  ಕಾಲಾನಂತರ ಅರ್ಧ ಗಂಟೆಯೊಳಗಾಗಿ  ಈ ಅವಶ್ಯಕ ಸಂಖ್ಯೆಯಷ್ಟು ಸದಸ್ಯರು ಸೇರದಿದ್ದರೆ ಆ ಸಭೆಯನ್ನು ಅರ್ಧ ಗಂಟೆಯ ಕಾಲ ಮುಂದೆಹಾಕಿ ಸಭೆಯನ್ನು ನಡೆಸತಕ್ಕದ್ದು.  ಅಂತಹ ಮುಂದೂಡಿದ ಸಭೆಗೆ ಅವಶ್ಯ ಸಂಖ್ಯೆಯ ಅಗತ್ಯ ಇರುವುದಿಲ್ಲ. ಆದರೆ ಈ ಸಭೆಯಲ್ಲಿ ಹೊಸ ವಿಷಯ ಯಾವುದನ್ನೂ ಚರ್ಚೆಗೆ ತರತಕ್ಕದ್ದಲ್ಲ.

೩೨ಸದಸ್ಯರ ಅಧಿಕಾರ

ಅ) ಸಕಲ ಸದಸ್ಯರು ವಾರ್ಷಿಕ ಸಭೆಯಲ್ಲಿ ಭಾಗವಹಿಸುವ ಅಧಿಕಾರವು ತಮ್ಮ ಸದಸ್ಯತ್ವದ ಚಂದಾಹಣವನ್ನು ಸಭೆ ನಡೆಯುವ ತೊಂಬತ್ತು ದಿನಗಳ ಮುಂಚೆ ಪೂರ್ತಿಯಾಗಿ  ಸಲ್ಲಿಸಿದವರಿಗೆ ಮಾತ್ರ ಇರತಕ್ಕದ್ದು.

ಆ)  ಎಲ್ಲಾ ತೀರ್ಮಾನಗಳೂ ಸಭೆಯಲ್ಲಿರುವ ಸದಸ್ಯರ ಬಹುಮತದಿಂದ ಆಗತಕ್ಕದ್ದು. ಆದರೆ ಅಂಗರಚನೆಯ ತಿದ್ದುಪಡಿಗಳನ್ನು ಮಾಡುವ  ಸಂದರ್ಭದಲ್ಲಿ ಸಭೆಯಲ್ಲಿ ಹಾಜರಿದ್ದವರಲ್ಲಿ  ನಾಲ್ಕರಲ್ಲಿ ಮೂರು ಭಾಗಕ್ಕೆ ಕಡಿಮೆ ಇಲ್ಲದಷ್ಟು ಬಹುಮತವಿರಬೇಕು.

೩೩. ವಿಶೇಷ ಸಭೆ

ಅ) ಕಾರ್ಯಕಾರಿ ಸಮಿತಿಗೆ ಆವಶ್ಯಕವೆಂದು ಕಂಡು ಬಂದಾಗ ಅಥವಾ ಸದಸ್ಯರ ಸಂಖ್ಯೆಯ ಹತ್ತನೇ ಒಂದರಷ್ಟು ಮಂದಿ ಸದಸ್ಯರು ಬರಹದ  ಮೂಲಕ ಅಪೇಕ್ಷಿಸಿದಾಗ ಸಕಲ ಸದಸ್ಯರ  ವಿಶೇಷ ಸಭೆಯನ್ನು ೪0 (ನಲವತ್ತು) ದಿವಸಗಳೊಳಗಾಗಿ ಕರೆಯತಕ್ಕದ್ದು.

ಆ)  ವಿಶೇಷ ಸಭೆಯಲ್ಲಿ ಮಂಡಿಸಬಯಸುವ  ವಿಷಯ ಲಿಖಿತ ನಿರ್ಣಯ ರೂಪದಲ್ಲಿರಬೇಕು. ಆ ನಿರ್ಣಯದ  ಸೂಚಕರಿರಲಿ ಹಾಗೂ ಅನುಮೋದಕರಿರಲಿ ತಮ್ಮ ಹೆಸರು ಮತ್ತು ಸ್ಪಷ್ಟ  ವಿಳಾಸದೊಡನೆ ಸಹಿ ಮಾಡಿಕೊಡತಕ್ಕದ್ದು. ಅಂತಹ ನಿರ್ಣಯ ಪರಿಷತ್ತಿನ ಮೂಲ ಉದ್ದೇಶಗಳಿಗೆ  ವಿರೋಧವಾಗಿರತಕ್ಕದ್ದಲ್ಲ

ಇ) ವಿಶೇಷ ಸಭೆಯ ತಿಳಿವಳಿಕೆ ಪತ್ರವನ್ನು ೧೫ (ಹದಿನೈದು) ದಿನಗಳ ಮುಂಚೆ ಸದಸ್ಯರಿಗೆ  ಕಳುಹಿಸತಕ್ಕದ್ದು.

೩೪. ಸಾಹಿತ್ಯ ಸಮ್ಮೇಳನ

ಅ) ಸಾಮಾನ್ಯವಾಗಿ ಪ್ರತಿವರ್ಷ ಅಖಿಲ ಭಾರತ ಕನ್ನಡಸಾಹಿತ್ಯ ಸಮ್ಮೇಳನ ನಡೆಯತಕ್ಕದ್ದು.

ಆ) ಯಾವುದೇ ಒಂದು ಸ್ಥಳದಲ್ಲಿ ಸಮ್ಮೇಳನ ನಡೆಯಬೇಕಾದಾಗ  ಪರಿಷತ್ತು ತನ್ನ ಜಿಲ್ಲಾ ಘಟಕಗಳ / ಗಡಿನಾಡ ಘಟಕಗಳ ಮೂಲಕ ಸಮ್ಮೇಳನ ನಡೆಸತಕ್ಕದ್ದು. ಅಂತಹ ಘಟಕಗಳಿಲ್ಲದೆಡೆಯಲ್ಲಿ ಪರಿಷತ್ತು ನೇರವಾಗಿ ಸಮ್ಮೇಳನವನ್ನು ನಡೆಸುವ ಏರ್ಪಾಟು ಮಾಡತಕ್ಕದ್ದು.

ಇ) ಸಮ್ಮೇಳನ ನಡೆಯುವ ಸ್ಥಳದಲ್ಲಿ ಸ್ವಾಗತ ಸಮಿತಿ ರಚನೆ ಆಗತಕ್ಕದ್ದು.  ಆ ಜಿಲ್ಲೆಯ / ಗಡಿನಾಡ ಘಟಕವಿರುವ ರಾಜ್ಯದ ಸ್ಥಳೀಯ ಪ್ರಮುಖರೊಬ್ಬರು ಸ್ವಾಗತ ಸಮಿತಿಯ ಅಧ್ಯಕ್ಷರಾಗಿರತಕ್ಕದ್ದು. ಪರಿಷತ್ತಿನ ಸಂಬಂಧಪಟ್ಟ ಘಟಕ ಅಧ್ಯಕ್ಷರು ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿಯೂ ಆ ಘಟಕದ ಉಳಿದ ಸದಸ್ಯರು ಸ್ವಾಗತ ಸಮಿತಿಯ ಸದಸ್ಯರಾಗಿರತಕ್ಕದ್ದು.

ಈ) ಪರಿಷತ್ತಿನ ಕಾರ್ಯಕಾರಿ ಸಮಿತಿಯು ಆಯಾ ವರ್ಷದ ಸಮೇಳನಾಧ್ಯಕ್ಷರನ್ನು ಆರಿಸುವ ಅಧಿಕಾರ ಪಡೆದಿರತಕ್ಕದ್ದು. ಅಂತಹವರು ಪರಿಷತ್ತಿನ ಸದಸ್ಯರಾಗಿರಬೇಕು.

ಉ) ಕಾರ್ಯಕಾರಿ  ಸಮಿತಿಯ ವಿಶೇಷಾಧಿಕಾರ

ಯಾವ  ಸಂದರ್ಭದಲ್ಲಾಗಲೀ ಯಾವ ಕಾರಣದಿಂದಾಗಲೀ  ಅಂಗೀಕರಿಸಿದ ಸ್ಥಳದಲ್ಲಿ ಸಮ್ಮೇಳನವನ್ನು ನಡೆಸಲಾಗದಿದ್ದರೆ ಅಥವಾ ಅಧ್ಯಕ್ಷರು  ಬರಲು ಆಗದಿದ್ದರೆ ಅಥವಾ ಇತರ ಅನಿವಾರ್ಯಗಳು  ಯಾವುದಾದರೂ ಸಂಭವಿಸಿದರೆ ಅಂಥ ವಿಶೇಷ ಸನ್ನಿವೇಶಗಳಲ್ಲಿ ಬೇರೆ ಏರ್ಪಾಟುಗಳನ್ನು  ಮಾಡಿ ಸಮ್ಮೇಳನವನ್ನು ನೆರವೇರಿಸುವುದಕ್ಕೂ ಅಥವಾ ಮುಂದೆ ಹಾಕುವುದಕ್ಕೂ ಕಾರ್ಯಕಾರಿ ಸಮಿತಿಗೆ ಅಧಿಕಾರವಿರುತ್ತದೆ.

೩೫ವಿಷಯ ನಿರ್ಧಾರಕ ಮಂಡಲಿ

 ಸಮ್ಮೇಳನದಲ್ಲಿ ಮಂಡಿಸುವ ನಿರ್ಣಯಗಳ ಬಗ್ಗೆ ನಿರ್ಧಾರ ಮಾಡುವುದಕ್ಕಾಗಿ ಪರಿಷತ್ತಿನ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ  ಒಂದು ವಿಷಯ  ನಿರ್ಧಾರಕ ಮಂಡಲಿಯನ್ನು   ನೇಮಿಸತಕ್ಕದ್ದು. ಆ ಮಂಡಲಿಯಲ್ಲಿ ಈ ಕೆಳಕಂಡವರು ಇರತಕ್ಕದ್ದು.

ಅ) ಸಮ್ಮೇಳನಕ್ಕೆ ಬಂದಿರುವ ಪರಿಷತ್ತಿನ  ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರು.

ಆ) ಸಮ್ಮೇಳನದ ಅಧ್ಯಕ್ಷರು.

ಇ) ಸಮ್ಮೇಳನಕ್ಕೆ ಬಂದಿರುವ ಹಿಂದಿನ ಸಮ್ಮೇಳನದ ಅಧ್ಯಕ್ಷರು.

) ಸ್ವಾಗತ ಸಮಿತಿಯ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು.

ಉ) ಪರಿಷತ್ತಿನ ಅಧ್ಯಕ್ಷರು ನಿಯಮಿಸುವ  ಸಮ್ಮೇಳನಕ್ಕೆ ಆಗಮಿಸಿರುವ ಪರಿಷತ್ತಿನ ಇಬ್ಬರು ಸದಸ್ಯರು.

ಊ) ಪರಿಷತ್ತಿನ ಅಧ್ಯಕ್ಷರು ನಿಯಮಿಸುವ  ಸಮ್ಮೇಳನದ ಇಬ್ಬರು ಪ್ರತಿನಿಧಿಗಳು.

೩೬. ಆದಾಯ ಭಾಗ

ಅ) ಸಮ್ಮೇಳನದ ಪ್ರತಿನಿಧಿ ಶುಲ್ಕ ಪರಿಷತ್ತಿಗೆ ಸಲ್ಲತಕ್ಕದ್ದು.

ಆ) ಸಮ್ಮೇಳನದ ಹಣಕಾಸಿನ ವ್ಯವಹಾರವನ್ನು ಒಂದು ಷೆಡ್ಯೂಲ್  ಬ್ಯಾಂಕಿನಲ್ಲಿ ಖಾತೆ ತೆರೆದು ಸ್ವಾಗತ ಸಮಿತಿಯ ಅಧ್ಯಕ್ಷರು ಹಾಗೂ ಸ್ವಾಗತ ಸಮಿತಿಯ ಕೋಶಾಧ್ಯಕ್ಷರು ಹಾಗೂ  ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಗಳು ಜಂಟಿಯಾಗಿ  ವ್ಯವಹರಿಸತಕ್ಕದ್ದು. ಚೆಕ್ಕುಗಳಿಗೆ  ಇವರಲ್ಲಿ  ಯಾರಾದರೂ  ಇಬ್ಬರು ಸಹಿ ಮಾಡಿ ಬ್ಯಾಂಕಿನೊಡನೆ ವ್ಯವಹರಿಸಬೇಕು. ಚೆಕ್ಕಿನಲ್ಲಿ ಸ್ವಾಗತ ಸಮಿತಿಯ  ಪ್ರಧಾನ ಕಾರ್ಯದರ್ಶಿ (ಜಿಲ್ಲಾಘಟಕದ ಅಧ್ಯಕ್ಷ)  ಸಹಿ ಕಡ್ಡಾಯವಾಗಿರತಕ್ಕದ್ದು.

ಇ) ಸ್ವಾಗತ ಸಮಿತಿ, ಸಮ್ಮೇಳನದ ಲೆಕ್ಕಪತ್ರಗಳನ್ನು ಆಡಿಟ್ ಮಾಡಿಸಿ ಉಳಿದ ಮೊಬಲಗನ್ನು ಪರಿಷತ್ತಿನ ಕಚೇರಿಗೆ  ಸಲ್ಲಿಸತಕ್ಕದ್ದು. ಹಾಗೆ ಸಂದಾಯವಾದ ಹಣವನ್ನು ಪರಿಷತ್ತು ಈ ಜಿಲ್ಲೆಯಲ್ಲಿ ಶಾಶ್ವತವಾದ, ಪರಿಷತ್ತಿನ ಸ್ಥಿರ ಆಸ್ತಿಗಾಗಿ ವೆಚ್ಚ ಮಾಡತಕ್ಕದ್ದು.

ಈ) ಪರಿಷತ್ತು ನೇರವಾಗಿ ನಡೆಸಿದ ಸಮ್ಮೇಳನದ ಲೆಕ್ಕಪತ್ರಗಳನ್ನು ಆಡಿಟ್ ಮಾಡಿಸಿ ಉಳಿದ ಪೂರ್ಣ ಮೊಬಲಗನ್ನು  ಪರಿಷತ್ತಿನ  ಕಚೇರಿಗೆ ಸಲ್ಲಿಸತಕ್ಕದ್ದು.

೩೭. ಆಡಳಿತ ವರ್ಷ

ಅ) ಪರಿಷತ್ತಿನ ಆಡಳಿತ  ವರ್ಷ ಏಪ್ರಿಲ್ ಒಂದರಿಂದ ಮಾರ್ಚ್ ಮೂವತ್ತೊಂದರವರೆಗೆ ಇರತಕ್ಕದ್ದು.

ಆ) ಪರಿಷತ್ತಿನ ಲೆಕ್ಕಗಳ ಬಗ್ಗೆ ವಿವರಣೆಯನ್ನು ಪರಿಷತ್ತಿನ ಸದಸ್ಯರಲ್ಲಿ ಯಾರೇ ಆಗಲಿ ಅಧ್ಯಕ್ಷರ ಅಥವಾ ಕಾರ್ಯದರ್ಶಿಗಳಿಂದ ಲಿಖಿತ ಮೂಲಕ ಪಡೆಯತಕ್ಕದ್ದು.

ಇ) ಪರಿಷತ್ತಿನ ಹಣಕಾಸು ವ್ಯವಹಾರಗಳನ್ನೊಳಗೊಂಡ ಲೆಕ್ಕಪತ್ರಗಳನ್ನು ಪ್ರತಿವರ್ಷ  ಕರ್ನಾಟಕ ಸರ್ಕಾರದ ರಾಜ್ಯ ಲೆಕ್ಕಪತ್ರ ಇಲಾಖೆಯಿಂದ ಆಡಿಟ್ ಮಾಡಿಸಿ  ಅವರ ವರದಿಯೊಂದಿಗೆ ಅದನ್ನು ವಾರ್ಷಿಕ ಸಭೆಯ ಅಂಗೀಕಾರಕ್ಕೆ ಮಂಡಿಸಬೇಕು.

ಈ) ಲೆಕ್ಕಪತ್ರಗಳನ್ನು ವಾಣಿಜ್ಯ ರೂಪದಲ್ಲಿ ಇರಿಸತಕ್ಕದ್ದು.

೩೮ವ್ಯವಹಾರ

ಅ) ಪರಿಷತ್ತಿನ ಆಸ್ತಿಯನ್ನು ಕೂಡಿಸುವ, ರೂಢಿಸುವ, ವಿಲೇವಾರಿ ಮಾಡುವ ಅಧಿಕಾರ  ಸಕಲ ಸದಸ್ಯರ ಸಭೆಗೆ ಇರತಕ್ಕದ್ದು.

ಆ)  ಪರಿಷತ್ತಿನ ಆಸ್ತಿಯನ್ನು  ಅಡವು ಇಡುವ,  ವಿಲೇವಾರಿ ಮಾಡುವ ಹಾಗೂ ಪರಿಷತ್ತಿಗೆ ಆಸ್ತಿಯನ್ನು ಕೊಳ್ಳುವ,  ಮಾರುವ ಇತ್ಯಾದಿ   ಅಧಿಕಾರ ಸಕಲ ಸದಸ್ಯರ ಸಭೆಗೆ ಇರತಕ್ಕದ್ದು.

ಇ) ಪರಿಷತ್ತಿನ ಆಸ್ತಿಯನ್ನು   ಬಾಡಿಗೆಗೆ ಕೊಡುವ  ಮತ್ತು ಬಾಡಿಗೆ ಪಡೆಯುವ ಅಧಿಕಾರವು ಕಾರ್ಯಕಾರಿ ಸಮಿತಿಗೆ ಇರತಕ್ಕದ್ದು

ಈ) ಪರಿಷತ್ತಿನ ಆಡಳಿತವೆಲ್ಲ ಅಧ್ಯಕ್ಷರ ಮೇಲ್ವಿಚಾರಣೆಯಲ್ಲಿ ನಡೆಯತಕ್ಕದ್ದು.

ಉ) ಬ್ಯಾಂಕು, ಸರಕಾರ, ಎಲ್.ಐ.ಸಿ. ಇತ್ಯಾದಿ ಸಂಸ್ಥೆಗಳಿಂದ ಪರಿಷತ್ತು ಪಡೆಯುವ  ಸಾಲಪತ್ರಗಳಿಗೆ ಮತ್ತು ಪರಿಷತ್ತಿನ ಆಸ್ತಿಗಳ ಕ್ರಯ, ವಿಕ್ರಯ, ಭೋಗ್ಯ, ಅಡವು, ಬಾಡಿಗೆ ಈ  ಸಂಬಂಧವಾದ  ವ್ಯವಹಾರ ಪತ್ರಗಳಿಗೆ ಮತ್ತು ಪತ್ರಗಳನ್ನು   ರಿಜಿಸ್ಟರ್ ಮಾಡಿಸುವುದಕ್ಕೆ ಪರಿಷತ್ತಿನ ಅಧ್ಯಕ್ಷರು ಅಥವಾ ಅಧ್ಯಕ್ಷರಿಂದ  ಅಧಿಕಾರ ಪಡೆದ ಒಬ್ಬ ಕಾರ್ಯದರ್ಶಿ ಪರಿಷತ್ತಿನ ಪರವಾಗಿ  ರುಜುವನ್ನು ಹಾಕಿ ಮುದ್ರೆಯನ್ನೊತ್ತಿ  ಕಾರ್ಯಗಳನ್ನು ನಿರ್ವಹಿಸತಕ್ಕದ್ದು.

ಊ) ಅಧ್ಯಕ್ಷರ ಜೊತೆಗೆ ಕೋಶಾಧ್ಯಕ್ಷರು ರುಜು ಹಾಕಿ ಬ್ಯಾಂಕುಗಳೊಡನೆ ವ್ಯವಹರಿಸತಕ್ಕದ್ದು. ಅಧ್ಯಕ್ಷರ ಗೈರುಹಾಜರಿಯಲ್ಲಿ  ಅಧ್ಯಕ್ಷರಿಂದ  ಅಧಿಕಾರ ಪಡೆದ  ಕಾರ್ಯದರ್ಶಿಗಳಲ್ಲಿ ಒಬ್ಬರು ಮತ್ತು ಕೋಶಾಧ್ಯಕ್ಷರು ಚೆಕ್ಕುಗಳಿಗೆ ರುಜುಹಾಕಿ ಬ್ಯಾಂಕುಗಳೊಡನೆ  ವ್ಯವಹರಿಸತಕ್ಕದ್ದು. ಕೋಶಾಧ್ಯಕ್ಷರ ಗೈರುಹಾಜರಿಯಲ್ಲಿ ಅಧ್ಯಕ್ಷರಿಂದ  ಅಧಿಕಾರ ಪಡೆದ ಕಾರ್ಯದರ್ಶಿ ಅಧ್ಯಕ್ಷರೊಂದಿಗೆ ಚೆಕ್ಕುಗಳಿಗೆ ರುಜುಹಾಕಿ  ಬ್ಯಾಂಕುಗಳೊಡನೆ ವ್ಯವಹರಿಸತಕ್ಕದ್ದು.

ಋ) ಸಂಸ್ಥೆಯ ನಿಯಮಾವಳಿ ತಿದ್ದುಪಡಿ ಸಂದರ್ಭದಲ್ಲಿ ವರಮಾನ ತೆರಿಗೆ ನಿಯಮಗಳಿಗೆ ವಿರೋಧವಾಗಿದ್ದಲ್ಲಿ ಅಂತಹ ತಿದ್ದುಪಡಿಗಳು ಸಿಂಧುವಾಗುವುದಿಲ್ಲ.  ಅಲ್ಲದೇ  ಪೂರ್ವಭಾವಿಯಾಗಿ  ವರಮಾನ ತೆರಿಗೆ ಆಯುಕ್ತರ  ಅನುಮತಿ ಪಡೆಯದೆ ಅಂತಹ ನಿಯಮಗಳನ್ನು ತಿದ್ದುಪಡಿ ಮಾಡುವಂತಿಲ್ಲ.

ಋೂ) ಸಂಸ್ಥೆಯ ವಿಘಟನೆಯ ಸಂದರ್ಭದಲ್ಲಿ ಇರುವ ಆಸ್ತಿಯನ್ನು  ಯಾವುದೇ ಸಂದರ್ಭದಲ್ಲಿ  ಧರ್ಮದರ್ಶಿ, ಕಾರ್ಯಕಾರಿ ಸಮಿತಿ ಸದಸ್ಯ,  ಆಡಳಿತ ವರ್ಗದವರಿಗೆ  ಹಂಚುವಂತಿಲ್ಲ. ಬದಲಿಗೆ ೧೯೬೧ರ ವರಮಾನ ತೆರಿಗೆ ಅಧಿನಿಯಮ ೮0ಜಿ ಪ್ರಕಾರ ಅಂಗೀಕಾರ ಪಡೆದ  ಸಂಸ್ಥೆಯ ಉದ್ದೇಶಗಳನ್ನು  ಹೋಲುವ ಇತರ ಸಂಘಸಂಸ್ಥೆಗಳಿಗೆ  ವರ್ಗಾಯಿಸತಕ್ಕದ್ದು.

ಎ) ಸಂಸ್ಥೆಯು ಜಾತಿ ಮತಗಳ   ತಾರತಮ್ಯವಿಲ್ಲದೆ ಎಲ್ಲರಿಗೂ ತೆರೆದಿರಬೇಕು.

ಏ) ಸ್ಥಾಯಿನಿಧಿ : ಪರಿಷತ್ತು ಸ್ಥಾಯಿನಿಧಿಯೊಂದನ್ನು  ಸ್ಥಾಪಿಸಬೇಕು. ಆ ನಿಧಿಗೆ ಸಾಧ್ಯವಾದಷ್ಟೂ   ಹಣವನ್ನು ಸಂಗ್ರಹಿಸಬೇಕು. ಈ ಹಣದಿಂದ ಬರುವ ಬಡ್ಡಿಯನ್ನು ಕಾರ್ಯಕ್ರಮಗಳಿಗೆ ಉಪಯೋಗಿಸಬೇಕು. ಸಂಸ್ಥೆಯ ಸ್ಥಾಯಿನಿಧಿಯ ಬಡ್ಡಿ ಹಾಗೂ ಇತರೇ ವರಮಾನವನ್ನು ಪರಿಷತ್ತಿನ ಉದ್ದೇಶ ಸಾಧನೆಗಾಗಿ  ಮಾತ್ರ ಬಳಸತಕ್ಕದ್ದು. ಅಲ್ಲದೆ ಆ ವರಮಾನವನ್ನು ಬಡ್ಡಿ ಸಾಭಾಂಶ ಮೊದಲಾದ ರೂಪದಲ್ಲಿ ಸದಸ್ಯರಿಗೆ ನೀಡುವಂತಿಲ್ಲ.

ಐ) ಪರಿಷತ್ತಿನ ಸ್ಥಾಯಿನಿಧಿಯನ್ನು ರೂಢಿಸುವ ಸಂದರ್ಭದಲ್ಲಿ ವರಮಾನ ತೆರಿಗೆ ನಿಯಮಗಳನ್ನು ಅನುಸರಿಸತಕ್ಕದ್ದು.

೩೯. ಚುನಾವಣಾ ಉಪಬಂಧನೆಗಳು

ಅ) ಅಸ್ತಿತ್ವದಲ್ಲಿರುವ ಕಾರ್ಯಕಾರಿ ಸಮಿತಿಯ ನಿರ್ದಿಷ್ಟ ಅವಧಿಯು  ಮುಗಿಯುವುದಕ್ಕೆ ಮೂರು ತಿಂಗಳು ಮುಂಚಿತವಾಗಿ ಮುಂದಿನ ಕಾರ್ಯಕಾರಿ ಸಮಿತಿಯ ಚುನಾವಣೆಗೆ ಏರ್ಪಾಟುಗಳನ್ನು ನಡೆಸತಕ್ಕದ್ದು.

ಬಿ) ಚುನಾವಣೆಗೆ ಮೂರು ತಿಂಗಳ ಮೊದಲೇ ಅಸಿಸ್ಟೆಂಟ್ ಕಮಿಷನರ್ ಹುದ್ದೆಗೆ ಕಡಿಮೆ ಅಲ್ಲದ ಅಧಿಕಾರಿಯನ್ನು ಚುನಾವಣಾಧಿಕಾರಿಯಾಗಿ  ನೇಮಿಸುವಂತೆ ಸರ್ಕಾರವನ್ನು ವಿನಂತಿಸಿಕೊಳ್ಳತಕ್ಕದ್ದು. ಅವರು ಕಾನೂನು ಬಲ್ಲವರಾಗಿರಬೇಕು. ಹಾಗೂ  ಅವರು ನಡೆಸುವ ಪರಿಷತ್ತಿನ ಚುನಾವಣೆಯ  ಯಾವ ಅಧಿಕಾರ ಸ್ಥಾನಗಳಿಗೂ ಅಭ್ಯರ್ಥಿಯಾಗಿ ನಿಲ್ಲತಕ್ಕದ್ದಲ್ಲ. ಸದಸ್ಯರಾಗಿದ್ದರೆ ಮತದಾನ  ಮಾಡಬಹುದು.

ಇ) ಚುನಾವಣಾಧಿಕಾರಿಯು ಈ ಕೆಳಗಿನ ನಿಯಮವನ್ನನುಸರಿಸಿ  ಚುನಾವಣಾ ಕಾರ್ಯಗಳನ್ನು ನಡೆಸಬೇಕು.

ಈ) ಚುನಾವಣಾ ದಿನಾಂಕ ನಿಗದಿಗೊಳಿಸಿ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಬೇಕು. ಚುನಾವಣೆ ನಡೆಯುವ  ೭೫ ದಿನಗಳ ಮೊದಲು ಸದಸ್ಯರ ಪಟ್ಟಿಯನ್ನು  ಜಿಲ್ಲಾ ವಿಭಾಗಗಳಾಗಿ ವಿಂಗಡಿಸಿ ಕೇಂದ್ರ  ಪರಿಷತ್ತಿನ ಕಚೇರಿಯಲ್ಲಿಯೂ, ಜಿಲ್ಲಾ / ಗಡಿನಾಡ ಘಟಕಗಳಲ್ಲಿಯೂ ಪ್ರಕಟಿಸತಕ್ಕದ್ದು.

ಉ) ಚುನಾವಣಾ ಮತದಾರರ ಪಟ್ಟಿಯ ಬಗ್ಗೆ ಯಾರದಾದರೂ ಆಕ್ಷೇಪಣೆ ಇದ್ದರೆ  ಅಂಥವುಗಳನ್ನು ಎರಡು ವಾರ ಅವಕಾಶಕೊಟ್ಟು ಸ್ವೀಕರಿಸಿ ೪೫ ದಿನಗಳ  ಮೊದಲು ಮತದಾರರ ಅಂತಿಮ ಪಟ್ಟಿಯನ್ನು ಪರಿಷತ್ತಿನಲ್ಲಿ ಪ್ರಕಟಿಸತಕ್ಕದ್ದು.

ಊ) ನಾಮಪತ್ರಗಳ ಸ್ವೀಕಾರದ ಕೊನೆಯ ದಿವಸವನ್ನು ಪ್ರಕಟಿಸಬೇಕು.

ಋ) ನಾಮಪತ್ರಗಳ ಸ್ವೀಕಾರದ ದಿವಸಕ್ಕೂ ಚುನಾವಣೆ ನಡೆಯುವ ದಿನಕ್ಕೂ ಕನಿಷ್ಠ ೩0 ದಿವಸಗಳ ಅಂತರವಾದರೂ ಇರಬೇಕು.

ಋೂ) ನಾಮಪತ್ರಗಳ ಸ್ವೀಕಾರದ ಕೊನೆಯ ದಿನದಿಂದ ಮೂರು ದಿವಸಗಳೊಳಗಾಗಿ ಅವುಗಳ ಪರಿಶೀಲನೆ ನಡೆಯಬೇಕು.

ಎ) ನಾಮಪತ್ರಗಳ ಪರಿಶೀಲನೆಯಾದ ನಂತರ ನಾಮಪತ್ರವನ್ನು ಹಿಂತೆಗೆದುಕೊಳ್ಳುವುದಕ್ಕೆ ಮೂರು ದಿವಸಗಳ ಅವಧಿಯ ಅವಕಾಶವಿರಬೇಕು.

ಏ) ಪರಿಶೀಲಿಸಿ  ಉಳಿದಿರುವ ಅಂತಿಮ ಸ್ಪರ್ಧಿಗಳ ಹೆಸರನ್ನು ಕನ್ನಡ ವರ್ಣಮಾಲೆಯ ‘ಅ’ಕಾರಾನುಕ್ರಮವಾಗಿ ಪ್ರಕಟಿಸಬೇಕು.

ಐ) ಅಗತ್ಯವಾದಷ್ಟೇ  ‘ನಾಮಪತ್ರಗಳು’ ಬಂದರೆ ಅವರು ಅವಿರೋಧವಾಗಿ ಆಯ್ಕೆಯಾದರೆಂದು ಘೋಷಿಸಬೇಕು.

ಒ) ಹೊರನಾಡ ಮತದಾರರಿಗೆ ಚುನಾವಣೆ ದಿನಕ್ಕಿಂತ ೧೫ ದಿವಸ ಮುಂಚಿತವಾಗಿ ಮತಪತ್ರಗಳನ್ನು ರಿಜಿಸ್ಟರ್ಡ್ ಅಂಚೆಯ ಮೂಲಕ ರವಾನಿಸಬೇಕು.

ಓ) ಹೊರನಾಡ ಮತದಾರರು ರಿಜಿಸ್ಟರ್ಡ್  ಅಂಚೆಯ ಮೂಲಕ ಕಳಿಸುವ ಮತಪತ್ರಗಳನ್ನು ಅಧ್ಯಕ್ಷರ ಚುನಾವಣಾ  ಫಲಿತಾಂಶ ಪ್ರಕಟಿಸುವ ಒಂದು  ದಿನಕ್ಕೆ   ಮುಂಚಿತವಾಗಿ ಚುನಾವಣಾಧಿಕಾರಿಗಳಿಗೆ ತಲುವಂತೆ ಕಳಿಸತಕ್ಕದ್ದು.

0.) ಸದಸ್ಯರ  ಪಟ್ಟಿಯನ್ನೂ ಉಮೇದುವಾರಿಕೆಯ ಅಪೇಕ್ಷಾ ಪತ್ರಗಳನ್ನೂ  ನಿಗದಿತ ಬೆಲೆಗೆ ಮಾರತಕ್ಕದ್ದು.

ಆ) ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ೧00 ಜನ ಮತದಾರರಿರುವ ತಾಲ್ಲೂಕು ಕೇಂದ್ರಗಳಲ್ಲಿಯೂ ಮತದಾನ ಕೇಂದ್ರವಿರತಕ್ಕದ್ದು.  ಕಡಿಮೆ ಮತದಾರರಿದ್ದಲ್ಲಿ  ಹೆಚ್ಚಿರುವ ಪಕ್ಕದ ತಾಲ್ಲೂಕಿನ  ಮತದಾರರ ಪಟ್ಟಿಗೆ ಅವರ ಹೆಸರುಗಳನ್ನು  ಸೇರಿಸಿ ಅವರಿಗೆ ಅಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸತಕ್ಕದ್ದು.  ಹೀಗೆ ಸೇರಿಸಲಾದ ಮತದಾರರ  ಒಟ್ಟು ಸಂಖ್ಯೆ ೧00 ಅಥವಾ ಅದಕ್ಕಿಂತ ಹೆಚ್ಚಿರಬೇಕು.

ಇ) ಚುನಾವಣೆ ನಡೆದ ದಿನವೇ ಆಯಾ ಸ್ಥಳದಲ್ಲಿ ಮತಗಳ ಎಣಿಕೆ ನಡೆಯತಕ್ಕದ್ದು. ಜಿಲ್ಲಾ ಘಟಕಗಳ ಅಧ್ಯಕ್ಷರುಗಳ ಚುನಾವಣಾ ಫಲಿತಾಂಶವನ್ನು ಸ್ಥಳದಲ್ಲಿಯೇ ಪ್ರಕಟಿಸತಕ್ಕದ್ದು.  ಪರಿಷತ್ತಿನ ಅಧ್ಯಕ್ಷರ ಚುನಾವಣೆಗೆ ಸಂಬಂಧಪಟ್ಟ ಮತಪತ್ರಗಳ ಎಣಿಕೆ ಮಾಡಿ ಅಭ್ಯರ್ಥಿಗಳು ಕ್ರಮವಾಗಿ ಪಡೆದ ಮತಗಳ ಸಂಖ್ಯೆಯನ್ನು ಅಧಿಕೃತ ಪತ್ರದಲ್ಲಿ ನಮೂದಿಸಿ ಆ ಪತ್ರವನ್ನೂ  ಮತ್ತು ಎಣಿಕೆಯಾದ ಮತಪತ್ರಗಳನ್ನೂ  ಪರಿಷತ್ತಿಗೆ ತಂದು ಚುನಾವಣಾಧಿಕಾರಿಗೆ ತಲುಪಿಸತಕ್ಕದ್ದು.  ಚುನಾವಣಾ ತಾರೀಖಿನಿಂದ ಮೂರನೇ ದಿವಸದಂದು ಎಲ್ಲ  ಜಿಲ್ಲೆಗಳಿಂದ ತಂದ,  ಅಭ್ಯರ್ಥಿಗಳು ಪಡೆದ ಮತಗಳನ್ನೂ  ಅಂಚೆಯ ಮೂಲಕ ಬಂದ ಮತಗಳನ್ನೂ ಒಟ್ಟು  ಎಣಿಕೆಮಾಡಿ ಅಧ್ಯಕ್ಷರ ಫಲಿತಾಂಶವನ್ನು ಪ್ರಕಟಿಸತಕ್ಕದ್ದು.

ಈ) ಯಾವುದಾದರೂ ಕಾರಣಕ್ಕಾಗಿ  ಯಾವುದೇ ಸ್ಥಳದಲ್ಲಿ ಚುನಾವಣೆ ನಡೆಯದೆ ಹೋದರೆ ಅಂತಹ ಸ್ಥಳಗಳ ಚುನಾವಣೆಯನ್ನು ಬಿಟ್ಟು ಉಳಿದ ಸ್ಥಳಗಳ  ಮತಗಳ ಎಣಿಕೆ ನಡೆಸಿ  ಸ್ಪರ್ಧಿಗಳು  ಪಡೆದ ಮತಗಳನ್ನು ಪ್ರಕಟಿಸತಕ್ಕದ್ದು. ಆದರೆ  ಅಧ್ಯಕ್ಷರ  ಆಯ್ಕೆಯ ಘೋಷಣೆಯನ್ನು  ನಿಂತ ಸ್ಥಳದ ಚುನಾವಣೆ ನಡೆಯುವವರೆಗೆ  ತಡೆಹಿಡಿಯತಕ್ಕದ್ದು.

ಉ) ಚುನಾವಣೆ  ನಿಂತ ಸ್ಥಳದಲ್ಲಿ ಮತ್ತೆ ಹತ್ತು ದಿನಗಳೊಳಗಾಗಿ ಚುನಾವಣೆ ನಡೆತಕ್ಕದ್ದು.

ಊ) ಚುನಾವಣೆ  ನಿಂತ ಸ್ಥಳದಲ್ಲಿ  ಮರು ಚುನಾವಣೆ ನಡೆದ ಮೂರು ದಿನಗಳಲ್ಲಿ ಪರಿಷತ್ತಿನ ಅಧ್ಯಕ್ಷರ ಫಲಿತಾಂಶವನ್ನು  ಘೋಷಿಸತಕ್ಕದ್ದು.

ಋ) ಪರಿಷತ್ತಿನ ಚುನಾಯಿತ ಸ್ಥಾನಕ್ಕೆ ಮತ ನೀಡುವವರು ಚುನಾವಣಾ ತಾರೀಖಿಗೆ  ಮೂರು ವರ್ಷ ಹಿಂದಿನಿಂದ  ಸತತವಾಗಿ  ಪರಿಷತ್ತಿನ ಸದಸ್ಯರಾಗಿರತಕ್ಕದ್ದು.

ಋೂ) ಪರಿಷತ್ತಿನ ಜಿಲ್ಲಾ ಘಟಕಗಳ ಗಡಿನಾಡ ಘಟಕಗಳ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು ಐದುವರ್ಷ ಹಿಂದಿನಿಂದ  ಸತತವಾಗಿ ಪರಿಷತ್ತಿನ ಸದಸ್ಯರಾಗಿರತಕ್ಕದ್ದು

ಎ) ಪರಿಷತ್ತಿನ ಬಾಕಿ ಉಳಿಸಿಕೊಂಡಿರುವವರು ಹಾಗೂ ಕೋರ್ಟಿನಿಂದ  ಶಿಕ್ಷೆಗೆ ಒಳಗಾದವರು ಚುನಾವಣೆಗೆ  ನಿಲ್ಲಲು ಅರ್ಹಹಾಗಿರುವುದಿಲ್ಲ.

೪೧.ಅ) ಪರಿಷತ್ತಿನ ಅಧ್ಯಕ್ಷತೆಗೆ ಸ್ಪರ್ಧಿಸುವವರು ೧000 (ಒಂದು ಸಾವಿರ ) ರೂಪಾಯಿ  ಠೇವಣಿಯನ್ನೂ, ಜಿಲ್ಲಾ ಗಡಿನಾಡ ಘಟಕಗಳಿಗೆ ಸ್ಪರ್ಧಿಸುವವರು ೫00 (ಐದು ನೂರು) ರೂಪಾಯಿಗಳ  ಠೇವಣಿಯನ್ನೂ  ಪರಿಷತ್ತಿಗೆ ಸಲ್ಲಿಸತಕ್ಕದ್ದು. ಚುನಾವಣೆಯಲ್ಲಿ ಚಲಾಯಿಸಲಾದ  ಒಟ್ಟು ಕ್ರಮಬದ್ಧ ಮತಗಳಲ್ಲಿ (೧/೬) ಆರನೆಯ ಒಂದು ಭಾಗದಷ್ಟು ಮತಗಳನ್ನು ಪಡೆದವರಿಗೆ ಠೇವಣಿಯನ್ನು ಹಿಂದಿರುಗಿಸಲಾಗುವುದು.

ಆ) ಜಿಲ್ಲಾ ಕೇಂದ್ರಗಳಲ್ಲಿ ಒಂದೇ ದಿನ ಚುನಾವಣೆ ನಡೆಸಲು ಸೂಕ್ತ ಉಪಚುನಾವಣಾಧಿಕಾರಿಗಳನ್ನು ಸಹಾಯಕ  ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಚುನಾವಣಾಧಿಕಾರಿಗೆ ಅಧಿಕಾರವಿರತಕ್ಕದ್ದು.

ಇ) ಪರಿಷತ್ತಿನ ಸಿಬ್ಬಂದಿಯವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ.

ಈ) ನಿಬಂಧನೆಗಳಿಗಾಗಿ ವಿರೋಧವಿಲ್ಲದಂತೆ ಪರಿಷತ್ತಿನ ಚುನಾವಣೆಗಳನ್ನು ಜನತಾ ಪ್ರಾತಿನಿಧಿಕ ಕಾಯ್ದೆಯ ನಿಯಮಗಳಿಗನುಗುಣವಾಗಿ  ನಡೆಸತಕ್ಕದ್ದು.  ಮತ್ತು ಚುನಾವಣಾ ತಕರಾರು  ಅರ್ಜಿಯನ್ನು ಜನತಾ ಪ್ರಾತಿನಿಧಿಕ ಕಾಯ್ದೆಯ ನಿಯಮಗಳಿಗೆ ಅನುಗುಣವಾಗಿ ತೀರ್ಮಾನಿಸತಕ್ಕದ್ದು. ಚುನಾವಣೆ ಫಲಿತಾಂಶ ಘೋಷಣೆ ಆದ ಮೂವತ್ತು ದಿನಗಳೊಳಗಾಗಿ ಅಧಿಕಾರ ವ್ಯಾಪ್ತಿಯುಳ್ಳ ನ್ಯಾಯಾಲಯದಲ್ಲಿ ಚುನಾವಣಾ ತಕರಾರು ಅರ್ಜಿಗಳನ್ನು ಸಲ್ಲಿಸಬಹುದು.

 ಸಾಹಿತ್ಯ ಪರಿಷತ್ತಿನ  ಹೆಸರು

ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭವಾದಾಗ ‘ಕರ್ಣಾಟಕ ಸಾಹಿತ್ಯ ಪರಿಷತ್’ ಎಂದು ಇತ್ತು. ಹೀಗೆ ಹೆಸರಿಡಲು ವಿವರಣೆಯನ್ನು ಕರ್ಪೂರ ಶ್ರೀನಿವಾಸರಾವ್ ಅವರು ೧೯೧೯ರಲ್ಲಿ ಹಾಸನದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ (ಪರಿಷತ್ಪತ್ರಿಕೆ ಜೂನ್ ೧೯೧೯ ಪುಟ ೧೨) ಹೀಗೆ ವಿವರಿಸಿದ್ದಾರೆ.

ಕರ್ಣಾಟಕ ಸಾಹಿತ್ಯ ಪರಿಷತ್ ಎಂಬ ಹೆಸರಿನ ಅರ್ಥವೇನು?

‘ಕರ್ಣಾಟಕ ಸಾಹಿತ್ಯ ಪರಿಷತ್’ ಎಂದರೆ ಕನ್ನಡ ಭಾಷಣ ಗ್ರಂಥಗಳಲ್ಲಿ ಪ್ರಾಚೀನವಾದುವನ್ನು ಪರಿಷ್ಕರಣ ಮಾಡಿ ಪ್ರಕಟಿಸುವುದೂ ಆಧುನಿಕ ಗ್ರಂಥಗಳನ್ನು ಸಂಗ್ರಹಿಸಿ ಉತ್ತಮವಾದುವುಗಳಿಗೆ ಪ್ರೋತ್ಸಾಹವನ್ನು ಕೊಡುವುದೂ ಮತ್ತು ಎಲ್ಲಾ ಕರ್ಣಾಟಕ ದೇಶಭಾಗಗಳಲ್ಲಿಯೂ ಪ್ರಚಾರದಲ್ಲಿರುವ ಈ ಭಾಷೆಯ ವೃದ್ಧಿಯ ವಿಷಯದಲ್ಲಿ ಸಮಯವರಿತು ತಕ್ಕ ಏರ್ಪಾಡುಗಳನ್ನು ಮಾಡಿ ಆಚರಣೆಗೆ ತರುವುದೂ – ಇದೇ ಮೊದಲಾದ ಕಾರ್ಯಗಳನ್ನು ಕೈಗೊಂಡು ನೆರವೇರಿಸಲು ಏರ್ಪಟ್ಟ ವಿದ್ವಾಂಸರ ಸಭೆ ಎಂದು ನಿಷ್ಕೃಷ್ಟಾರ್ಥವು.

೧೯೧೫ರ ನಿಬಂಧನೆಯಲ್ಲಿ ಕರ್ಣಾಟಕ ಸಾಹಿತ್ಯ ಪರಿಷತ್ತು ಎಂದಿದ್ದರೂ ಮೈಸೂರು ಪ್ರಾಂತದಲ್ಲಿ ಕರ್ಣಾಟಕ ಎಂಬ ಪದವನ್ನು ಬೊಂಬಾಯಿ ಪ್ರಾಂತ್ಯದಲ್ಲಿ ಕರ್ನಾಟಕವೆಂತಲೂ ಬರೆಯುವ ಉಚ್ಚರಿಸುವ ರೂಢಿ ಇತ್ತು. ಪರಿಷತ್ ಪತ್ರಿಕೆ ‘ಕರ್ನಾಟಕ’ ಎಂಬ ಪದವನ್ನು ಬಳಸುತ್ತಿತ್ತು. ೧೯೩೮ನೇ ಏಪ್ರಿಲ್ (ಸಂಪುಟ ೨೩ ಸಂಚಿಕೆ ೧) ಸಂಚಿಕೆಯಿಂದ ಬಿ. ಎಂ. ಶ್ರೀ. ಅವರ ಅನುಮತಿಯಂತೆ ‘ಕರ್ನಾಟಕ ಸಾಹಿತ್ಯ ಪರಿಷತ್’ ಎಂದು ಪತ್ರಿಕೆ ಪ್ರಕಟವಾಗುತ್ತಿತ್ತು.

ಆದರೆ ಬಿ. ಎಂ. ಶ್ರೀ ಕಾಲದಲ್ಲಿ ವಿಸೀ ಹೇಳುವ ಹಾಗೆ, ರಜತಮಹೋತ್ಸವ ಕಾಲದಲ್ಲಿ ಪರಿಷತ್ತಿನ ಹೆಸರನ್ನು ನಿಯಾನ್ಸ್ ಲೈಟಿನಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ ಎಂದು ಹೇಳಲು ಹೊರಟಾಗ, ಕರ್ಣಾಟಕ ಬದಲಾವಣೆ ಬಗ್ಗೆ ನ – ಣ ಚರ್ಚೆ ಪ್ರಾರಂಭವಾಯಿತು. ಜಿ. ಪಿ. ರಾಜರತ್ನಂ ಆದಿಯಾಗಿ ಹತ್ತಾರು ಜನ ವಿದ್ವಾಂಸರು ಈ ಚರ್ಚೆಯಲ್ಲಿ ಪಾಲ್ಗೊಂಡರು.

೧೯೩೮ರ ಡಿಸೆಂಬರ್ ಬಳ್ಳಾರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಎಂದು ಹೆಸರಿಸಲು ನಿರ್ಧರಿಸಲಾಯಿತು. ಪರಿಷತ್ತಿನ ಪತ್ರಿಕೆ ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ ಆಯಿತು.

ಪರಿಷತ್ತಿನ  ಕಾರ್ಯಕಾರಿ ಸಮಿತಿ

ಯಾವುದೇ ಒಂದು ಸಂಸ್ಥೆ  ಯಶಸ್ವಿಯಾಗಿ  ನಿರಂತರವಾಗಿ ಕಾರ್ಯನಿರ್ವಹಿಸಬೇಕಾದರೆ  ಅದರ ಕಾರ್ಯಕಾರಿ ಸಮಿತಿ ಸಮರ್ಥ, ದಕ್ಷ ಪ್ರಾಮಾಣಿಕ   ಪದಾಧಿಕಾರಿಗಳನ್ನು  ಒಳಗೊಂಡಿರಬೇಕು.  ಕನ್ನಡ ಸಾಹಿತ್ಯ ಪರಿಷತ್ತು ಮೊದಲಿನಿಂದಲೂ  ನಾಡಿಗೆ ಸೇವೆ ಸಲ್ಲಿಸಿದ  ಸಾಹಿತಿ, ವಿದ್ವಾಂಸರು, ಸಾರ್ವಜನಿಕ ಗಣ್ಯರಿಂದ ಕೂಡಿದೆ.  ಕಾರ್ಯಕಾರಿ ಸಮಿತಿಯಲ್ಲಿ  ಮೊದಲಿಗೆ ಕೇವಲ ಸಾಹಿತಿ ವಿದ್ವಾಂಸರೇ ಹೆಚ್ಚಾಗಿದ್ದರು.  ಈಚೆಗೆ ರಾಜ್ಯಾಧ್ಯಕ್ಷರು, ಪದಾಧಿಕಾರಿಗಳು ಜಿಲ್ಲಾ ಅಧ್ಯಕ್ಷರು, ನಾಮಕರಣ ಸದಸ್ಯರು,  ಪ್ರತಿನಿಧಿಗಳು  ಕೇವಲ ವಿದ್ವಾಂಸರು, ಸಾಹಿತಿಗಳಷ್ಟೇ ಅಲ್ಲದೆ ವಿವಿಧ ಸಾರ್ವಜನಿಕ  ರಂಗಗಳಿಂದ  ಬಂದ ಸದಸ್ಯರಿದ್ದು ನಾಡಿನ ಪ್ರಾತಿನಿಧಿಕ ಸಂಸ್ಥೆ ಆಗಿದೆ ಪರಿಷತ್ತು. ಇದಕ್ಕೆ ನಿದರ್ಶನವಾಗಿ  ೧೯೧೫ರಲ್ಲಿ  ಪರಿಷತ್ತಿನ ಸ್ಥಾಪನೆ ಸಂದರ್ಭದಲ್ಲಿ ಇದ್ದ ಕಾರ್ಯಕಾರಿ ಸಮಿತಿಯ ಸ್ವರೂಪವನ್ನು  ಪ್ರಸಕ್ತ ಇರುವ ಕಾರ್ಯಕಾರಿ ಸಮಿತಿಯನ್ನು  ಗಮನಿಸಬಹುದು.

೧೯೧೫೧೬ರಲ್ಲಿದ್ದ ಕಾರ್ಯಸಮಿತಿಯ  ರಚನಾ ಸ್ವರೂಪ

೧. ಮಹಾಪೋಷಕರು

೨. ಪೋಷಕರು

೩. ಉದ್ಧಾರಕರು

೪. ಪ್ರದಾತೃಗಳು

೫. ಆಶ್ರಯದಾತರು

೬. ಸಹಾಯಕರು

೭. ಆಜೀವಸದಸ್ಯರು

೮. ಸಾಧಾರಣ ಸದಸ್ಯರು

೯. ಗೌರವ ಸದಸ್ಯರು

೧0. ವಿಶಿಷ್ಟ ಸದಸ್ಯರು

 ೨0೧೫ರ (ಪರಿಷತ್ತಿಗೆ ನೂರು ವರ್ಷ ತುಂಬಿದ ವರ್ಷನಿಬಂಧನೆಯ ಪ್ರಕಾರ ಕಾರ್ಯಕಾರಿ ಸಮಿತಿಯ ರಚನಾ ಸ್ವರೂಪ  ಹೀಗೆ ಇದೆ :

೧. ಅಧ್ಯಕ್ಷರು ೧

೨. ಗೌರವ ಕಾರ್ಯದರ್ಶಿಗಳು ೨

೩. ಗೌರವ ಕೋಶಾಧ್ಯಕ್ಷರು ೧

(ಇವರು ಪದಾಧಿಕಾರಿಗಳು ಆಗಿರುತ್ತಾರೆ)

ಸದಸ್ಯರು

೪. ಜಿಲ್ಲಾ ಟಕಗಳ ಚುನಾಯಿತ ಅಧ್ಯಕ್ಷರು ೨೭

೫. ಗಡಿನಾಡು ಘಟಕಗಳ ಚುನಾಯಿತ ಅಧ್ಯಕ್ಷರು ೫

(ತಮಿಳುನಾಡು-ಆಂಧ್ರ-ಕೇರಳ-ಮಹಾರಾಷ್ಟ್ರ-ಗೋವಾ)

೬. ಪರಿಷತ್ತಿನ ನಿಕಟಪೂರ್ವ ಸಮ್ಮೇಳನಾಧ್ಯಕ್ಷರು೧

೭. ಪರಿಷತ್ತಿನ ನಿಕಟಪೂರ್ವ ಸಮ್ಮೇಳನಾಧ್ಯಕ್ಷರು೧

೮. ಕನ್ನಡ ಅಧ್ಯಯನ ವ್ಯವಸ್ಥೆಯುಳ್ಳ ವಿಶ್ವವಿದ್ಯಾನಿಲಯದ  ಪ್ರತಿನಿಧಿ (ಕನ್ನಡ ಅಕ್ಷರಾನುಕ್ರಮಣಿಕೆಯಲ್ಲಿ) ೨

೯. ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ೧

೧0. ಮಹಿಳಾ ಸಾಹಿತಿ ೧

೧೧. ಪರಿಶಿಷ್ಟ ಜಾತಿ ಪ್ರತಿನಿಧಿ ೧

೧೨. ಸಂ ಸಂಸ್ಥೆಗಳ  ಪ್ರತಿನಿಧಿ ೧

ಒಟ್ಟು     ೪೪

ಪರಿಷತ್ತಿನ ಸದಸ್ಯವರ್ಗ ಮತ್ತು ಸದಸ್ಯತ್ವದ ಶುಲ್ಕಗಳು

ಪರಿಷತ್ತಿನ ಸದಸ್ಯರಾಗುವವರಿಗೆ ಗೊತ್ತಾದ ಚಂದಾದಾರ ವಿವಿಧ ವರ್ಗಗಳಿಗೆ ನಿಬಂಧನೆಗಳಲ್ಲಿ ನಿರ್ದಿಷ್ಟವಾಗಿತ್ತು. ನಿಬಂಧನೆಗಳಲ್ಲಿ ತಿದ್ದುಪಾಟುಗಳಾದಂತೆ ಸದಸ್ಯರಾದವರಿಗೆ ಚಂದಾಶುಲ್ಕ, ಸದಸ್ಯ ಅರ್ಹತೆ, ಸದಸ್ಯರ ಹಕ್ಕುಗಳು ಈ ೩ ವಿಷಯಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕೆಲವು ನಿದರ್ಶನಗಳನ್ನು ಕಾಣಬಹುದು.

೧೯೧೫ರಿಂದ ೧೯೯೮ರವರೆಗಿನ ಪರಿಷತ್ತಿನ ನಿಬಂಧನೆಗಳನ್ನು ಪರಿಶೀಲಿಸಿದರೆ ಈ ಕೆಳಕಂಡ ಬದಲಾವಣೆಗಳನ್ನು ಗುರುತಿಸಬಹುದು.

೧. ಮಹಾಪೋಷಕರು ಮತ್ತು ಪೋಷಕರು ೧೯೧೫-೧೯೧೭ವರೆಗಿತ್ತು. ಈ ವರ್ಗದವರು ರಾಜ್ಯಾಧಿಪತಿಗಳು, ಶ್ರೀಮಂತರು, ಉನ್ನತಪದವಿಯಲ್ಲಿರುವವರು ಮಾತ್ರ ಆಗಬಹುದು ಎಂದಿತ್ತು. ಆ ಪ್ರಕಾರ ಮೈಸೂರು ಸಂಸ್ಥಾನದ ಶ್ರೀಮನ್ಮಹಾರಾಜರು ಮಹಾಪೋಷಕರಾಗಿದ್ದರು.

ಮಹಾಪೋಷಕರು ಮತ್ತು ಪೋಷಕರು ಚಂದಾ ಕೊಡಬೇಕಿರಲಿಲ್ಲ. ೧೯೬೭ರಿಂದ ಉದ್ಧಾರಕರು ಬದಲಾಗಿ ಪೋಷಕರು ಎಂದು ಕರೆಯಲಾಯಿತು. ಹಿಂದಿನ ಮಹಾಪೋಷಕ ವರ್ಗವನ್ನು ಕೈಬಿಡಲಾಯಿತು. ಉದ್ಧಾರಕರು ಎಂಬ ಹೆಸರನ್ನು ಕೈ ಬಿಡಲಾಯಿತು.

೨. ಪ್ರಾರಂಭದಿಂದಲೂ ಇದ್ದ ಗೌರವ ಸದಸ್ಯರು ಮತ್ತು ವಿಶಿಷ್ಟ ಸದಸ್ಯರ ವರ್ಗಗಳನ್ನು ೧೯೪0ರ ವೇಳೆಗೆ ಕೈಬಿಡಲಾಯಿತು.

೩.೧೯೪0ರಿಂದ ಅಂಗಸಂಸ್ಥೆಗಳು (ಅ)  ಆಜೀವ (೫0ರೂ) (ಆ) ಸಾಮಾನ್ಯ(೬ರೂ) ಅಭಿಮಾನಿಗಳು (ಮಹಿಳೆಯರು ಮತ್ತು ವಿದ್ಯಾರ್ಥಿಗಳು) (೮ಆಣೆ) ಎಂಬ ವರ್ಗಗಳನ್ನು ಸೃಷ್ಟಿಸಲಾಯಿತು.

೪. ೧೯೫೪ ನಿಬಂಧನೆಗಳಲ್ಲಿ ಅಭಿಮಾನಿಗಳು ವರ್ಗವನ್ನು ತೆಗೆದುಹಾಕಲಾಯಿತು.

೫. ೧೯೫೭ರಲ್ಲಿ ೧. ಉದ್ಧಾರಕರು, ೨. ಪ್ರದಾತೃಗಳು , ೩. ಆಶ್ರಯದಾತರು, ೪. ಆಜೀವ ಸದಸ್ಯರು, ೫. ವಾರ್ಷಿಕ ಸದಸ್ಯರು, ೬. ಗೌರವಸದಸ್ಯರು- ಎಂದು ೬ ವರ್ಗಗಳನ್ನು ಮಾಡಲಾಯಿತು.

೬. ೧೯೬೮ರ ನಿಬಂಧನೆಗಳಲ್ಲಿ ಸದಸ್ಯವರ್ಗವನ್ನು ಪೋಷಕರು (೩000) ಉದ್ಧಾರಕರು (೧000) ಪ್ರದಾತೃಗಳು(೫00), ಆಜೀವ ಸದಸ್ಯರು (೧00) ಸಾಮಾನ್ಯ ಸದಸ್ಯರು (ವಾರ್ಷಿಕ) ೬ ರೂ. ಎಂದು ನಿರ್ಧರಿಸಲಾಯಿತು.

ಸದಸ್ಯ ಸಂಸ್ಥೆಗಳು ಶೀರ್ಷಿಕೆಯಲ್ಲಿ

ಪೋಷಕ ಸಂಸ್ಥೆಗಳು (೫000) ಆಜೀವಸಂಸ್ಥೆಗಳು (೧೫0) ವಾರ್ಷಿಕ ಸಂಸ್ಥೆಗಳು (೧೨) ಎಂದು ನಿರ್ಧರಿಸಲಾಗಿತ್ತು. ಪ್ರವೇಶಧನ ೧ ರೂ ಎಂದು ಗೊತ್ತುಮಾಡಲಾಯಿತು.

೭. ೧೯೭೩ರಲ್ಲಿ ಸಾಮಾನ್ಯ ಸದಸ್ಯತ್ವವನ್ನು ೧0 ರೂ ಆಜೀವ ಸಂಸ್ಥೆ ಸದಸ್ಯತ್ವವನ್ನು ೨೫0ಕ್ಕೆ ಸಾಮಾನ್ಯ ಸಂಸ್ಥೆ ಸದಸ್ಯತ್ವವನ್ನು ೨೫ರೂಗೆ ಏರಿಸಲಾಯಿತು.

೮. ೧೯೮೩ರಲ್ಲಿ ಸದಸ್ಯತ್ವದ ಚಂದಾ ಹೆಚ್ಚಿಸಲಾಯಿತು. ಪೋಷಕರು ೫000 ಪ್ರದಾತೃ ೨000 ದಾತೃ ೧000 ಸಾಮಾನ್ಯ ಸದಸ್ಯತ್ವ ೧೫ ಸಾಮಾನ್ಯ ಸಂಸ್ಥೆ ೫0ಕ್ಕೆ ಏರಿಸಲಾಯಿತು.

೯. ೧೯೮೮ರಲ್ಲಿ ಮತ್ತೆ ಅಧಿಕವಾಗಿ ಸದಸ್ಯ ವರ್ಗದ ಚಂದಾ ದರವನ್ನು ಹೆಚ್ಚಿಸಲಾಯಿತು.

ಪೋಷಕರು (೫000) ಪ್ರದಾತೃ ೨000 ದಾತೃ (೧000) ಆಜೀವ ಸದಸ್ಯರು ೧೫0 ಸಾಮಾನ್ಯ ಸದಸ್ಯರು (ವಾರ್ಷಿಕ) ೧೫ ರೂ ಸದಸ್ಯಸಂಸ್ಥೆ ಪೋಷಕ ಸಂಸ್ಥೆ (೫000) ಆಜೀವ ಸಂಸ್ಥೆ ೫00 ಸಾಮಾನ್ಯ ಸಂಸ್ಥೆ ವರ್ಷಕ್ಕೆ ೫0 ರೂಗೆ ಏರಿಸಲಾಯಿತು. ಪ್ರವೇಶ ಧನವನ್ನು ೨ ರೂಗೆ ಹೆಚ್ಚಿಸಲಾಯಿತು.

೧0.೧೯೯೮ರಲ್ಲಿ ಪೋಷಕರು ೧0000 ದಾತೃ ೫000 ಆಜೀವ ಸದಸ್ಯರು(೨೫0) (೫00 ರಿಂದ ೨೫0ಕ್ಕೆ ಇಳಿಸಿದೆ) ವಾರ್ಷಿಕ ಸದಸ್ಯರು ೫0 ರೂ. ಪೋಷಕ ಸಂಸ್ಥೆ ೨೫000 ದಾತೃಸಂಸ್ಥೆ ೧0000 ಆಜೀವ ಸಂಸ್ಥೆ ೨೫000 ವಾರ್ಷಿಕ ಸದಸ್ಯ ಸಂಸ್ಥೆ ೨೫0. ಸದಸ್ಯತ್ವ ಶುಲ್ಕ ೧0 ರೂ. ಇದೇ ದರಗಳು ಶತಮಾನೋತ್ಸವ ವರ್ಷದಲ್ಲಿ (೨0೧೫ರಲ್ಲಿ) ಜಾರಿಯಲ್ಲಿದೆ.

ಪರಿಷತ್ತಿನ ಸದಸ್ಯವರ್ಗಗಳಲ್ಲಿ ಹೆಸರುಗಳನ್ನು ಬದಲಿಸುವುದರ ಜತೆಗೆ ಸದಸ್ಯತ್ವದ ಚಂದಾವನ್ನು ಹೆಚ್ಚಿಸಲಾಗಿದೆ. ವಿಶೇಷ ಮತ್ತು ಗೌರವ ಸದಸ್ಯವರ್ಗಗಳು ಬಿಟ್ಟು ಹೋದುದನ್ನು ಗಮನಿಸಿ ಹಂಪನಾ ಅವರು ಗೌರವ ಸದಸ್ಯತ್ವವನ್ನು ಹೊಸರೂಪದಲ್ಲಿ ಅಸ್ತಿತ್ವಕ್ಕೆ ತಂದರು.

 

ಪರಿಷತ್ತಿನ  ಗೌರವ ಸದಸ್ಯತ್ವ  (ಫೆಲೋಷಿಪ್)

ಇದನ್ನು ಪರಿಷತ್ತಿನ ಅಧ್ಯಕ್ಷರಾಗಿದ್ದ ಹಂಪನಾ ಅವರ ಕಾಲದಲ್ಲಿ ಪ್ರಾರಂಭಿಸಲಾಯಿತು. ದೇಶದ ಪ್ರತಿಷ್ಠಿತ  ಸಾಹಿತ್ಯಕ ಸಂಸ್ಥೆಗಳಲ್ಲಿ ನಾನಾಬಗೆಯ ಸದಸ್ಯತ್ವಗಳಿರುತ್ತವೆ.  ಸಾಮಾನ್ಯ ಸದಸ್ಯತ್ವ, ಆಜೀವ ಸದಸ್ಯತ್ವ, ಪೋಷಕರು, ಮಹಾಪೋಷಕರು ಇತ್ಯಾದಿ ಹಲವು  ಬಗೆಯ ಸದಸ್ಯತ್ವಗಳನ್ನು ಆಯಾ ಸಂಸ್ಥೆಗಳ ಅಂಗರಚನೆಯ ನಿಯಮಾವಳಿ ಅನುಸಾರ ಇರುತ್ತದೆ.

ಕನ್ಡಡ ಸಾಹಿತ್ಯ ಪರಿಷತ್ತಿನ ಸದಸ್ಯ ವರ್ಗ (೧೯೨೫ರಿಂದ  ೧೯೪0ರವರೆಗೆ) ನಿಬಂಧನೆಗಳ ಪ್ರಕಾರ  ಹೀಗಿತ್ತು

೧. ಮಹಾಪೋಷಕರು  (Grand Patrons)

೨. ಪೋಷಕರು (Patrons)

೩. ಉದ್ಧಾರಕರು (Benefactors)ಕನಿಷ್ಠ ೧000 ರೂ.

೪. ಪ್ರದಾತೃಗಳು(Donors)ಕನಿಷ್ಠ ೫00 ರೂ.

೫. ಆಶ್ರಯದಾತರು(Supporters )ಕನಿಷ್ಠ ೨೫0 ರೂ.

೬. ಸಹಾಯಕರು (Promoters)ಕನಿಷ್ಠ ೧00 ರೂ.

೭. ಆಜೀವ ಸದಸ್ಯರು (Life  members )ಕನಿಷ್ಠ ೫0 ರೂ.

೮. ಸಾಧಾರಣ ಸದಸ್ಯರು (Ordinary members )ಕನಿಷ್ಠ ೬ ರೂ.

೯. ಗೌರವ ಸದಸ್ಯರು  (Honorable  members )

೧0. ವಿಶಿಷ್ಟ ಸದಸ್ಯರು  (Special  members)

೧. ಪರಿಷತ್ತಿಗೆ ಗೌರವ ಸದಸ್ಯರನ್ನಾಗಿ  ಆಯ್ಕೆ ಮಾಡಬೇಕಾದರೆ ಅವರು ಯೋಗ್ಯರೆಂದೂ ಸಮರ್ಥರೆಂದೂ ಹೆಸರು ಪಡೆದು ಕನ್ನಡ ಭಾಷೆಯಲ್ಲಿ  ಪಾಂಡಿತ್ಯವನ್ನು ಹೊಂದಿರುವ ವಿದ್ವಾಂಸರನ್ನು ಪರಿಷತ್ತಿನ ಗೌರವ ಸದಸ್ಯರನ್ನಾಗಿ  ಚುನಾಯಿಸಬಹುದು.

೨.ಪರಿಷತ್ತಿನ ವಿಶಿಷ್ಟ ಸದಸ್ಯರನ್ನಾಗಿ  ಆಯ್ಕೆ ಮಾಡಬೇಕಾದರೆ  ಇತರ ಭಾಷೆಗಳಲ್ಲಿ  ವಿಶೇಷ ಪಾಂಡಿತ್ಯವನ್ನು ಪಡೆದು ಕನ್ನಡದ ಅಭಿವೃದ್ಧಿಯಲ್ಲಿ  ಆಸಕ್ತರಾಗಿರುವ  ವಿದ್ವಾಂಸರನ್ನು ವಿಶಿಷ್ಟ ಸದಸ್ಯರನ್ನಾಗಿ  ಚುನಾಯಿಸಬಹುದು.

೩. ಈ ಎರಡೂ ತರಗತಿಯ ಸದಸ್ಯರು  ಚಂದಾ ಕೊಡಬೇಕಾದುದಿಲ್ಲ.

೪. ಈ ವರ್ಗಗಳಲ್ಲಿ  ೯ ಮತ್ತು ೧0ನೇ ವರ್ಗದ ಗೌರವಿಸಲ್ಪಟ್ಟ ಮತ್ತು ವಿಶಿಷ್ಟ ಸದಸ್ಯರು  ವರ್ಗದವರು ಚಂದಾ ನೀಡಬೇಕಾಗಿಲ್ಲ.  ಆದರೆ ಪರಿಷತ್ತಿನ  ಸಾಧಾರಣ ಅಧಿವೇಶನಕ್ಕೆ ಬಂದಿರುವವರೆಲ್ಲ ಮುಕ್ಕಾಲು ಸಾಲಿನಷ್ಟು ಸದಸ್ಯರು  ಅನುಮತಿಸದ ಹೊರತು  ಯಾರನ್ನೂ ಗೌರವ ಸದಸ್ಯರನ್ನಾಗಿಯಾಗಲಿ ವಿಶಿಷ್ಟ ಸದಸ್ಯರನ್ನಾಗಿಯಾಗಲಿ  ಪರಿಷತ್ತಿಗೆ ಸೇರಿಸಿಕೊಳ್ಳಲಾಗದು.

ಈ ಎರಡು ವಿಶೇಷ  ವರ್ಗಗಳಲ್ಲಿ ೧೯೩೫ರ ನಿಬಂಧನೆಗಳಲ್ಲಿ ಗೌರವ ಸದಸ್ಯರನ್ನು ಆಜೀವ ಗೌರವ ಉಪಾಧ್ಯಕ್ಷರು ಅಥವಾ ಆಜೀವ ಗೌರವ ಸದಸ್ಯರು ಎಂದು  ಕರೆಯಲಾಯಿತು.

೧೯೪0ರ ನಿಬಂಧನೆಗಳಲ್ಲಿ  ೯, ೧0ನೇ  ವರ್ಗದ  ಈ ಎರಡು ವರ್ಗಗಳನ್ನು  (ಗೌರವ ಸದಸ್ಯರು, ವಿಶಿಷ್ಟ ಸದಸ್ಯರು) ತೆಗೆದುಹಾಕಿ ಆ ಸ್ಥಾನದಲ್ಲಿ  (೯) ಅಂಗಸಂಸ್ಥೆಗಳು  (೧0) ವರ್ಗಗಳನ್ನು ಸೇರಿಸಲಾಯಿತು.  ನಿಬಂಧನೆಗಳ …. ಕೈಬಿಟ್ಟ ಈ ವರ್ಗ  ಹೊಸ ರೂಪವನ್ನು ತಾಳಿ  ಹಂಪ ನಾಗರಾಜಯ್ಯನವರ ಕಾಲದಲ್ಲಿ ೧೯೮೫ರಿಂದ  ಜಾರಿಗೆ ಬಂದಿತು.

ಈ ಗೌರವ ಸದಸ್ಯತ್ವವನ್ನು  ಪರಿಷತ್ತಿನ  ಶ್ರೇಷ್ಠ ಸಾಹಿತ್ಯ ಪುರಸ್ಕಾರ ಎಂದು ಪರಿಗಣಿಸಲಾಯಿತು. ಇದು ಒಬ್ಬ ಲೇಖಕನಿಗೆ  ಸಲ್ಲಬಹುದಾದ ಅತ್ಯಂತ ಪ್ರತಿಷ್ಠಿತ ಗೌರವವಾಗಿದೆ. ಹಣದ  ಯಾವ ಸೋಂಕೂ ಇಲ್ಲದೆ ಆದರೆ ಉಳಿದೆಲ್ಲ  ರೀತಿಯ ಮರ್ಯಾದೆಯಿಂದ  ಕೂಡಿದ ಇಂಥ ವಿಶಿಷ್ಟ ಪುರಸ್ಕಾರ ವಿಧಾನ ಬಹುಶಃ ಭಾರತೀಯ ಭಾಷೆಗಳಲ್ಲಿಯೇ ಅಪರೂಪವಾದ  ಸಂಗತಿಯಾಗಿದೆ.

ಭಾರತೀಯ  ಜ್ಞಾನಪೀಠ, ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯ ಸಾಹಿತ್ಯ ಅಕಾಡೆಮಿ, ಮೂರ್ತಿದೇವಿ ಭಾರತೀಯ  ಭಾಷಾ ಪರಿಷತ್, ಕುಮಾರನ್ ಆಶಾ ಸಾಹಿತ್ಯ ಪುರಸ್ಕಾರ, ವಿಶ್ವವಿದ್ಯಾನಿಲಯಗಳು  ನೀಡುವ ಗೌರವ ಡಾಕ್ಟರೇಟ್, ಹಂಪಿ ವಿಶ್ವವಿದ್ಯಾನಿಲಯದ ನಾಡೋಜ ಪ್ರಶಸ್ತಿ ಇತ್ಯಾದಿ  ಭಾರತದ ವಿಶಿಷ್ಟ  ಸಾಲಿಗೆ ಈ ಗೌರವ ಸದಸ್ಯತ್ವ ಪ್ರಶಸ್ತಿಯೂ  ಸೇರುತ್ತದೆ ಎಂದು ಹೇಳಬಹುದು.

ಗೌರವ ಸದಸ್ಯತ್ವ ನೀಡುವ ವಿಧಾನ

೧. ಗೌರವ ಸದಸ್ಯತ್ವದ  ಫಲಕವನ್ನು ನೀಡಲಾಗುವುದು.

 ಈ ಫಲಕವು  ೨ ಅಡಿ ಉದ್ದ ಮತ್ತು ಮೂರು ಅಡಿ ಅಗಲವಾದ  ಅತ್ಯುತ್ತಮವಾದ ತಾಮ್ರದ  ಫಲಕದಲ್ಲಿ ಕೆಳಕಂಡಂತೆ  ಪ್ರಶಸ್ತಿ ವಾಕ್ಯಗಳನ್ನು ಕೆತ್ತಿ ನೀಡಲಾಗುವುದು.

೨. ಈ ರೀತಿ ಗೌರವ ಸದಸ್ಯತ್ವವನ್ನು ಗರಿಷ್ಠ ೫ ಜನ ಸಾಹಿತಿಗಳಿಗೆ ಮಾತ್ರ ನೀಡಲು ಅವಕಾಶವಿದೆ.

೩. ೫ ಜನ ಗೌರವ ಸದಸ್ಯರು ಇರಲೇಬೇಕೆಂದು ಖಾಲಿಯಾದ ಸ್ಥಾನಗಳಿಗೆ ಭರ್ತಿಮಾಡಬೇಕೆಂಬ  ನಿಯಮವಿಲ್ಲ.

೪. ಒಂದು ಸರಳ ಸುಂದರ ಸಮಾರಂಭದಲ್ಲಿ ಗೌರವ ಸದಸ್ಯತ್ವವನ್ನು ನೀಡಲಾಗುವುದು.

೫. ಅದೇ ದಿನ ಬೆಳಗಿನಿಂದ ಸಂಜೆಯವರೆಗೆ ಎರಡು ವಿಚಾರಗೋಷ್ಠಿಗಳಲ್ಲಿ ಮನ್ನಣೆ ಪಡೆದ ಸಾಹಿತಿಯ  ಕೃತಿಗಳನ್ನು ಕುರಿತು ವಿವೇಚಿಸಲಾಗುವುದು.

೬. ಮನ್ನಣೆ ಪಡೆದ ಸಾಹಿತಿಯ ಎಲ್ಲ  ಕೃತಿಗಳನ್ನು   ಪ್ರದರ್ಶಿಸಲಾಗುವುದು.

೭. ಮನ್ನಣೆ ಪಡೆದ ಸಾಹಿತಿ ಕವಿಯಾಗಿದ್ದರೆ, ಆತನ ಕಾವ್ಯಗಳ ವಾಚನವನ್ನು  (ಅಥವಾ ಗಾಯನವನ್ನು) ನಾಟಕಕಾರರಾಗಿದ್ದರೆ ಅವರ ಒಂದು  ನಾಟಕದ  ಪ್ರದರ್ಶನವನ್ನು  ಏರ್ಪಡಿಸಲಾಗುವುದು.

೮. ಸಮಾರಂಭದಲ್ಲಿ  ಆ ಸಾಹಿತಿಯ ಭಾವಚಿತ್ರವನ್ನು  ಅನಾವರಣ ಮಾಡಿ ಸಾಹಿತ್ಯ ಪರಿಷತ್ತಿಗೆ ಒಪ್ಪಿಸಲಾಗುವದು.

೯. ಈ ಗೌರವಕ್ಕೆ ಅರ್ಹರಾದವರನ್ನು ಆಯ್ಕೆ ಮಾಡುವ  ಸಂಪೂರ್ಣ ಅಧಿಕಾರ  ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಗೆ ಇರುತ್ತದೆ.

೧0. ಈ ರೀತಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವಕ್ಕೆ ಪಾತ್ರರಾದ ಸಾಹಿತಿಯ ಬಗ್ಗೆ ಒಂದು  ಸಾಕ್ಷ್ಯಚಿತ್ರವನ್ನು  ಸಿದ್ಧಪಡಿಸಲು ಸರ್ಕಾರಕ್ಕೆ  ತಿಳಿಸಲಾಗುವುದು.

೧೧.  ಆ ಸಾಕ್ಷ್ಯಚಿತ್ರವನ್ನು ಕನ್ನಡ ನಾಡಿನ ಎಲ್ಲ ಚಿತ್ರಮಂದಿರಗಳಲ್ಲೂ  ಒಂದು ವಾರ  ಕಾಲವಾದರೂ ಕಡ್ಡಾಯವಾಗಿ ಪ್ರದರ್ಶಿಸುವಂತೆ ಸರ್ಕಾರದ ವಾರ್ತಾ ಇಲಾಖೆಯಿಂದ ಏರ್ಪಾಟು ಮಾಡಲಾಗುವುದು.

೧೨. ಈ ಪುರಸ್ಕಾರವನ್ನು ಪಡೆದ ಸಾಹಿತಿಯ ಯಾವುದಾದರೊಂದು ಪ್ರಾತಿನಿಧಿಕ  ಕೃತಿಯನ್ನು ಆಯ್ಕೆ ಮಾಡಿ  ಅದರ ಐದು ಸಾವಿರ ಪ್ರತಿಗಳನ್ನು ಮುದ್ರಿಸಿ ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವ  ವ್ಯವಸ್ಥೆ ಮಾಡಲಾಗುವುದು.

೧೩. ಪುರಸ್ಕಾರ ನೀಡಲಾದ ವರ್ಷದಲ್ಲಿ ಪುರಸ್ಕೃತರಾದ  ಸಾಹಿತಿಗಳನ್ನು ಕರ್ನಾಟಕದ  ಬೇರೆ ಬೇರೆ ಭಾಗಗಳಿಗೆ ಕರೆದುಕೊಂಡುಹೋಗಿ ಉಪನ್ಯಾಸ ಕಾರ್ಯಕ್ರಮಗಳನ್ನು  ಪರಿಷತ್ತು ಏರ್ಪಾಡು ಮಾಡುತ್ತದೆ.

Tag: Nibandanegalu Latest

 

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)