ಗಮನಿಸಿ
೧೦೬ನೆಯ ಹಾಗೂ ೨೦೨೧-೨೦೨೨ನೆಯ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ತಿಳುವಳಿಕೆ ಪತ್ರ
ಕೋಟಿ ಸದಸ್ಯತ್ವದ ಕನಸು ನನಸಾಗಿಸಿ: ಇಂದೇ ಸದಸ್ಯರಾಗಿ

ನಾಡೋಜ ಡಾ. ಮಹೇಶ ಜೋಶಿ
ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು

ಗೌರವಾನ್ವಿತ ಕನ್ನಡ ಬಾಂಧವರಿಗೆ ನಮಸ್ಕಾರಗಳು,

'ಕನ್ನಡ’, ಕಸ್ತೂರಿಯ ಪರಿಮಳದಷ್ಟೇ ಆಪ್ಯಾಯಮಾನವಾದ ನುಡಿ. ಕನ್ನಡ ವಿಶ್ವದ ಏಳು ಕೋಟಿ ಜನರು ಮಾತನಾಡುವ ಅಗ್ರ ಭಾಷೆಗಳಲ್ಲಿ ಒಂದು. ಜಗತ್ತಿನಲ್ಲಿ ಹೆಚ್ಚು ಜನರು ಮಾತನಾಡುವ ಭಾಷೆಗಳಲ್ಲಿ ಕನ್ನಡವೂ ಪ್ರಮುಖವಾದುದು ಎಂಬುದು ನಮ್ಮ ಹೆಮ್ಮೆ. ಸಂಪದ್ಭರಿತವಾದ ಕರುನಾಡು ಸಾಹಿತ್ಯ, ಕಲೆ, ಸಂಸ್ಕೃತಿ ಕ್ಷೇತ್ರದಲ್ಲಿ ಉನ್ನತ ಪರಂಪರೆಯನ್ನು ಹೊಂದಿದೆ. ಸಮೃದ್ಧ ಕನ್ನಡನಾಡು ಸರಿಸಾಟಿಯಿಲ್ಲದಷ್ಟು ಸಂಪತ್ಭರಿತವಾಗಿದೆ. ನದಿ, ಖನಿಜ, ಬೆಟ್ಟ ಗುಡ್ಡ, ಸುಂದರ ಕಾನನ, ಸಾಗರದಂಚು, ಕೆರೆಕಟ್ಟೆಗಳು, ಜಲಾಶಯಗಳು, ಸುಂದರ ಹಾಗೂ ಮನಮೋಹಕ ಪ್ರವಾಸಿ ತಾಣಗಳು, ಗುಡಿಗೋಪುರಗಳ ಶ್ರೀಮಂತಿಕೆಯನ್ನು ಹೊಂದಿದೆ. ಬೆಂಗಳೂರು ಮಾಹಿತಿ ತಂತ್ರಜ್ಞಾನ ವಲಯದಲ್ಲಿ ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡಿದೆ. ಇಂತಹ ಕರುನಾಡಿನಲ್ಲಿ ಜನಿಸಿದ ಕನ್ನಡಿಗ ಪುಣ್ಯವಂತ.

ಉತ್ಕೃಷ್ಟವಾದ ಕರುನಾಡಿನ ಮಧುರ ಕನ್ನಡ ಭಾಷೆಯ ಸಂವರ್ಧನೆ ಹಾಗೂ ಸಂರಕ್ಷಣೆಯ ಧ್ಯೇಯ, ಆದರ್ಶಗಳೊಂದಿಗೆ ಮಹಾರಾಜರಾದ ಶ್ರೀ ಕೃಷ್ಣರಾಜ ಒಡೆಯರ್ ಅವರು ೧೦೭ ವರ್ಷಗಳ ಹಿಂದೆ ೧೯೧೫ ಮೇ ೫ರಂದು ಬುಧವಾರ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಹಾಗೂ ಎಲ್ಲ ಕನ್ನಡಪರ ಸಂಸ್ಥೆಗಳಿಗೆ ಮಾತೃಸಂಸ್ಥೆಯಾಗಿ ಪ್ರಾರಂಭದಿಂದಲೂ ಕನ್ನಡ-ಕನ್ನಡಿಗ-ಕರ್ನಾಟಕದ ಸೇವೆಗೆ ಕಂಕಣಬದ್ಧವಾಗಿದೆ.

ಕನ್ನಡ ಭಾಷೆ, ನೆಲ, ಜಲ, ಸಾಹಿತ್ಯ, ಸಂಸ್ಕೃತಿ, ಜಾನಪದ ಕನ್ನಡ-ಕನ್ನಡಿಗ-ಕರ್ನಾಟಕ ಹಾಗೂ ಕನ್ನಡದ ಅಸ್ಮಿತೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿಯೊಂದಿಗೆ ಕನ್ನಡ ಭಾಷೆ, ನೆಲ-ಜಲ ಅಸ್ಮಿತೆಗೆ ತೊಂದರೆ ಬಂದಾಗ ಸರ್ಕಾರ ಹಾಗೂ ಅಪಾರ ಕನ್ನಡಿಗರ ಒತ್ತಾಸೆಯೊಂದಿಗೆ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಚಿಂತನೆ ನನ್ನದಾಗಿದೆ. ಸರ್ಕಾರದ ಕಚೇರಿಗಳಲ್ಲಿ ಕನ್ನಡ ಭಾಷೆಯನ್ನು ಆಡಳಿತ ಭಾಷೆಯಾಗಿ ಬಳಸುವ ಸಂಬಂಧ ಅಧಿಕಾರಿಗಳ ಮನವೊಲಿಸುವ ಅಗತ್ಯವನ್ನು ನಾನು ಮನಗಂಡಿದ್ದೇನೆ. ಸಾಹಿತ್ಯ ಸಮ್ಮೇಳನಗಳನ್ನು ವಿಭಿನ್ನವಾಗಿ ಆಯೋಜಿಸಲು ನಿರ್ಧರಿಸಿದ್ದೇನೆ. ಒಂದೇ ವೇದಿಕೆಯಲ್ಲಿ ಕನ್ನಡ ಭಾಷೆಯ ಅಭಿವೃದ್ಧಿ, ಸಮಸ್ಯೆಗಳ ಕುರಿತು ಚಿಂತನೆ ಮಾಡುವ ವಿಭಿನ್ನಗೋಷ್ಠಿಗಳು ನಡೆಯಲಿವೆ. ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಳ್ಳುವ ನಿರ್ಣಯಗಳನ್ನು ಕಡ್ಡಾಯವಾಗಿ ಜಾರಿಗೆ ತರಲು ನಿರ್ಧರಿಸಲಾಗಿದೆ.

ಇಂತಹ ಬದಲಾವಣೆ, ಹೊಸ ಚಿಂತನೆಗಳನ್ನು ಕಾರ್ಯಗತಗೊಳಿಸಲು ಕೋಟಿ, ಕೋಟಿ ಕನ್ನಡಿಗರ ಪ್ರೀತಿಪೂರ್ವಕ ಬೆಂಬಲ ಅಗತ್ಯವೆಂದು ನನ್ನ ಭಾವನೆ. ನೂರಾರು ಮಹಾನುಭಾವರು ಶ್ರಮದಿಂದ ಕಟ್ಟಿರುವ, ಉನ್ನತವಾದ ಪರಂಪರೆಯನ್ನು ಹೊಂದಿರುವ, ವಿಶ್ವಮಾನ್ಯವಾದ ಕನ್ನಡ ಸಾಹಿತ್ಯ ಪರಿಷತ್ತಿಗೆ ಪ್ರಪಂಚದಲ್ಲಿನ ಪ್ರತಿಯೊಬ್ಬ ಕನ್ನಡಿಗನೂ ಸದಸ್ಯನಾಗುವ ಮೂಲಕ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ಕೈಂಕರ್ಯ ಆಗಬೇಕಾಗಿದೆ. ಇದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಸಂಖ್ಯೆಯನ್ನು ವರ್ಧಿಸಲು ನಾನು ಕಂಕಣಬದ್ಧನಾಗಿದ್ದೇನೆ.

ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದ ಇವುಗಳ ರಕ್ಷಣೆ, ಪ್ರಸಾರ ಮತ್ತು ಅಭಿವೃದ್ಧಿ ಕುರಿತು ಮೂಲ ಧ್ಯೇಯೋದ್ದೇಶಗಳೊಂದಿಗೆ ಕನ್ನಡ-ಕನ್ನಡಿಗ-ಕರ್ನಾಟಕ ಹಿತರಕ್ಷಣೆಯ ಜವಾಬ್ದಾರಿಯನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡುವ ಸದುದ್ದೇಶದಿಂದ ಹಾಗೂ ಪ್ರಸ್ತುತ ಕಾಲಘಟ್ಟಕ್ಕೆ ತಕ್ಕಂತೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಪರಿಷತ್ತಿನಲ್ಲಿ ಆಡಳಿತಾತ್ಮಕ ಸುಧಾರಣೆ ತರುವ ಸಲುವಾಗಿ ಒಂದು ಕೋಟಿ ಆಜೀವ ಸದಸ್ಯತ್ವವನ್ನು ನೋಂದಾಯಿಸುವುದು ನನ್ನ ಗುರಿ. ಆಜೀವ ಸದಸ್ಯತ್ವ ಶುಲ್ಕವನ್ನು ೫೦೦ ರೂ. ಗಳಿಂದ ೨೫೦ ರೂ.ಗಳಿಗೆ ಇಳಿಸಿದ್ದೇನೆ. ಸದಸ್ಯರಿಗೆ ಜೀವಮಾನವಿಡೀ ಬಳಕೆಗೆ ಬರುವ ಸುಂದರ ಸ್ಮಾರ್ಟ್ ಕಾರ್ಡ್ ನೀಡಲಾಗುವುದು. ಒಂದು ಕೋಟಿ ಕನ್ನಡಿಗರು ಪ್ರತಿಷ್ಠಿತ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಬೇಕೆಂದು ವಿನಯದಿಂದ ಪ್ರಾರ್ಥಿಸುತ್ತೇನೆ. ಸದಸ್ಯರಾಗಲು ವಿಶೇಷವಾಗಿ ರೂಪಿಸಲಾಗಿರುವ ಈ ಆ್ಯಪ್ ಅನ್ನು ಬಳಸಿ ನೀವಿರುವ ಸ್ಥಳದಿಂದಲೇ ಸದಸ್ಯರಾಗುವ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದೇನೆ.

ಕನ್ನಡ ಉಳಿಸುವ ಕಾರ್ಯದಲ್ಲಿ ಅದರಲ್ಲೂ ಕನ್ನಡ ಶಾಲೆಗಳು ಮುಚ್ಚದಿರುವ ಹಾಗೆ ಸರ್ಕಾರದ ಮೇಲೆ ಒತ್ತಡ ತರಲು ಮತ್ತು ಕನ್ನಡ ಶಾಲೆಗಳ ಪುನಶ್ಚೇತನಕ್ಕಾಗಿ ಹಾಗೂ ಉದ್ಯೋಗಾವಕಾಶದಲ್ಲಿ ಕನ್ನಡಿಗರಿಗೆ ಆದ್ಯತೆ ಕಲ್ಪಿಸಲು ನಾನು ಬದ್ಧನಾಗಿದ್ದೇನೆ.

ಬನ್ನಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿ, ಕನ್ನಡ ಭಾಷೆಯ ಹಿರಿಮೆ, ಗರಿಮೆಯನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸಲು ಮತ್ತು ಕನ್ನಡ ತಾಯಿ ಭುವನೇಶ್ವರಿಯ ರಥವನ್ನು ಒಟ್ಟಾಗಿ ಮುನ್ನಡೆಸಲು ಕೈ ಜೋಡಿಸಿ.

ಗೌರವಪೂರ್ವಕ ವಂದನೆಗಳು.
ನಾಡೋಜ ಡಾ. ಮಹೇಶ ಜೋಶಿ
ಅಧ್ಯಕ್ಷರು
ಕನ್ನಡ ಸಾಹಿತ್ಯ ಪರಿಷತ್ತು

ನಮ್ಮ ಪರಿಷತ್ತು
ಕನ್ನಡ ಭಾಷೆ, ಸಾಹಿತ್ಯ, ಕಲೆ, ಜನಪದ, ಸಂಸ್ಕೃತಿಗಳ ಸಂವರ್ಧನೆ ಹಾಗೂ ಸಂರಕ್ಷಣೆಯ ಮಹದಾಶಯದೊಂದಿಗೆ ದಿನಾಂಕ ೫-೫-೧೯೧೫ರಲ್ಲಿ ಸ್ಥಾಪನೆಯಾದ ಕನ್ನಡಿಗರ ಸಾಂಸ್ಕೃತಿಕ ಮೇರು ಸಂಸ್ಥೆಯೇ ಕನ್ನಡ ಸಾಹಿತ್ಯ ಪರಿಷತ್ತು. ಕನ್ನಡ ಭಾಷೆಯಲ್ಲಿ ವಿವಿಧ ಗ್ರಂಥಗಳನ್ನು ರಚಿಸುವವರ ಪ್ರೋತ್ಸಾಹಕ್ಕಾಗಿ, ಸ್ವತಂತ್ರಾಧಿಕಾರವುಳ್ಳ ಪರಿಷತ್ತೊಂದು ಇರಬೇಕು ಮತ್ತು ಸರ್ಕಾರದವರು ಆ ಪರಿಷತ್ತನ್ನು ಅಂಗೀಕರಿಸಿ ಅದಕ್ಕೆ ವಿಶೇಷ ಸಹಾಯ ಮಾಡುವುದು ಉಚಿತ ಎಂದು ೧೯೧೪ರಲ್ಲಿ ಅಂದಿನ ಮೈಸೂರು ಸಂಸ್ಥಾನದ ಸಂಪದಭ್ಯುದಯ ಸಮಾಜ ತನ್ನ ವಾರ್ಷಿಕ ಅಧಿವೇಶನದಲ್ಲಿ ಕೈಗೊಂಡ ಮಹತ್ವದ ನಿರ್ಧಾರ ಕನ್ನಡ ಸಾಹಿತ್ಯ ಪರಿಷತ್ತಿನ ಉಗಮಕ್ಕೆ ಕಾರಣವಾಯಿತು. ಆಗ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು. ಬೆಂಗಳೂರಿನ ಶಂಕರಪುರ ಬಡಾವಣೆಯಲ್ಲಿ ಚಿಕ್ಕ ಕೊಠಡಿಯೊಂದರಲ್ಲಿ ಆರಂಭವಾದ ಅಂದಿನ ಕರ್ಣಾಟಕ ಸಾಹಿತ್ಯ ಪರಿಷತ್ತೇ ಇಂದು ‘ಕನ್ನಡ ಸಾಹಿತ್ಯ ಪರಿಷತ್ತು’ಆಗಿ ಹೆಮ್ಮರವಾಗಿ ಬೆಳೆದಿದೆ. ರಾಜ್ಯಾದ್ಯಂತ ಅಷ್ಟೇಕೆ ಹೊರನಾಡಿನಲ್ಲೂ ತನ್ನ ಬಿಳಿಲುಗಳನ್ನು ಬಿಟ್ಟಿದೆ.

ಪರಿಷತ್ತಿನ ಸುದ್ದಿ ಹಾಗೂ ಪ್ರಕಟಣೆಗಳು