ಪರಿಷತ್ತಿನ ಸುದ್ದಿ
ಪ್ರಪಂಚದಾದ್ಯಂತ ಇರುವ ಕನ್ನಡಿಗರನ್ನು ಒಂದುಗೂಡಿಸುವ ಮಹತ್ವದ ಕಾರ್ಯಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದಲ್ಲಿರುವ ಮೆಲ್ಬೋರ್ನ್ ನಗರದಲ್ಲಿ ಸ್ಥಾಪಿಸಲಾದ ಕನ್ನಡ ಭವನವನ್ನುಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಇಂದು ಲೋಕಾರ್ಪಣೆ ಮಾಡಿದರು.
ಆಸ್ಟ್ರೇಲಿಯಾದಲ್ಲಿರುವ ಕನ್ನಡಿಗರ ಆಹ್ವಾನ ಮೇರೆಗೆ ಅಲ್ಲಿ ನಡೆಯುತ್ತಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತೆರಳಿದ  ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿ ನೆಲೆ ನಿಂತ ಕನ್ನಡಿಗರು ನಿರ್ಮಾಣ ಮಾಡಿರುವ ಕನ್ನಡ ಭವನವನ್ನು ಇಂದು ಉದ್ಘಾಟನೆ ಮಾಡಿದರು.  ಕನ್ನಡದ ಕಾರ್ಯಚಟುವಟಿಕೆಗಳನ್ನು ವಿದೇಶದಲ್ಲಿಯೂ ವಿಸ್ತರಿಸುತ್ತಿರುವ ಅನಿವಾಸಿ ಕನ್ನಡಿಗರ ಭಾಷಾ ಪ್ರೇಮ ಹಾಗೂ ನಾಡು ನುಡಿಯ ಮೇಲಿರುವ ಅಭಿಮಾನ ಈ ಕನ್ನಡ ಭವನವನ್ನು ನೋಡಿದಾಗ ಅರ್ಥವಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ವಿದೇಶದಲ್ಲಿ ಇರುವ ಕನ್ನಡ ಸಂಘಗಳನ್ನು ಪರಿಷತ್ತಿನ ಅಮಗ ಸಂಸ್ಥೆಯನ್ನಾಗಿಸಿಕೊಂಡು ವಿದೇಶದಲ್ಲಿಯೂ ಕನ್ನಡ ಕಟ್ಟುವ ಕಾಯಕಲ್ಪದಲ್ಲಿ ತೊಡಗಿಕೊಳ್ಳಲಿದೆ. ರಾಜ್ಯದಲ್ಲಿ ಅನಿವಾಸಿ ಕನ್ನಡಿಗರ ಪ್ರತಿನಿಧಿಯಾಗಿ ಕನ್ನಡ ಸಾಹಿತ್ಯ ಪರಿಷತ್ತು ಕೆಲಸ ಮಾಡಲಿದೆ ಎನ್ನುವ ಮಾತನ್ನು ಈ ಸಂದರ್ಭದಲ್ಲಿ ಮೆಲ್ಬೋರ್ನ್ ಕನ್ನಡ ಭವನವನ್ನು ಉದ್ಘಾಟಿಸಿದ ಕನ್ನಡ ಸಾಹಿತ್ಯ  ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದರು.
  ಅನಿವಾಸಿ ಕನ್ನಡಿಗರು ಸೇರಿ ಕಟ್ಟಿಕೊಂಡಿರುವ ಕನ್ನಡದ ಸಂಘಟನೆಯಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಸಾಹಿತ್ಯದ ಮೂಲಕ ನಾಡು ನುಡಿಯನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದೆ. ಅದರಂತೆ ಇಲ್ಲಿನ ಕನ್ನಡಿಗರು ಪ್ರಪಂಚದಾದ್ಯಂತ ನಮ್ಮ ಭಾಷೆ, ಸಂಸ್ಕೃತಿಯ ಮೆರಗನ್ನು ಕಾಪಾಡಿಕೊಳ್ಳುವಲ್ಲಿ ಗಣನೀಯ ಕೆಲಸ ಮಾಡುತ್ತಿದ್ದಾರೆ. ಇಲ್ಲಿಯ ಕನ್ನಡಿಗರು ತಮ್ಮ ಉಪಜೀವನ ಕಟ್ಟಿಕೊಳ್ಳುವುದರ ಜೊತೆಗೆ ಇಲ್ಲಿಯ ಭಾಗವಾಗಿದ್ದಾರೆ. ಕಳೆದ ೩೭ ವರ್ಷಗಳಿಂದ ಸಮಾಜ ಸೇವೆ ಮಾಡುತ್ತಿರುವ ಮೆಲ್ಬೋರ್ನ್ ಕನ್ನಡ ಸಂಘವು ಕಳೆದ ಅನೇಕ ವರ್ಷಗಳಿಂದ ಕನ್ನಡದ ಕಾಯಕದಲ್ಲಿ ತೊಡಗಿಸಿಕೊಂಡಿದೆ. ಪ್ರಸ್ತುತ ಸ್ವಂತ ಕಟ್ಟಡವನ್ನು ಒಳಗೊಂಡಿದ್ದು ಅದನ್ನು ಕನ್ನಡ ಕೆಲಸಗಳಿಗಾಗಿ ಅನಾವರಣ ಮಾಡಿರುವುದು ಹೆಮ್ಮೆಯ ಸಂಗತಿ ಎಂದು ನಾಡೋಜ ಡಾ. ಮಹೇಶ ಜೋಶಿ ಬಣ್ಣಿಸಿದರು.
ಮೆಲ್ಬೋರ್ನ್ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಚಂದ್ರ ಬೆಂಗಳೂರು ಮಾತನಾಡಿ ಕನ್ನಡಿಗರಿಂದ ನಿರ್ಮಾಣವಾದ ಈ ಕನ್ನಡ ಭವನವು ಕನ್ನಡಿಗರ ಅನಧಿಕೃತ ರಾಯಬಾರಿ ಕಚೇರಿಯಾಗಿ ಕಾರ್ಯನಿರ್ವಹಿಸಲಿದೆ. ಅನಿವಾಸಿ ಕನ್ನಡಿಗರನ್ನು ಒಂದೆಡೆ ಸೇರಿಸುವ ಮಹತ್ವದ ಕೆಲಸವನ್ನು ಮಾಡಲಾಗುತ್ತಿದೆ. ಕನ್ನಡ ಸಾಹಿತ್ಯ ಸಂಸ್ಕೃತಿ, ಕಲೆ ಜನಪದ ಮುಂದಿನ ಮಂದಿನ ಪೀಳಿಗೆಗೆ ತಿಳಿಸುವ ಹಿನ್ನೆಲೆಯಲ್ಲಿ ಕನ್ನಡ ಭವನದ ಕಾರ್ಯಪ್ರವೃತ್ತವಾಗಲಿದೆ ಎಂದು ಹೇಳಿದರು.
  ಈ ಸಂದರ್ಭದಲ್ಲಿ ಮೆಲ್ಬೋರ್ನ್ ಫೆಡರಲ್ ಮೆಂಬರ್ ಕ್ಯಾಸೆಂಡ್ರಾ ಫರ್ನಾಡೋ, ಆಸ್ಟ್ರೇಲಿಯಾದ ಗೃಹ ಮತ್ತು ನಗರಾಭಿವೃದ್ಧಿ ಸಚಿವಾರದ ಕಾಲಿನ್ ಬ್ರೂಕ್ಸ್, ಮೆಲ್ಬೂರ್ನ್ ಕನ್ನಡ ಸಂಘದ ಉಪಾಧ್ಯಕ್ಷರಾದ ಶ್ರೀ ಗಂಗಾಧರ ಬೇವಿನಕೊಪ್ಪ, ಕಾರ್ಯದರ್ಶಿ ಶ್ರೀ  ಶ್ರೀನಿವಾಸ್ ಶರ್ಮಾ ಹಾಗೂ ಮೆಲ್ಬೂರ್ನ್ ಕನ್ನಡ ಸಂಘದ ಸದಸ್ಯರು ಮತ್ತು ಆಸ್ಟ್ರೇಲಿಯಾದಲ್ಲಿ ಇರುವ ಕನ್ನಡಿಗರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.    
Date: Jul 08, 2023
ಆದಿ ಕವಿ ಅಮೋಘವರ್ಷ ನೃಪತುಂಗರಿಂದ ಆರಂಭವಾಗಿ, ರನ್ನ,ಪಂಪರಿಂದ ಹಿಡಿದು, 8 ಜನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರನ್ನು ಹೊಂದಿರುವ ದೇಶದ ಏಕೈಕ ಭಾಷೆ ನಮ್ಮ ಕನ್ನಡ ಎಂಬುದು ನಮಗೆ ಹೆಮ್ಮೆಯ ವಿಷಯ ಎಂದು ಮುಖ್ಯಮಂತ್ರಿ... ಹಾವೇರಿ: ಆದಿ ಕವಿ ಅಮೋಘವರ್ಷ ನೃಪತುಂಗರಿಂದ ಆರಂಭವಾಗಿ, ರನ್ನ,ಪಂಪರಿಂದ ಹಿಡಿದು, 8 ಜನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರನ್ನು ಹೊಂದಿರುವ ದೇಶದ ಏಕೈಕ ಭಾಷೆ ನಮ್ಮ ಕನ್ನಡ ಎಂಬುದು ನಮಗೆ ಹೆಮ್ಮೆಯ ವಿಷಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಹೇಳಿದ್ದಾರೆ. ಇಂದು ಏಲಕ್ಕಿ ನಾಡು ಹಾವೇರಿಯಲ್ಲಿ86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ಕನ್ನಡ ಅತ್ಯಂತ ಶ್ರೀಮಂತ ಭಾಷೆಯಾಗಿದ್ದು, ಇದಕ್ಕೆ ಆಪತ್ತು ತರುವ ಯಾವುದೇ ಶಕ್ತಿ ವಿಶ್ವದಲ್ಲಿ ಇನ್ನೂ ಹುಟ್ಟಿಲ್ಲ ಮತ್ತು ಹುಟ್ಟುವುದೂ ಇಲ್ಲ ಎಂದು ಹೇಳಿದರು. ಇಡೀ ದೇಶದಲ್ಲಿ ಕನ್ನಡಕ್ಕೆ ಮಾತ್ರ ಎಂಟು ಜ್ಞಾನಪೀಠ ಪ್ರಶಸ್ತಿಗಳು ದೊರೆತಿವೆ. ದೇಶದ ಬೇರೆ ಯಾವ ಭಾಷೆಗೂ ಸಹ ಇಷ್ಟು ಜ್ಞಾನಪೀಠ ಪ್ರಶಸ್ತಿಗಳು ದೊರೆತಿಲ್ಲ. ಒಂದು ಭಾಷೆ ಒಂದು ಸಂಸ್ಕೃತಿ ಬೆಳೆಯಬೇಕಂದರೇ ಇದುವರೆಗೆ ನಡೆದ ಬಂದ ದಾರಿಯ ಸಿಂಹಾವಲೋಕನ ಮಾಡಬೇಕಾಗುತ್ತದೆ. ಆಗ ಅದು ಮುಂದಿನ ದಾರಿಯನ್ನು ನಿರ್ಧರಿಸುತ್ತದೆ ಎಂದರು. ಇಬ್ಬರು ಸರಸ್ವತಿ ಸಮ್ಮಾನ್ ಪುರಸ್ಕೃತರು ಸಹ ನಮ್ಮ ಕನ್ನಡ ನಾಡಿನಲ್ಲಿರುವುದು ವಿಶೇಷವಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಇದನ್ನು ಓದಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಾವೇರಿಯಲ್ಲಿ ಚಾಲನೆ, ಅಕ್ಷರ ಜಾತ್ರೆ ಆರಂಭ: ಕಲಾ ತಂಡಗಳ ಮೆರುಗು ಕನ್ನಡ ಇಡೀ ಜಗತ್ತಿನಲ್ಲಿಅತ್ಯಂತ ಪ್ರಾಚೀನ ಭಾಷೆ. ಇದರರ್ಥ ಕನ್ನಡಿಗರ ಬದುಕು ಪುರಾತನ ಹಾಗೂ ಶ್ರೇಷ್ಠ. ಜಗತ್ತಿನಲ್ಲಿ ಕನ್ನಡ ಸಂಸ್ಕೃತಿ ಅತ್ಯಂತ ಪವಿತ್ರ ಮತ್ತು ಪುರಾತನ. ಇಂಥ ಕನ್ನಡದ ಕಂಪು ಭಾರತದಲ್ಲಿ ಮತ್ತೆ ಹೆಮ್ಮರವಾಗಿ ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು. ಕನ್ನಡಕ್ಕೆ ಆಪತ್ತು ತರುವ ಶಕ್ತಿ ಇನ್ನೂ ಹುಟ್ಟಿಲ್ಲ, ಹುಟ್ಟುವುದೂ ಇಲ್ಲ: ಸಿಎಂ ಬೊಮ್ಮಾಯಿ
Date: Jan 10, 2023

ಬೆಂಗಳೂರು : ಹಾವೇರಿಯಲ್ಲಿ ೮೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಜನವರಿ ೬, ೭ ಮತ್ತು ೮ರಂದು ಅಂದರೆ ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಹಿರಿಯ ಕವಿ ಡಾ. ದೊಡ್ಡರಂಗೇಗೌಡರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಇದರ ಆಹ್ವಾನ ಪತ್ರಿಕೆಯನ್ನು ಡಿಸೆಂಬರ್ ೨೪ರಂದು ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರು ಬಿಡುಗಡೆ ಮಾಡಿದ್ದಾರೆ. ಈ ಆಹ್ವಾನ ಪತ್ರಿಕೆಯು ಕೆಳ ಕಂಡ ವೈಶಿಷ್ಟ್ಯಗಳನ್ನು ಹೊಂದಿದ್ದು ಇದನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿ ಸಾರ್ವಜನಿಕರ ಗಮನಕ್ಕೆ ತರಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ವಿನಂತಿಸಿ ಕೊಂಡಿದ್ದಾರೆ.


ಆಹ್ವಾನ ಪತ್ರಿಕೆ ನೋಡಲು/ಡೌನ್ ಲೋಡ್ ಮಾಡಲು ಇಲ್ಲಿ ಒತ್ತಿ 

೧. ಆಹ್ವಾನ ಪತ್ರಿಕೆಯಲ್ಲಿ ಇದೇ ಮೊದಲ ಸಲ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ಮಾತೃಗಳಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ. ವಿಶ್ವೇಶ್ವರಯ್ಯ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ಅವರ ಭಾವಚಿತ್ರಗಳನ್ನು ಪ್ರಕಟಿಸುವ ಮೂಲಕ ಅವರಿಗೆ ಗೌರವವನ್ನು ಸಲ್ಲಿಸಲಾಗಿದೆ.

೨. ಕನ್ನಡ ತಾಯಿಯ ಭುವನೇಶ್ವರಿಯ ಚಿತ್ರವು ಮುಖಪುಟದಲ್ಲಿದ್ದು ಕನ್ನಡ ಬಾವುಟದ ಜೊತೆಯಲ್ಲಿ ಭಕ್ತಿ ಭಾವ ಮೂಡಿ ಬರುವ ಭಂಗಿಯ ಈ ಚಿತ್ರವು ಆಹ್ವಾನ ಪತ್ರಿಕೆಯ ವಿಶೇಷತೆಯನ್ನು ಹೆಚ್ಚು ಮಾಡಿದೆ.

೩. ಆಹ್ವಾನ ಪತ್ರಿಕೆಯ ಮುಖಪುಟದಲ್ಲಿಯೇ ‘‘ಇದು ಕನ್ನಡಿಗರೆಲ್ಲರ ಹಬ್ಬ ಎಲ್ಲಾ ಕನ್ನಡಿಗರೂ ಸಮಾನರು” ಎನ್ನುವ ವಾಕ್ಯವಿದ್ದು, ಇದು ಜಾತಿ ಧರ್ಮಗಳನ್ನು ಮೀರಿದ ಕನ್ನಡದ ಹಬ್ಬ ಎನ್ನುವುದನ್ನು ಸಾಕ್ಷೀಕರಿಸಿ ಕನ್ನಡವನ್ನು ಹೊರತು ಪಡಿಸಿದ ಯಾವುದೇ ಶಿಷ್ಟಾಚಾರಕ್ಕೂ ಸಮ್ಮೆಳನದಲ್ಲಿ ಮಹತ್ವವಿಲ್ಲ ಎನ್ನುವುದನ್ನು ಸೂಚಿಸಿದೆ.

೪. ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಮಹತ್ವ ನೀಡಿ ಕಾರ್ಯಕ್ರಮವನ್ನು ನಿಗದಿತ ಸಮಯದಲ್ಲಿ ಮುಗಿಸುವ ಸ್ಪಷ್ಟ ಆಶಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಹೊಂದಿದ್ದು ಇದೇ ಮೊದಲ ಸಲ ಪ್ರತಿಯೊಬ್ಬರೂ ಮಾತನಾಡುವ ಸಮಯವನ್ನು ಸೂಚಿಸಲಾಗಿದ್ದು ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲಾಗುತ್ತದೆ.

೫. ಇಡೀ ಆಹ್ವಾನ ಪತ್ರಿಕೆಯ ವಿನ್ಯಾಸವು ಕನ್ನಡದ ಧ್ವಜದ ನೆನಪನ್ನು ತರುವಂತಿದ್ದು, ಇದರ ಸ್ವರೂಪವೇ ಕನ್ನಡಮಯವಾಗಿದೆ.

೬. ಇದೇ ಮೊಟ್ಟ ಮೊದಲ ಸಲ ಪ್ರಧಾನ ವೇದಿಕೆಗೆ ‘ಕನಕ-ಶರೀಫ-ಸರ್ವಜ್ಞ’ ಮೂವರ ಹೆಸರನ್ನು ಇಡಲಾಗಿದ್ದು “ಸಾಮರಸ್ಯದ ಭಾವ-ಕನ್ನಡದ ಜೀವ” ಎನ್ನುವ ಧ್ಯೇಯ ವಾಕ್ಯವನ್ನೂ ನೀಡಲಾಗಿದೆ. ಇದು ಸಮ್ಮೇಳನ ಹೊಂದಿರುವ ಉನ್ನತ ಆಶಯದ ದ್ಯೋತಕವಾಗಿದೆ.

೭. ಪ್ರಧಾನ ವೇದಿಕೆ ಎನ್ನುವ ಪರಿಕಲ್ಪನೆಯನ್ನು ಮೀರಿ ಇದೇ ಮೊದಲ ಸಲ ಮೂರು ಸಮಾನ ವೇದಿಕೆಗಳನ್ನು ರೂಪಿಸಲಾಗಿದೆ. ಹೀಗಾಗಿ ಕನ್ನಡ ಸಾಹಿತ್ಯ ಸಮ್ಮೇಳನಗಳ ಇತಿಹಾಸದಲ್ಲಿಯೇ ಇದೇ ಮೊದಲ ಸಲ ೩೨ ಗೋಷ್ಠ್ಠಿಗಳು ಏರ್ಪಾಟಾಗಿದ್ದು ಒಟ್ಟು ೧೫೪ ಗಣ್ಯರು ಭಾಗವಹಿಸುತ್ತಿದ್ದಾರೆ. ಇದು ನಿಜಕ್ಕೂ ದಾಖಲೆಯಾಗಿದ್ದು ಹಿಂದಿನ ಸಮ್ಮೇಳನಗಳಲ್ಲಿ ಇದ್ದ ಗೋಷ್ಠಿ ಮತ್ತು ಭಾಗವಹಿಸಿದವರ ಗಣ್ಯರ ಪಟ್ಟಿ ನೋಡಿದರೆ ಇದರ ಮಹತ್ವ ಅರಿವಾಗುತ್ತದೆ.

ಸ್ಥಳ   ಒಟ್ಟು ಗೋಷ್ಠಿಗಳು ಭಾಗವಹಿಸಿದವರು
ಕಲಬುರಗಿ ೨೧   ೯೪
ಧಾರವಾಡ ೨೨ ೮೯
ಮೈಸೂರು ೨೦  ೧೧೦
ರಾಯಚೂರು ೧೭  ೯೫
ಶ್ರವಣಬೆಳಗೊಳ ೧೪  ೫೫
ಗಂಗಾವತಿ ೧೨ ೫೯

                         

೮. ಕವಿಗೋಷ್ಠಿಗಳಲ್ಲಿ ಹಿರಿಯ ಕವಿಗಳನ್ನು ವಿಶೇಷ ಆಹ್ವಾನಿಸಿ ಹೊಸ ಪೀಳಿಗೆಯ ಕವಿ, ಕವಯತ್ರಿಯರಿಗೆ ಆದ್ಯತೆ ನೀಡಲಾಗಿದೆ. ಇದು ಹೊಸ ಪೀಳಿಗೆಯ ಅಭಿವ್ಯಕ್ತಿಗೆ ಕನ್ನಡ ಸಾಹಿತ್ಯ ಪರಿಷತ್ ನೀಡುವ ಮಹತ್ವವನ್ನು ಸೂಚಿಸುತ್ತದೆ. ಕರ್ನಾಟಕದ ೩೧ ಜಿಲ್ಲೆಗಳಿಗೆ ಮಾತ್ರವಲ್ಲದೆ ಎಂಟು ಜನ ಹೊರ ನಾಡ ಕನ್ನಡಿಗರಿಗೂ ಕೂಡ ಕವನ ವಾಚಿಸುವ ಅವಕಾಶವನ್ನು ನೀಡಲಾಗಿದೆ. ಕನ್ನಡ ಸಾಹಿತ್ಯದ ಹೊಸ ಒಲವುಗಳು ಗೋಷ್ಠಿಯಲ್ಲಿ ಕೂಡ  ಯುವ ಬರಹಗಾರರ ತುಡಿತಗಳ ಕುರಿತು ಚರ್ಚೆ ನಡೆಯಲಿದೆ.

೯. ಗೋಷ್ಠಿಗಳಲ್ಲಿ ಈವರೆಗೂ ಚರ್ಚೆಯಾಗದ ವಿಷಯಗಳ ಕುರಿತು ಆದ್ಯತೆಯನ್ನು ನೀಡುರುವುದು ಮಹತ್ವದ ಸಂಗತಿಯಾಗಿದೆ.

ಅ. ಕನ್ನಡದಲ್ಲಿ ಕಾನೂನು ಸಾಹಿತ್ಯ ಎನ್ನುವ ವಿಶೇಷ ವಿಷಯದ ಕುರಿತು ಗೋಷ್ಠ್ಟಿ ಏರ್ಪಾಟಾಗಿದ್ದು ತಮ್ಮ ಕ್ಷೇತ್ರದಲ್ಲಿ ಕಟ್ಟುನಿಟ್ಟಾಗಿ ಕನ್ನಡವನ್ನು ಅನುಷ್ಠಾನಕ್ಕೆ ತಂದ ನ್ಯಾಯಾಧೀಶರು ಮತ್ತು ವಕೀಲರು ಇದೇ ಮೊದಲ ಸಲ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕವು ಕಾನೂನಾದರೆ ಜಿಲ್ಲಾ ನ್ಯಾಯಾಲಯ, ಅಧೀನ ವಿಚಾರಣಾ ನ್ಯಾಯಾಲಯಗಳು ಕಡ್ಡಾಯವಾಗಿ ಕನ್ನಡ ಭಾಷೆಯಲ್ಲೇ ತೀರ್ಪು ಮತ್ತು ಆದೇಶಗಳನ್ನು ನೀಡಬೇಕಾದ್ದರಿಂದ ಈ ಗೋಷ್ಠಿ ಮಹತ್ವಪೂರ್ಣವಾಗಿದೆ.

ಆ. ರಾಷ್ಟ್ರೀಯ ಶಿಕ್ಷಣ ನೀತಿಯ ಹಿನ್ನೆಲೆಯಲ್ಲಿ ‘ಶಿಕ್ಷಣದಲ್ಲಿ ಕನ್ನಡದ ಅಸ್ಮಿತೆ’ ಎನ್ನುವ ಗೋಷ್ಠಿ ರೂಪುಗೊಂಡಿದ್ದು ಇದು ಒಟ್ಟಾಗಿ ಕನ್ನಡ ಶಾಲೆಗಳು ಮತ್ತು ಕನ್ನಡ ಮಾಧ್ಯಮದ ಕುರಿತಾಗಿ ವಿಸ್ತೃತವಾದ ಚರ್ಚೆ ನಡೆಯಲಿದೆ.

ಇ. ಸಮ್ಮೇಳನಾಧ್ಯಕ್ಷರ ಜೊತೆಗಿನ ಮಾತು-ಮಂಥನದಲ್ಲಿ ಸಮಾಜದ ಎಲ್ಲಾ ಸ್ತರದವರಿಗೆ ಮಹತ್ವ ನೀಡಲಾಗಿದ್ದು, ಸಮ್ಮೇಳನಾಧ್ಯಕ್ಷರ ಸಾಧನೆಯ ಎಲ್ಲಾ ಮುಖಗಳನ್ನು ಈ ಮೂಲಕ ಅನಾವರಣಗೊಳಿಸಲು ಪ್ರಯತ್ನಿಸಲಾಗುತ್ತಿದೆ.

ಈ. ‘ಅನ್ನದಾತರ ಅಳಲು-ಅಪೇಕ್ಷೆಗಳು’ ಗೋಷ್ಠಿಯಲ್ಲಿ ಕೃಷಿಕರ ನೈಜ ಸ್ಥಿತಿಯ ಜೊತೆಗೆ ಕೃಷಿ ವಿಶ್ವವಿದ್ಯಾಲಯಗಳು ನೀಡ ಬಹುದಾದ ಕೊಡುಗೆಗಳ ಕುರಿತು ಚರ್ಚೆ ನಡೆಯಲಿದ್ದು, ಈ ಕ್ಷೇತ್ರದ ಎಲ್ಲಾ ನೆಲೆಗಳೂ ಇಲ್ಲಿ ಚರ್ಚಿತವಾಗಲಿವೆ.

ಉ. ‘ವರ್ತಮಾನದಲ್ಲಿ ಮಹಿಳೆ’ ಗೋಷ್ಠಿಯಲ್ಲಿ ಮಹಿಳೆಯರ ಸಾಹಿತ್ಯ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿನ ಸಾಧನೆಗಳ ಜೊತೆಗೆ ಗ್ರಾಮೀಣ ಮಹಿಳೆಯರ ಸಾಧನೆಗಳಿಗೂ ಕೂಡ ಮಹತ್ವ ನೀಡಲಾಗಿದೆ. ‘ಮಕ್ಕಳ ಸಾಹಿತ್ಯ’ ಕುರಿತ ಗೋಷ್ಠಿಯಲ್ಲಿ ಮಕ್ಕಳ ಸಾಹಿತ್ಯದ ಜೊತೆಗೆ ವಿಶೇಷ ಚೇತನ ಮಕ್ಕಳ ಶೈಕ್ಷಣಿಕ ವಿಕಾಸದ ಕುರಿತೂ ಚರ್ಚೆ ನಡೆಯುತ್ತಿರುವುದು ಮುಖ್ಯವಾಗಿದೆ.

ಊ. ‘ದಮನಿತರ ಲೋಕ’ದ ಸಬಲೀಕರಣಕ್ಕೆ ಮಹತ್ವ ನೀಡುವ ಗೋಷ್ಠಿ ಹೋರಾಟ ಮತ್ತು ಸಾಂಸ್ಕೃತಿಕ ದೃಷ್ಟಿ ಎರಡಕ್ಕೂ ಕೂಡ ಮಹತ್ವವನ್ನು ನೀಡಲಿದೆ. ‘ಕನ್ನಡ ಸಾಹಿತ್ಯದಲ್ಲಿನ ವಿಷಯ ವೈವಿಧ್ಯ’ ಕುರಿತ ಗೋಷ್ಠಿಯಲ್ಲಿ ಯಕ್ಷಗಾನ ಸಾಹಿತ್ಯ, ವೈದ್ಯ ಸಾಹಿತ್ಯ, ಚುಟುಕು ಸಾಹಿತ್ಯ, ಬಯಲಾಟ ಸಾಹಿತ್ಯದ ಕುರಿತೂ ಚರ್ಚೆಗಳು ನಡೆಯಲಿವೆ. ಸಂಕೀರ್ಣ ಗೋಷ್ಠಿಯಲ್ಲಿ ಗಮಕ ಕಲೆ, ಲಿಂಗತ್ವ ಅಲ್ಪಸಂಖ್ಯಾತರ ಭವಿಷ್ಯ, ಮೊಬೈಲ್ ಸಾಧಕ-ಬಾಧಕಗಳು, ಪೊಲೀಸ್ ಸಾಹಿತ್ಯ ಹೀಗೆ ವೈವಿಧ್ಯಮಯ ವಿಷಯಗಳ ಕುರಿತು ಚರ್ಚೆ ನಡೆಯಲಿದೆ ಕಲಾ ಸಂಗಮದಲ್ಲಿ ಶಿಲ್ಪಕಲೆ, ಸಂಗೀತ, ನೃತ್ಯ, ಬೀದಿ ನಾಟಕಗಳ ಕುರಿತು ಚರ್ಚೆ ನಡೆಯಲಿದ್ದು  ಇದು ಸಮ್ಮೇಳನಕ್ಕೆ ವಿಸ್ತಾರವನ್ನು ತಂದುಕೊಟ್ಟಿದೆ.

ಎ. ಜಿಲ್ಲಾ ದರ್ಶನದ ಗೋಷ್ಠಿಯಲ್ಲಿಯೂ ಕೂಡ ಚಾರಿತ್ರಿಕ ನೆಲೆಗಳ ವಿವಿಧ ಸ್ವರೂಪವನ್ನು ಚರ್ಚಿಸಲಾಗುತ್ತಿದೆ.

ಏ. ಸ್ವಾತಂತ್ರ್ಯದ  ಅಮೃತ ಮಹೋತ್ಸವದ ಕುರಿತಾಗಿ ಕೂಡ ಒಂದು ವಿಶಿಷ್ಟ ಗೋಷ್ಠಿ ರೂಪುಗೊಂಡಿದ್ದು ಕರ್ನಾಟಕದ ಕೊಡುಗೆಗಳು ಇಲ್ಲಿ ಚರ್ಚಿತವಾಗಲಿವೆ.

ಐ. ಕನ್ನಡಪರ ಮತ್ತು ಪ್ರಗತಿಪರ ವರದಿಗಳ ಕುರಿತಾಗಿಯೇ ಒಂದು ವಿಶಿಷ್ಟ ಗೋಷ್ಠಿ ರೂಪುಗೊಂಡಿದ್ದು ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕ, ಮಹಾಜನ ವರದಿಗಳು ಇಲ್ಲಿ ಚರ್ಚಿತವಾಗಲಿವೆ. ವಿಜ್ಞಾನದ ಕುರಿತ ಗೋಷ್ಠಿಯಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಕನ್ನಡದ ಕುರಿತೂ ಚರ್ಚೆಗಳು ನಡೆಯಲಿದ್ದು ಹೊಸ ಆವಿಷ್ಕಾರಗಳ ಅಳವಡಿಕೆಯೂ ಚರ್ಚಿತವಾಗಲಿದೆ.

ಒ. ವಿದೇಶದಲ್ಲಿ ‘ಕನ್ನಡ ಡಿಂಡಿಮ’ ಗೋಷ್ಠಿಯಲ್ಲಿ ಅನಿವಾಸಿ ಕನ್ನಡಿಗರ ಆಶೋತ್ತರಗಳು ಬಿಂಬಿತವಾಗಲಿದ್ದು, ಕನ್ನಡ ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲೇ ಮೊದಲ ಸಲ ದುಬೈ, ಜರ್ಮನಿ, ಅಮೆರಿಕಗಳಿಂದಲೂ ಕನ್ನಡಿಗರು ಬಂದು ಪ್ರಬಂಧಗಳನ್ನು ಮಂಡಿಸುತ್ತಿರುವುದು ವಿಶೇಷ.

ಓ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡದ ಕುರಿತು ಇದೇ ಮೊದಲ ಸಲ ವಿಶೇಷ ಗೋಷ್ಠಿ ರೂಪುಗೊಂಡಿದ್ದು ಕನ್ನಡಿಗರಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಿಕ್ಕುವ ಅವಕಾಶಗಳ ಕುರಿತು ಚರ್ಚೆ ನಡೆಯುವುದು ವಿಶೇಷ.

ಔ. ಕನ್ನಡದಲ್ಲಿ ಉಪ ಭಾಷೆಗಳು, ಸೋದರ ಭಾಷೆಗಳು ಸುಮಾರು ನಲವತ್ತು ಇರ ಬಹುದು ಎನ್ನುವುದು ಭಾಷಾ ಶಾಸ್ತçಜ್ಞರ ಅಭಿಮತ, ಇದರಲ್ಲಿ ಪ್ರಾತಿನಿಧಿಕವಾಗಿ ತುಳು, ಸೋಲಿಗ, ಕೊಂಕಣಿ, ಕೊಡವ, ಅರೆಭಾಷೆಗಳ ಬಾಂಧವ್ಯದ ಕುರಿತು ಚರ್ಚೆ ನಡೆಯಲಿದೆ.

೧೦. ಈ ಹಿಂದೆ ಸಮ್ಮೇಳನಾಧ್ಯಕ್ಷರಾದವರು ವಿಶೇಷ ಅತಿಥಿಗಳಾಗಿರುತ್ತಿದ್ದರು , ಅವರು ಪ್ರಬಂಧ ಮಂಡಿಸಿದ ಉದಾಹರಣೆಗಳಿಲ್ಲ, ಇದೇ ಮೊದಲ ಹಿಂದೆ ಸಮ್ಮೇಳನಾಧ್ಯಕ್ಷರಾಗಿದ್ದ ಡಾ. ಎಸ್.ಎಲ್. ಭೈರಪ್ಪನವರು ವಿಶೇಷ ಉಪನ್ಯಾಸ ನೀಡುತ್ತಿದ್ದು, ಸರಸ್ವತಿ ಸಮ್ಮಾನ್ ಪುರಸ್ಕೃತರಾದ ಅವರ ಜೊತೆಗೆ ಈ ಗೋಷ್ಠಿಯಲ್ಲಿ ಇನ್ನೊಬ್ಬರು ಸರಸ್ವತಿ ಸಮ್ಮಾನ್ ಪುರಸ್ಕೃತರಾದ ಶ್ರೀ ವೀರಪ್ಪ ಮೊಯಲಿಯವರೂ ಇರುತ್ತಿದ್ದು, ಇಬ್ಬರೂ ಸರಸ್ವತಿ ಸಮ್ಮಾನ ಪುರಸ್ಕೃತರ ಕುರಿತಾಗಿ ಪುಸ್ತಕಗಳು ಬಿಡುಗಡೆಯಾಗುತ್ತಿರುವುದು ವಿಶೇಷವಾಗಿದೆ.

೧೧. ೮೬ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ೮೬ ಜನ ಸಾಧಕರಿಗೆ ಸನ್ಮಾನ ಮಾಡಲಾಗುತ್ತಿದ್ದು ನಾಡಿನ ವಿವಿಧ ಭಾಗಗಳಿಂದ ಮಾತ್ರವಲ್ಲದೆ ವಿದೇಶದಿಂದ ಕೂಡ ಸಾಧಕರು ಬರುತ್ತಿರುವುದು ವಿಶೇಷ. ಫೀಲ್ಡ್ ಮಾರ್ಷಲ್ ಕಾರಿಯಪ್ಪನವರ ಮಗ ಏರ್ ಮಾರ್ಷಲ್ ಕೆ.ಸಿ. ಕಾರಿಯಪ್ಪ, ಕನ್ನಡಕ್ಕೆ ಮೊದಲ ನಿಘಂಟು ನೀಡಿದ ಫರ್ಡಿನೆಂಡ್ ಕಿಟಲ್ ಅವರ ಮರಿ ಮೊಮ್ಮಗ ಯಾರ್ಕ್ ಕಿಟಲ್, ಮಾಲ್ಡಿವ್ ದೇಶದ ಗೌರವ ಕೌನ್ಸಿಲ್ ಜನರಲ್ ಡಾ. ವಿ.ಜಿ. ಜೋಸೆಪ್, ಜರ್ಮನಿ ನಗರಸಭಾ ಸದಸ್ಯರಾದ ವಿದುಷಿ ನಂದಿನಿ ನಾರಾಯಣ್, ಕತಾರ್ ದೇಶದ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು, ಹಿರಿಯ ಚಿತ್ರ ಕಲಾವಿದ ಶ್ರೀ ಬಿ.ಕೆ.ಎಸ್. ವರ್ಮ, ವಿಶ್ವ ಸಂಸ್ಥೆಯ ಮಾನವ ಹಕ್ಕು ಸಮಿತಿ ಪ್ರತಿನಿಧಿ ಡಾ. ಕೆ.ಪಿ. ಅಶ್ವಿನಿ, ಹಿರಿಯ ಕಲಾವಿದ ಶ್ರೀ ವೈಜನಾಥ ಬಿರಾದಾರ ಮೊದಲಾದ ಅನೇಕ ವಿಶಿಷ್ಟ ಸಾಧಕರು ಇದರಲ್ಲಿ ಸೇರಿರುವುದು ವಿಶೇಷವಾಗಿದೆ. ಸಮಾಜದ ಎಲ್ಲಾ ಕ್ಷೇತ್ರಗಳಿಂದಲೂ ಅರ್ಹರನ್ನು ಪಾರದರ್ಶಕವಾಗಿ ಆಯ್ಕೆ ಮಾಡಲಾಗಿದ್ದು, ಅರ್ಜಿಯನ್ನು ಆಹ್ವಾನಿಸದೆ ಎಲೆಮರೆಯ ಕಾಯಿಯಂತೆ ಇರುವ ಅನೇಕ ಸಾಧಕರನ್ನು ಈ ಸಲ ಆಯ್ಕೆ ಮಾಡಿರುವುದು ವಿಶೇಷವಾಗಿದೆ. ಸನ್ಮಾನವು ಮೂರೂ ದಿನವು ನಡೆಯಲಿದ್ದು ಎಲ್ಲಾ ಸನ್ಮಾನಿತರ ಸಾಧನೆಗೆ ಮಹತ್ವ ದೊರಕಲಿದೆ.

ಆಹ್ವಾನ ಪತ್ರಿಕೆಯನ್ನು ರೂಪಿಸುವಲ್ಲಿ ಹಾಗೂ ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸುವ ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸುವಲ್ಲಿ ಸನ್ಮಾನಿತರನ್ನು ಆಯ್ಕೆ ಮಾಡುವಲ್ಲಿ ಹದಿನಾಲ್ಕು ಜನರ ಗಣ್ಯರ ಆಯ್ಕೆ ಸಮಿತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ರೂಪಿಸಿದ್ದು ಈ ಸಮಿತಿಯು ಹಲವು ಸಭೆಗಳನ್ನು ನಡೆಸಿ ಪ್ರಾದೇಶಿಕ ನ್ಯಾಯ, ಸಾಮಾಜಿಕ ನ್ಯಾಯ ಮತ್ತು ಪ್ರತಿಭಾ ನ್ಯಾಯಕ್ಕೆ ಮಹತ್ವ ನೀಡಿ ಪಾರದರ್ಶಕವಾಗಿ ಆಯ್ಕೆಯನ್ನು ಮಾಡಲಾಗಿದೆ. ಕಳೆದ ಸಾಹಿತ್ಯ ಸಮ್ಮೇಳನಗಳಲ್ಲಿ ಅವಕಾಶವನ್ನು ಪಡೆದವರನ್ನು ಹೊರತು ಪಡಿಸಿ ಸಮ್ಮೇಳನದಲ್ಲಿ ಇದುವರೆಗೂ ಅವಕಾಶವನ್ನು ಪಡೆಯದ ಎಲೆ ಮರೆಯ ಕಾಯಿಯಂತಿರುವ ಪ್ರತಿಭಾವಂತರಿಗೆ ಅವಕಾಶವನ್ನು ನೀಡಲು ಪ್ರಯತ್ನಿಸಲಾಗಿದೆ, ಇಲ್ಲಿಯೂ ಕೂಡ ಯುವ ಪ್ರತಿಭೆಗಳಿಗೆ ಮಹತ್ವವನ್ನು ನೀಡಲಾಗಿದೆ.

ಇದು ಏಕ ವ್ಯಕ್ತಿಯ ಆಯ್ಕೆಯಲ್ಲದೆ ಸಮಾಜದ ಎಲ್ಲಾ ಸ್ತರಗಳಿಂದ ಬಂದ ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸುವ ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸುವಲ್ಲಿ ಸನ್ಮಾನಿತರನ್ನು ಆಯ್ಕೆ ಮಾಡುವ ಸಮಿತಿಯ ಗಣ್ಯರು ಮಾಡಿದ ಪ್ರಜಾಸತ್ತಾತ್ಮಕವಾದ ಆಯ್ಕೆಯಾಗಿದೆ ಎನ್ನುವುದು ಗಮನಾರ್ಹ.

ಸಾಮಾಜಿಕ ಜಾಲತಾಣಗಳಲ್ಲಿ ಒಂದು ಸಮುದಾಯವನ್ನು ಕಡೆಗಣಿಸಲಾಗಿದೆ ಎಂಬ ಆರೋಪವು ಕೇಳಿ ಬಂದಿರುವುದನ್ನು ಪ್ರಸ್ತಾಪಿಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಯಾವುದೇ ಜಾತಿ, ಧರ್ಮ ಅಥವಾ ಸಿದ್ಧಾಂತಕ್ಕೆ ಸೀಮಿತವಾದದಲ್ಲ. ಇಲ್ಲಿರುವುದು ಕನ್ನಡ ಜಾತಿ ಮತ್ತು ಕನ್ನಡ ಧರ್ಮ ಮಾತ್ರ. ಜಾತಿ ಮತದ ಹಿನ್ನೆಲೆಯಲ್ಲಿ ಆಹ್ವಾನ ಪತ್ರಿಕೆಯನ್ನು  ವಿಶ್ಲೇಷಣೆ ಮಾಡುವುದೇ ಕನ್ನಡವನ್ನು ಸಾರ್ವಭೌಮವಾಗಿಸುವ ಉನ್ನತ ಆಶಯದಿಂದ ಶ್ರೀಮಾನ್ ನಾಲ್ವಡಿ ಕೃಷ್ಣರಾಜ ಒಡೆಯರು ಕಟ್ಟಿದ ಕನ್ನಡ ಸಾಹಿತ್ಯ ಪರಂಪರೆಗೆ ಮಾಡುವ ಅವಮಾನ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಎಡ ಪಂಥ, ಬಲ ಪಂಥ, ಮೇಲ್ಪಂಥ, ಕೆಳ ಪಂಥ, ಮಧ್ಯ ಪಂಥ ಹೀಗೆ ಯಾವ ಚೌಕಟ್ಟಿಗೂ ಸಿಲುಕುವಂತಹದಲ್ಲ. ಇದು ‘ಕನ್ನಡ ಪಂಥ’ಕ್ಕೆ ಸೇರಿದ್ದು ಇಲ್ಲಿ ಅತಿ ಹೆಚ್ಚಿನ ಮಹತ್ವವಿರುವುದು ಕನ್ನಡ ನಾಡು-ನುಡಿ-ಕನ್ನಡಿಗರಿಗೆ. ಕನ್ನಡಿಗ ಎನ್ನುವುದೊಂದೇ ಆಯ್ಕೆಯಲ್ಲಿ ಬಳಸಿದ ಮಾನದಂಡ ಎಂದು ಅವರ ಸ್ಪಷ್ಟ ಪಡಿಸಿದ್ದಾರೆ.

Date: Dec 31, 2022
ಶ್ರೀಕೃಷ್ಣರಾಜ ಪರಿಷನ್ಮಂದಿರ ಕಟ್ಟಡ ನಿರ್ಮಾಣಗೊಂಡು ಒಂಬತ್ತು ದಶಕಗಳೆ ಕಳೆದಿದ್ದು ಈ ಕಟ್ಟಡ ಪಾರಂಪರಿಕ ಕಟ್ಟಡಗಳ ಸಾಲಿಗೆ ಸೇರಲಿದೆ. ಪಾರ್ಲಿಮೆಂಟ್ ಸೆಂಟ್ರಲ್ ಹಾಲ್‌ನಷ್ಟೇ ಮಹತ್ವವನ್ನು ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ ಹೊಂದಿದೆ. ಇಂಥಹ ಐತಿಹಾಸಿಕ ಕಟ್ಟಡದ ನವೀನ ರೂಪವನ್ನು ೨೬ ಅಗಸ್ಟ್ ೨೦೨೨ರ ಶುಕ್ರವಾರ ಸಂಜೆ ೫ ಗಂಟೆಗೆ ನಾಡಿನ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಂದಾಯ ಸಚಿವರಾದ ಶ್ರೀ ಆರ್. ಅಶೋಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶ್ರೀ ವಿ ಸುನೀಲ್ ಕುಮಾರ್, ಪ್ರೌಢ ಶಿಕ್ಷಣ ಇಲಾಖೆ ಸಚಿವರಾದ ಶ್ರೀ ಬಿ.ಸಿ. ನಾಗೇಶ್ ಅವರು ಭಾಗವಹಿಸಲಿದ್ದಾರೆ. ವಿಶೇಷ ಅಥಿತಿಗಳಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ, ಹಿರಿಯ ಸಾಹಿತಿ ನಾಡೋಜ ಡಾ. ಕಮಲಾ ಹಂಪನಾ, ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ ಅವರು ಭಾಗವಹಿಸಲಿದ್ದಾರೆ. ಕನ್ನಡಿಗರ ಹೆಮ್ಮೆಯ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜೇಂದ್ರ ಪರಿಷತ್ತಿನ ಮಂದಿರ ಹಾಗೂ ಆವರಣ ನವೀಕರಣ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಕನ್ನಡಾಭಿಮಾನಿಗಳು, ಸಹೃದಯಿ ಕನ್ನಡಿಗರೆಲ್ಲರೂ ಭಾಗವಹಿಸುವಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಆದರದ ಆಮಂತ್ರಣ ನೀಡಿದ್ದಾರೆ.

Date: Aug 25, 2022

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಹೊಸ ರೂಪ ಪಡೆಯುತ್ತಿದೆ. ಕನ್ನಡಿಗರ ಹೆಮ್ಮೆಯ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಸರಕಾರ ಜೊತೆಯಾಗಿ ಕನ್ನಡ ಕಟ್ಟುವ ಕಾರ್ಯವನ್ನು ನಡೆಸಲಿದೆ. ಸಾಹಿತ್ಯದ ಒಡನಾಟ ಇಲ್ಲದವರಿಗೂ ಸಾಹಿತ್ಯದಲ್ಲಿ ಆಸಕ್ತಿ ಮೂಡಿಸುವ ಕಾರ್ಯ ಪರಿಷತ್ತು ಮಾಡಬೇಕಿದೆ ಎಂದು ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ಇಂದು ಸಿಎಮ್ ಗೃಹ ಕಚೇರಿ 'ಕೃಷ್ಣಾ'ದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ  ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ ಮೊಬೈಲ್ ಅಪ್ಲಿಕೇಷನ್ ಅನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.  ನಾಡೋಜ ಡಾ. ಮಹೇಶ ಜೋಶಿ ಅವರ ನೇತ್ರತ್ವದಲ್ಲಿ ಪರಿಷತ್ತು ಸಾಕಷ್ಟು ಬದಲಾವಣೆಗಳನ್ನು ಕಾಣುತ್ತಿದೆ. ಅದಕ್ಕೆ ಕಾರಣ ಅವರ ಕ್ರೀಯಾಶೀಲತೆ ಹಾಗೂ ಕನ್ನಡ ಕಟ್ಟಿಬೆಳೆಸುವ ಛಲವೇ ಕಾರಣ. ಪ್ರಸ್ತುತ ಕನ್ನಡಿಗರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ಅಪಾರವಾದ ನಿರೀಕ್ಷೆಯಿದೆ. ಆ ಎಲ್ಲಾ ನಿರೀಕ್ಷೆಗಳನ್ನು ಮಹೇಶ ಜೋಶಿ ಅವರ ಮಾರ್ಗದರ್ಶನದಲ್ಲಿ ಅವರ ನೇತೃತ್ವದ ತಂಡ ಕೆಲಸಮಾಡಲಿದೆ ಎನ್ನುವ ವಿಶ್ವಾಸ ಸರಕಾರಕ್ಕೆ ಇದೆ.

     ಕನ್ನಡ ಭಾಷೆಗೆ ದೇಶದಲ್ಲಿ ಅಗ್ರಸ್ಥಾನವಿದೆ, ಅದಕ್ಕೆ ತಕ್ಕಂತೆ ಆಯಾ ಕಾಲಘಟ್ಟದಲ್ಲಿ ಸವಾಲುಗಳು ಬಂದೇ ಬರುತ್ತವೆ. ಕನ್ನಡ ಉಳಿಸಿ ಎಲ್ಲ ರಂಗದಲ್ಲಿ ಬೆಳೆಸುವುದಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಸರಕಾರವೂ ಜೊತೆಯಾಗಿ ಮುನ್ನಡೆಯಲಿದೆ. ಮುಂದಿನ ದಿನಗಳಲ್ಲಿ ಉತ್ತಮ ಸಾಹಿತ್ಯ ಕೃತಿಗಳು ಪ್ರಕಟವಾಗಬೇಕಿದೆ. ಎಲ್ಲಾ ಕಾಲದಲ್ಲಿ ನೆನಪಿಸಿಕೊಳ್ಳುವಂತಹ ಸಮಾಮುಖಿ ಸಾಹಿತ್ಯ ರಚನೆಯಾಗಬೇಕಿದೆ. ಸ್ಫೂರ್ತಿದಾಯಕ ಕಾದಂಬರಿಗಳು ೮೦ರ ದಶಕದ ನಂತರ ಅಷ್ಟಾಗಿ ಪ್ರಕಟವಾಗಿಲ್ಲ. ಕನ್ನಡ ಸಾಹಿತ್ಯದ ಪ್ರಕಾರಗಳು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುವ ಮಟ್ಟದಲ್ಲಿ ಬೆಳೆಯಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.

     ಸಾಹಿತ್ಯ ಪರಿಷತ್ತಿನೊಂದಿಗೆ ಯಾವುದೇ ಪ್ರತಿಷ್ಟೆ ಇಲ್ಲದೆ ಕನ್ನಡ ಕಟ್ಟುವಲ್ಲಿ ರಾಜ್ಯ ಸರಕಾರ ಜೊತೆಯಾಗಿ ಇರಲಿದೆ. ಹಾವೇರಿಯಲ್ಲಿ ಹಮ್ಮಿಕೊಂಡ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನ ಭೂತೋ ನ ಭವಿಶ್ಯತಿ ಎನ್ನುವಂತೆ ನಡೆಸಲಾಗುವುದು. ಅದೇ ಕಾರಣಕ್ಕೆ ಇದೇ ಮೋದಲ ಬಾರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನ ಮಾನ ನೀಡಿ ಸರಕಾರ ಗೌರವಿಸಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

     ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಮಾತನಾಡಿ  "ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿಸುವ" ನಿಟ್ಟಿನಲ್ಲಿ ಪರಿಷತ್ತನ್ನು ಮುನ್ನಡೆಸಲಾಗುತ್ತಿದೆ. ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದ ಇವುಗಳ ರಕ್ಷಣೆ, ಪ್ರಸಾರ ಮತ್ತು ಅಭಿವೃದ್ಧಿಯ ಮೂಲ ಧ್ಯೇಯೋದ್ದೇಶಗಳೊಂದಿಗೆ ಕನ್ನಡ-ಕನ್ನಡಿಗ-ಕರ್ನಾಟಕದ ಹಿತರಕ್ಷಣೆ ಕಾಪಾಡುವ ಹಾಗೂ ಅಭಿವೃದ್ಧಿ ಪಡಿಸುವ ಜವಾಬ್ದಾರಿಯನ್ನು ಹೊತ್ತು, ಪರಿಷತ್ತಿನ ನಿಯಮ-ನಿಬಂಧನೆಗಳಿಗೆ ಆಮೂಲಾಗ್ರ ಬದಲಾವಣೆ ತರುವ ಮೂಲಕ ಕ್ರಾಂತಿಕಾರಿ ಹೆಜ್ಜೆಯನ್ನು ಇರಿಸಲಾಗಿದೆ.

    ವಿಶ್ವದ್ಯಾಂತ ಕನ್ನಡವನ್ನು ಒಗ್ಗೂಡಿಸಲು ಹೊರರಾಜ್ಯ, ಕೇಂದ್ರಾಡಳಿತ ಪ್ರದೇಶ ಮತ್ತು ಹೊರದೇಶ ಘಟಕಗಳನ್ನು ಸ್ಥಾಪಿಸುವ ದೃಷ್ಟಿಯಿಂದಲೂ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಪರಿಷತ್ತಿಗೆ ಪ್ರಸ್ತುತ ಮುಂದಿನ ಐದು ವರ್ಷಗಳ ಈ ಅವಧಿಯಲ್ಲಿ ಒಂದು ಕೋಟಿ ಸದಸ್ಯತ್ವವನ್ನು ಹೊಂದುವ ದೃಷ್ಟಿಯಿಂದ ಶ್ರೀಸಾಮಾನ್ಯನೂ ಸಹ ಸದಸ್ಯತ್ವ ಪಡೆಯಲು ಅನುಕೂಲವಾಗುವಂತೆ ರೂ.೫೦೦-೦೦ ಗಳಿದ್ದ ಸದಸ್ಯತ್ವ ಶುಲ್ಕವನ್ನು ರೂ. ೨೫೦-೦೦ ಗಳಿಗೆ ಇಳಿಸಲಾಗಿದೆ .. ಇನ್ನು ಮುಂದೆ https://play.google.com/store/apps/details?id=com.knobly.kasapa ವಿಳಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಪ್ಲಿಕೇಷನ್ ಸಾರ್ವಜನಿಕರಿಗೆ ಸಿಗಲಿದೆ ಎಂದರು.

  ಈ ಸಂದರ್ಭದಲ್ಲಿ ಸಚಿವರಾದ ಡಾ. ಸಿ. ಎನ್. ಅಶ್ವತ್ಥ ನಾರಾಯಣ, ವಿ.ಸೋಮಣ್ಣ, ಶಾಸಕರಾದ ನೆಹರೂ ಓಲೆಕಾರ,  ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಕಾರ್ಯದರ್ಶಿಗಳಾದ ಎಂ. ಎಸ್. ಶ್ರೀಕರ್, ಜಯರಾಮ ಮತ್ತು ಪರಿಷತ್ತಿನ  ಗೌರವ ಕೋಶಾಧ್ಯಕ್ಷರಾದ ಶ್ರೀ ಬಿ.ಎಂ. ಪಟೇಲ್ ಪಾಂಡು, ಗೌರವ ಕಾರ್ಯದರ್ಶಿ ಶ್ರೀ ನೇ.ಭ. ರಾಮಲಿಂಗಶೆಟ್ಟಿ ಹಾಗೂ ಪರಿಷತ್ತಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಭಾವಚಿತ್ರ: ಸಿಎಮ್ ಗ್ರಹಕಚೇರಿ ಕೃಷ್ಣಾದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ  ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ ಮೊಬೈಲ್ ಅಪ್ಲಿಕೇಷನ್ನನ್ನು ಮಾನ್ಯ ಮುಖ್ಯಮಂತ್ರ ಶ್ರೀ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿ ಮಾತನಾಡಿದರು

Date: Aug 05, 2022