1915ರ ವರ್ಷದಲ್ಲಿ ನಡೆದ ಪ್ರಥಮ ಸಾಹಿತ್ಯ ಸಮ್ಮೇಳನದಲ್ಲಿನ ಭಾಗವಹಿಸಿದ್ದ ಗಣ್ಯರು
1915ರ ವರ್ಷದಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರಥಮ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಪ್ರಮುಖ ಗಣ್ಯರು

ಕನ್ನಡ  ಸಾಹಿತ್ಯ  ಪರಿಷತ್ತಿನ ಸಾಂಸ್ಕೃತಿಕ ಇತಿಹಾಸ

 

ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಏಕೀಕರಣದ ಹೋರಾಟಗಾರರೂ ಸಾಹಿತಿಗಳೂ ವಿದ್ವಾಂಸರೂ ಮೈಸೂರಿನ ಆಡಳಿತಗಾರರೂ, ಅಧ್ಯಾಪಕರೂ, ಸಾರ್ವಜನಿಕ ಗಣ್ಯರು ಹೀಗೆ ಹಲವಾರು ಗಣ್ಯವ್ಯಕ್ತಿಗಳ ನಾಡು – ನುಡಿ ಸೇವಕರ ಒಂದು ಗುಂಪಿನ ಜನರ ಸಂಯುಕ್ತ ಶ್ರಮ ತ್ಯಾಗಗಳ ಫಲವಾಗಿ ರೂಪುಗೊಂಡಿತು.

ಬೆಂಗಳೂರಿನಲ್ಲಿ ಸರ್. ಎಂ. ವಿಶ್ವೇಶ್ವರಯ್ಯನವರು ಮಾಡಿದ ಪ್ರಯತ್ನಗಳೂ ಹೆಚ್.ವಿ. ನಂಜುಂಡಯ್ಯ, ಬೆಳ್ಳಾವೆ ವೆಂಕಟನಾರಣಪ್ಪ, ಕರ್ಪೂರ ಶ್ರೀನಿವಾಸರಾವ್, ಅಚ್ಯುತರಾವ್, ಬಹಾದ್ದೂರ್ ಶ್ಯಾಮರಾವ್, ರಾ.ಹ. ದೇಶಪಾಂಡೆ, ಆಲೂರು ವೆಂಕಟರಾಯರು ಇನ್ನೂ ಅನೇಕರು ಸೇರಿ ಅಹರ್ನಿಶಿ ನಡೆಸಿದ ಚಿಂತನೆ – ಪರಿಶ್ರಮಗಳಿಂದ ಕನ್ನಡ ಸಾಹಿತ್ಯ ಪರಿಷತ್ತು ರೂಪುಗೊಂಡು ಸ್ಥಾಪನೆಯಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಮೊದಲನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ೫ನೇ ಮೇ ೧೯೧೫ರಲ್ಲಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತು.

ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ

ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾದ ರೀತಿ ಒಂದು ಐತಿಹಾಸಿಕ ಮಹತ್ವದ ಘಟನೆಯಾಗಿದೆ.

ಬ್ರಿಟಿಷರು ಟಿಪ್ಪುವನ್ನು ಸೋಲಿಸಿ ಮೈಸೂರು ರಾಜ್ಯವನ್ನು ವಶಪಡಿಸಿಕೊಂಡ ಮೇಲೆ ೧೮೮೧ರಲ್ಲಿ ಚಾಮರಾಜೇಂದ್ರ ಒಡೆಯರ್ ಪಟ್ಟಕ್ಕೆ ಬಂದರು. ಆಗಿನಿಂದ ದಿವಾನರ ಆಡಳಿತ ಪ್ರಾರಂಭವಾಯಿತು. ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಕಾಲದಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರು ೧೯೧೨ರಲ್ಲಿ ದಿವಾನರಾದರು. ಇವರ ಅಧಿಕಾರಾವಧಿ ೧೯೧೨ರಿಂದ ೧೯೧೮ ರವರೆಗೆ ೬ ವರ್ಷಗಳು. ಈ ಮುಂಚೆ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನಕ್ಕೆ ಚೀಫ್ ಇಂಜಿನಿಯರಾಗಿ ೧೯0೯ರಲ್ಲಿ ನೇಮಕಗೊಂಡಿದ್ದರು. ಅನಂತರ ಮೈಸೂರು ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ೧೯೧೧ರಲ್ಲಿ ಮೈಸೂರು ಸಂಪದಭಿವೃದ್ಧಿ ಸಮಾಜ (ಮೈಸೂರು ಇಕನಾಮಿಕ್ ಕಾನ್ಪೆರೆನ್ಸ್) ಎಂಬ ಸಂಸ್ಥೆಯನ್ನು ಸ್ಥಾಪಿಸಲು ಮಹಾರಾಜರಿಗೆ ಸಲಹೆ ಕೊಟ್ಟಾಗ ಮಹಾರಾಜರು ಅದನ್ನೊಪ್ಪಿದರು. ಅದಕ್ಕನುಸಾರವಾಗಿ ಆ ಸಂಸ್ಥೆಯ ಅಂಗವಾಗಿ ೩ ಸಮಿತಿಗಳು ಏರ್ಪಟ್ಟವು.

೧. ಕಾರ್ಖಾನೆಗಳ ಕೈಗಾರಿಕಾ ಸಮಿತಿ
೨. ವಿದ್ಯಾಸಮಿತಿ
೩. ಭೂ ವ್ಯವಸಾಯ ಸಮಿತಿ

ವಿದ್ಯಾಸಮಿತಿಗೆ ಹೆಚ್. ವಿ. ನಂಜುಂಡಯ್ಯನವರು ಅಧ್ಯಕ್ಷರಾಗಿ ವಿ. ಸುಬ್ರಹ್ಮಣ್ಯ ಅಯ್ಯರ್ ಅವರು ಕಾರ್ಯದರ್ಶಿಗಳಾಗಿ  ನೇಮಕವಾದರು.  ಈ ವಿದ್ಯಾ ಸಮಿತಿಯವರು ಮುಖ್ಯವಾಗಿ ಎರಡು ಯೋಜನೆಗಳನ್ನು ನಿರ್ಧರಿಸಿದರು.

೧. ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆ
೨. ಕನ್ನಡ ಅಕಾಡೆಮಿ ಅಥವಾ ಇಂದಿನ ಕನ್ನಡ ಸಾಹಿತ್ಯ ಪರಿಷತ್ತು

ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ ವಿಷಯದಲ್ಲಿ ದೇಶದ ವಿದ್ವಜ್ಜನರ ಅಭಿಪ್ರಾಯಗಳನ್ನು ತಿಳಿದುಕೊಳ್ಳಬೇಕೆಂದು ವಿದ್ಯಾಸಮಿತಿಯು ಕೆಲವು ವಿಷಯಗಳನ್ನು ಸಂಕಲ್ಪಿಸಿ ಆ ಬಗ್ಗೆ ಹಲವು ಉಪನ್ಯಾಸಗಳನ್ನು ವಿದ್ವಜ್ಜನರಿಂದ ಏರ್ಪಡಿಸಿತು. ಹಾಗೆ ಏರ್ಪಟ್ಟಿದ್ದು ಬಿ. ಎಂ. ಶ್ರೀ ಅವರ ಉಪನ್ಯಾಸ ಮೈಸೂರು ನಗರದಲ್ಲಿ, ೧೯೧೨-೧೩ರಲ್ಲಿ. ಆಗ ಮೈಸೂರು ಪ್ರಜಾಪ್ರತಿನಿಧಿ ಸಭೆಯ ಸದಸ್ಯರು ದಸರಾ ಅಧಿವೇಶನಕ್ಕೆ ಬಂದಿದ್ದರು. ಎಂ. ವೆಂಕಟಕೃಷ್ಣಯ್ಯ, ಅಂಬಳೆ ಅಣ್ಣಯ್ಯ ಪಂಡಿತರು, ಕರ್ಪೂರ ಶ್ರೀನಿವಾಸರಾವ್, ಕೆ. ಕೃಷ್ಣಯ್ಯಂಗಾರ್ ಮೊದಲಾದ ಗಣ್ಯವ್ಯಕ್ತಿಗಳು ಬಂದಿದ್ದರು. ಮೈಸೂರಿನ ಗಾರ್ಡನ್ ಪಾರ್ಕಿನಲ್ಲಿರುವ ಡಿಸ್ಟ್ರಿಕ್ಟ್ ಆಫೀಸರ್ ಕಟ್ಟಡದಲ್ಲಿ ಸಭೆ ಸೇರಿತ್ತು. ಬೆಳಿಗ್ಗೆ ೯ರಿಂದ ೧೧ರವರೆಗೆ ಬಿಎಂಶ್ರೀ ಅವರು ಉಪನ್ಯಾಸ ನೀಡಿದರು. ಆ ಭಾಷಣದಲ್ಲಿ “ಕನ್ನಡಕ್ಕೆ ಹೊಸ ಸಾಹಿತ್ಯ ಬೇಕಾಗಿದೆ.  ಪ್ರಾಚೀನಸಾಹಿತ್ಯದ ಅಭ್ಯಾಸ ಮಾಡಿ ಭಾಷೆಯ ಹಳೆಯ ಶಬ್ದರಾಶಿ ಪ್ರಯೋಗಗಳನ್ನು ಚೆನ್ನಾಗಿ ತಿಳಿದುಕೊಳ್ಳಬೇಕು. ಹೊಸಬರವಣಿಗೆಗೆ ಅದು ಅತ್ಯಂತ ಅವಶ್ಯಕವಾದ ಸಿದ್ಧತೆ.  ಸಂಸ್ಕೃತದ ಪರಿಚಯವಿಲ್ಲದಿದ್ದರೆ ಹೊಸ ಸಾಹಿತ್ಯಕ್ಕೆ ಬೇಕಾದ ಶಬ್ದಸಾಮಗ್ರಿ ಒದಗಲಾರದು. ಸಂಸ್ಕೃತ ಹೇಗೆ ಆವಶ್ಯಕವೋ ಇಂಗ್ಲಿಷ್ ಸಾಹಿತ್ಯವೂ ಹಾಗೇ ಅವಶ್ಯಕ. ಹೊಸಗನ್ನಡದಲ್ಲಿ ಹೊಸಹೊಸ ಛಂದಃಪ್ರಯೋಗಗಳು ಹೊಸಹೊಸ ಪದಸಂಯೋಜನೆಗಳೂ ಹೊಸಹೊಸ ಕಥಾಪ್ರಪಂಚದ ನಿರ್ಮಿತಿಗಳೂ ಸೇರಿ ನಮ್ಮ ಸಾಹಿತ್ಯ ಜನಜೀವನಕ್ಕೆ ಒಂದು ಹೊಸ ಪ್ರಚೋದಕ ಶೈಲಿಯಾಗಬೇಕು“ ಎಂದು  ಹೇಳಿದರು.

ಅನಂತರ ೧೯೧೪ರ ಇಸವಿಯಲ್ಲಿ ದಿ ಮೈಸೂರು ಎಕಾನಾಮಿಕ್ ಕಾನ್ಫೆರೆನ್ಸ್ (ಮೈಸೂರು ಸಂಪದಭ್ಯುದಯ ಸಮಾಜ) ಅವರು ವಾರ್ಷಿಕ ಸಮ್ಮೇಳನ ನಡೆಸಿದಾಗ ಆ ಸಭೆಯಲ್ಲಿ ಎಂ. ಶಾಮರಾವ್ ಅವರು ಶಿಕ್ಷಣಕ್ಕೆ ಸಂಬಂಧಿಸಿದಂತೆ ೭ನೇ ಅಂಶದಲ್ಲಿ ಕನ್ನಡ ಸಾಹಿತ್ಯದ ಅಭಿವೃದ್ಧಿಗಾಗಿ ಒಂದು ಸಂಸ್ಥೆಯ ಸ್ಥಾಪನಾ ವಿಷಯವನ್ನು ಮಂಡಿಸುವಂತೆ ಕೋರಿದ್ದರು. ಅದರಂತೆ ಸಭೆಯು “ಕರ್ನಾಟಕ ಭಾಷೆಯಲ್ಲಿ ವಿವಿಧ ಗ್ರಂಥಗಳನ್ನು ರಚಿಸಿದವರ ಪ್ರೋತ್ಸಾಹಕ್ಕಾಗಿ ಸ್ವತಂತ್ರಾಧಿಕಾರವುಳ್ಳ ಪರಿಷತ್ತೊಂದಿರಬೇಕು: ಸರ್ಕಾರದವರು ಆ ಪರಿಷತ್ತನ್ನು ಅಂಗೀಕರಿಸಿ ಅದಕ್ಕೆ ವಿಶೇಷ ಸಹಾಯ ಮಾಡುವುದು ಉಚಿತವೆಂದು ಸಂಪದಭ್ಯುದಯ ಸಮಾಜವು ಸರ್ಕಾರಕ್ಕೆ ಶಿಫಾರಸು ಮಾಡಬೇಕು” ಎಂದು ನಿರ್ಣಯಿಸಿತು.

ಅದರಂತೆ ೩೧ ಅಕ್ಟೋಬರ್ ೧೯೧೪ರಲ್ಲಿ ಸಂಪದಭ್ಯುದಯ ಸಮಾಜದ ವಿದ್ಯಾವಿಷಯಕ ಮಂಡಳಿಯವರು ಉಪಸಮಿತಿಯೊಂದನ್ನು  ರಚಿಸಿದರು. ಆ ಸಮಿತಿಗೆ ರಾವ್ ಬಹದ್ದೂರ್ ಎಂ. ಶಾಮರಾವ್, ಕರ್ಪೂರ ಶ್ರೀನಿವಾಸರಾವ್ ಮತ್ತು ಪಿ. ಎಸ್. ಅಚ್ಯುತರಾವ್ ಅವರು  ಸದಸ್ಯರಾಗಿದ್ದರು. ಈ ಸಮಿತಿ “ಕನ್ನಡ ನಾಡುಗಳ ಪ್ರಮುಖರನ್ನು ಬೆಂಗಳೂರಿಗೆ ಆಹ್ವಾನಮಾಡಿ ಕರ್ಣಾಟಕ ಭಾಷಾ ಪರಿಷ್ಕರಣಕ್ಕೂ ಕರ್ಣಾಟಕ ಗ್ರಂಥಾಭಿವೃದ್ಧಿಗೂ ಅನುಕೂಲವಾಗುವಂತೆ ಸಮಿತಿಯೊಂದನ್ನು ಏರ್ಪಡಿಸುವ ಕಾರ್ಯವನ್ನು ನಿರ್ವಹಿಸಬೇಕು” ಎಂದು ತೀರ್ಮಾನಿಸಿತು.

ಈ ಉಪಸಮಿತಿಯು ೧೯೧೫ ಜನವರಿ ೭ರಂದು ಮೊದಲ ಸಭೆಯನ್ನು, ೧೯೧೫ ಮಾರ್ಚಿ ೨ರಂದು  ೨ನೇ ಸಭೆಯನ್ನು, ೧೯೧೫ ಮಾರ್ಚಿ ೨೨ರಂದು ೩ನೇ ಸಭೆಯನ್ನು ನಡೆಸಿತು. ಆ ೩ ಸಭೆಗಳ ಸಂಕ್ಷಿಪ್ತ ವಿವರಣೆ ಹೀಗಿದೆ:

ಮೊದಲ ಸಭೆ : (೧೯೧೫)

ಜನವರಿ ೭ರಂದು ನಡೆದ ಉಪಸಮಿತಿಯ ಮೊದಲ ಸಭೆಯಲ್ಲಿ ಮುಂಬಯಿ ಮತ್ತು ಮದರಾಸ್ ಪ್ರಾಂತದಿಂದ ಸಮ್ಮೇಳನಕ್ಕೆ ಗಣ್ಯರನ್ನು ಆಹ್ವಾನಿಸುವ ವಿಷಯ ಇತ್ಯರ್ಥವಾಯಿತು. ಮೈಸೂರು ಮತ್ತು ಬೊಂಬಾಯಿಯ ಶಿಕ್ಷಣ ಇಲಾಖೆಗಳು ನಿಗದಿಪಡಿಸಿರುವ ಕನ್ನಡ ಪಠ್ಯ ಪುಸ್ತಕಗಳಲ್ಲಿ ಸಾಹಿತ್ಯಿಕ ಸಮಾನಾಂತರ ರೂಪದ ಬಳಕೆ ಬಗ್ಗೆ ಮೈಸೂರು ಕನ್ನಡ ಭೇದವನ್ನು ಮೈಸೂರು ಶಿಕ್ಷಣ ಇಲಾಖೆಯ ಮೂವರು ರೀಡರುಗಳೊಂದಿಗೆ ಚರ್ಚಿಸಿ, ವರದಿ ತಯಾರಿಸಿ ಮುಂದೆ ನಡೆಯಲಿರುವ ಸಮ್ಮೇಳನದಲ್ಲಿ ಮಂಡಿಸಬೇಕೆಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಕೋರಲು ತೀರ್ಮಾನಿಸಲಾಯಿತು.

ಎರಡನೆಯ ಸಭೆ : (೧೯೧೫)

ಸಂಪದಭ್ಯುದಯ ಸಮಾಜದ ವಿದ್ಯಾವಿಷಯ ಸಮಿತಿಯ, ಮೂವರು ಪ್ರಾಜ್ಞ ಸದಸ್ಯರ ಉಪಸಮಿತಿಯು  ೧೯೧೫ರ ಮಾರ್ಚಿ ೨ರಂದು ಎರಡನೆಯ ಸಭೆ ನಡೆಸಿ ಈ ಕೆಳಗಿನ ನಿರ್ಣಯಗಳನ್ನು ಕೈಗೊಂಡಿತು.

 1. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವು ಇಬ್ಬರು ಲಿಂಗಾಯಿತರು, ಇಬ್ಬರು ಜೈನ ಪ್ರತಿನಿಧಿಗಳನ್ನು, ಬೊಂಬಾಯಿಯ ಕರ್ನಾಟಕಸಭೆ ಇಬ್ಬರು ಪ್ರತಿನಿಧಿಗಳನ್ನು ಸಮ್ಮೇಳನಕ್ಕೆ ಕಳುಹಿಸುವಂತೆ ಪ್ರಾರ್ಥಿಸುವುದು.
 2. ಬೊಂಬಾಯಿ ಶಿಕ್ಷಣ ಇಲಾಖೆಯ ಮೂರು ಕನ್ನಡಪುಸ್ತಕಗಳನ್ನು ಪರಿಶೀಲಿಸಿ, ಬೊಂಬಾಯಿ ಕನ್ನಡದಲ್ಲಿನ ಉಚ್ಚಾರಭೇದಗಳಲ್ಲಿರುವ ಬಗೆಗೆ ಸಂಕ್ಷಿಪ್ತವಾದ ವರದಿಯನ್ನು ಸಮ್ಮೇಳನಕ್ಕಾಗಿ ಸಿದ್ಧಪಡಿಸಬೇಕೆಂದು ಆರ್. ನರಸಿಂಹಾಚಾರ್, ಆರ್. ರಘುನಾಥರಾವ್, ಎಂ. ಲಕ್ಷ್ಮೀನಾರಣಪ್ಪ ಮತ್ತು ಬಿ. ಕೃಷ್ಣಪ್ಪ ಅವರುಗಳನ್ನೊಳಗೊಂಡ ಉಪಸಮಿತಿ ನೇಮಕ ಮಾಡುವುದು.
 3. ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಗಳು ಆಯ್ದ ಒಂದಕ್ಕಿಂತ ಹೆಚ್ಚು ವಿಷಯಗಳ ಬಗ್ಗೆ ಲೇಖನಗಳನ್ನು ಬರೆದು ೧೯೧೫ ಏಪ್ರಿಲ್ ೧೫ರೊಳಗೆ, ಪ್ರಾವಿಷನಲ್ ಸೆಕ್ರೆಟರಿ ಬಿ. ಕೃಷ್ಣಪ್ಪ ಅವರಿಗೆ ತಲುಪಿಸುವಂತೆ ಕೋರುವುದು.

 ಆಯ್ದ ಐದು ಅಂಶಗಳು ಇಂತಿವೆ: 

 1. ಕನ್ನಡನಾಡಿನ ಬೇರೆಬೇರೆ ಜಾಗಗಳಲ್ಲಿರುವ ಭಾಷಾಭಿಜ್ಞರಲ್ಲಿ ಐಕಮತ್ಯವನ್ನು ಪರಸ್ಪರ    ಸೌಹಾರ್ದವನ್ನು ಹೆಚ್ಚಿಸುವುದಕ್ಕಾಗಿ ಉತ್ತಮೋಪಾಯಗಳನ್ನು ನಿರ್ಧರಿಸುವುದು.
 2. ಕನ್ನಡನಾಡಿನ ಬೇರೆಬೇರೆ ಭಾಗಗಳಲ್ಲಿ ಪ್ರಚಾರದಲ್ಲಿರುವ ಗ್ರಾಂಥಿಕಭಾಷೆಯನ್ನು ಒಂದೇರೂಪಕ್ಕೆ ತರಲು ತಕ್ಕ ಮಾರ್ಗವನ್ನು ನಿಶ್ಚಯಿಸುವುದು,
 3. ಕನ್ನಡವನ್ನೋದುವ ವಿದ್ಯಾರ್ಥಿಗಳಿಗೆ ಎಲ್ಲಾ ವಿದ್ಯಾಶಾಲೆಗಳಲ್ಲಿಯೂ ಪಾಠದ ಪುಸ್ತಕಗಳು ಒಂದೇ ಆಗಿರುವುದಕ್ಕೆ ಬೇಕಾದ ಪ್ರಯತ್ನಗಳನ್ನು ಮಾಡುವುದು.
 4. ಕನ್ನಡವನ್ನಾಡುವ ಜನಸಾಮಾನ್ಯರಲ್ಲಿ ಲೋಕವ್ಯವಹಾರ ಜ್ಞಾನವು ಸರಳ ಹಾಗೂ ಸುಲಭವಾಗಿ ಹರಡುವಂತೆ ತಕ್ಕ ಸಣ್ಣ ಪುಸ್ತಕಗಳನ್ನು ಬರೆಯಿಸಿ ಪ್ರಚಾರಮಾಡುವುದಕ್ಕೆ ಸಾಧಕವಾದ ಉತ್ತಮೋಪಾಯಗಳನ್ನು ನಿರ್ಣಯಿಸುವುದು,
 5. ಕನ್ನಡದಲ್ಲಿ ಬರೆಯುವ ಭೌತಿಕಾದಿ ನಾನಾ ಶಾಸ್ತ್ರಗಳಲ್ಲಿ ಪ್ರಯೋಗಿಸಬೇಕಾದ ಪಾರಿಭಾಷಿಕ ಶಬ್ದಗಳನ್ನು ನಿರ್ಣಯಿಸುವುದಕ್ಕೆ ತಕ್ಕ ಉತ್ತಮೋಪಾಯಗಳನ್ನು ಪರಿಶೀಲಿಸುವುದು.

ಮೂರನೆಯ ಸಭೆ : (೨೨೧೯೧೫)

೧೯೧೫ ಮಾರ್ಚಿ ೨೨ರಂದು ಸೇರಿದ ಮೂರನೆಯ ಸಭೆಯಲ್ಲಿ ಸಮ್ಮೇಳನವನ್ನು ೩-೫-೧೯೧೫ರಲ್ಲಿ ನಡೆಸಲು ತೀರ್ಮಾನಿಸಿತು. ಮೇಲ್ಕಾಣಿಸಿದ ೫ ವಿಷಯಗಳ ಬಗ್ಗೆ ವಿದ್ಯಾವಿಷಯಕ ಸಮಿತಿಯ ಉಪಸಮಿತಿಯ ವಿನಂತಿಯ ಮೇರೆಗೆ ೩೧ ಲೇಖನಗಳು ಬಂದವು. ಆ ಪೈಕಿ ೭ ಇಂಗ್ಲಿಷಿನಲ್ಲಿ ಉಳಿದವು ಕನ್ನಡದಲ್ಲಿದ್ದವು.

ಈ ಉಪನ್ಯಾಸಗಳನ್ನೆಲ್ಲ ಪರಿಶೀಲಿಸಿ ಸಾಹಿತ್ಯ ಪರಿಷತ್ತಿನ ಸಮ್ಮೇಳನದಲ್ಲಿ ನಿಯಮಗಳನ್ನು ನಿರ್ಧರಿಸುವ ವೇಳೆಯಲ್ಲಿ ಅದರ ಉದ್ದೇಶ ಸಾಧನಕ್ರಮಗಳನ್ನು ಮುಂದೆ ಹೇಳುವ ರೀತಿಯಲ್ಲಿ ವಿವರಿಸಿರುತ್ತಾರೆ:

 1. ಕನ್ನಡ ಭಾಷೆಯಲ್ಲಿ ಪಂಡಿತಯೋಗ್ಯವಾದ ವ್ಯಾಕರಣ, ಚರಿತ್ರೆ, ನಿಘಂಟು ಈ ಮೂರನ್ನೂ ಬರೆಯಿಸುವುದು, ಅಥವಾ ಬರೆಯುವುದಕ್ಕೆ ಸಹಾಯಮಾಡುವುದು.
 2. ನವೀನಶಾಸ್ತ್ರಗಳಿಗೆ ಸಂಬಂಧಪಟ್ಟ ಕನ್ನಡ ಗ್ರಂಥಗಳಲ್ಲಿ ಪ್ರಯೋಗಿಸಲು ಯೋಗ್ಯವಾದ ಪಾರಿಭಾಷಿಕ ಶಬ್ದಗಳ ಕೋಶವನ್ನು ಪ್ರಕಟಿಸುವುದು.
 3. ತತ್ವಶಾಸ್ತ್ರ, ಪ್ರಕೃತಿವಿಜ್ಞಾನ, ಚರಿತ್ರೆ, ಸಾಹಿತ್ಯ ಇವೇ ಮೊದಲಾದ ವಿಷಯಗಳಿಗೆ ಸಂಬಂಧಪಡುವ ಗ್ರಂಥಗಳನ್ನು ಕನ್ನಡದಲ್ಲಿ ಬರೆಯುವುದಕ್ಕೆ ಪ್ರೋತ್ಸಾಹಕೊಟ್ಟು ಅವುಗಳನ್ನು ಪ್ರಚುರಪಡಿಸುವುದು.
 4. ಕನ್ನಡ ಭಾಷೆಗೂ ಕನ್ನಡ ಗ್ರಂಥಗಳಿಗೂ ಸಂಬಂಧಪಟ್ಟ ಎಲ್ಲಾ ಚರ್ಚಾಂಶಗಳನ್ನೂ ವಿಚಾರಮಾಡಿ ನಿರ್ಣಯಿಸುವುದು.
 5. ಕನ್ನಡವನ್ನುಳಿದು ಇತರ ಭಾಷೆಗಳಲ್ಲಿರುವ ಉತ್ತಮ ಗ್ರಂಥಗಳನ್ನು ಕನ್ನಡಿಸಿ ಪ್ರಕಟಿಸುವುದು.
 6. ಉತ್ಕೃಷ್ಟವಾದ ಪ್ರಾಚೀನ ಗ್ರಂಥಗಳನ್ನೂ, ಕನ್ನಡ ದೇಶಗಳ ಚರಿತ್ರೆಯನ್ನೊಳಗೊಂಡ ಗ್ರಂಥಗಳನ್ನೂ ಸಂಗ್ರಹಿಸಿ, ಅದನ್ನು ಪರಿಷ್ಕರಿಸಿ ಪ್ರಕಟಿಸುವುದೂ ಅಲ್ಲದೆ, ಕನ್ನಡನಾಡಿನ ಪೂರ್ವಸ್ಥಿತಿಯನ್ನು ವಿಶದಗೊಳಿಸುವ ವಸ್ತುಗಳನ್ನು ಕೂಡಿಟ್ಟು ಅವುಗಳನ್ನು ಕಾಪಾಡುವುದಕ್ಕಾಗಿ ಪ್ರಾಚೀನ ವಸ್ತುಸಂಗ್ರಹಾಲಯವನ್ನೇರ್ಪಡಿಸುವುದು.
 7. ಕರ್ಣಾಟಕ ಭಾಷಾಸಂಸ್ಕರಣ, ಕರ್ಣಾಟಕ ಗ್ರಂಥಾಭಿವೃದ್ಧಿಗಳನ್ನು ಕುರಿತು ಪಂಡಿತಯೋಗ್ಯವಾದ ಲೇಖನಗಳನ್ನೊಳಕೊಂಡ ಕನ್ನಡದ ಪತ್ರಿಕೆಗಳನ್ನು ಪ್ರಕಟಿಸುವುದು.
 8. ಕರ್ಣಾಟಕ ಗ್ರಂಥಕರ್ತರು ಬರೆದಿರುವ ಪುಸ್ತಕಗಳನ್ನು ಕೊಂಡುಕೊಳ್ಳುವುದರಿಂದಾಗಲಿ, ಅವರು ಬರೆದಿರುವ ಪುಸ್ತಕಗಳನ್ನು ಅಚ್ಚು ಹಾಕಿಸಿಕೊಳ್ಳುವುದಕ್ಕೆ ಮುಂಗಡವಾಗಿ ಹಣವನ್ನು ಕೊಡುವುದರಿಂದಾಗಲಿ, ಅವರ ಗ್ರಂಥಗಳ ಮುದ್ರಣಾಧಿಕಾರವನ್ನು (Copyright) ಹಣಕೊಟ್ಟು ತೆಗೆದುಕೊಳ್ಳುವುದರಿಂದಾಗಲಿ ಅವರಿಗೆ ಪ್ರೋತ್ಸಾಹಕೊಟ್ಟು, ಸ್ವತಂತ್ರ ಗ್ರಂಥಗಳನ್ನು ಬರೆದು ತಾವೇ ಹಣ ವೆಚ್ಚಮಾಡಿ ಪ್ರಕಟಿಸುವ ಗ್ರಂಥಕರ್ತರಿಗೆ ಬಿರುದನ್ನಾಗಲಿ ಸಂಭಾವನೆಯನ್ನಾಗಲಿ ಕೊಡುವುದು.
 9. ಕರ್ಣಾಟಕ ಭಾಷೆಗೂ ಸಾಹಿತ್ಯಕ್ಕೂ ಸಂಬಂಧಿಸಿದ ಅಪೂರ್ವ ಪರಿಶೋಧನ ಕಾರ್ಯದಲ್ಲಿ ನಿರತರಾಗಿರುವ ಕನ್ನಡ ಅಥವಾ ಸಂಸ್ಕೃತ ವಿದ್ವಾಂಸರಿಗೆ ಪಂಡಿತವೇತನಗಳನ್ನು ಕೊಡುವುದು.
 10. ಕರ್ಣಾಟಕ ಭಾಷೋನ್ನತಿಗೂ, ಗ್ರಂಥಾಭಿವೃದ್ಧಿಗೂ ಸಂಬಂಧಪಡುವ ಸಮಸ್ತ ವಿಷಯಗಳನ್ನೂ ಆಯಾ ಸರ್ಕಾರದವರ ಪರಾಮರ್ಶಕ್ಕೆ ತಂದು ಅವನ್ನು ತೃಪ್ತಿಕರವಾಗಿ ವ್ಯವಸ್ಥೆಮಾಡಿಸಿಕೊಳ್ಳುವುದಕ್ಕೆ ತಕ್ಕ ಏರ್ಪಾಡುಗಳನ್ನು ಮಾಡುವುದು.
 11. ಕನ್ನಡ ಮಾತನ್ನಾಡುವ ಪ್ರದೇಶಗಳಲ್ಲಿ ಸಾಧ್ಯವಾದಷ್ಟು ಸ್ಥಳಗಳಲ್ಲಿ ಕನ್ನಡದ ವಾಚನಾಲಯಗಳನ್ನೂ ಪುಸ್ತಕಭಂಡಾರಗಳನ್ನೂ ಸ್ಥಾಪಿಸುವುದು.
 12. ಕನ್ನಡ ನಾಡುಗಳ ಪ್ರಮುಖರನ್ನು ಸೇರಿಸಿ ಆಗಾಗ ಸಭೆಗಳನ್ನೇರ್ಪಡಿಸುವುದು, ಮತ್ತು ಸಮರ್ಥರಾದ ವಿದ್ವಾಂಸರಿಂದ ಉಪನ್ಯಾಸಗಳನ್ನು ಮಾಡಿಸುವುದು.

ಅಲ್ಲದೆ, ಸಾಮಾನ್ಯವಾಗಿ ಕರ್ಣಾಟಕ ಭಾಷೋನ್ನತಿಗೂ ಗ್ರಂಥಾಭಿವೃದ್ಧಿಗೂ ಆವಶ್ಯಕವಾದ ಇತರ ಪ್ರಯತ್ನಗಳನ್ನು ಮಾಡುವುದು.

೨೨೧೯೧೫ರಲ್ಲಿ ಸೇರಿದ ಉಪಸಮಿತಿ ತೀರ್ಮಾನಿಸಿದಂತೆ ೩ ಮೇ ೧೯೧೫ರಂದು ಕರ್ಣಾಟಕ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಾಗಿ ಏರ್ಪಟ್ಟ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನವು ಮಧ್ಯಾಹ್ನ ೩ ಗಂಟೆಗೆ ಪ್ರಾರಂಭವಾಯಿತು. ಪ್ರಥಮ ಸಮ್ಮೇಳನದಲ್ಲಿ ಭಾಗವಹಿಸಿದ ಡಿವಿಜಿ ಅವರು ತಮ್ಮ ಜ್ಞಾಪಕ ಚಿತ್ರಶಾಲೆ – ಪುಟ ೫೭ರಲ್ಲಿ ಸ್ಪಷ್ಟವಾಗಿ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಾದದ್ದು ಬೆಂಗಳೂರು ಸೆಂಟ್ರಲ್ ಕಾಲೇಜಿನ ಎದುರುಗಡೆಯಿರುವ ಈಗಿನ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜ್ ಕಟ್ಟಡದ ನಡುವಣ ಸಭಾಮಂದಿರದಲ್ಲಿ ಎಂದಿದ್ದಾರೆ.ನಿಯಮಿತ  ಕಾಲಕ್ಕೆ ಎಷ್ಟೋ ಮುಂಚಿತವಾಗಿಯೇ ವಿಶಾಲವಾದ ಹಜಾರವೆಲ್ಲಾ ಜನಸಂದಣಿಯಿಂದ ತುಂಬಿತ್ತು.

ಕರ್ಣಾಟಕದ ನಾನಾ ಪ್ರಾಂತಗಳ ಪ್ರಮುಖರೂ, ವಿದ್ವಾಂಸರೂ ದಯೆಮಾಡಿಸಿದ್ದರು. ಧಾರವಾಡ, ಬಿಜಾಪುರ, ಬೆಳಗಾಮು, ಗಾಲ್ವಿಯರ, ಬೊಂಬಾಯಿ ನಗರ, ಬೊಂಬಾಯಾಧಿಪತ್ಯದ ದೇಶೀಯ ಸಂಸ್ಥಾನಗಳು, ಮದರಾಸು ನಗರ, ಬಳ್ಳಾರಿ, ದಕ್ಷಿಣ ಕನ್ನಡೀಯ, ಮೈಸೂರು ಸಂಸ್ಥಾನದ ಡಿಸ್ಟ್ರಿಕ್ಟ್ಗಳು – ಈ ಪ್ರಾಂತಗಳ ಅನೇಕ ಪ್ರತಿನಿಧಿಗಳು ದಯೆಮಾಡಿಸಿ ಸಮ್ಮೇಳನವನ್ನು ಅಲಂಕರಿಸಿದ್ದರು. ಧಾರವಾಡದ ಕರ್ಣಾಟಕ ವಿದ್ಯಾವರ್ಧಕ ಸಂಘದ ಮತ್ತು ಕರ್ಣಾಟಕ ವಿದ್ಯಾವ್ಯಾಸಂಗ ಸಮಾಜದ, ಬೊಂಬಾಯಿ ನಗರದ ಕರ್ಣಾಟಕ ಸಭೆಯ, ಮತ್ತು ಮೈಸೂರು ಸಂಸ್ಥಾನದ ಕಾಲೇಜು ಮತ್ತು ಹೈಸ್ಕೂಲುಗಳ ಪ್ರತಿನಿಧಿಗಳೂ ದಯೆಮಾಡಿಸಿದ್ದರು. ಧಾರವಾಡದ ‘ಕರ್ಣಾಟಕ ವೃತ್ತ ಮತ್ತು ಧನಂಜಯ’, ಹುಬ್ಬಳ್ಳಿಯ ‘ಸಚಿತ್ರ ಭಾರತ’ ಪತ್ರಿಕೆ, ಮಂಗಳೂರಿನ ‘ಸ್ವದೇಶಾಭಿಮಾನಿ’ ಮತ್ತು ಮೈಸೂರು ಸಂಸ್ಥಾನದ ವೃತ್ತಾಂತ ಪತ್ರಿಕೆಗಳ ಸಂಪಾದಕರೂ ಹಾಜರಿದ್ದರು. ಹೀಗಿದ್ದುದರಿಂದ ಈ ಸಮ್ಮೇಳನಕ್ಕೆ ಕನ್ನಡ ನಾಡುಗಳ ಎಲ್ಲಾ ಕಡೆಗಳಿಂದಲೂ ಪ್ರತಿನಿಧಿಗಳು ಬಂದಿದ್ದಂತೆ ಭಾವಿಸಬಹುದು.

ಪರಿಷತ್ತಿನ ಸ್ಥಾಪನೆ ಎಲ್ಲಿ?

ಡಿವಿಜಿ ಅವರು ಸಭೆಗೆ ಬಂದವರನ್ನು ಕುರಿತು ಹೀಗೆ ಹೇಳಿದ್ದಾರೆ:

“ಸಾಹಿತ್ಯ ಪರಿಷತ್ತಿನ ಸ್ಥಾಪನೆಯಾದದ್ದು ಬೆಂಗಳೂರು ಸೆಂಟ್ರಲ್ ಕಾಲೇಜಿನ ಎದುರುಗಡೆಯಿರುವ ಈಗಿನ ಆರ್ಟ್ಸ್ ಅಂಡ್ ಸಯನ್ಸ್ ಕಾಲೇಜ್ ಕಟ್ಟಡದ ನಡುವಣ ಸಭಾಮಂದಿರದಲ್ಲಿ.

ಪರಿಷತ್ತಿನ ಸಮಾರಂಭಕ್ಕಾಗಿ ಕನ್ನಡದೇಶದ ನಾನಾಭಾಗಗಳಿಂದ ಗಣ್ಯಜನ ಬಂದಿದ್ದರು. ಧಾರವಾಡದಿಂದ ರಾಮಚಂದ್ರ ಹಣಮಂತ ದೇಶಪಾಂಡೆ, ಮುದವೀಡು ಕೃಷ್ಣರಾಯರು, ಆಲೂರು ವೆಂಕಟರಾಯರು, (ಕರ್ಣಾಟಕ ಪ್ರಿಂಟಿಂಗ್ ಪ್ರೆಸ್ಸಿನ) ಜಠಾರ್ ಅವರು ಬಂದಿದ್ದರು. ಬಳ್ಳಾರಿಯಿಂದ  ವಕೀಲ ತಿಮ್ಮಕೃಷ್ಣರಾಯರು, ಹೊಸಪೇಟೆಯ ರಾವ್ ಬಹದ್ದೂರ್ ಸಿ. ಹನುಮಂತಗೌಡರು, ಮದರಾಸಿನಿಂದ ಬೆನಗಲ್ ರಾಮರಾಯರು, ಮಂಗಳೂರಿನಿಂದ ಮುಳಿಯ ತಿಮ್ಮಪ್ಪಯ್ಯನವರು, ಮೈಸೂರಿನಿಂದ ಪುಂಗನೂರು ರಾಘವೇಂದ್ರಾಚಾರ್ಯರು – ಮೊದಲಾದ ವಿದ್ವಾಂಸರು ದಯಮಾಡಿಸಿದ್ದರು. ಬೆಂಗಳೂರು ಹೊರಗಿನಿಂದ ಬಂದಿದ್ದವರು ನೂರೈವತ್ತು- ಇನ್ನೂರು ಮಂದಿ ಇರಬಹುದು. ಬೆಂಗಳೂರಿನ ಸ್ಥಳೀಕರು ಮುನ್ನೂರು – ನಾಲ್ಕುನೂರು ಮಂದಿ. ಒಟ್ಟಿನಲ್ಲಿ ಅದು ದೊಡ್ಡ ಸಭೆ. ಬಿ. ಎಂ. ಶ್ರೀಕಂಠಯ್ಯನವರು ಅದರಲ್ಲಿದ್ದ ಹಾಗೆ ನನಗೆ ಜ್ಞಾಪಕವಿಲ್ಲ. ವೆಂಕಣ್ಣಯ್ಯ, ಕೃಷ್ಣಶಾಸ್ತ್ರಿ – ಇವರು ಸಭೆಯಲ್ಲಿ ಎಲ್ಲಿಯೋ ಇದ್ದರಂತೆ. ಅವರಿಗೂ ನನಗೂ ಆಗ ಪರಿಚಯವಾಗಿರಲಿಲ್ಲ. ಅವರಿಬ್ಬರೂ ಆಗ್ಗೆ ಇನ್ನೂ ಅಪ್ರಸಿದ್ಧರು.”

೧೯೧೫  ಮೊದಲನೇ ದಿನದ ಸಮ್ಮೇಳನ

ಅಗ್ರಾಸನಾಧಿಪತಿಗಳನ್ನು ಚುನಾಯಿಸುವುದು ಸಮ್ಮೇಳನದ ಕಾರ್ಯಗಳಲ್ಲಿ ಮೊದಲನೆಯದಾಗಿದ್ದುದರಿಂದ, ಅಲ್ಲಿ ಸೇರಿದ್ದ ಮಹಾಜನಗಳು ಮ||ರಾ|| ರಾಜಮಂತ್ರಪ್ರವೀಣ ಎಚ್. ವಿ. ನಂಜುಂಡಯ್ಯ, ಎಂ.ಎ., ಎಂ.ಎಲ್., ಸಿ. ಐ.ಇ., ಎಂಬುವರನ್ನು ಅಗ್ರಾಸನಾಧಿಪತಿಗಳನ್ನಾಗಿ ಏಕಕಂಠ್ಯದಿಂದ ಚುನಾಯಿಸಿದರು. ಅಗ್ರಾಸನಾಧಿಪತಿಗಳು ಪೀಠವನ್ನಲಂಕರಿಸಿದ ಕೂಡಲೆ ಬೊಂಬಾಯಿಯ ಕರ್ಣಾಟಕ ಸಭೆಯ ಪ್ರತಿನಿಧಿಗಳಾದ ಮ|| ವಿ. ಬಿ. ಧಾರ್ವಾಡಕರ್, ಬಿ. ಎ. ಅವರು ತಾವು ರಚಿಸಿದ್ದ ದೇವತಾಪ್ರಾರ್ಥನಾರೂಪದ ಕೃತಿಯೊಂದನ್ನು ಮಧುರಧ್ವನಿಯಿಂದ ಹಾಡಿದರು. ಶ್ರೀಮನ್ಮಹಾರಾಜರವರೂ ಶ್ರೀಮದ್ಯುವರಾಜರವರೂ ಮೈಸೂರು ಸಂಸ್ಥಾನದ ದಿವಾನ್ ಸಾಹೇಬರವರೂ, ಮ || ಎಂ. ಎ. ಬಾಳರಾಜ ಅರಸಿನವರೂ, ರಾವ್ಬಹದೂರ್ ಫ್ರೊಫೆಸರ್ ಎಸ್. ಮಂಗೇಶರಾಯರವರೂ, ಫ್ರೊಫೆಸರ್ ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್ಯರವರೂ, ಮದರಾಸಿನ ಡಾಕ್ಟರ್ ಸಿ. ಬಿ. ರಾಮರಾಯರವರೂ ಬರೆದು ಕಳುಹಿಸಿದ್ದ ಪ್ರೋತ್ಸಾಹಕ ಪತ್ರಿಕೆಗಳನ್ನು ರಾವ್ಬಹದ್ದೂರ್ ಎಂ. ಶಾಮರಾಯರವರು ಸಭೆಗೆ ಶ್ರುತಪಡಿಸಿದರು. ಸಭೆಯವರ ಸಂತೋಷಾತಿಶಯದ ಕೋಲಾಹಲದ ಮಧ್ಯದಲ್ಲಿ ಅಗ್ರಾಸನಾಧಿಪತಿಗಳು ಅನೇಕ ನವೀನ ವಿಷಯಗರ್ಭಿತವಾದ ತಮ್ಮ ಪ್ರೌಢೋಪನ್ಯಾಸವನ್ನು ಪಠಿಸಿದರು.

ಉಪನ್ಯಾಸ ಪ್ರವಾಹ

ಅದೇ ಮಧ್ಯಾಹ್ನಾತ್ಪರ ಸುಮಾರು ಎರಡೂವರೆ ಗಂಟೆಯಿಂದ ಆರು ಗಂಟೆಯವರೆಗೂ ಉಪನ್ಯಾಸಗಳು. ಕನ್ನಡ ನಾಡುಗಳ ಹಿರಿಮೆ, ಕನ್ನಡ ಭಾಷೆಯ ಹಿರಿಮೆ, ನಮ್ಮ ಪೂರ್ವಕವಿಗಳು, ನಮ್ಮ ಜನಕ್ಕೆ ಬೇಕಾಗಿರುವಂಥ ಸಾಹಿತ್ಯ, ಪರಿಷತ್ತಿನಿಂದ ದೇಶಕ್ಕೆ ಆಗಬಹುದಾದ ಪ್ರಯೋಜನಗಳು – ಈ ನಾನಾ ವಿಷಯಗಳನ್ನು ಕುರಿತು ವಿದ್ವಾಂಸರುಗಳು ಭಾಷಣ ಮಾಡಿದರು.

ಅಗ್ರಾಸನಾಧಿಪತಿಗಳ ಉಪನ್ಯಾಸವು ಸಾಮಾಜಿಕರಿಗೆ ಆನಂದವನ್ನುಂಟುಮಾಡಿತು. ಅಹೂತರಾಗಿ ಬೊಂಬಾಯಿ ನಗರದಿಂದ ದಯೆಮಾಡಿಸಿದ್ದ ಮ|| ಆರ್. ಎ. ಜಹಗೀರ್ದಾರ್ ಅವರು ಸಮ್ಮೇಳನದ ಪ್ರಥಮೋದ್ದೇಶವನ್ನು ಕುರಿತು ಬರೆದ ತಮ್ಮ ಲೇಖನವನ್ನು ಓದಿದರು. ಬಳಿಕ ದಕ್ಷಿಣ ಕನ್ನಡದ ಪುತ್ತೂರಿನಿಂದ ಆಗಮಿಸಿದ್ದ ಮ|| ಬೈಂದೂರು ಆನಂದರಾಯರು ಕನ್ನಡ ನಾಡುಗಳ ಗ್ರಾಂಥಿಕಭಾಷೆಯ ಏಕರೂಪತೆಯ ಸಾಧನಮಾರ್ಗವನ್ನು ಕುರಿತು ತಾವು ಬರೆದುದನ್ನು ಪಠಿಸಿದರು. ಆ ಮೇಲೆ ಮ|| ಗೋವಿಂದರಾಜಯ್ಯಂಗಾರ್ಯರು ಸಮ್ಮೇಳನದ ಪ್ರಥಮೋದ್ದೇಶವನ್ನು ಕುರಿತು ತಾವು ಬರೆದುದನ್ನೂ, ತದನಂತರದಲ್ಲಿ ಮ|| ಎಂ. ಎಸ್. ಪುಟ್ಟಣ್ಣನವರು ಕರ್ಣಾಟಕ ಭಾಷೆಯ ಪ್ರಾಚೀನ ನವೀನಸ್ಥಿತಿಗಳನ್ನು ಕುರಿತು ತಾವು ಬರೆದ ಲೇಖನವನ್ನೂ ಓದಿದರು. ಆಗ ಮಾಜಿ ಕೌನ್ಸಿಲರ್ ದಿವಾನ್ ಬಹದೂರ್ ರಾಜಸಭಾಭೂಷಣ ಮ|| ಪುಟ್ಟಣ್ಣಶೆಟ್ಟಿಯವರು ಆರು ಗಂಟೆಯಾಗಿ ಸಾಯಂಕಾಲವಾಗುತ್ತಾ ಬಂತೆಂತಲೂ, ಉಳಿದ ಲೇಖನಗಳನ್ನು ಓದಿ ನೋಡುವುದಕ್ಕೂ ಸಮ್ಮೇಳನದ ಮುಂದಿನ ದಿವಸಗಳಲ್ಲಿ ವಿಚಾರ ಮಾಡಬೇಕಾದ ವಿಷಯಗಳನ್ನು ನಿರ್ಧರಿಸುವುದಕ್ಕೂ ವಿಷಯ ನಿರ್ಧಾರಕ ಮಂಡಲಿಯೊಂದನ್ನು ಏರ್ಪಡಿಸುವುದು ಆವಶ್ಯಕವೆಂದು ತಿಳಿಸಿದರು. ಈ ಮಂಡಲಿಯಲ್ಲಿ ಮೈಸೂರಿನವರು ಒಂಬತ್ತು ಮಂದಿ, ಬೊಂಬಾಯಿ ಅಧಿಪತ್ಯದವರು ಆರುಮಂದಿ, ದಕ್ಷಿಣ ಮಹಾರಾಷ್ಟ್ರ ಸಂಸ್ಥಾನಗಳಿಗೆ ಸಂಬಂಧಪಟ್ಟವರು ಇಬ್ಬರು, ಮದರಾಸಾಧಿಪತ್ಯದವರು ಮೂರು ಮಂದಿ, ಆವಶ್ಯಕವಿದ್ದಲ್ಲಿ ಮತ್ತಷ್ಟು ಮಂದಿ ಇರಬಹುದೆಂದು ತೀರ್ಮಾನವಾಯಿತು.

ಇಲ್ಲಿಗೆ ಪ್ರಥಮ ದಿವಸದ ಸಮ್ಮೇಳನವು ಮುಗಿಯಿತು. ಆ ಮೇಲೆ ವಿಷಯ ನಿರ್ಧಾರಕ ಮಂಡಲಿಯವರು ಅದೇ ಹಜಾರದಲ್ಲಿ ಕುಳಿತು ಸಮ್ಮೇಳನದ ಎರಡನೆಯ ದಿನದಲ್ಲಿ ಚರ್ಚಿಸಿ ತೀರ್ಮಾನಿಸಬೇಕಾದ ವಿಷಯಗಳ ಮಸೂದೆಯನ್ನು ಪರ್ಯಾಲೋಚಿಸಿ ನಿರ್ಧರಿಸಿದರು.

ಪ್ರಥಮ ಕನ್ನಡ ಸಮ್ಮೇಳನದಲ್ಲಿ ಇಂಗ್ಲಿಷ್ ಬಳಕೆ

ಮೊದಲ ದಿನ

 ೧೯೧೫ರಲ್ಲಿ ಇಂಗ್ಲಿಷಿಗೆ ಪ್ರಾಧಾನ್ಯ ಹೇಗಿತ್ತು ಸಾರ್ವಜನಿಕ ಜೀವನದಲ್ಲಿ ಎಂಬುದಕ್ಕೆ ಈ ಸಮ್ಮೇಳನದ ಕೆಲವು ಸಂಗತಿಗಳು ಸಾಕ್ಷಿಯಾಗಿವೆ.

ಮೊದಲ ಸಂಗತಿ ಎಂದರೆ ಸಮ್ಮೇಳನದ ಆಹ್ವಾನ ಪತ್ರಿಕೆ ಇಂಗ್ಲಿಷಿನಲ್ಲಿತ್ತು. ಈ ಬಗ್ಗೆ ಮೈಸೂರು ಸ್ಟಾರ್ ಪತ್ರಿಕೆ ೨-೫-೧೯೧೫ ಭಾನುವಾರ ಪುಟ ೫ರಲ್ಲಿ ಪ್ರಕಟವಾದ ವಾಚಕರ ಪತ್ರದಲ್ಲಿ ಈ ಸಂಗತಿಯನ್ನು ತಿಳಿಸಿ ಟೀಕಿಸಿದ್ದಾರೆ.

ಬೆಂಗಳೂರಿನಲ್ಲಿ ಸೇರುವ ಕನ್ನಡಿಗರ ಸಮ್ಮೇಳನಕ್ಕೆ ಸಂಬಂಧಪಟ್ಟ ಆಹ್ವಾನಪತ್ರಿಕೆ ಮೊದಲಾದವುಗಳು ಇಂಗ್ಲಿಷಿನಲ್ಲಿ ಅಚ್ಚುಮಾಡಿಸಿ ಕಳುಹಿಸಲ್ಪಟ್ಟಿವೆ. ಆಹ್ವಾನ ಮಾಡಲ್ಪಟ್ಟವರಲ್ಲಿ ಬರಿಯ ಕನ್ನಡವನ್ನು ಬಲ್ಲವರು ಅದನ್ನು ಓದಿಸಿಕೊಳ್ಳುವುದಕ್ಕಾಗಿ ಇಂಗ್ಲಿಷ್ ಪ್ಯಾಸ್ ಮಾಡಿದವರಲ್ಲಿಗೆ ಹೋಗಬೇಕಾಯಿತು. ಸಮ್ಮೇಳನವನ್ನು ಕೂಡಿಸುವವರು ಕನ್ನಡಿಗರು, ಅಲ್ಲಿ ಸೇರುವವರು ಕನ್ನಡಿಗರು, ಅಲ್ಲಿ ಪಡೆದ ಲಾಭವು ಕನ್ನಡದ ಏಳ್ಗೆಯಾಗಿರುವಾಗ ಇಂಗ್ಲಿಷಿನ ಮಧ್ಯಸ್ತಿಕೆ ಯಾತಕ್ಕೆ? ಇದು ಪ್ರಥಮ ಕಬಳದಲ್ಲೇ ಮಕ್ಷಿಕಾಪಾತವಾದಂತಲ್ಲವೆ? ಇದು ಸ್ವಭಾಷಾಭಿಮಾನದ ಲಕ್ಷಣವೆ? ಇಂಥ ಪರಭಾಷಾ ಪ್ರೇಮದಿಂದಲೇ ಅಲ್ಲವೆ ನಮ್ಮ ಸ್ವಭಾಷಾಮಾತೆಯು ಮೂಲೆಮುಟ್ಟಾಗಿರುವುದು? ಆ ಹೀನಸ್ಥಿತಿಯನ್ನು ನಿವಾರಣೆ ಮಾಡುವ ಪ್ರಯತ್ನದಲ್ಲೂ ಇಂಥ ನಡೆಯಾದರೆ ಮುಂದಣ ಸಭೆಯ ಕೆಲಸವೂ, ಅದರ ಚರಿತಾರ್ಥವೂ, ಎಷ್ಟುಮಟ್ಟಿಗೆ ನಮ್ಮ ಭಾಷೆಗೆ ಹಿತವನ್ನು ಮಾಡುವುದೋ ನೋಡಬೇಕು ಎಂದು ನಮ್ಮ ಪತ್ರವ್ಯವಹಾರಕರೊಬ್ಬರು ಬರೆದಿರುತ್ತಾರೆ.

ಇಂಗ್ಲಿಷಿನಲ್ಲಿ ಪ್ರಾರಂಭೋಪನ್ಯಾಸ

ಸಮ್ಮೇಳನದ ಅಧ್ಯಕ್ಷರಾದ ಹೆಚ್. ವಿ. ನಂಜುಂಡಯ್ಯನವರ ಭಾಷಣವೂ ಇಂಗ್ಲಿಷ್ನಲ್ಲಿದ್ದು ಆ ಬಗ್ಗೆ ಡಿವಿಜಿ ಅವರು ಈ ರೀತಿ ಬರೆದಿದ್ದಾರೆ.

ಹೆಚ್.ವಿ. ನಂಜುಂಡಯ್ಯನವರು ಅಧ್ಯಕ್ಷರಾಗಿ ಪ್ರಾರಂಭೋಪನ್ಯಾಸ ಮಾಡಿದರು. ಆದರೆ ಇಂಗ್ಲಿಷಿನಲ್ಲಿ! ವೇದಿಕೆಯ ಎದುರುಗಡೆ ಮೊದಲನೆಯ ಸಾಲಿನ ನಾಲ್ಕೈದು ಪೀಠಗಳ ಪೈಕಿ ಒಂದರಲ್ಲಿ ಬೆಳ್ಳಾವೆ ವೆಂಕಟನಾರಣಪ್ಪನವರು ಕುಳಿತಿದ್ದರು. ನಾನು ಅವರ ಪಕ್ಕದಲ್ಲಿದ್ದೆ. ನಂಜುಂಡಯ್ಯನವರು ಇಂಗ್ಲಿಷಿನಲ್ಲಿ ತಮ್ಮ ಮೊದಲ ಮಾತುಗಳನ್ನು ನುಡಿಯುತ್ತಿದ್ದಂತೆಯೇ ವೆಂಕಟನಾರಣಪ್ಪನವರು ಮೆಲ್ಲನೆಯ ಧ್ವನಿಯಲ್ಲಿ-

“Nonsense. ಇದು ಶುದ್ಧ Nonsense ಅಷ್ಟೆ” – ಎಂದರು. ನಂಜುಂಡಯ್ಯನವರಿಗೆ ಅದು ಕೇಳಿಸಿರಬೇಕು. ಅವರ ಎಡಮೀಸೆ ಹಾರಿತು. ಅವರನ್ನು ಬಲ್ಲವರಿಗೆ ಅದು ನಗುವಿನ ಲಾಂಛನವೆಂಬುದು ಗೊತ್ತಿತ್ತು. ನಂಜುಂಡಯ್ಯನವರು ವೆಂಕಟನಾರಣಪ್ಪನವರ ಟೀಕೆಯನ್ನು ಕೇಳಲಿಲ್ಲವೋ ಏನೋ ಎಂಬಂತೆ ಉಪನ್ಯಾಸ ಮುಗಿಸಿ ಸಭೆ ಪುನಃ ಅದೇ ಜಾಗದಲ್ಲಿ ಆ ಮಧ್ಯಾಹ್ನ ಎರಡೂವರೆ ಗಂಟೆಗೆ ಸೇರತಕ್ಕದ್ದೆಂದು ತೀರ್ಮಾನ ಹೇಳಿ, ವೇದಿಕೆಯಿಂದ ಇಳಿದು ಬಂದು ವೆಂಕಟನಾರಣಪ್ಪನವರ ಹತ್ತಿರ ನಿಂತು, “ಅದಕ್ಕೇನು ಕನ್ನಡದಲ್ಲಿ ಮಾತಿಲ್ಲವೋ?”ಎಂದು ಕೇಳಿದರು.

ವೆಂಕಟನಾರಣಪ್ಪನವರು ನಕ್ಕರು. ನನ್ನ ಕಡೆ ತಿರುಗಿ “ಏನಪ್ಪಾ Nonsense ಅಂಬೋದಕ್ಕೆ ಕನ್ನಡದಲ್ಲಿ ಏನು?” ಎಂದು ಕೇಳಿದರು. ನಾನು “ನಾನ್ಸೆನ್ಸೇ” ಎಂದೆ. ಆ ಕ್ಷಣ ನನಗೆ ಬೇರೆ ಏನೂ ಹೊಳೆಯಲಿಲ್ಲ. ಆಮೇಲೆ ನಂಜುಂಡಯ್ಯನವರು ಒಂದು ಸಣ್ಣ ವಿವರಣೆ ಕೊಟ್ಟರು:

“ನಾವು ಈಗ ಮಾಡುತ್ತಿರುವ ಪ್ರಯತ್ನ ಕನ್ನಡ ತಿಳಿಯದ ಜನರಿಗೂ ತಿಳಿಯಬೇಕಾದದ್ದು. ನಮ್ಮ ಪರಿಷತ್ತಿಗೆ ಹಣ ಕೊಡಬೇಕಾದ ಸರಕಾರಕ್ಕೂ ತಿಳಿಯಬೇಕು; ಸರಕಾರದ ಮೇಲೆ ಉಸ್ತುವಾರಿ ನಡೆಸುವ ಬ್ರಿಟಿಷ್ ರೆಸಿಡೆಂಟರಿಗೂ ತಿಳಿಯಬೇಕು. ಅವರಿಗೆಲ್ಲ ತಿಳಿದರೆ ನಮಗೇನೂ ನಷ್ಟವಾಗದು; ಕೊಂಚ ಪ್ರಯೋಜನವೂ ಇರಬಹುದು ಅಲ್ಲವೇ?”

ಎರಡನೆಯ ದಿವಸದ ಸಮ್ಮೇಳನದಲ್ಲಿ ನಡೆದ ಕೆಲಸ (೧೯೧೫)

ಇದೇ ಹೈಸ್ಕೂಲಿನ ಹಜಾರದಲ್ಲಿ ಸಮ್ಮೇಳನವು ಅಪರಾಹ್ನ ೩ ಗಂಟೆಗೆ ಸರಿಯಾಗಿ ಸೇರಿತು. ಸಭೆಯ ಪ್ರಾರ್ಥನಾನುಸಾರವಾಗಿ ದಿವಾನ್ ಬಹದೂರ್ ರಾಜಸಭಾಭೂಷಣ ಮ|| ಕೆ. ಪಿ. ಪುಟ್ಟಣ್ಣ ಶೆಟ್ಟಿಯವರು ಅಗ್ರಾಸನವನ್ನು ಅಲಂಕರಿಸಿದರು. ಮುಂದೆ ವಿವರಿಸಲ್ಪಡುವ ಸಲಹೆಗಳು ಚರ್ಚಿತವಾಗಿ ತೀರ್ಮಾನಿಸಲ್ಪಟ್ಟುವು:

೧. ಕರ್ಣಾಟಕ ಭಾಷಾ ಸಂಸ್ಕರಣಕ್ಕಾಗಿಯೂ ಕರ್ಣಾಟಕ ಗ್ರಂಥಾವಳಿಯ ಅಭಿವೃದ್ಧಿಗಾಗಿಯೂ ಬೆಂಗಳೂರಲ್ಲಿ ಕರ್ಣಾಟಕ ಸಾಹಿತ್ಯ ಪರಿಷತ್ತು ಎಂಬ ಹೆಸರಿನೊಡನೆ ಪ್ರಧಾನಸಭೆಯೊಂದು ಸ್ಥಾಪಿತವಾಗಬೇಕು.

೨. ಬೊಂಬಾಯಿ, ಮದರಾಸು, ಹೈದರಾಬಾದು ಮತ್ತು ಕೊಡಗು ಪ್ರಾಂತ್ಯಗಳಲ್ಲಿ ಕರ್ಣಾಟಕ ಸಾಹಿತ್ಯ ಪರಿಷತ್ತಿಗೆ ಶಾಖೆಗಳಿರಬೇಕು; ಮತ್ತು ಈ ಪರಿಷತ್ತಿನ ಉದ್ದೇಶಗಳನ್ನೇ ಇಟ್ಟುಕೊಂಡು ಕೆಲಸಮಾಡುವ ಇತರ ಸಂಘಗಳನ್ನು ತನ್ನ ಜತೆಗೆ ಸೇರಿಸಿಕೊಳ್ಳುವುದಕ್ಕೆ ಕರ್ಣಾಟಕ ಸಾಹಿತ್ಯ ಪರಿಷತ್ತಿಗೆ ಅಧಿಕಾರವಿರಬೇಕು.

ನಿಬಂಧನೆಗಳ ರಚನೆ

ಅಂದಿನ ಬೆಳಗ್ಗೆ ಸಂಸ್ಥೆಯ ನಿಯಮಾವಳಿಯನ್ನು ತಯಾರು ಮಾಡುವುದಕ್ಕಾಗಿ ನೇಮಕವಾಗಿದ್ದ ಉಪಸಮಿತಿ ತನ್ನ ನಿಯಮಗಳ ಕರಡುಪ್ರತಿಯನ್ನು ಒಪ್ಪಿಸಿತು. ಆ ಉಪಸಮಿತಿಯಲ್ಲಿದ್ದವರು ಕರ್ಪೂರ ಶ್ರೀನಿವಾಸರಾಯರು. ಡಾ|| ಪಿ. ಎಸ್. ಅಚ್ಯುತರಾಯರು, ಪುಟ್ಟಣ್ಣನವರು, ಬಾಪು ಸುಬ್ಬರಾಯರು, ಆರ್. ರಘುನಾಥರಾಯರು, ಟಿ. ಲಕ್ಷ್ಮೀನರಸಿಂಹರಾಯರು ಮತ್ತು  ಡಿ. ವಿ. ಗುಂಡಪ್ಪನವರು.

ಇಲ್ಲಿಗೆ ಎರಡನೆಯ ದಿನದ ಸಭೆಯು ಭರಕಾಸ್ತಾಯಿತು. ಬಳಿಕ ವಿಷಯ ನಿರ್ಧಾರಕ ಮಂಡಲಿಯವರು ಮೂರನೆಯ ದಿನ ಸಲಹೆಗಳನ್ನು ಕ್ರಮಪಡಿಸುವುದಕ್ಕೆ ಸಭೆಸೇರಿದರು.

ಮೂರನೆಯ ದಿನದ ಕೆಲಸ (೧೯೧೫)

ಅದೇ ಹಜಾರದಲ್ಲಿ ಮೂರನೆಯ ದಿವಸವೂ ಸಮ್ಮೇಳನವು ಅಪರಾಹ್ನ ೩ ಗಂಟೆಗೆ ಸರಿಯಾಗಿ  ಸೇರಿತು. || ಕರ್ಪೂರ ಶ್ರೀನಿವಾಸರಾಯರು ಅಗ್ರಾಸನವನ್ನು ಅಲಂಕರಿಸಬೇಕೆಂದು ಡಾಕ್ಟರು ಅಚ್ಯುತರಾಯರವರು ಸಭೆಗೆ ಬಿನ್ನವಿಸಲು ಸಭೆಯವರೆಲ್ಲರೂ ಹರ್ಷಾತಿಶಯದ ಕಲಕಲದೊಡನೆ ಒಪ್ಪಿದರು.

ಆ ದಿವಸದಲ್ಲಿ ಪರಿಷತ್ತಿನ ರಚನಾಕ್ರಮವೂ, ನಿಬಂಧನೆಗಳೂ ಜಿಜ್ಞಾಸಾಪೂರ್ವಕವಾಗಿ ತೀರ್ಮಾನಿಸಲ್ಪಟ್ಟವು.

ಮೂರನೆಯ ದಿನ ಕರಡು ನಿಯಮಾವಳಿಯು ಸಭೆಯ ಪರ್ಯಾಲೋಚನೆಗೆ ಬಂದಿತು. ಅದರ ಮೇಲೂ ಪಂಡಿತ ಭಾಷಣಗಳು. ದಾತೃಗಳು, ಪ್ರದಾತೃಗಳು, ಮಹಾಪ್ರದಾತೃಗಳ ಆಶ್ರಯದಾತರು, ಆಶ್ರಯಕರ್ತರು, ಪೋಷಕರು, ಪರಿಪೋಷಕರು – ಇಂಥ ಮಾತುಗಳೆಲ್ಲ ಚರ್ಚೆ. ಒಬ್ಬರು ಶಬ್ದಮಣಿದರ್ಪಣವನ್ನು ಹೇಳಿದರೆ ಇನ್ನೊಬ್ಬರು ಶಾಸನಪ್ರಯೋಗವನ್ನು ಹೇಳಿದರು….. ಹೀಗೆ ಬೆಳೆಯಿತು ವಿಚಾರಸರಣಿ.

ನಂಜಂಡಯ್ಯನವರು ಬಹುಮಟ್ಟಿಗೆ ನಗುತ್ತ, ಒಂದೊಂದು ಸಾರಿ ಕಟು ಟೀಕೆ ಮಾಡುತ್ತ, ಹಾಗೂ ಈ ಕೆಲಸವನ್ನು ಮೂರನೆಯ ದಿನ ಸಂಜೆ ನಾಲ್ಕು ಗಂಟೆಗೆ ಮುಗಿಸಿದರು.

ಪರಿಷತ್ತಿನ ಸ್ಥಾಪನಕಾರ್ಯದಲ್ಲಿ ಮೊದಲಿನಿಂದ ಕಡೆಯವರೆಗೂ ಶ್ರಮಿಸಿದವರು ಸೆಕ್ರೆಟರಿ ಬಿ. ಕೃಷ್ಣಪ್ಪ, ಎಂ. ಎ., ಅವರು. ಅವರ ಪಾಂಡಿತ್ಯ ಎಷ್ಟು ದೊಡ್ಡದೋ ಅವರ ತಾಳ್ಮೆಯೂ ಕಾರ್ಯದಕ್ಷತೆಯೂ ಅಷ್ಟು ಪ್ರಶಂಸನೀಯವಾದವು. ಆ ಮಹನೀಯರು ಮೈಸೂರು ವಿಶ್ವವಿದ್ಯಾನಿಲಯದ ಮೊದಲನೆಯ ಕನ್ನಡ ಪ್ರೊಫೆಸರಾಗಿದ್ದರು.

ಇದು ವಿಷಯ. ಮೊದಲು ಕರ್ನಾಟಕವೆ, ಕರ್ಣಾಕಟವೆ, ಕನ್ನಡವೆ? ಅಥವಾ ಕರಿನಾಡೆ? ಮೂರನೆಯದಾಗಿ ಕರ್ಣಾಟವೆ, ಕರ್ಣಾಟಕವೇ? ಅಥವಾ ಕಾರ್ಣಾಟಕೀ ಎಂದೆ? ನಾಲ್ಕನೆಯದಾಗಿ ಪರಿಷತ್ತೆ, ಸಂಸತ್ತೆ ಅಥವಾ ಪರಿಷದವೆ, ಅಥವಾ ಸಂಸದವೆ, ಅಥವಾ ಸಭಾ ಎನ್ನತಕ್ಕದ್ದೆ? ಸಭೆ ಸೇರಿದಾಗ ಅಧ್ಯಕ್ಷ ನಂಜುಂಡಯ್ಯನವರು ಹೀಗೆ ಹೇಳಿದರು:

“ಈಗ ಎರಡು ದಿನವೆಲ್ಲ ಹೆಸರನ್ನು ಚರ್ಚಿಸುವುದಕ್ಕಾಗಿ ಕಳೆದೆವಲ್ಲ. ಈಗಲಾದರೂ ಕೆಲಸಕ್ಕೆ  ಉಪಕ್ರಮ ಮಾಡೋಣ. ನಿಮ್ಮಲ್ಲಿ ರಘುನಾಥರಾಯರೋ ರಾಘವೇಂದ್ರಾಚಾರ್ಯರೋ ಇನ್ನು ಯಾರಾದರೂ ಒಂದು ಹೆಸರನ್ನು ಸೂಚಿಸೋಣವಾಗಲಿ, ಅದನ್ನು ಸಭೆಯ ವೋಟಿಗೆ ಹಾಕುತ್ತೇನೆ. ಭಾಷಣಗಳು ಸಾಕು. ಆ ಸೂಚನೆ ಅಂಗೀಕಾರವಾಗದೆ ಹೋದರೆ ಆಮೇಲೆ ಇನ್ನೊಂದು ಸೂಚನೆ. ಅನಂತರ ಮತ್ತೊಂದು – ಕ್ರಮವನ್ನನುಸರಿಸೋಣ.”

ಸಭೆಯಲ್ಲಿ ಯಾರೋ ಒಬ್ಬರು “ಇನ್ನೂ ಮಾತನಾಡುವವರಿದ್ದಾರೆ, ಸ್ವಾಮಿ” ಎಂದರು. ನಂಜುಂಡಯ್ಯನವರು “ಹೌದು ಹೌದು. ನಾವೆಲ್ಲ ಅದೇ. ಊರು ತುಂಬ ಮಾತನಾಡುವವರೇ. ಆದರೆ ಕೆಲಸವೂ ನಡೆಯಬೇಕಲ್ಲ?” ಎಂದರು. ಕೆಲಸಕ್ಕೆ ಉಪಕ್ರಮ ಮಾಡಿಸಿದರು.

ನಾಲ್ಕನೆಯ ದಿನ ೬೧೯೧೫

೪ನೇ ದಿನ ಮಧ್ಯಾಹ್ನ ಎರಡೂವರೆ ಗಂಟೆಗೆ ಪ್ರಾರಂಭವಾಯಿತು. ಕರ್ಪೂರ ಶ್ರೀನಿವಾಸರಾಯರು ಅಗ್ರಾಸನಾಧಿಪತಿಗಳಾಗಿದ್ದರು. ನಾಲ್ಕನೇ ದಿನದ ಸಭೆಯಲ್ಲಿ ನಿರ್ಣಯಗಳು ಮಂಡಿಸಲ್ಪಟ್ಟು ಅಂಗೀಕಾರವಾಯಿತು. ಪರಿಷತ್ತಿನ ಕಾರ್ಯಕಾರಿ ದಿನವಿಡೀ ರೂಪುಗೊಂಡಿತು.

ಸಮ್ಮೇಳನದ ಕಾರ್ಯವು ಇಲ್ಲಿಗೆ ಮುಗಿಯಲು, ಪಂಡಿತರುಗಳಾದ ಅಯ್ಯಾಶಾಸ್ತ್ರಿಗಳೂ, ದೇವೋತ್ತಮ  ಜೋಯಿಸರೂ, ಶ್ರೀರಂಗಾಚಾರ್ಯರೂ, ಕೋದಂಡರಾಮಶಾಸ್ತ್ರಿಗಳೂ, ಮ || ಚಿಕ್ಕೋಡಿಯವರೂ, ಕೇಶವಯ್ಯನವರೂ ಪರಿಷತ್ತಿನ ಉತ್ತರೋತ್ತರ ಶ್ರೇಯಸ್ಸನ್ನು ಬಯಸಿ ಪ್ರಾರ್ಥನಾರೂಪದಲ್ಲಿ ತಾವು ತಾವು ರಚಿಸಿದ ಪದ್ಯಗಳನ್ನು ಶ್ಲೋಕಗಳನ್ನೂ ರಾಗದಿಂದ ಓದಿದರು.

ಬೇರೆಬೇರೆ ಕನ್ನಡನಾಡುಗಳ ಮಹನೀಯರುಗಳ ಪರಿಚಯವನ್ನು ಸಂಪಾದಿಸಿಕೊಂಡು ಸನ್ಮಿತ್ರ ಮಂಡಲಿಯನ್ನು ವಿಸ್ತರಿಸಿಕೊಳ್ಳುವುದಕ್ಕೂ ಮೈಸೂರು ಸಂಸ್ಥಾನ ಪಂಡಿತರ ಮಂಡಲಿಯೊಡನೆ ಸಂಭಾಷಣೆಯನ್ನು ಬೆಳೆಯಿಸುವುದಕ್ಕೂ ಈ ಪರಿಷತ್ತಿನ ಮೂಲಕ ಅವಕಾಶವನ್ನು ಕಲ್ಪಿಸಿಕೊಟ್ಟು ಮಹೋಪಕಾರವನ್ನು ಮಾಡಿದುದಕ್ಕಾಗಿ ಮಹಾಪ್ರಭುಗಳಾದ ಶ್ರೀಮನ್ಮಹಾರಾಜರವರಿಗೂ ಅವರ ಸರ್ಕಾರಕ್ಕೂ ಸಮ್ಮೇಳನವನ್ನೇರ್ಪಡಿಸಿದ ಮಹನೀಯರುಗಳಿಗೂ ಬೊಂಬಾಯಿ ಕರ್ಣಾಟಕದವರ ಪರವಾಗಿ ವಂದನೆಗಳನ್ನು ಸಮರ್ಪಿಸುತ್ತಾ ಮ || ದೇಶಪಾಂಡೆಯವರೂ, ಜೋಷಿಯವರೂ, ದೇಸಾಯಿಯವರೂ, ವಾಸುದೇವಾಚಾರ್ಯರವರೂ, ನರ್ಗುಂದಕರವರೂ, ಸೆಟ್ಲೂರವರೂ, ಜಹಗೀರ್ದಾರವರೂ, ಚಿಕ್ಕೋಡಿಯವರೂ,  ಮಂಗಸೂಲಿಯವರೂ ಉತ್ಸಾಹಭರಿತರಾಗಿ ಪ್ರವಚನಗಳನ್ನು ಮಾಡಿದರು.

ಮೈಸೂರು ಸಂಪದಭ್ಯುದಯ ಸಮಾಜದವರ ಮೂಲಕ ಈ ಕರ್ಣಾಟ ವಿದ್ವನ್ಮಂಡಲಿಯ ಸಮ್ಮೇಳನವನ್ನು ಏರ್ಪಡಿಸಿ, ಬೇರೆಬೇರೆ ಕನ್ನಡ ನಾಡುಗಳಿಂದ ಆಹ್ವಾನವನ್ನು ಹೊಂದಿ ಬಂದ ಮಹನೀಯರನ್ನು ಒಂದೇ ಎಡೆಯಲ್ಲಿ ಸಂಧಿಸುವುದಕ್ಕೆ ತಮಗೆ ಅಸಾಧಾರಣವಾದ ಆನುಕೂಲ್ಯವನ್ನು ಕಲ್ಪಿಸಿಕೊಟ್ಟುದುದಕ್ಕಾಗಿ ಶ್ರೀಮನ್ಮಮಹಾರಾಜ ಸಾಹೇಬ್ ಬಹದೂರವರಿಗೂ ಅವರ ಸರ್ಕಾರಕ್ಕೂ ತಮ್ಮ ಕೃತಜ್ಞತೆಯನ್ನು ಪ್ರದರ್ಶಿಸುತ್ತಾ ಮದರಾಸು ಕರ್ಣಾಟಕದವರ ಪರವಾಗಿ ಮ || ತಿಮ್ಮಕೃಷ್ಣರಾಯರವರೂ, ರಾಮರಾಯರವರೂ, ಮಂಗೇಶರಾಯರವರೂ, ವೆಂಕಟರಾಯರವರೂ ವಂದನೆಗಳನ್ನು ಸಮರ್ಪಿಸುತ್ತಾ ಮೃದುಮಧುರ ವಚನಗಳಿಂದ ಪ್ರಸಂಗಿಸಿದರು.

ಒಂದೇ ಸಮನಾದ ವಿನಯದೊಡನೆಯೂ ಸಾಮರ್ಥ್ಯದೊಡನೆಯೂ ಶ್ರದ್ಧೆಯೊಡನೆಯೂ ತಾಳ್ಮೆಯೊಡನೆಯೂ ಅಗ್ರಾಸನಾಧಿಪತಿಗಳು ಸಮ್ಮೇಳನದ ನಾಲ್ಕು ದಿವಸಗಳ ಕೆಲಸಗಳನ್ನು ನಡೆಯಿಸಿದುದು ಶ್ಲಾಘನೀಯವೆಂದೂ, ಸಮ್ಮೇಳನದ ಏರ್ಪಾಡುಗಳನ್ನು ಸಮರ್ಪಕವಾಗುವಂತೆ  ನಿರ್ಮಿಸಿದ  ಮಹನೀಯರ ಸಾಮರ್ಥ್ಯವು ಅಸಾಧಾರಣವಾದುದೆಂದೂ ಅಂತಹವರ ಸಹಾಯವು ಪರಿಷತ್ತಿನ ಕಾರ್ಯನಿರ್ವಾಹಕ್ಕೆ ದೊರೆತುದು ಕರ್ಣಾಟಕ ಮಹಾಮಂಡಲಿಯ ಪುಣ್ಯೋದಯವೆಂದೇ ಹೇಳಬೇಕೆಂದೂ ಪರಮೋತ್ಸಾಹದಿಂದ ವರ್ಣಿಸುತ್ತ ಮ|| ಮುದವೇಡಕರ್ರವರು ವಾಗ್ವೈಖರಿಯೊಡನೆ ವಂದನೆಗಳನ್ನು ಸಮರ್ಪಿಸಿದರು.

ನಾಲ್ಕನೇದಿನ ಸಂಜೆ ಬಂದಿದ್ದ ಮಹನೀಯರಿಗೆ ಏರ್ಪಡಿಸಿದ್ದ ಸಂತೋಷಕೂಟವನ್ನು ಡಿವಿಜಿ ಹೀಗೆ ಬಣ್ಣಿಸಿದ್ದಾರೆ, (ಜ್ಞಾ. ಚಿತ್ರಶಾಲೆ ಪುಟ ೫೯):

ಅಂದು ಸಂಜೆ, ಬಂದಿದ್ದ ಮಹನೀಯರ ಸಂತೋಷಕ್ಕಾಗಿ ಒಂದು ಸಂತೋಷಕೂಟವನ್ನೇರ್ಪಡಿಸಿತ್ತು. ಅದು ಸೆಂಟ್ರಲ್ ಕಾಲೇಜಿನ ವಿದ್ಯಾಮಂದಿರದ ಆವರಣದಲ್ಲಿ. ಸದಸ್ಯರಲ್ಲಿ ಬಹುಮಂದಿ ಅಲ್ಲಿಯೇ ಬಿಡಾರ ಮಾಡಿಕೊಂಡಿದ್ದರು.

ಈ ಸಂತೋಷಕೂಟವನ್ನು ಏರ್ಪಡಿಸುವ ಯೋಚನೆ ಮಾಡಿ ನಾನು ನನ್ನ ಮಾನ್ಯಮಿತ್ರರಾದ ಸರಕಾರದ ಸೆಕ್ರೆಟರಿ ಡಿ. ಎಂ. ನರಸಿಂಹರಾಯರ ಸಹಾಯವನ್ನು ಬೇಡಿದೆ. ಎರಡು ಡೇರಾಗಳು. ಐವತ್ತು ಮೇಜುಗಳು, ಇನ್ನೂರು ಕುರ್ಚಿಗಳು, ನಾಲ್ಕು ಜಮಖಾನೆಗಳು – ಇವಷ್ಟನ್ನು ಸರಕಾರದ ಉಗ್ರಾಣದಿಂದ ಸಾಲ ಕೊಡಿಸುವುದಾದರೆ ಅದಕ್ಕೆ ತಗಲುವ ಬಾಡಿಗೆಯನ್ನು ನಾನು ಕೊಡುವುದಾಗಿ ಹೇಳಿದೆ. ಅವರು “ನಿನಗೆ ಯಾಕಯ್ಯ ಅಷ್ಟು ಶ್ರಮ? ಅಲ್ಲಿ ಹಾಸ್ಟೆಲ್ ವಾರ್ಡನ್ ಬಿ. ವೆಂಕಟೇಶಾಚಾರ್ಯರಿದ್ದಾರಲ್ಲ, ಅವರು ಈ ಸಹಾಯವನ್ನೆಲ್ಲ ನಿನಗೆ ಸುಲಭವಾಗಿ ಒದಗಿಸಬಹುದು” ಎಂದರು.

“ನನಗೆ ವೆಂಕಟೇಶಾರ್ಯರ ಪರಿಚಯ ಇಲ್ಲವಲ್ಲ?”

“ಅದೇನು ಕಷ್ಟ?” – ಎಂದು ನರಸಿಂಗರಾಯರು ನನ್ನೊಡನೆ ವೆಂಕಟೇಶಾಚಾರ್ಯರನ್ನು ನೋಡಲು ಬಂದರು. ಪೂಜ್ಯರಾದ ವೆಂಕಟೇಶಾಚಾರ್ಯರಿಗೂ ನನಗೂ ಮೊದಲು ಭೇಟಿಯಾದದ್ದು ಹೀಗೆ. ಅವರು ಉತ್ಸಾಹದಿಂದ ಸಹಕರಿಸಿ ಎಲ್ಲ ವಿಧಗಳಲ್ಲಿಯೂ ಸಹಾಯ ಕೊಟ್ಟರು. ಆ ಕೂಟದಲ್ಲಿ ಪಿಟೀಲು ವಿದ್ವಾನ್ ಪುಟ್ಟಪ್ಪನವರ ಬಾಯಿ ಹಾಡಿಕೆ ನಡೆಯಿತು. ಬಹಳ ಸೊಗಸಾಗಿತ್ತೆಂದು ಕೇಳಿದವರೆಲ್ಲ ಹೇಳಿದರು. ಗಂಧಪುಷ್ಪ ವಿನಿಯೋಗವಾದ ಮೇಲೆ ಎಲ್ಲರೂ ಅಲ್ಲಿಂದ ಹೊರಡುವ ಸಮಯದಲ್ಲಿ ನಂಜುಂಡಯ್ಯನವರು ನನ್ನನ್ನು ಬೇರೆಯಾಗಿ ಕರೆದು ಕೇಳಿದರು:

“ಎಷ್ಟು ಖರ್ಚುಮಾಡಿದೆ? ಸಾಲ ಹೆಚ್ಚು ಮಾಡಿದ್ದರೆ ಹೇಳು.” ಆಗ ಎಂ. ಶಾಮರಾಯರೂ ಇದ್ದರು. ಅವರೆಂದರು.

“ಮಾಡಲೇಳಿ ಹುಡುಗನ ಹುಚ್ಚು.”

ಪರಿಷತ್ತಿನ ಸ್ಥಾಪನೆಯ ವಿವರಗಳನ್ನು  ಮೊದಲ ಸಮ್ಮೇಳನದ ವರದಿಯನ್ನು ಅಂದಿನ ಪತ್ರಿಕೆಗಳು ಸಾಕಷ್ಟು ವಿವರವಾಗಿ ಪ್ರಕಟಿಸಿದವು. ಇಲ್ಲಿ ನಿದರ್ಶನಪೂರ್ವಕವಾಗಿ ಮೈಸೂರು ಸ್ಟಾರ್ ಪತ್ರಿಕೆ (೯-೫-೧೯೧೫) ಪ್ರಕಟಿಸಿದ ವರದಿ ಹೀಗಿದೆ:

ಮೈಸೂರು ಸ್ಟಾರ್ ೧೯೧೫ನೆಯ ಇಸವಿ ಮೇ ತಾರೀಖು ೯ನೇ ಭಾನುವಾರ, ಪುಟ ೫

ಕನ್ನಡಿಗರ ಸಮ್ಮೇಳನ

ಕನ್ನಡಿಗರ ಸಮ್ಮೇಳನವು ಕಳೆದ ತಾ|| ೩ರಲ್ಲಿ ಬೆಂಗಳೂರು ಸರ್ಕಾರಿಯ ಹೈಸ್ಕೂಲ್ ಕಟ್ಟಡದಲ್ಲಿ ೧ನೆಯ ಕೌನ್ಸಿಲರ್ ಮ|| ಎಚ್. ವಿ. ನಂಜುಂಡಯ್ಯನವರ ಅಧ್ಯಕ್ಷತೆಯಲ್ಲಿ ಆರಂಭಿಸಲ್ಪಟ್ಟಿತು. ಧಾರವಾಡ, ಮದ್ರಾಸು, ಉಡುಪಿ ಮೊದಲಾದ ಕಡೆಗಳಿಂದ ಭಾಷಾಭಿಮಾನಿಗಳಾದವರು ಪ್ರತಿನಿಧಿಗಳಾಗಿ ಕರೆಯಲ್ಪಟ್ಟು  ಬಂದಿದ್ದರಲ್ಲದೆ ಪ್ರೇಕ್ಷಕರ ಸಂಖ್ಯೆಯೂ ಹೆಚ್ಚಾಗಿ ಸೇರಿದ್ದಿತು. ಶ್ರೀಮದ್ಯುವರಾಜರು, ದಿವಾನರು ಮೊದಲಾದವರು ತಂತಿಯ ಮೂಲಕ ತಮ್ಮಭಿನಂದನಗಳನ್ನು ಕಳುಹಿಸಿದ್ದರು. ಅಧ್ಯಕ್ಷರು ಕನ್ನಡ ಭಾಷೆಯಯುತ್ಪತ್ತಿ, ಪೂರ್ವದಲ್ಲಿ ಅದಕ್ಕಿದ್ದ ಶುದ್ಧತೆ, ಮತ್ತೂ ಉಚ್ಛ್ರಾಯಸ್ಥಿತಿ ಈಗ ಅದಕ್ಕೂ ತೆಲುಗು ತಮಿಳು ಮೊದಲಾದ ದ್ರಾವಿಡಭಾಷೆಗಳಿಗೂ ಇತರತಕ್ಕ ವ್ಯತ್ಯಾಸ – ಇವುಗಳನ್ನು ವಿವರಿಸುವ ಮತ್ತೂ ಮುಂದೆ ಅದು ಕರ್ನಾಟಕ ಪ್ರಾಂತಗಳಲ್ಲೆಲ್ಲಾ ಏಕಸ್ವರೂಪವನ್ನು ಹೊಂದಿ ಸೋದರಭಾಷೆಗಳಂತೆ ಉಚ್ಚಸ್ಥಿತಿಗೆ ಬರುವ ಉಪಾಯ ಮೊದಲಾಂಶಗಳನ್ನೊಳಗೊಂಡ ಒಂದು ದೊಡ್ಡ ಭಾಷಣವನ್ನು ಮಾಡಿದರು. ಅನಂತರ ವಿಷಯನಿರ್ಧಾರಕ ಭಾಷಣವನ್ನು ಮಾಡಿದರು. ಅನಂತರ ವಿಷಯನಿರ್ಧಾರಕಸಭೆಯು ಏರ್ಪಡಿಸಲ್ಪಟ್ಟು ಆ ದಿವಸದ ಸಭೆಯು ವಿಸರ್ಜಿತವಾಯಿತು. ವಿಷಯನಿರ್ಧಾರಕಸಭೆಯವರು ತಾ|| ೪ರಲ್ಲಿ ದಿ || ಬ|| ಕೆ.ಪಿ. ಪುಟ್ಟಣ್ಣಸೆಟ್ಟರ ಅಧ್ಯಕ್ಷತೆಯಲ್ಲೂ ಸಭೆಸೇರಿದ್ದು, ಮೈಸೂರಪ್ರಾಂತಕ್ಕೆ ೧೨, ಬೊಂಬಾಯಾಧಿಪತ್ಯಕ್ಕೆ ೮, ಹೈದರಾಬಾದಿಗೆ ೨, ದಕ್ಷಿಣಮಹಾರಾಷ್ಟ್ರಕ್ಕೆ ೨ ಮತ್ತೂ ಕೊಡಗಿಗೆ ೧ ಈ ಪ್ರಕಾರ ೩0 ಸಭ್ಯರನ್ನೊಳಗೊಂಡ ೧ ಕಾರ್ಯಕಾರಿಮಂಡಳಿಯು ಸ್ಥಾಪಿತವಾಗಿ, ಒಬ್ಬರು ಅಧ್ಯಕ್ಷರು, ಒಬ್ಬರು ಉಪಾಧ್ಯಕ್ಷರು, ಒಬ್ಬರು ಸೆಕ್ರೆಟರಿ, ಮತ್ತೊಬ್ಬರು ಆಡಿಟರು ಹೀಗೆ ಅಧಿಕಾರಿಗಳು ನಿಯಮಿಸಲ್ಪಡಬೇಕೆಂದೂ; ಪ್ರಾಚೀನ ಕರ್ನಾಟಕ ಗ್ರಂಥಗಳು ಶೇಖರಿಸಲ್ಪಟ್ಟು ವ್ಯಾಖ್ಯಾನದೊಡನೆ ಪ್ರಚುರಪಡಿಸಲ್ಪಡಬೇಕು, ಗ್ರಂಥಶೋಧನೆಗೆ ಉತ್ತೇಜನವೂ, ಗ್ರಂಥಕರ್ತರಿಗೆ ಪ್ರೋತ್ಸಾಹವೂ ಕೊಡಲ್ಪಡಬೇಕು, ೧000 ರೂ. ಗಳನ್ನು ಕೊಡತಕ್ಕವರು ಪೋಷಕರಾಗಿಯೂ,  ೫00 ರೂ. ಗಳನ್ನು ಕೊಡತಕ್ಕವರು ಆಶ್ರಯದಾತರಾಗಿಯೂ, ೧00 ರೂ. ಗಳನ್ನು ಕೊಡತಕ್ಕವರು ಆಜೀವಸಭಾಸದರಾಗಿಯೂ ಮಾಡಲ್ಪಡತಕ್ಕುದೆಂದೂ; ಪ್ರತಿವರ್ಷದಲ್ಲೂ ೧೨ ರೂ. ಗಳನ್ನು ಕೊಡುವವರು ೧ನೆಯ ತರಗತಿಯ ಸಭ್ಯರಾಗಿಯೂ, ೪ ರೂ. ಗಳನ್ನು ಕೊಡುವವರು ೨ನೆಯ ತ|| ಸಭ್ಯರಾಗಿಯೂ ಇರತಕ್ಕುದೆಂದೂ; ಒಂದು ಕಾರ್ಯಕಾರಿ ಮಂಡಳಿಯು ಏರ್ಪಾಟಾಗತಕ್ಕುದೆಂದೂ ನಿರ್ಧಾರಗಳಾಗಿ, ಮ || ಗಳಾದ ಎಚ್. ವಿ. ನಂಜುಂಡಯ್ಯನವರು ಅಧ್ಯಕ್ಷರಾಗಿಯೂ, ಎಂ. ಶ್ಯಾಮರಾಯರು ಉಪಾಧ್ಯಕ್ಷರಾಗಿಯೂ, ಸರದಾರ್ ಎಂ. ಕಾಂತರಾಜ ಅರಸಿನವರು, ಎಂ. ವೆಂಕಟಕೃಷ್ಣಯ್ಯನವರು, ಕರ್ಪೂರ ಶ್ರೀನಿವಾಸರಾಯರು, ಆರ್. ಎ. ನರಸಿಂಹಾಚಾರ್ಯರು, ಡಾ|| ಅಚ್ಯುತರಾಯರು, ಆರ್. ರುನಾಥರಾಯರು, ಬಾಪು ಸುಬ್ಬರಾಯರು, ಅಯ್ಯಾಶಾಸ್ತ್ರಿಗಳು, ಕರಿಬಸವಶಾಸ್ತ್ರಿಗಳು, ಕೆ.ಪಿ. ಪುಟ್ಟಣ್ಣಸೆಟ್ಟರು, ಸಿ. ಕೃಷ್ಣರಾಯರು, ಸಿ. ವಾಸುದೇವಯ್ಯನವರು, ಎಂ. ಎಸ್.ಪುಟ್ಟಣ್ಣನವರು, ಬಿ. ಎಂ. ಶ್ರೀಕಂಠಯ್ಯನವರು, ಬಿ. ಕೃಷ್ಣಪ್ಪನವರು ಮೈಸೂರಸೀಮೆಯ ಪರವಾಗಿಯೂ; ಧಾರವಾಡದ ಟ್ರೇನಿಂಗ್ ಕಾಲೇಜಿನ ಮುಖ್ಯೋಪಾಧ್ಯಾಯರಾದ ವಿ. ಬಿ. ಜೋಷಿ ಅವರು, ಪಬ್ಲಿಕ್ ಪ್ರಾಸಿಕ್ಯೂಟರಾದ ಎನ್. ಜಿ. ಕರಿಗುದರಿ ಆವರು, ಆರ್. ಎ. ಜಹಗೀರ್ದಾರ್ ಅವರು, ನರಗುಂದಕರ್  ಅವರು, ಪಿ.ಆರ್. ಚಿಕ್ಕೋಡಿಯವರು, ಮುದವೇಡಕರ್ ಅವರು, ಎಫ್.ಜಿ. ಹಳಕಟ್ಟಿಯವರು, ವಿ.ಬಿ. ಆಲೂರ್ ಅವರು ಮತ್ತೂ ವಿ. ಎನ್. ಮಗ್ದಾಳ ಅವರು ಬೊಂಬಾಯಾಧಿಪತ್ಯದ ಪರವಾಗಿಯೂ, ಬೆನಗಲ್ ರಾಮರಾಯರು, ರಾಜಗೋಪಾಲಕೃಷ್ಣರಾಯರು, ಮತ್ತೂ ಎ. ವೆಂಕಟರಾಯರು ಮದ್ರಾಸಾಧಿಪತ್ಯದ ಪರವಾಗಿಯೂ ಮೆಂಬರುಗಳಾಗಿ ನಿಯಮಿಸಲ್ಪಟ್ಟರು. ಕನ್ನಡಭಾಷೆಯನ್ನಾಡತಕ್ಕ ಪ್ರದೇಶಗಳಲ್ಲಿಯ ಬಾಲ್ಯವಿದ್ಯಾಭ್ಯಾಸವು ಕನ್ನಡದಲ್ಲೇ ಜರುಗುವಂತೆ ಮಾಡಲು  ಪ್ರಾರ್ಥಿಸಬೇಕು; ಇದೇ ವಿಚಾರದಲ್ಲಿ ಮದ್ರಾಸು ಮತ್ತೂ ಬೊಂಬಾಯಿ ಸರ್ವಕಲಾಶಾಲೆಯವರನ್ನು ಪ್ರಾರ್ಥಿಸಬೇಕಲ್ಲದೆ, ಮದ್ರಾಸು, ಬೊಂಬಾಯಿ, ಹೈದರಾಬಾದು, ದಕ್ಷಿಣ ಮಹಾರಾಷ್ಟ್ರ, ದೇಶೀಯ ಸಂಸ್ಥಾನಗಳು ಇವುಗಳ ಕೋರ್ಟುಭಾಷೆಯೂ ಕನ್ನಡವಾಗಿರುವಂತೆ ಆಯಾ ಸರ್ಕಾರದವರನ್ನೂ, ಕನ್ನಡವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸುವಂತೆ ಇಂಡ್ಯಾ ಸರ್ಕಾರದವರನ್ನೂ ಪ್ರಾರ್ಥಿಸಿಕೊಳ್ಳಬೇಕೆಂದು ಅಧ್ಯಕ್ಷರು ಸೂಚಿಸಿದ ಮೇಲೆ ಕೆಲ ಮಂಗಳಪದ್ಯಗಳು ಹೇಳಲ್ಪಟ್ಟು ಸಮ್ಮೇಳನಕಾರ್ಯವು ಪರಿಸಮಾಪ್ತಿಗೊಳಿಸಲ್ಪಟ್ಟಿತು.

ಮಾಹಿತಿ ಕೃಪೆ: ಕನ್ನಡ ಸಾಹಿತ್ಯ ಪರಿಷತ್ತು-೧೦೦, ಪ್ರೊ. ಜಿ. ಅಶ್ವತ್ಥನಾರಾಯಣ

Tag: Kannada Sahitya Parishat, Kannada Sahitya Parishattu, 5ನೇ ಮೇ 1915, 5th May 1915, Samskruthika Itihasa