dr-manu-baligar1

ಡಾ. ಮನು ಬಳಿಗಾರ್
ಅಧ್ಯಕ್ಷರು

ಮನು ಬಳಿಗಾರ್ ಅನ್ನುವ ಹೆಸರು  ಕರ್ನಾಟಕದಲ್ಲಿ ಮತ್ತು  ಕನ್ನಡಿಗರಿಗೆಲ್ಲ ಚಿರಪರಿಚತವಾದ ಹೆಸರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತರಾಗಿ ಹಾಗೂ   ಕರ್ನಾಟಕದ  ವಿವಿಧ  ಇಲಾಖೆಗಳಲ್ಲಿ  ದಕ್ಷ ಸೇವೆ ಸಲ್ಲಿಸಿರುವುದರ  ಜೊತೆಗೆ  ಸಾಹಿತಿಗಳಾಗಿಯೂ  ಮಹತ್ವದ   ಕೃಷಿ ಮಾಡಿರುವ,  ಮೂಲತಃ ಪ್ರಗತಿಪರ ರೈತಕುಟುಂಬದಿಂದ  ಬಂದ   ಡಾ. ಮನು ಬಳಿಗಾರ್ ಅವರು  ಶತಮಾನ  ಪೂರೈಸಿರುವ  ಕನ್ನಡ  ಸಾಹಿತ್ಯ  ಪರಿಷತ್ತಿನ ಇಪ್ಪತ್ತೈದನೆಯ ಅಧ್ಯಕ್ಷರಾಗಿ ೨೦೧೬ರ ಮಾರ್ಚ್ ೩ರಂದು   ಅಧಿಕಾರವಹಿಸಿಕೊಂಡಿದ್ದಾರೆ.

ಬಹುಮುಖೀ  ಸಾಧಕರಾದ ಮನು ಬಳಿಗಾರ್ ಅವರು ಹುಟ್ಟಿದ್ದು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ. ಕೃಷಿ ಪ್ರಧಾನ ಕುಟುಂಬದ ರೈತ ಪರಮೇಶ್ವರಪ್ಪನವರು  ಇವರ ತಂದೆ. ತಂದೆಯ ಆಸಕ್ತಿ ಹಾಗೂ ಕಾಳಜಿಯ ಜೊತೆ ಕಟ್ಟುನಿಟ್ಟಿನ ಜೀವನಕ್ರಮವೇ, ಮನು ಬಳಿಗಾರರ ಜೀವನದಲ್ಲಿ ಅತ್ಯಂತ ಶಿಸ್ತುಬದ್ಧ ದೈನಂದಿನ ರೂಪುಗೊಳ್ಳಲು ಕಾರಣ. ಮನು ಬಳಿಗಾರ್ ಅವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ತಮ್ಮ ಗ್ರಾಮವಾದ  ಶಿಗ್ಲಿಯಲ್ಲೇ  ಪೂರೈಸಿದರು.  ಮುಂದೆ  ಇಂಗ್ಲಿಷ್ ಸಾಹಿತ್ಯದಲ್ಲಿ  ಬಿ.ಎ ಹಾಗೂ ಕಾನೂನಿನ ಎಲ್ ಎಲ್ ಬಿ ಮತ್ತು ರಾಜ್ಯಶಾಸ್ತ್ರದಲ್ಲಿ ಎಂ.ಎ ಶಿಕ್ಷಣ ಮುಗಿಸಿದ ಅವರು ತಮ್ಮ  ಕಾರ್ಯಕ್ಷೇತ್ರವಾಗಿ ಕರ್ನಾಟಕ ಆಡಳಿತ ಸೇವೆಯನ್ನು ಆಯ್ದುಕೊಂಡರು. ಮನು ಬಳಿಗಾರ್ ಅವರು ಶಾಲೆ ಕಾಲೇಜು ಮತ್ತು ನಂತರದ ದಿನಗಳಲ್ಲೂ ಈಜು, ಕಬಡ್ಡಿ, ಕುಸ್ತಿ ಪಂದ್ಯಾವಳಿಗಳಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದದ್ದಲ್ಲದೆ “ಆದರ್ಶ ವಿದ್ಯಾರ್ಥಿ” ಎಂದು ಗುರುತಿಸಲ್ಪಟ್ಟವರು.

೧೯೭೯ರ ಅವಧಿಯ  ಕೆಎಎಸ್ ಅಧಿಕಾರಿಗಳಾಗಿ ಆಯ್ಕೆಯಾದ   ಮನು ಬಳಿಗಾರರು, ಮಂಗಳೂರಿನಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಬಳಿಕ ಅವರು  ಸರ್ಕಾರದ ಅನೇಕ ಹುದ್ದೆಗಳಲ್ಲಿ ಗುಲ್ಬರ್ಗ, ವಿಜಾಪುರ, ಬೆಳಗಾವಿ, ಬೆಂಗಳೂರುಗಳಲ್ಲಿ ಸೇವೆ ಸಲ್ಲಿಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್  ಇಲಾಖೆ, ಶಿಕ್ಷಣ ಇಲಾಖೆ, ಆಹಾರ ನಾಗರೀಕ  ಪೂರೈಕೆ ಇಲಾಖೆ,  ಪ್ರವಾಸೋದ್ಯಮ ಇಲಾಖೆ,  ಐ.ಟಿ.ಬಿ.ಟಿ. ಇಲಾಖೆ  ಮುಂತಾದ   ಇಲಾಖೆಗಳಲ್ಲಿನ ಸಚಿವರುಗಳಿಗೆ ಆಪ್ತ  ಕಾರ್ಯದರ್ಶಿಯಾಗಿ;  ಬೆಂಗಳೂರು  ಮಹಾನಗರ  ಪಾಲಿಕೆಯ  ಉಪ ಆಯುಕ್ತರಾಗಿ, ಕೌನ್ಸಿಲ್ ಕಾರ್ಯದರ್ಶಿಗಳಾಗಿ; ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯ, ಕಂದಾಯ ಇಲಾಖೆಗಳ ನಿರ್ದೇಶಕರಾಗಿ;  ಹಾಗೂ  ಕನ್ನಡ  ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತರಾಗಿ  ಹೀಗೆ  ವಿವಿಧ  ಸರ್ಕಾರಿ ಜವಾಬ್ದಾರಿಗಳನ್ನು ದಕ್ಷತೆಯಿಂದ ನಿರ್ವಹಿಸಿ ನಾಡಿನಲ್ಲಿ  ಹೆಸರಾಗಿದ್ದಾರೆ.

ವಿಜಯಪುರದಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ಅಲ್ಲಿನ ಸಮಗ್ರ ಗ್ರಾಮಾಣಾಭಿವೃದ್ಧಿ ಯೋಜನೆಯನ್ನು  ಸಮರ್ಪಕವಾಗಿ  ಜಾರಿಗೊಳಿಸಿದ್ದಕ್ಕಾಗಿ,  ಮನುಬಳಿಗಾರ್ ಅವರಿಗೆ  ಎರಡು ಸುವರ್ಣ ಪದಕಗಳು ಅರಸಿ ಬಂದವು.  ಬೆಳಗಾವಿಯಲ್ಲಿ ಸೇವೆ ಸಲ್ಲಿಸುವ ವೇಳೆಯಲ್ಲಿ  ಅಲ್ಲಿನ ಮರಾಠಿ ಭಾಷಿಕರ ಜೊತೆ ಬೆರೆತು, ಅವರನ್ನೂ ಕನ್ನಡ ಕಲಿಯಲು ಉತ್ತೇಜಿಸಿದ್ದು ಮನು ಬಳಿಗಾರರ ಸಾರ್ವಜನಿಕ ಸರಳ ಸಂಪರ್ಕ ಸ್ವಭಾವಕ್ಕೆ ಸಾಕ್ಷಿ ಎನಿಸಿದೆ. ಹೀಗೆ ಗಡಿನಾಡಿನಲ್ಲಿ ಕ್ಷೀಣವಾಗುತ್ತಿರುವ ಕನ್ನಡಕ್ಕೆ ಹೊಸ ಧ್ವನಿ ನೀಡಿದ ಕೀರ್ತಿ ಅವರದ್ದು. ಇದಲ್ಲದೆ  ಗಡಿ ನಾಡಿನ ಕನ್ನಡಿಗರ ಶ್ರೇಯೋಭಿವೃದ್ಧಿಗಾಗಿ  ಅವರು ಅನೇಕ ಮಹತ್ವದ ಯೋಜನೆಗಳನ್ನು ರೂಪಿಸಿ ಯಶಸ್ವಿಗೊಳಿಸಿದ  ಕೀರ್ತಿಗೆ  ಭಾಜನರಾದವರು.  ಕನ್ನಡ  ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಆಯುಕ್ತರಾಗಿ   ಅವರು  ಕೈಗೊಂಡ  ಮಹತ್ವದ  ಯೋಜನೆಗಳು ಮತ್ತು  ಸಾಂಸ್ಕೃತಿಕ  ಬೆಳವಣಿಗೆಗೆ  ನೀಡಿದ  ಅಪರಿಮಿತ  ಪ್ರೋತ್ಸಾಹಗಳು  ಸಾಂಸ್ಕೃತಿಕ  ವಲಯದಲ್ಲಿ  ಬಹುಮೆಚ್ಚಿಗೆ  ಗಳಿಸಿವೆ.

ಕನ್ನಡ ಸಾಹಿತ್ಯ ಲೋಕದಲ್ಲೂ ತಮ್ಮ  ಬರಹಗಳಿಂದ  ಪ್ರಸಿದ್ಧರಾಗಿರುವ ಮನು ಬಳಿಗಾರ್ ಅವರು ಕಥಾ ಸಂಕಲನ, ಕಾವ್ಯ, ಲಲಿತ ಪ್ರಬಂಧ, ನಾಟಕ, ಜೀವನ ಚರಿತ್ರೆ, ವಿಮರ್ಶೆ, ಸಂಪಾದನೆ,  ಅನುವಾದ ಹೀಗೆ ವಿವಿಧ ರೀತಿಯಲ್ಲಿ  ಕೃಷಿ ಮಾಡಿದ್ದು  ಅವುಗಳ ಸಂಕ್ಷಿಪ್ತ ವಿವರಗಳು ಇಂತಿವೆ:

ಕಥಾ ಸಂಕಲನ: ಅವ್ಯಕ್ತ(೧೯೮೩), ಋಣ(೧೯೯೮), ಬದುಕು ಮಾಯೆಯ ಮಾಟ(೨೦೦೨), ದ ಡೆಟ್ ಅಂಡ್ ಅದರ್ ಸ್ಟೋರೀಸ್(೨೦೦೪),  ಕೆಲವುಕತೆಗಳು (೨೦೦೫)

ಕವನ ಸಂಕಲನ:  ನನ್ನ ನಿನ್ನೊಳಗೆ(೧೯೮೩),  ಎದ್ದವರು ಬಿದ್ದವರು(೧೯೯೪),  ಸಾಕ್ಷರ ಗೀತೆಗಳು(೧೯೯೪), ನಯಾಗರ ಮತ್ತು ಜಲಪಾತಗಳು(೧೯೯೮), ಕವಿ ರವೀಂದ್ರರ ಮಿಂಚಿನ ಹನಿಗಳು(೨೦೦೪), ಆಯ್ದ ಕವನಗಳು (೨೦೧೧)

ಲಲಿತ ಪ್ರಬಂಧ ಸಂಕಲನ: ಏಕಾಂತ ಮತ್ತು ಏಕಾಗ್ರತೆ (೨೦೦೪), ಬೆಳಕ ಬೆಡಗು(೨೦೦೯), ಸಂಸ್ಕೃತಿ  ವಿಹಾರ(೨೦೧೨)

ನಾಟಕ: ಮೈಲಾರ ಮಹಾದೇವ (೨೦೦೭)

ಜೀವನ ಚರಿತ್ರೆಗಳು: ಅತಿ ವಿರಳ ರಾಜಕಾರಣಿ ಎಸ್.ಆರ್.ಕಂಠಿ (೨೦೦೧), ಪ್ರತಿಭಾವಂತ ಸಂಸದೀಯ ಪಟುಗಳು, ಅಬ್ದುಲ್ ನಜೀರ್  ಸಾಬ್ (೨೦೦೫), ಅಪ್ಪ (೨೦೧೨)

ಸಂಪಾದನೆ: ಬಹುಮುಖಿ(ಶಿವರಾಮ ಕಾರಂತರ ಬದುಕು ಬರಹ),  ಗಾನಗಂಧರ್ವ (ಕುಮಾರಗಂಧರ್ವರ ಜೀವನ ಸಾಧನೆ), ಜ್ಞಾನಪ್ರಭಾ, ಕಲ್ಪವೃಕ್ಷ, ತಲಸ್ಪರ್ಶಿ, ತುಳಸಿ ಇತ್ಯಾದಿ.

ಭಾಷಾಂತರ: ರವೀಂದ್ರನಾಥ ಠಾಕೂರರ ೨೦೭ ಕವನಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.

ಡಾ. ಮನು ಬಳಿಗಾರರ  ಹಲವಾರು ಕಥೆಗಳು ಇಂಗ್ಲೀಷ್, ಒರಿಯಾ, ತೆಲುಗು ಮತ್ತು ಹಿಂದಿಗೆ ಭಾಷಾಂತರಗೊಂಡಿವೆ.

ಡಾ. ಮನು ಬಳಿಗಾರ್  ಅವರಿಗೆ  ಅನೇಕ  ಸಾಹಿತ್ಯಕ  ಹಾಗೂ  ಸೇವಾ  ಪುರಸ್ಕಾರಗಳು  ಸಂದಿವೆ.  ರನ್ನ ಸಾಹಿತ್ಯ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ,       ಕೆಂಪೇಗೌಡ ಸಾಹಿತ್ಯ ಪ್ರಶಸ್ತಿ, ಲಿಂಗರಾಜದೇಸಾಯಿ ಸಾಹಿತ್ಯ ಪ್ರಶಸ್ತಿ, ಬೆಳಗಾವಿಯ ಎಂ.ಕೆ. ಪಬ್ಲಿಸಿಟಿ ಪ್ರಶಸ್ತಿ ಇಂತಹವು ಕೆಲವು.  ಇವರ  ಮಹತ್ವದ  ಸಾಹಿತ್ಯಕ  ಕೊಡುಗೆಗಳಿಗಾಗಿ  ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು  ೨೦೧೧ರಲ್ಲಿ  ಡಾಕ್ಟೊರೇಟ್ ಗೌರವ  ಸಮರ್ಪಿಸಿದೆ.  ಸರ್ಕಾರಿ ಸೇವೆಯಲ್ಲಿನ  ದಕ್ಷ  ಸೇವೆಗಾಗಿ ಅವರಿಗೆ  ೧೯೮೨-೮೩ ರಿಂದ ೧೯೮೬-೮೭ ಅವಧಿಯಲ್ಲಿ  ಎರಡು ಚಿನ್ನದ ಪದಕಗಳೂ  ಸೇರಿ ಐದು  ಬಹುಮಾನಗಳು  ಸಂದಿದ್ದವು.  ಬೆಳಗಾವಿ  ಜಿಲ್ಲಾ  ಸಮಿತಿಯ ಸಾಕ್ಷರತಾ  ಪಾಕ್ಷಿಕ ‘ಅಕ್ಷರ ಪ್ರಭಾ’ದ   ಸಂಪಾದಕರಾಗಿದ್ದಾಗ ೧೯೯೪-೯೫ರಲ್ಲಿ,  ಆ ಜಿಲ್ಲೆಗೆ  ರಾಷ್ಟ್ರಪತಿಗಳ     ‘ಸತ್ಯೇನ್  ಮೈತ್ರ’ ಪ್ರಶಸ್ತಿ  ಸಂದಿತು.  ಡಾ. ಮನು ಬಳಿಗಾರ್ ಅವರಿಗೆ  ೨೦೦೮ ರಲ್ಲಿ  “ವಿಶ್ವಮಾನವ  ಪ್ರಶಸ್ತಿ”ಯೂ  ಸಂದಿತು.

ಸಿಂಗಪುರದಲ್ಲಿ ನಡೆದ ವಿಶ್ವ ಕನ್ನಡ ಸಂಸ್ಕೃತಿ  ಸಮ್ಮೇಳನದ ಅಧ್ಯಕ್ಷತೆ (೨೦೦೫); ಅಮೇರಿಕಾದ ವಿ.ಎಸ್.ಎನ್.ಎ. ರಜತ ಮಹೋತ್ಸವದಲ್ಲಿ ಪ್ರಧಾನ ಭಾಷಣ – ೧೯೯೭, ೨೦೦೩, ೨೦೦೭; ಆಸ್ಟ್ರೇಲಿಯಾದ ಮೆಲ್ಬರ್ನ್‍ ಕನ್ನಡ ಸಂಘದ ರಜತ ಮಹೋತ್ಸವದಲ್ಲಿ ಮುಖ್ಯಅತಿಥಿ–ಉಪನ್ಯಾಸ–೨೦೧೦; ಲಂಡನ್‍ನಲ್ಲಿ ರವೀಂದ್ರನಾಥ್‍ಟ್ಯಾಗೂರ್ ೧೫೦ನೇ ವರ್ಷಾಚರಣೆಯಲ್ಲಿ ಮುಖ್ಯಅತಿಥಿ–ಉಪನ್ಯಾಸ–೨೦೧೧; ಗದಗ ಜಿಲ್ಲಾಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ (೨೦೦೪); ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯತ್ವ  (೧೯೯೯-೨೦೦೧);      ಬಿಜಾಪುರ ಜಿಲ್ಲಾ 5ನೇ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಕಾರ್ಯಧ್ಯಕ್ಷತೆ (೧೯೮೯-೯೦); ಮಾರ್ಚ್ ೨೦೧೧ರಲ್ಲಿ ಬೆಳಗಾವಿಯಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸುವಲ್ಲಿ ಮಹತ್ವದ ಪಾತ್ರ; ಕನಕಪುರದಲ್ಲಿ  ೧೯೯೯ರಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನ  ಕವಿಗೋಷ್ಥಿಯಲ್ಲಿ ಕಾವ್ಯಮಂಡನೆ,   ೨೦೦೩ರ  ಮೂಡಬಿದ್ರೆ  ಸಮ್ಮೇಳನದಲ್ಲಿ  ಸಾಂಸ್ಕೃತಿಕ ಗೋಷ್ಥಿಯಲ್ಲಿ ಪ್ರಬಂಧ ಮಂಡನೆ; ನವ ದೆಹಲಿಯಲ್ಲಿ ೨೦೧೦ರಲ್ಲಿ ನಡೆದ ರಾಷ್ಟ್ರೀಯ ಕನ್ನಡ ಸಮ್ಮೇಳನದ ಅಧ್ಯಕ್ಷತೆ; ೨೦೦೮ ಮತ್ತು ೨೦೦೯ರಲ್ಲಿ ಪ್ರಜಾವಾಣಿ ದಿನಪತ್ರಿಕೆಯಲ್ಲಿ ‘ಸಾಕ್ಷಿಪ್ರಜ್ಞೆ’ ಎಂಬ ಅಂಕಣ ಬರೆದದ್ದು; ಅಮೆರಿಕಾ, ಯುರೋಪ್, ಆಸ್ಟ್ರೇಲಿಯಾ, ಥೈಲ್ಯಾಂಡ್, ಮಲೇಷಿಯಾ, ದುಬೈ, ಸಿಂಗಾಪುರಗಳಲ್ಲಿ ೧೯೯೭-೨೦೦೩-೨೦೦೫-೨೦೦೭-೨೦೦೮, ೨೦೧೦,೨೦೧೧ ಅವಧಿಯಲ್ಲಿ  ವ್ಯಾಪಕ ಪ್ರವಾಸದ  ಸಂದರ್ಭದಲ್ಲಿ  ಮಾಡಿದ  ವೈವಿಧ್ಯಪೂರ್ಣ   ಉಪನ್ಯಾಸಗಳು: ರವೀಂದ್ರನಾಥ ಠಾಗೊರ್ ಆ್ಯಂಡ್ ಇಂಡಿಯನ್ ಆರ್ಟ್ ಅಂಡ್ ಕಲ್ಚರ್; ಇಂಟರ್‍ನ್ಯಾಷನಲ್ ಅಂಡರ್‍ಸ್ಟಾಂಡಿಂಗ್ ಅಂಡ್ ವಚನ ಲಿಟರೆಚರ್; ಇಂಡಿಯನ್ ಕಲ್ಚರ್ ಅಂಡ್ ಹೆರಿಟೇಜ್; ಚಾಲೆಂಜಸ್ ಬಿಫೋರ್‍ ರಿಲಿಜನ್; ಕನ್ನಡ ಸಂಸ್ಕೃತಿ – ಒಂದು ಅಧ್ಯಯನ ಇತ್ಯಾದಿ, ಇತ್ಯಾದಿಗಳು  ಡಾ.  ಮನು ಬಳಿಗಾರ್  ಅವರ  ವೈವಿಧ್ಯಮಯ  ಸಾಹಿತ್ಯಕ ಮತ್ತು  ಸಾಂಸ್ಕೃತಿಕ  ವ್ಯಾಪ್ತಿಯ  ಇನ್ನಿತರ  ಹರಹುಗಳಲ್ಲಿ  ಪ್ರಮುಖವಾದವುಗಳಾಗಿವೆ.

ಅಧ್ಯಯನಶೀಲರಾದ  ಡಾ.  ಮನು ಬಳಿಗಾರರ  ಬಳಿ ದೊಡ್ಡ ಗ್ರಂಥ ಭಂಡಾರವೇ ಇದೆ. ಬಿಡುವಿಲ್ಲದ  ಕಾರ್ಯವೈವಿಧ್ಯಗಳ ನಡುವೆಯೂ   ಏನಾದರು ಓದುವುದಕ್ಕೆ  ಮತ್ತು ಬರೆಯುವುದಕ್ಕೆ  ಆಸ್ಪದ  ಮಾಡಿಕೊಳ್ಳುವ  ಇವರು, ಅತ್ಯಂತ ಸರಳ, ನಿಸ್ಪೃಹ, ಸಜ್ಜನ ಸ್ನೇಹ ಜೀವಿ ಎಂದು  ಎಲ್ಲೆಡೆ  ಗುರುತಿಸಲ್ಪಟ್ಟಿದ್ದಾರೆ.

ಡಾ. ಮನು ಬಳಿಗಾರ್ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಆಯುಕ್ತರಾಗಿದ್ದೂ  ಒಳಗೊಂಡಂತೆ  ತಮ್ಮ  ಸೇವಾ  ಅವಧಿಯಲ್ಲಿ  ಅನೇಕ ಮಹತ್ವದ ಕನ್ನಡಪರ ಕೆಲಸಗಳನ್ನು ನಿರ್ವಹಿಸಿದ್ದಾರೆ.  ಅವುಗಳಲ್ಲಿ  ಈ  ಕೆಲವೊಂದು ಪ್ರಮುಖ  ಕೆಲಸಗಳನ್ನು ಸ್ಮರಿಸಬಹುದಾಗಿದೆ:

೧. ಡಾ. ಮನು ಬಳಿಗಾರ್ ಅವರು ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಮ್ಮೇಳನಗಳನ್ನು ಯಶಸ್ವಿಯಾಗಿ  ಸಂಘಟಿಸಿದವರಾಗಿದ್ದಾರೆ. ಅತ್ಯಂತ ಅರ್ಥಪೂರ್ಣವಾಗಿ ನಡೆದ “ವಿಶ್ವಕನ್ನಡ ಸಮ್ಮೇಳನ” ಬೆಳಗಾವಿ (೨೦೧೧) ಇದರಲ್ಲೊಂದಾಗಿದೆ.  ಈವರೆಗಿನ ಚರಿತ್ರೆಯಲ್ಲಿಯೇ ಇಂದೊಂದು ಅತ್ಯಂತ ದೊಡ್ಡ ಹಾಗೂ  ದಾಖಲಾರ್ಹ ಮಹೋತ್ಸವವೆಂದೆನಿಸಿದೆ.

೨. ಕನ್ನಡ ಸಾಹಿತ್ಯ ಪರಿಷತ್ತಿಗೆ ಸಂಬಂಧಿಸಿದಂತೆ, ತಾಲ್ಲೂಕು ಹಾಗೂ  ಜಿಲ್ಲಾ ಸಾಹಿತ್ಯ ಸಮ್ಮೇಳನಗಳಿಗೆ ಸರಕಾರದಿಂದ ಕ್ರಮವಾಗಿ ತಲಾ ರೂ. ೧ ಲಕ್ಷ  ಹಾಗೂ ೫ ಲಕ್ಷ ಅನುದಾನ ನಿರಂತರ ಬರುವಂತೆ ಅವರು  ಕ್ರಮ ಕೈಗೊಂಡರು.

೩. ಕನ್ನಡ ಸಾಹಿತ್ಯ  ಪರಿಷತ್ತಿಗೆ ಸರ್ಕಾರದಿಂದ ಹಿಂದೆಂದಿಗಿಂತಲೂ ಹಲವಾರು ಪಟ್ಟು ಹೆಚ್ಚು ಅನುದಾನ ಬರುವಂತೆ ಕ್ರಮ ಕೈಗೊಂಡರು.

೪. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಕಟವಾಗುವ ಎಲ್ಲ ಗ್ರಂಥಗಳಿಗೆ ಕೇವಲ ಮುದ್ರಣ ಖರ್ಚನ್ನು ಮಾತ್ರ ಭರಿಸುವಷ್ಟು ಕಡಿಮೆ ಬೆಲೆ ನಿಗದಿಪಡಿಸಲು ಪ್ರಸ್ತಾಪಿಸಿ, ೨೦೦೮ರಲ್ಲಿ  ಆ ಕುರಿತಂತೆ ಸರ್ಕಾರಿ  ಆದೇಶ ಹೊರಡಲು ಕಾರಣರಾದರು.

೫.  ಋಗ್ವೇದ ಸಂಹಿತಾ ಮೊದಲ್ಗೊಂಡು ಹಲವಾರು ವರ್ಷ ನೆನೆಗುದಿಗೆ ಬಿದ್ದಿದ್ದ ಸಮಗ್ರ ವಚನ ಸಂಪುಟಗಳು, ಡಾ. ಅಂಬೇಡ್ಕರ್ ಬರಹಗಳು – ಇವುಗಳ ಪುನರ್ಮುದ್ರಣ ಹಾಗೂ ಅಭೂತಪೂರ್ವವೆನ್ನುವಷ್ಟು ಹಿರಿಯ ಲೇಖಕರ ಸಮಗ್ರ ಸಾಹಿತ್ಯ ಪ್ರಕಟವಾಗಲು ಕ್ರಮಕೈಗೊಂಡರು.

೬. ಹಲವಾರು ಟ್ರಸ್ಟ್ಗಳನ್ನು ರಚಿಸಿ ಅವುಗಳಿಗೆ ಅನುದಾನ ನಿಗದಿಪಡಿಸಲು ಕಾರಣಕರ್ತರಾದರು.

೭. ಕನಕ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ಸ್ಥಾಪನೆಯಲ್ಲಿ ವಿಶೇಷ ಶ್ರಮವಹಿಸಿದರು.

ಹೀಗೆ  ತಮ್ಮ  ಸರ್ಕಾರಿ ಅಧಿಕಾರಾವಧಿಯಲ್ಲಿ ಮಹತ್ವದ  ಪಾತ್ರಗಳನ್ನು ನಿರ್ವಹಿಸಿದ ಡಾ. ಮನು ಬಳಿಗಾರ್  ಅವರು, ಪ್ರಸಕ್ತ ವರ್ಷದಲ್ಲಿ  ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷತೆ ವಹಿಸಿಕೊಂಡ  ಪ್ರಾರಂಭದ  ಕ್ಷಣಗಳಿಂದಲೂ ಕನ್ನಡ  ಸಾಹಿತ್ಯ  ಪರಿಷತ್ತು ಮತ್ತು  ಕನ್ನಡಪರ  ಹಿತಚಿಂತನಗಳ    ಕುರಿತಾಗಿ  ಕ್ಷಿಪ್ರದೆಸೆಯಲ್ಲಿ ಕಾರ್ಯೋನ್ಮುಖರಾಗಿದ್ದು, ಆ  ನಿಟ್ಟಿನಲ್ಲಿ  ಮಹತ್ವದ ಯೋಜನೆಗಳನ್ನು  ರೂಪಿಸಿ  ಕಾರ್ಯರೂಪಕ್ಕೆ ತರಲು  ವ್ಯಾಪಕವಾದ  ಕಾರ್ಯಕ್ರಮಗಳನ್ನು   ಕೈಗೊಂಡು  ನಿರಂತರವಾಗಿ  ಶ್ರಮಿಸುತ್ತಾ  ಮುನ್ನಡೆದಿದ್ದಾರೆ.

Tag: Dr. Manu Baligar, Adhyaksharu