ನನ್ನ ಕರ್ಣಾಟಕ

ಶ್ರೀಧರ ಖಾನೋಳ್ಕರ (ಕ್ರಿ.ಶ 1896 – 1965)

ಕರ್ನಾಟಕವೆಂಬುದೊಮ್ಮೆ ಕೂಗು, ಜಯ ಕರ್ನಾಟ
ಕರ್ನಾಟವೆಂದೊಮ್ಮೆ ಕೂಗು!
ಕರ್ನಾಟ ಶಬ್ದಗಳ ದಿವ್ಯ ಸಂಗೀತಕ್ಕೆ
ನೂರು ಸಲ ತಲೆಯ ತೂಗು
ಕರ್ನಾಟವೆಂಬುದು ಮಂತ್ರ; ಸಿಂಹನ ಧೈರ್ಯ
ತುಂಬುವದು ಮೈಯಸೇರಿ!
ಭೋರಿಡುವ ಸಾಗರದ ತೆರೆಗಳೊಲು ತುಂಬುವದು
ಶಕ್ತಿತೆರೆ ಮೇರೆ ಮೀರಿ

ಕರ್ನಾಟವೆಂಬುದಿದು ಗುಡುಗು, ಮುಗಿಲಿನ ಮಿಂಚು
ಹರವುವದು ವಿಶ್ವದೊಳಗೆ!
ಬೆಳಕು ಬೆಳಕಾಗುವದು, ಜಗವೆಲ್ಲ ಬೆಳಗುವದು,
ಸಾಟಿ ರವಿ ಕಿರಣಗಳಿಗೆ
ಕರ್ನಾಟವೆಂಬುದಿದು ಹಲಗೆ – ರಣ ಹಲಗೆಯಿದು,
ಬೀಸುವುದು ವೀರವೃತ್ತಿ!
ಕಣಕಣಿಪ ರವವನ್ನು ಕೇಳಿದೊಡೆ ಮೂಡುವದು
ಜನರೊಳಗೆ ದಿವ್ಯಶಕ್ತಿ

ಕರ್ನಾಟವೆಂಬುದಿದು ಕಾಳಿ-ರಣಗಾಳಿಯಿದು, ಭೋಂಕಾರ
ರವವ ಕೇಳಿ!
ಮಡಿವ ರಣ ಹೇಡಿಗಳ ಹೃದಯದಲಿ ತುಂಬುವಳು
ಕಡದಾದ ವೀರ್ಯ ಕಾಳಿ

ಭೋರ್ಗರೆಯುತಿರುವಂಥ ಕರ್ನಾಟಭೇರಿಯಿಂ ಹೊರ
ಹೊಮ್ಮುವಂಥ ಸ್ವರವ
ಕೇಳುತಲಿ ಮೈನವಿರು ಮುಳ್ಳಿನಂತಾಗುವುದು
ತುಂಡರಿಸುತೆಲ್ಲ ಭಯವ

ಕರ್ನಾಟವಿದು ವೀಣೆ! ಸಕಲ ಕರ್ನಾಟಕದ
ಜನಮನವ ಹಿಡಿದು ಹೊಸೆದು!
ವಿಶ್ವಸಂಗೀತದೊಳು ಬೆರಸಿ ಒಂದಾಗುವದು
ಶ್ರೀಧರನ ಕವನ ನೆನೆದು.

ಸಾಹಿತ್ಯ: ಶ್ರೀಧರ ಖಾನೋಳ್ಕರ (ಕ್ರಿ.ಶ 1896 – 1965)

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)