ಕನ್ನಡನುಡಿ

ಆನಂದಕಂದ (ಬೆಟಗೇರಿ ಕೃಷ್ಣಶರ್ಮ)

ಎನಿತು ಇನಿದು ಈ ಕನ್ನಡ ನುಡಿಯು
ಮನವನು ತಣಿಸುವ ಮೋಹನ ಸುಧೆಯು!

ಗಾನವ ಬೆರೆಯಿಸಿ
ವೀಣೆಯ ದನಿಯೊಳು
ವಾಣಿಯ ನೇವುರ
ನುಡಿಸುತೆ ಕುಣಿಯಲು
ಮಾಣದೆ ಮೆರೆಯುವ ಮಂಜುಲ ರವವೋ?
ಎನಿತು ಇನಿದು ಈ ಕನ್ನಡ ನುಡಿಯು !

ರಂಗನ ಮುರಲಿಯ
ಹಿಂಗದ ಸರದಲಿ
ಹೆಂಗಳೆಯರು ಬೆಳ
ದಿಂಗಳಿರುಳಲಿ
ಸಂಗೀತವನೊರೆದಂಗವಿದೇನೋ?
ಎನಿತು ಇನಿದು ಈ ಕನ್ನಡ ನುಡಿಯು!

ಗಿಳಿಗಳು ಉಲಿಯುವ
ಮೆಲುಮಾತುಗಳೋ
ಕಳಕಂಠಗಳಾ
ಚೆಲುವಿನ ಕುಕಿಲೊ?
ಅಳಿಗಳ ಬಳಗದ ಬೆಳಗಿನ ಉಲಿಯೋ?
ಎನಿತು ಇನಿದು ಈ ಕನ್ನಡ ನುಡಿಯು!

ಸಾಹಿತ್ಯ: ಆನಂದಕಂದ (ಬೆಟಗೇರಿ ಕೃಷ್ಣಶರ್ಮ)

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)