ಹುತ್ತರಿ ಹಾಡು

ಪಂಜೆ ಮಂಗೇಶರಾಯರು

ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಭಿಮ್ಮನೆ ಬಂದಳೋ?
ಎಲ್ಲಿ ಮೋಹನ ಗಿರಿಯ ಬೆಡಗಿನ ರೂಪಿನಿಂದಲಿ ನಿಂದಳೋ?
ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ?
ಎಲ್ಲಿ ನೆಲವನು ತಣಿಸಿ, ಜನಮನ ಹೊಲದ ಕಳೆ ಕಳೆ ಕಳೆವಳೋ?
ಅಲ್ಲಿ ಆ ಕಡೆ ನೋಡಲಾ!
ಅಲ್ಲಿ ಕೊಡಗರ ನಾಡಲಾ!
ಅಲ್ಲಿ ಕೊಡವರ ಬೀಡಲಾ!

ಸವಿದು ಮೆದ್ದರೊ ಯಾರು ಪೂರ್ವದಿ ಹುಲಿಯ ಹಾಲಿನ ಮೇವನು?
ಕವಣೆ ತಿರಿಕಲ್ಲಾಟ ಹಗ್ಗಕೆ ಸೆಳೆದರೋ ಹೆಬ್ಬಾವನು?
ಸವರಿ ಆನೆಯ ಸೊಂಡಿಲಿನ ರಣಕೊಂಬನಾರ್ ಭೋರ್ಗರೆದರೋ?
ಸವೆದು ಸವೆಯದ ಸಾಹಸತ್ವದ ಕ್ಷಾತ್ರ ಬೇಟೆಯ ಮೆರೆದರೋ?
ಅವರು ಸೋಲ್ ಸಾವರಿಯರು!
ಅವರು ಕಡುಗಲಿ ಗರಿಯರು!
ಅವರೆ ಕೊಡಗಿನ ಹಿರಿಯರು!

ತಮ್ಮ ನಾಡಿನ ಕೊರಳು ದಾಸ್ಯದ ನೊಗದ ಭಾರಕೆ ಬಗ್ಗದೋಲ್
ಹೆಮ್ಮೆ ಹಗೆಗಳ ಹೊಡೆದು ಹಿರಿಯರು ಹಸಿದು ಹಾರುವ ಬಗ್ಗದೋಲ್
ಬೊಮ್ಮ ಗಿರಿಯಿಂ ಪುಷ್ಪಗಿರಿ ಪರ್ಯಂತ ಬೆಳೆದೀ ದೇಶವು
ಧರ್ಮ ದಂಡ ಕಟ್ಟು ಕಟ್ಟಳೆ, ರೀತಿ ನೀತಿಯ ಕೋಶವು!
ನಮ್ಮ ಕೊಡಗಿದು ಜಮ್ಮದು!
ಜಮ್ಮ ಕೊಡಗಿದು ನಮ್ಮದು!
ನಮ್ಮೊಡಲ್ ಬಿಡಲಮ್ಮದು!

ಇದು ಅಗಸ್ತ್ಯನ ತಪದ ಮಣೆ, ಕಾವೇರಿ ತಾಯ ತವರ್ಮನೆ
ಕದನ ಸಿರಿಗುಯ್ಯಾಲೆ ತೂಗಿದನಿಲ್ಲಿ ಚಂದಿರವರ್ಮನೆ!
ಇದಕೊ! ಚೆಂಗಾಳ್ವರಸರಾಡಂಬರವು ಕುಣಿದ ಶ್ರೀರಂಗವು!
ಇದೊ! ಇದೋ! ಇಲ್ಲು ರುಳ್ದ ಹಾಲೇರಿಯರ ಬಲಗಿರಿ ಶೃಂಗವು!
ವಿಧಿಯ ಮಾಟದ ಕೊಡಗಿದು!
ಮೊದಲೆ ನಮ್ಮದು, ಕಡೆಗಿದು!
ಕದಲದೆಮ್ಮನು; ಬೆಡಗಿದು!

ಒಮ್ಮತವು ಒಗ್ಗಟ್ಟು ಒಂದೇ ಮನವು ಎಲ್ಲಿದೆ ಹೇಳಿರಿ?
ಸುಮ್ಮನಿತ್ತರೊ ದಟ್ಟಿ ಕುಪ್ಪಸ ಹಾಡು ಹುತ್ತರಿಗೇಳಿರಿ!
ಚಿಮ್ಮಿ ಪಾತುರೆ ಕೋಲ ಹೊಯ್ಲಿಗೆ ಕುಣಿವ ಪಡ ಹೊರ ಹೊಮ್ಮಲಿ!
ಅಮ್ಮ ಹರಸಿದ ಸೀಮೆ ನಮಗಿದು ಇರಲಿ ನಮ್ಮದೆ ನಮ್ಮಲಿ!
ನೆಮ್ಮದಿಯನಿದು ತಾಳಲಿ!
ಅಮ್ಮೆಯಾ ಬಲ ತೋಳಲಿ
ನಮ್ಮ ಕೊಡಗಿದು ಬಾಳಲಿ!

ಸಾಹಿತ್ಯ: ಪಂಜೆ ಮಂಗೇಶರಾಯರು

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)