ವಿ.ಕೃ. ಗೋಕಾಕ್

vk-gokak

ವಿ.ಕೃ. ಗೋಕಾಕ್

ಕನ್ನಡದಲ್ಲಿ ನವ್ಯಕಾವ್ಯ ಪ್ರವರ್ತಕರಾಗಿ ‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕರು ಕೃಷ್ಣರಾಯ-ಸುಂದರಮ್ಮ ದಂಪತಿಗಳಿಗೆ ೯-೮-೧೯0೯ರಲ್ಲಿ ಜನಿಸಿದರು. ಸವಣೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು. ೧೯೩೧ರಲ್ಲಿ ಪುಣೆಯ ಫಗ್ರ್ಯುಸನ್  ಕಾಲೇಜಿನಲ್ಲಿ ಅನಂತರ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು.

ಉನ್ನತ ಶಿಕ್ಷಣ ಪಡೆದು ವಿದೇಶದಿಂದ ಬಂದ ಮೇಲೆ ಸಾಂಗ್ಲಿಯ ವಿಲ್ಲಿಂಗ್‍ಟನ್ ಕಾಲೇಜಿನಲ್ಲಿ, ಅನಂತರ ಕೊಲ್ಲಾಪುರದ ರಾಜಾರಾಮ್ ಕಾಲೇಜಿನಲ್ಲಿ, ಧಾರವಾಡದ ಕರ್ಣಾಟಕ ಕಾಲೇಜಿನಲ್ಲಿ (೧೯೫೨) ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿದರು. ೧೯೬೬ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದರು. ೧೯೭0ರಲ್ಲಿ ಸಿಮ್ಲಾದ ಇನ್ಸ್ಟಿಟ್ಯೂಟ್ ಆಫ್ ಸ್ಟಡೀಸ್ ನಿರ್ದೇಶಕರಾದರು.

ಆಂಧ್ರದ ಪುಟ್ಟಪರ್ತಿಯ ಸತ್ಯಸಾಯಿ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಗೋಕಾಕರು, ಪಿ. ಇ. ಎನ್. ಅಧಿವೇಶನಕ್ಕೆ ೧೯೫೭ರಲ್ಲಿ ಜಪಾನಿಗೆ ತೆರಳಿದರು. ಬೆಲ್ಜಿಯಂನಲ್ಲಿ ಕವಿ ಸಮ್ಮೇಳನದಲ್ಲಿ ಭಾಗವಹಿಸಿದರು, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದರು.

ಗೋಕಾಕರಿಗೆ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ. ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ (೧೯೫೮), ಅಮೆರಿಕಾದ ಫೆಸಿಫಿಕ್ ವಿಶ್ವವಿದ್ಯಾಲಯ, ಕರ್ನಾಟಕ, ಮೈಸೂರು, ಬೆಂಗಳೂರು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಗಳನ್ನು ನೀಡಿವೆ. ಪರಿಷತ್ತು ೧೯೫೮ರಲ್ಲಿ ಬಳ್ಳಾರಿಯಲ್ಲಿ ನಡೆದ ೪0ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಗೆ ಆಯ್ಕೆ ಮಾಡಿ ಗೌರವಿಸಿದೆ. ದ್ಯಾವಾ ಪೃಥಿವಿ ಖಂಡಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ.

ತಮ್ಮ ಭಾರತ ಸಿಂಧುರಶ್ಮಿ ಮಹಾಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಗೋಕಾಕರು ಕನ್ನಡಕ್ಕೆ ಉತ್ತಮ ಕೃತಿಗಳನ್ನು ನೀಡಿದ್ದಾರೆ. ಸಮರಸವೇ ಜೀವನ (ಇಜ್ಜೋಡು) ಬೃಹತ್ ಕಾದಂಬರಿ ಇವರಿಗೆ ಹೆಸರನ್ನು ತಂದುಕೊಟ್ಟಿದೆ. ಇವರು ಭಾಷಾ ಆಯೋಗದ ಅಧ್ಯಕ್ಷರಾಗಿ ಸಲ್ಲಿಸಿದ ಗೋಕಾಕವರದಿ ಇತಿಹಾಸವನ್ನೇ ಸೃಷ್ಟಿಸಿತು.

ನವ್ಯತೆ ಹಾಗೂ ಕಾವ್ಯ ಜೀವನ, ವಿಶ್ವಮಾನವ ದೃಷ್ಟಿ, ಸೌಂದರ್ಯಮೀಮಾಂಸೆ, ಆಂಗ್ಲ ಸಾಹಿತ್ಯಕ್ಕೆ ನೀಡಿದ ಸ್ಫೂರ್ತಿ ಇತ್ಯಾದಿ ವಿಮರ್ಶಾಗ್ರಂಥಗಳು, ಜನನಾಯಕ, ವಿಮರ್ಶಕ ವೈದ್ಯ, ಯುಗಾಂತರ, ಮುಂತಾದ ನಾಟಕಗಳು ಇವರಿಂದ ರಚಿತವಾಗಿವೆ. ಇಂಗ್ಲಿಷಿನಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಅರವಿಂದಭಕ್ತರೂ, ಬೇಂದ್ರೆ ಆರಾಧಕರೂ ಆಗಿದ್ದ ಗೋಕಾಕರು ೨೮-೪-೧೯೯೨ರಲ್ಲಿ ಮುಂಬಯಿಯಲ್ಲಿ ನಿಧನರಾದರು.

Tag: Vinayaka Krishna Gokak, Jnanapitha

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)