ಎಂ. ಎಂ. ಕಲಬುರ್ಗಿ

kalburgi

ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು, ಕರ್ನಾಟಕದ ಪ್ರಸಿದ್ಧ ವಿದ್ವಾಂಸರಲ್ಲಿ ಒಬ್ಬರು. ಅವರ ಅಧ್ಯಯನ ಮತ್ತು ಕೊಡುಗೆಗಳು, ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಇವೆಲ್ಲದರ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಅಧ್ಯಯನದ ವಿಶಾಲವಾದ ಪರಿಪ್ರೇಕ್ಷ್ಯವಿದೆ.

ಕಲಬುರ್ಗಿಯವರು 1938ರ ನವಂಬರ 28ರಂದು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು  ಕರ್ನಾಟಕ ವಿಶ್ವವಿದ್ಯಾಲಯದಿಂದ1960ರಲ್ಲಿ  ಬಿ.ಎ ಮತ್ತು 1962ರಲ್ಲಿ ಎಂ..ಎ ಪದವಿಗಳನ್ನು ಪ್ರಥಮ ಸ್ಥಾನದೊಂದಿಗೆ ಪಡೆದರು. 1968ರಲ್ಲಿ ಆವರು ಡಾ. ಆರ್. ಸಿ. ಹಿರೇಮಠ ಅವರ ಮಾರ್ಗದರ್ಶನದಲ್ಲಿ ಸಲ್ಲಿಸಿದ, ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತು. 1962 ರಲ್ಲಿ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಕಲಬುರ್ಗಿಯವರು, 1966 ರ ವರ್ಷದಲ್ಲಿ ವಿಶ್ವವಿದ್ಯಾಲಯದ ‘ಕನ್ನಡ ಅಧ್ಯಯನ ಪೀಠ’ದಲ್ಲಿ ಅಧ್ಯಾಪಕರಾಗಿ ನೇಮಕಗೊಂಡರು. ಅಲ್ಲಿ ಅನೇಕ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಹುದ್ದೆಗಳನ್ನು ನಿರ್ವಹಿಸಿ ಸುಮಾರು ಹತ್ತೊಂಬತ್ತು ವರ್ಷಗಳ ಕಾಲ ಪ್ರಾಧ್ಯಾಪಕರಾಗಿದ್ದ ಕಲಬುರ್ಗಿಯವರು, ಒಟ್ಟಿನಲ್ಲಿ ಮೂವತ್ತೊಂಬತ್ತು ವರ್ಷಗಳು ಶಿಕ್ಷಕ ವೃತ್ತಿಯಲ್ಲಿ ತೊಡಗಿಕೊಂಡಿದ್ದರು. ಅವರು ಆ ಅವಧಿಯಲ್ಲಿ ಅನೇಕ ಸಂಶೋಧನ ಯೋಜನೆಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. 1998-2001 ರ ಕಾಲಾವಧಿಯಲ್ಲಿ ಕಲಬುರ್ಗಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು. ಅಲ್ಲಿಯೂ ಅನೇಕ ಮಹತ್ವದ ಯೋಜನೆಗಳನ್ನು ಆಗುಮಾಡಿದ ಕಲಬುರ್ಗಿಯವರು ನಿವೃತ್ತಿಯ ನಂತರವೂ ಅವರು ಸಂಶೋಧನಾ ಚಟುವಟಿಕೆಗಳಲ್ಲಿಯೇ ಮಗ್ನರಾದರು. ಕರ್ನಾಟಕ ಸರ್ಕಾರವು ಪ್ರಕಟಿಸಿದ ಹದಿನೈದು ಸಂಪುಟಗಳ ‘ವಚನಸಾಹಿತ್ಯ ಸಂಪುಟ’ ಮಾಲೆಗೆ ಅವರು ಪ್ರಧಾನ ಸಂಪಾದಕರಾಗಿದ್ದರು. ಹಾಗೆಯೇ ‘ಸಮಗ್ರ ಕೀರ್ತನ ಸಂಪುಟ’ಗಳ ಸಂಪಾದಕ ಮಂಡಳಿಯ ಸದಸ್ಯರೂ ಆಗಿದ್ದರು.

ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಸಂಶೋಧನೆಯು ಕಲಬುರ್ಗಿಯವರ ಪ್ರಧಾನ ಆಸಕ್ತಿಯಾಗಿದೆ. ಅವರು ಎಪ್ಪತ್ತೈದಕ್ಕೂ ಹೆಚ್ಚು ಪುಸ್ತಕಗಳನ್ನೂ ನಾನೂರಕ್ಕೂ ಹೆಚ್ಚು ಸಂಶೋಧನ ಲೇಖನಗಳನ್ನೂ ಪ್ರಕಟಿಸಿದ್ದಾರೆ.

‘ಕವಿರಾಜಮಾರ್ಗ ಪರಿಸರದ ಕನ್ನಡಸಾಹಿತ್ಯ’,  ‘ಮಾರ್ಗ’, ‘ಐತಿಹಾಸಿಕ’ ಇವು ಸಂಶೋಧನ ಗ್ರಂಥಗಳು.  ‘ಶಾಸನ ವ್ಯಾಸಂಗ’, ‘ಶಾಸನ ಸಂಪದ’, ‘ಧಾರವಾಡ ಜಿಲ್ಲೆಯ ಶಾಸನಸೂಚಿ’ ಇವು ಶಾಸನ ಗ್ರಂಥಗಳು.

ಕಲಬುರ್ಗಿಅವರ  ಪ್ರಮುಖ ಶೈಕ್ಷಣಿಕ ಗ್ರಂಥಗಳೆಂದರೆ, ‘ಕನ್ನಡ ಗ್ರಂಥಸಂಪಾದನ ಶಾಸ್ತ್ರ’, ‘ಕನ್ನಡ ಹಸ್ತಪ್ರತಿಶಾಸ್ತ್ರ’, ‘ಕನ್ನಡ ಸಂಶೋಧನ ಶಾಸ್ತ್ರ’ ಮತ್ತು ‘ಕನ್ನಡ ಸ್ಥಳನಾಮ ವಿಜ್ಞಾನ’.

ಕಲಬುರ್ಗಿ ಅವರು 30ಕ್ಕೂ ಹೆಚ್ಚು ಪ್ರಾಚೀನ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ.  ‘ಶಿವಯೋಗ ಪ್ರದೀಪಿಕಾ’, ‘ಕೊಂಡಗುಳಿ ಕೇಶೀರಾಜನ ಕೃತಿಗಳು’, ‘ಬಸವಣ್ಣನ ಟೀಕಿನ ವಚನಗಳು’, ‘ಸಿರುಮನಾಯಕನ ಸಾಂಗತ್ಯ’ ಹೀಗೆ ಅವರ ಸಂಪಾದನೆಗಳು ಬೃಹತ್ ಪಟ್ಟಿ ಬೆಳೆಯುತ್ತದೆ.

ಜಾನಪದದಲ್ಲಿ ಅಪಾರ ಸಾಧನೆ ಮಾಡಿರುವ ಕಲಬುರ್ಗಿ ಅವರ ಪ್ರಮುಖ ಕೃತಿಗಳೆಂದರೆ ‘ಜಾನಪದ ಮಾರ್ಗ’ ಮತ್ತು ‘ಉತ್ತರ ಕರ್ನಾಟಕದ ಜನಪದ ಸಾಹಿತ್ಯ’.

ಕಲಬುರ್ಗಿ ಅವರ  ‘ನೀರು ನೀರಡಿಸಿತ್ತು’, ‘ಕೆಟ್ಟಿತ್ತು ಕಲ್ಯಾಣ’ ಇವರ ಹಲವು ಸೃಜನಶೀಲ ಬರಹಗಳ ಸಾಲಿಗೆ ಸೇರುತ್ತವೆ.  ಕಲಬುರ್ಗಿಯವರು ಎರಡು ನಾಟಕಗಳು ಮತ್ತು  ಕವನ ಸಂಕಲವನ್ನೂ ಪ್ರಕಟಿಸಿದ್ದಾರೆ

ಕಲಬುರ್ಗಿ ಅವರ ‘ಮಾರ್ಗ’ ಸಂಶೋಧನಾ ಗ್ರಂಥದ  ನಾಲ್ಕು ಸಂಪುಟಗಳು, ಕರ್ನಾಟಕದ ಸಂಸ್ಕೃತಿಯನ್ನು ಕುರಿತ ಅನೇಕ ಸಂಶೋಧನ ಲೇಖನಗಳನ್ನು ಒಳಗೊಂಡಿವೆ. ಕಲಬುರ್ಗಿಯವರಲ್ಲಿ ಉತ್ತರ ಕರ್ನಾಟಕದ ಹಿರಿಯ ವಿದ್ವಾಂಸರ ವಿಶಿಷ್ಟ ಲಕ್ಷಣಗಳು ಮತ್ತು ಹಳೆಯ ಮೈಸೂರಿನ ಕಡೆಯ ವಿದ್ವತ್ ಪರಂಪರೆಯ ಅನನ್ಯ ಲಕ್ಷಣಗಳ ಸಂಯೋಜನೆಯನ್ನು  ಕಾಣಬಹುದು. ತಮ್ಮ ಸಂಶೋಧನೆಯ ಫಲಿತಗಳ ನಿಕರತೆಯ ಬಗ್ಗೆ ನಂಬಿಕೆಯಿದ್ದಾಗ, ಅವರು ವಿವಾದಗಳನ್ನು ಹುಟ್ಟುಹಾಕಲು ಎಂದಿಗೂ ಹಿಂಜರಿದವಲ್ಲ. ಅವರು ತಮ್ಮ ಆಕರಗಳನ್ನು ಖಚಿತಪಡಿಸಿಕೊಂಡಿರುತ್ತಾರೆ ಮತ್ತು ಮಹತ್ವದ ಒಳನೋಟಗಳನ್ನು ನೀಡುತ್ತಾರೆ. ಆಕರಗಳ ಶೋಧನೆಯಲ್ಲಿ ಹಲವು ದೇಶಗಳನ್ನು ಸುತ್ತಿರುವ ಕಲಬುರ್ಗಿಯವರು ಅವುಗಳನ್ನು ವಿವೇಚನೆಯಿಂದ ಬಳಸಿಕೊಂಡಿದ್ದಾರೆ.

ಅಮೇರಿಕಾದಲ್ಲಿ ನಡೆದ ಸಮ್ಮೇಳನದಲ್ಲಿನ ಅವರ  ಭಾಷಣವನ್ನು ಓದಿದರೆ ಅಲುಗಾಡಿದ ಅನುಭವವಾಗುತ್ತದೆ.   ಕನ್ನಡ ನಾಡಿಗೆ ಇವತ್ತು ಬಂದೊದಗಿರುವ ಆಪತ್ತುಗಳನ್ನು ಡಾ.ಕಲಬುರ್ಗಿ ಆವರು ತಮ್ಮ ಸುದೀರ್ಘ ಭಾಷಣದಲ್ಲಿ ಪಟ್ಟಿ ಮಾಡುತ್ತ ಹೋಗುತ್ತಾರೆ. ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡನಾಡು ಇವತ್ತು ಮೂವತ್ತು ಜಿಲ್ಲೆಗಳಿಗೆ ಸೀಮಿತವಾಗಿರುವ ದುರಂತವನ್ನು ನೆನೆದು ಕಲಬುರ್ಗಿ ವಿಷಣ್ಣರಾಗುತ್ತಾರೆ. ಶಿವಾಜಿಯು ಕನ್ನಡ ನೆಲದ ಭೋಂಸ್ಲೆ ಮನೆತನದ ಒಬ್ಬ ಧೀರ ಎಂದು ಯಾರ ಬಳಿ ಹೇಳಲಿ? ಕಾಲಕಾಲಕ್ಕೆ ಕನ್ನಡ ನಾಡಿನ ಇತಿಹಾಸಗಳನ್ನು ದಾಖಲಿಸುವಲ್ಲಿ ಕನ್ನಡ ಬರಹಗಾರರು ಆಸ್ಥೆ ವಹಿಸಿದ್ದರೆ ಇಂಥ ಗೋಜಲುಗಳನ್ನು ನಾವು ನೋಡಬೇಕಾಗಿರಲಿಲ್ಲ. ಇತಿಹಾಸ ಬರೆಯುವ ಮಹತ್ವವನ್ನು ಕನ್ನಡಿಗರು ಮನಗಾಣದೆ ಇರುವುದು ವಿಷಾದಕರ ಎಂದು ಕಲಬುರ್ಗಿ ಅವರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಕಲಬುರ್ಗಿಯವರು ತಮ್ಮ ಸಾಧನೆಗಾಗಿ ಅನೇಕ ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರಪ್ರಶಸ್ತಿ, ಪಂಪ ಪ್ರಶಸ್ತಿ, ಚಿದಾನಂದ ಪ್ರಶಸ್ತಿ ಮತ್ತು ವಿಶ್ವಮಾನವ ಪ್ರಶಸ್ತಿಗಳು ಅವುಗಳಲ್ಲಿ ಕೆಲವು. ಅವರ ‘ಮಾರ್ಗ-4’ ಎಂಬ ಕೃತಿಯು ಕೇಂದ್ರಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿದೆ. ಅವರು ಬರೆದಿರುವ ಆರು ಪುಸ್ತಕಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನಗಳನ್ನು ಪಡೆದಿವೆ. ಕಲಬುರ್ಗಿ-60 ಮತ್ತು ಮಹಾಮಾರ್ಗಗಳು ಈ ವಿದ್ವಾಂಸರಿಗೆ ಸಲ್ಲಿಸಲಾಗಿರುವ ಅಭಿನಂದನ ಗ್ರಂಥಗಳಲ್ಲಿ ಮುಖ್ಯವಾದವು.  ಕನ್ನಡ  ಸಾಹಿತ್ಯ ಪರಿಷತ್ತು ಅವರಿಗೆ  ನೃಪತುಂಗ  ಪ್ರಶಸ್ತಿ  ಪ್ರಧಾನ  ಮಾಡಿತ್ತು.

ಕಲಬುರ್ಗಿ  ಅವರು  ಆಗಸ್ಟ್ ೩೦, ೨೦೧೫ರಂದು ಹತ್ಯಗೀಡಾದದ್ದು  ವಿಷಾದದ  ಸಂಗತಿಯಾಗಿದೆ.

Tag: M.M. Kalburgi, Nrupatunga Prashasthi

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)