ಕುಂ. ವೀರಭದ್ರಪ್ಪ

kumvee-1

ಕುಂ. ವೀರಭದ್ರಪ್ಪನವರು ಜನಿಸಿದ ದಿನ ಅಕ್ಟೋಬರ್ 1, 1953.  ಊರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೊಟ್ಟೂರು.

‘ಬೇಲಿ ಮತ್ತು ಹೊಲ’ ಕಿರುಕಾದಂಬರಿಯ ಮೂಲಕ ಕನ್ನಡ ಸಾಹಿತ್ಯದ ಶಿಷ್ಟ ಪರಂಪರೆಯ ಬೇಲಿಗಳನ್ನು ಜಿಗಿದ ಕುಂ. ವೀರಭದ್ರಪ್ಪ, ಓದುಗರನ್ನು ಆಕರ್ಷಿಸಿದ್ದು ತಮ್ಮ ವಿಶಿಷ್ಟ ಭಾಷಾ ಪ್ರಯೋಗ ಮತ್ತು ನುಡಿಗಟ್ಟುಗಳಿಂದ. ಅವರ ಕತೆಗಳಲ್ಲಿ ಕಾದಂಬರಿಗಳಲ್ಲಿ ಕಾಣಿಸಿಕೊಂಡ ಭಾಷೆ ಅವರಿಗೆ ಸಾಹಿತ್ಯದಲ್ಲೊಂದು ಪ್ರತ್ಯೇಕ ಸ್ಥಾನ ಕಲ್ಪಿಸಿಕೊಟ್ಟಿತು. ’ಎಲುಗನೆಂಬ ಕೊರಚನೂ ಚವುಡನೆಂಬ ಹಂದಿಯೂ’, ’ಕತ್ತಲಿಗೆ ತ್ರಿಶೂಲ ಹಿಡಿದ ಕತೆ’ಗಳ ಮೂಲಕ ಸಣ್ಣ ಕತೆಯ ದಿಕ್ಕನ್ನು ಬದಲಾಯಿಸಿದವರು ಕುಂಬಾರ ವೀರಭದ್ರಪ್ಪನವರು.

ಕುಂ.ವೀ. ಎಂದೇ ಜನಪ್ರಿಯರಾಗಿರುವ ಕುಂ. ವೀರಭದ್ರಪ್ಪ ಸಾಹಿತ್ಯ ಚಳುವಳಿಗಳಿಂದ ದೂರ ಉಳಿದವರು. ಆದರೆ ಬಂಡಾಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಬಂಡಾಯದ ಬಿಸುಪನ್ನು ಕಲೆಯಾಗಿಸುವ ಸಶಕ್ತ ರೂಪಕ ಶಕ್ತಿ ಅವರಲ್ಲಿತ್ತು. ಹೀಗಾಗಿ ಅವರ ಕೃತಿಗಳು ಬಂಡಾಯದ ಮ್ಯಾನಿಫೆಸ್ಟೋಗಳಂತೆ ಕಾಣಿಸದೇ ಇದ್ದದ್ದಕ್ಕೆ ಅದೇ ಕಾರಣ.

ಕುಂ.ವೀ. ಎಷ್ಟು ಜನಪರ ಲೇಖಕರಾಗಿದ್ದರು ಅನ್ನುವುದಕ್ಕೆ ಸಾಕ್ಷಿಯಾಗಿ ಅವರ ಕಾದಂಬರಿ ಜನಪ್ರಿಯ ಸಿನಿಮಾ ಆಗಿಯೂ ಗೆದ್ದದ್ದೇ ಸಾಕ್ಷಿ. ಶಿವರಾಜ್ ಕುಮಾರ್ ಅಭಿನಯದ ’ಮನ ಮೆಚ್ಚಿದ ಹುಡುಗಿ’ ಅವರ ಕಾದಂಬರಿ ’ಬೇಟೆ’ ಆಧರಿಸಿದ ಚಿತ್ರ. ಅವರ ’ಬೇಲಿಯ ಹೂಗಳು’ ಕಾದಂಬರಿಯನ್ನು ಆಧರಿಸಿ ಬಂದದ್ದು ’ದೊರೆ’ ಸಿನಿಮಾ. ‘ಕೊಟ್ರೇಶಿ ಕನಸು’, ‘ಕೆಂಡದ ಮಳೆ’ ಅವರ ಕತೆಯಾರಿತ ಮತ್ತೆರಡು ಪ್ರಮುಖ ಚಿತ್ರಗಳು.  ಅವರ ಮತ್ತೊಂದು ಮಹತ್ವದ ಕೃತಿಯಾದ ‘ಕೂರ್ಮಾವತಾರ’ ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದಲ್ಲಿ ರಾಷ್ಟ್ರಮಟ್ಟದಲ್ಲಿ  ಪ್ರಶಸ್ತಿ ಗಳಿಸಿದೆ.

 ’ಕಪ್ಪು’ ಕಥಾ ಸಂಕಲನ ಆ ಕಾಲಕ್ಕೆ ಅತ್ಯಂತ ಹೆಚ್ಚು ಮಾರಾಟ ಕಂಡ ಕಥಾ ಸಂಕಲನ. ಬಳ್ಳಾರಿಯ ಕೊಟ್ಟೂರಿನಂಥ ಕುಗ್ರಾಮದಲ್ಲಿ ಕುಳಿತು ಕನ್ನಡ ಸಾಹಿತ್ಯ ಲೋಕ ಬೆಚ್ಚಿ ಬೀಳಿಸುವಂಥ ಕೃತಿಗಳನ್ನು ಕೊಟ್ಟ ಕುಂ.ವೀ. ಆಂಧ್ರದ ಹಿರೇಹಳ್ಳದಲ್ಲಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡಿದರು. ಕ್ರಮೇಣ ಸೃಜನಶೀಲ ಸಾಹಿತ್ಯದಿಂದ ಸೃಜನೇತರ ಸಾಹಿತ್ಯದತ್ತಲೂ ಹೊರಳಿಕೊಂಡ ಕುಂ.ವೀ. ಚಾಪ್ಲಿನ್ ಕುರಿತು ಮಹತ್ವದ ಕೃತಿಯೊಂದನ್ನು ಬರೆದರು. ಆಮೇಲೆ ಸಣ್ಣ ಕತೆಯತ್ತ ಮಹಾಕಾದಂಬರಿಗಳತ್ತ ಹೊರಳಿಕೊಂಡ ಕುಂ.ವೀ ಅವರು  ಶಾಮಣ್ಣ, ಯಾಪಿಲ್ಲು ಮತ್ತು ಅರಮನೆ ಕಾದಂಬರಿಗಳನ್ನು ಬರೆದರು. ಶಾಮಣ್ಣ ಕಾದಂಬರಿ ಕೂಡ ಸಾಹಿತ್ಯ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿತ್ತು.  ಕುಂ.ವೀ ಅವರ ಜ್ಞಾಪಕ ಚಿತ್ರಶಾಲೆ ಎಂದು ಕರೆಯಬಹುದಾದ ಕೃತಿ  ’ಭಳಾರೆ ವಿಚಿತ್ರಂ’ .   ಅರಮನೆ ಕೃತಿಗೆ 2007ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.

‘ದಿವಿ ಸೀಮೆಯ ಹಾಡು’, ‘ನೀನಿಲ್ಲದ ಮನೆ’ ಕುಂ.ವೀ ಅವರ ಕವನ ಸಂಕಲನಗಳು. ಅವರ ಕಥಾ ಸಂಕಲನಗಳಲ್ಲಿ ‘ಡೋಮ ಮತ್ತಿತರ ಕಥೆಗಳು’, ‘ಭಳಾರೆ ವಿಚಿತ್ರಂ’, ‘ಇನ್ನಾದರೂ ಸಾಯಬೇಕು’, ‘ಕುಂವೀ ಆಯ್ದ ಕಥೆಗಳು’, ‘ಭಗವತಿ ಹಾಡು’, ‘ನಿಜಲಿಂಗ’, ‘ಅಪೂರ್ವ ಚಿಂತಾಮಣಿ ಕಥೆ’, ‘ಸುಶೀಲೆ ಎಂಬ ನಾಯಿಯೂ ವಾಗಿಲಿ ಎಂಬ ಗ್ರಾಮವೂ’, ‘ಉಡುಮರೂಪಿ ಆಯುಕಮ್ಮ ಉರ್ತ್ತಾಂ ತಲು’, ‘ಊರಿವೇಮಲ’, ‘ಕುಂವೀ ಬರೆದ ಕಥೆಗಳು’ ಪ್ರಮುಖವಾಗಿವೆ.

 ‘ಕಪ್ಪು’, ‘ಬೇಲಿ ಮತ್ತು ಹೊಲ’, ‘ಆಸ್ತಿ, ‘ಕೊಟ್ರ ಹೈಸ್ಕೂಲಿಗೆ ಸೇರಿದ್ದು’, ‘ಯಾಪಿಲ್ಲು’, ‘ಶ್ಯಾಮಣ್ಣ’, ‘ಕೆಂಡದ ಮಳೆ’, ‘ಬೇಟೆ’, ‘ಪಕ್ಷಿಗಳು’, ‘ಪ್ರತಿಧ್ವನಿ’, ‘ದ್ವಾವಲಾಪುರ’, ‘ಹನುಮ’, ‘ಅರಮನೆ’, ‘ಸೋಲೋ’, ‘ಬೇಲಿಯ ಹೂಗಳು’, ‘ಅರೊಹಣ’ ಕಾದಂಬರಿಗಳು.

 ‘ಚಾಪ್ಲಿನ್’, ‘ರಾಹುಲ ಸಾಂಕೃತ್ಯಾಯನ’,  ‘ಗಾಂದೀ ಕ್ಲಾಸ್’ ವ್ಯಕ್ತಿ ಚಿತ್ರಣಗಳು.  ತೆಲುಗು ಕಥೆಗಳು ಅನುವಾದಿತ ಕೃತಿ.  ‘ಜಮೀನ್ದಾರಿ ವ್ಯವಸ್ಥೆ ಮತ್ತು ತೆಲುಗು ಸಾಹಿತ್ಯ’  ಅವರ ವಿಮರ್ಶಾತ್ಮಕ ಕೃತಿ.  ‘ಕಥೆಗಳು: 1989’ ಅವರ ಸಂಪಾದನೆಯಲ್ಲಿ ಮೂಡಿ ಬಂತು.

ಕನ್ನಡ ಸಣ್ಣ ಕಥೆಯ ಭಾಷೆಗೆ ಹೊಸ ಮೊನಚು ಕೊಟ್ಟ ಕುಂ.ವೀ ಅವರ ಶೈಲಿ ಒಂದು ಕಾಲಕ್ಕೆ ಎಷ್ಟು ಜನಪ್ರಿಯವಾಗಿತ್ತು ಎಂದರೆ ಅದೇ ಭಾಷೆ, ನಿರೂಪಣಾ ಶೈಲಿ ಮತ್ತು ವಸ್ತುಗಳನ್ನು ಇಟ್ಟುಕೊಂಡು ಬರೆಯುವ ಲೇಖಕರ ದೊಡ್ಡ ದಂಡೇ ಹುಟ್ಟಿಕೊಂಡಿತು. ಕನ್ನಡ ಗದ್ಯದ ಪರಿಭಾಷೆಯನ್ನು ದೇವನೂರು ಸಮಾಕಾಲೀನರಾಗಿದ್ದುಕೊಂಡೂ ಅವರ ಪ್ರಭಾವದಿಂದ ಮುಕ್ತರಾಗಿದ್ದುಕೊಂಡು ಬದಲಾಯಿಸಿದರು.  ಕುಂ. ವೀ ಅವರ ಅಂಕಣಕಾರರಾಗಿಯೂ ಪ್ರಸಿದ್ಧರಾಗಿದ್ದಾರೆ.

ಕು. ವೀರಭದ್ರಪ್ಪನವರಿಗೆ ಕೆಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೇ ಅಲ್ಲದೆ  ರಾಜ್ಯಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ್ ಪ್ರಶಸ್ತಿ, ಲಂಕೇಶ್ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಡಾಕ್ಟರೇಟ್,  ಕನ್ನಡ  ಸಾಹಿತ್ಯ  ಪರಿಷತ್ತಿನ  ನೃಪತುಂಗ ಪ್ರಶಸ್ತಿ ಮುಂತಾದ ಹಲವಾರು ಗೌರವಗಳು ಸಂದಿವೆ.

Tag: Kum Vee, Kum Veerabhadrappa, Nrupatunga Prashasthi

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)