ಕೆ. ವಿ. ಅಯ್ಯರ್

k-v-iyer1

ಕನ್ನಡ ನಾಡು ಕಂಡ ಅತ್ಯಂತ ವಿಶೇಷ ವ್ಯಕ್ತಿಗಳಲ್ಲಿ ಪ್ರೊ. ಕೆ.ವಿ. ಅಯ್ಯರ್ ಅವರೂ ಒಬ್ಬರು. ಅವರು ಜನಿಸಿದ್ದು ಜನವರಿ 8, 1894ರ ವರ್ಷದಲ್ಲಿ.  ಅವರು ವೃತ್ತಿಯಿಂದ ದೈಹಿಕ ಶಿಕ್ಷಣ ತಜ್ಞರಾದರೂ ಪ್ರವೃತ್ತಿಯಿಂದ ಸಾಹಿತಿಗಳಾಗಿದ್ದವರು.  ಬಾಲ್ಯದಲ್ಲಿ ತೀವ್ರ ಬಡತನ  ಅನುಭವಿಸಿದ ಅಯ್ಯರ್ ಅವರು ಒಂದು ಹೊಟೆಲಿನಲ್ಲಿ  ದಿನಾಲೂ ದೊಡ್ಡ ದೊಡ್ಡ ರುಬ್ಬುಗುಂಡುಗಳನ್ನು ಬಳಸಿ ಇಡ್ಲಿ, ದೋಸೆ ಹಿಟ್ಟು ರುಬ್ಬುತ್ತಿದ್ದರು.

ಅದರೊಂದಿಗೆ ಅಡುಗೆ ಮನೆಗೆ ಬೇಕಾದ ನೀರನ್ನು ಬಾವಿಯಿಂದ ಸೇದಿ ತರಬೇಕಿತ್ತು. ನಿತ್ಯ ನೂರಾರು, ಭಾರೀ  ಗಾತ್ರದ ಕೊಡಗಳಿಂದ ನೀರನ್ನು ಎಳೆದೆಳೆದು, ಹೆಗಲಮೇಲೆ ಹೊತ್ತು ತಂದು ತುಂಬುವುದು ತುಂಬ ಶ್ರಮದ ಕೆಲಸವೇ ಆಗಿತ್ತು. ಈ ಕೆಲಸ ಪ್ರಯಾಸದ್ದಾಗಿದ್ದರೂ ಅವರ ದೇಹದಾರ್ಢ್ಯ  ಬೆಳೆಸಲು ಅನುಕೂಲವಾಗಿತ್ತು.

ಹೋಟೆಲ್ ಮಾಲೀಕರು ಈ ತರುಣನ ದೇಹ ಶಕ್ತಿ ಗಮನಿಸಿ ಕರೆದೊಯ್ದು ಒಂದು ವ್ಯಾಯಾಮ ಶಾಲೆಗೆ ಸೇರಿಸಿದರು. ಅಲ್ಲಿ ವೈಜ್ಞಾನಿಕವಾದ ತರಬೇತಿ ಪಡೆದ ತರುವಾಯ ತಮ್ಮದೇ ವ್ಯಾಯಾಮ ಶಾಲೆಯನ್ನು ಪ್ರಾರಂಭಿಸಿದ್ದು ಅಯ್ಯರ್ ಅವರ ಸಾಧನೆಯ ಛಲ ತೋರಿಸುತ್ತದೆ.

ಇದರೊಂದಿಗೆ ಸದಾ ಸಾಹಿತಿಗಳೊಡನೆ ಇರುತ್ತಲೇ ತಮ್ಮ ಸಾಹಿತ್ಯ ಸೇವೆ ಮುಂದುವರೆಸಿ ಶಾಂತಲಾ, ರೂಪದರ್ಶಿ, ಲೀನಾದಂತಹ ಉತ್ತಮ ಕಾದಂಬರಿಗಳನ್ನು,  ‘ಸಮುದ್ಯತಾ”ದಂತಹ  ಕಥಾಸಂಕಲನಗಳನ್ನು ಬರೆದು ಕನ್ನಡದ ಓದುಗರ ಮನೆ ಮನಗಳನ್ನು ಪ್ರವೇಶಿಸಿದರು.   ದೈಹಿಕ ಶಿಕ್ಷಣ ಕುರಿತು ‘Chemical change in Physical Figure’, ‘Physic and Figure’,  ‘Surya Namaskar’,  ‘Perfect Strength’,  ‘How to obtain strength’ ಮುಂತಾದ ಕೃತಿಗಳನ್ನು ಬರೆದರು. 1979ರ ವರ್ಷದಲ್ಲಿ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಸಲ್ಲಿಸಲಾಗಿತ್ತು.

ಇದಿಷ್ಟೇ ಸಾಲದೆಂಬಂತೆ ಕರ್ನಾಟಕ, ಹಿಂದೂಸ್ತಾನಿ, ಪಾಶ್ಚಾತ್ಯ ಸಂಗೀತ  ಕೇಳಿ ಅವುಗಳ ಪ್ರಕಾರಗಳಲ್ಲಿ ಸಾಕಷ್ಟು ಪ್ರವೇಶ ಪಡೆದಿದ್ದರು. ವೃತ್ತಿ ರಂಗಭೂಮಿಯ ರಂಗಗೀತೆಗಳು ಅವರಿಗೆ  ಕಂಠಪಾಠವಾಗಿರುತ್ತಿದ್ದವು. ಅವರಿಗೆ ಸಿಟ್ಟು ಬರುವುದು ಅಪರೂಪ. ಆದರೆ, ಬಂದರೆ ಮಾತ್ರ ಅವರನ್ನು ಎದುರಿಸುವುದು ಅಸಾಧ್ಯವಾಗಿತ್ತು.

ಒಮ್ಮೆ ಯಾವನೋ ಒಬ್ಬ ಯಾರದೋ ಮಾತು ಕೇಳಿ,  ಅಯ್ಯರ್ ಅವರು ತನ್ನನ್ನು ಗುದ್ದಿದರು  ಎಂದು ದೂರಿ ಮೊಕದ್ದಮೆ ಹೂಡಿದ. ನ್ಯಾಯಾಲಯದಲ್ಲಿ ತಾವೇ ವಾದ ಮಾಡುವುದಾಗಿ ಹೇಳಿ ಅಲ್ಲಿಗೆ ಹೋಗಿ ದೂರು ಕೊಟ್ಟವನ ಮುಂದೆ ನಿಂತರು. ಆತನೋ ನರಪೇತಲ ನಾರಾಯಣ, ಊದಿದರೆ ಹಾರಿ ಹೋಗುವಂತಿದ್ದಾನೆ.

ಮೊದಲೇ ವಿಸ್ತಾರವಾಗಿದ್ದ ದೇಹವನ್ನು ಇನ್ನಷ್ಟು ಹಿಗ್ಗಿಸಿ ಅವನ ಮುಂದೆ ನಿಂತು,   ನಾನು ನಿನ್ನನ್ನು ಗುದ್ದಿರುವುದು ನಿಜವೇ ಎಂದು ಗರ್ಜಿಸಿದರು.   ಆತ ಭಯದಿಂದ ನಡುಗುತ್ತ  ಹೌದು  ಎಂದ.

ಆಗ ಅಯ್ಯರ್ ಅವರು,   ಹಾಗಾದರೆ ನಾನು ನಿನಗೆ ಈಗ ಒಂದು ಸರಿಯಾದ ಗುದ್ದು ಕೊಡುತ್ತೇನೆ. ಅದನ್ನು ತಾಳಿಕೊಂಡು ಬದುಕಿ ಉಳಿದರೆ ನ್ಯಾಯಾಧೀಶರು ನೀಡುವ ಯಾವ ಶಿಕ್ಷೆಯನ್ನಾದರೂ ಅನುಭವಿಸುತ್ತೇನೆ  ಎಂದು ಅವಡುಗಚ್ಚಿ, ಮುಷ್ಟಿ ಬಿಗಿದು ಅವನಡೆಗೆ ಒಂದು ಹೆಜ್ಜೆ ಇಟ್ಟರು.

ಆತ ಕುಸಿಯದಿದ್ದದ್ದೇ ಹೆಚ್ಚಿನದು,  ತಪ್ಪಾಯಿತು ಸ್ವಾಮಿ, ಯಾರದೋ ಮಾತು ಕೇಳಿ ಈ ಮಣ್ಣು ತಿನ್ನುವ ಕೆಲಸಮಾಡಿದೆ. ನಿಮ್ಮ ಕೈ ಗುದ್ದು ತಿಂದು ಬದುಕಿ ಉಳಿಯುವುದು ಸಾಧ್ಯವೇ   ಎಂದು ಕಟಕಟೆಯಿಂದ ಇಳಿದು ಇವರ ಕಾಲಿಗೆ ಬಿದ್ದನಂತೆ. ನ್ಯಾಯಾಧೀಶರು ನಗುತ್ತ ಕೇಸನ್ನು ರದ್ದು ಮಾಡಿದರಂತೆ.

ಇನ್ನೊಮ್ಮೆ ಎತ್ತಿನಗಾಡಿ ಆಯತಪ್ಪಿ ಇವರ ಮನೆಯ ಹತ್ತಿರವಿದ್ದ ಚರಂಡಿಯಲ್ಲಿ ಬಿದ್ದು ಬಿಟ್ಟಿತಂತೆ. ಏದುಸಿರುಬಿಡುತ್ತ ಕಣ್ಣೀರು ಸುರಿಸುತ್ತ ಚರಂಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಎತ್ತನ್ನು ನೋಡಿ ತಮ್ಮ ಮನೆಗೆ ಓಡಿ ಹೋಗಿ ದಪ್ಪನೆಯ ನೀರು ಸೇದುವ ಹಗ್ಗವನ್ನು ತಂದು ಅದಕ್ಕೆ ಸರಿಯಾಗಿ ಕಟ್ಟಿದರು. ನಂತರ ಉಸಿರು ಬಿಗಿಹಿಡಿದು ತಮ್ಮ ಶಕ್ತಿಯನ್ನೆಲ್ಲ ಒಗ್ಗೂಡಿಸಿ  ಜೈ ಭಜರಂಗ ಬಲಿ  ಎಂದು ಎತ್ತನ್ನು ಚರಂಡಿಯಿಂದ ಪೂರ್ತಿ ಮೇಲಕ್ಕೆತ್ತಿ ರಸ್ತೆಯ ಮೇಲೆ ಇಳಿಸಿದರಂತೆ!

ಇಚ್ಛಾಮರಣಿಯಂತೆ ತಾವು ಮೊದಲೇ ಹೇಳಿದ ವರ್ಷ, ತಿಂಗಳು, ವಾರ, ಸಮಯದಂದೇ (3.1.1980) ದೇಹಬಿಟ್ಟರು ಅಯ್ಯರ್. ರಾಮಕೃಷ್ಣ ಪರಮಹಂಸರಲ್ಲಿ ಅಪಾರ ಭಕ್ತಿ ಹೊಂದಿದ್ದ ಅಯ್ಯರ್, ತಾವು ಜೀವಮಾನ ಪೂರ್ತಿ ಗಳಿಸಿದ್ದನ್ನು ಶ್ರೀರಾಮಕೃಷ್ಣಾಶ್ರಮಕ್ಕೆ ದಾನ ನೀಡಿದರು. ಈ ಸುಂದರ ಜೀವನದ ಪ್ರಯಾಣ ಗಮನಿಸಿ.

ಬಡತನದ ಬೇಗೆಯಲ್ಲಿ ಬೆಂದರೂ ನಿರಾಶರಾಗದೇ, ಹತಾಶೆಯ ಹೊಗೆ ತುಂಬಿಕೊಳ್ಳದೇ, ಜಗತ್ತಿನಲ್ಲಿ ಸುಂದರವಾದದ್ದನ್ನು ದೈಹಿಕ, ಸಾಹಿತ್ಯಿಕ, ಸಂಗೀತದ, ಮಾನವೀಯ ಅನುಕಂಪಗಳನ್ನೆಲ್ಲ ಮೊಗೆಮೊಗೆದು ತುಂಬಿಕೊಂಡು ಕೊನೆಗೆ ಯಾವುದೂ ತನ್ನದಲ್ಲವೆಂದು ಸಮರ್ಪಣೆ ಮಾಡಿ ಬದುಕು ದೂಡಿದ ಅಯ್ಯರ್ ಅವರದ್ದು ಅತ್ಯಂತ ಸಾರ್ಥಕವಾದ, ಅನುಕರಣ ಯೋಗ್ಯವಾದ ಜೀವನ. ಅಂಥವರ ಸ್ಮರಣೆ ನಮ್ಮಲ್ಲಿ ಉತ್ಸಾಹ ತುಂಬುತ್ತದೆ.

Tag: K. V. Iyer

 

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)