ಅ. ರಾ. ಮಿತ್ರ

ara mitra

ನಮ್ಮ ನಾಡಿನ ಶ್ರೇಷ್ಠರ ಸಾಲಿನ ಹಾಸ್ಯಜ್ಞ, ಉಪನ್ಯಾಸಕ, ವಿದ್ವಾಂಸ, ಅಧ್ಯಾಪಕ, ಬರಹಗಾರ, ವಿಮರ್ಶಕ, ಸಜ್ಜನರಲ್ಲಿ ಸಜ್ಜನ ಮನೋಧರ್ಮದ ಅ. ರಾ. ಮಿತ್ರ  ಅವರು ಫೆಬ್ರುವರಿ 25, 1935ರಂದು ಬೇಲೂರಿನಲ್ಲಿ ಜನಿಸಿದರು. ಅವರ ಪೂರ್ಣ ಹೆಸರು ಅಕ್ಕಿ ಹೆಬ್ಬಾಳು ರಾಮಣ್ಣ ಮಿತ್ರ.

“ಅ. ರಾ ಮಿತ್ರರೆಂದರೆ ನಮಗೆಲ್ಲಾ ತುಂಬಾ ನೆನಪಾಗುತ್ತಾರೆ. ಕಾರಣ ಅವರಿದ್ದ ಕಾಲೇಜಿಗೆ ನಾವು ಹೋಗ್ತಾ ಇದ್ವಿ. ಅವರನ್ನ ನೋಡಲಿಕ್ಕಲ್ಲ! ಅವರಿದ್ದ ಕಾಲೇಜು ಯಾವುದು ಗೊತ್ತಾಯ್ತಲ್ಲ. ಮಹಾರಾಣಿ ಕಾಲೇಜು!” ಹೀಗೆಲ್ಲಾ ಹೇಳಿದರೆ ಅ. ರಾ. ಮಿತ್ರರಿಗೆ ಕೋಪ ಬರೋಲ್ಲ. ಯಾಕೆಂದರೆ ಅವರು ತುಂಬು ಹಾಸ್ಯ ಪ್ರಿಯರು. ಅವರಿದ್ದಲೆಲ್ಲಾ ಹಾಸ್ಯದ ಹೊನಲು. ಅವರ ಮನೆಯಲ್ಲಿ ಕೂಡ. ಅದಕ್ಕೊಂದು ನಿದರ್ಶನ ಹೀಗಿದೆ. ಒಮ್ಮೆ ಮಿತ್ರರ ಮಿತ್ರ ಡಾ. ಎಚ್. ಕೆ. ರಂಗನಾಥ್ ಅವರ ಮನೆಗೆ ಫೋನ್ ಮಾಡಿದರು. ಫೋನ್ ತೆಗೆದವರು ಮಿತ್ರರ ಪತ್ನಿ ಲಲಿತಾ ಮಿತ್ರ. ರಂಗನಾಥ್ ಕೇಳಿದರು, “ಎಲ್ಲಮ್ಮಾ ಮಿತ್ರ?”.

ಸ್ನಾನ ಮಾಡ್ತಿದಾರೆ.

ಓಹೋ, ಅವನು ಸ್ನಾನ ಬೇರೆ ಮಾಡ್ತಾನೇನು!

ಇವತ್ತು ಭಾನುವಾರ ಅಲ್ವೇ!

ಬೆಂಗಳೂರಿನ ಪಸಿದ್ಧ ಹಾಸ್ಯೋತ್ಸವ, ಕರ್ನಾಟಕದ ಆಕಾಶವಾಣಿ, ದೂರದರ್ಶನ, ಹಾಗೂ ದೇಶ ವಿದೇಶಗಳಲ್ಲಿನ ಸಹಸ್ರಾರು ವೇದಿಕೆಗಳಲ್ಲಿ ಚಿಂತನೆ, ಉಪನ್ಯಾಸಗಳು, ಕುಮಾರವ್ಯಾಸ ಭಾರತದ ವ್ಯಾಖ್ಯಾನ, ಹಾಸ್ಯೋತ್ಸವ ರಂಜನೆ, ಹರಟೆ ಇತ್ಯಾದಿಗಳ ಮೂಲಕ ಪ್ರೊಫೆಸರ್‌ ಅ. ರಾ, ಮಿತ್ರರು ಇಂದು ಮನೆ ಮನೆಮಾತಾಗಿದ್ದಾರೆ. ಇತ್ತೀಚಿನ ವರ್ಷದಲ್ಲಿ ಮೂಡಿಬಂದ ಕುಮಾರವ್ಯಾಸ ಭಾರತದ ಸುಂದರ ವ್ಯಾಖ್ಯಾನ ಗ್ರಂಥ ‘ಕಥಾಮಿತ್ರ’ ಜನಮೆಚ್ಚುಗೆಯ ದಿಗ್ವಿಜಯ ಸಾಧಿಸಿದೆ.

ಮಿತ್ರರ ‘ಛಂದೋಮಿತ್ರ’ದ ಸೊಗಸೇ ಸೊಗಸು. ಇದು ಮಿತ್ರರ ಪಾಂಡಿತ್ಯ ಮತ್ತು ಹಾಸ್ಯಪ್ರವೃತ್ತಿ ಎರಡೂ ಮೇಳವಿತವಾಗಿರುವ ಒಂದು ವಿಶಿಷ್ಟ ಕೃತಿ. ಅದರ ಸ್ವಾರಸ್ಯ ಕೂಡಾ ಅವರಿಂದಲೇ ಕೇಳಿದರೆ ಚೆನ್ನು. “ಛಂದಸ್ಸು ಅರ್ಥವಾಗುವುದು ಕಷ್ಟ. ‘ಮಾತ್ರೆ ’ ಎಂದರೆ ಏನೆಂದು ತಿಳಿಯದ ಮಕ್ಕಳು ವೈದ್ಯರ ಮುಖ ನೋಡುತ್ತಾರೆ. ಅದನ್ನು ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥ ಮಾಡಿಸುವ ಪ್ರಯತ್ನ ‘ಛಂದೋಮಿತ್ರ’ದಲ್ಲಿ ಮಾಡಿದ್ದೇನೆ. ಕನ್ನಡ ಸಾಹಿತ್ಯದ ಎಲ್ಲಾ ಛಂದಸ್ಸುಗಳ ಕುರಿತ ವಿವರಣಾ ಪದ್ಯವನ್ನು ಆಯಾ ಛಂದಸ್ಸಿನಲ್ಲಿಯೇ ಬರೆಯಲಾಗಿದೆ. ತಿಳಿಹಾಸ್ಯದ ಮೂಲಕ, ಸರಳವಾಗಿ ತಿಳಿಸಿರುವುದರಿಂದ ಮನಸ್ಸಿಗೆ ಮುಟ್ಟುತ್ತದೆ.

ಉದಾಹರಣೆಗೆ ಇಡ್ಲಿಯ ಬಗೆಗಿರುವ ಒಂದು ಸಾಂಗತ್ಯ ಪದ್ಯ-

‘ನೋಡಿರಿ ಸಾವಿರ ವರ್ಷಕು ಹಳೆಯದು
ಇಡ್ಡಲಿ ಎಂಬುವ ಶಬ್ದ‘-
ನುಡಿಶಾಸ್ತ್ರ ಬಲದಿಂದ ಇಂತೆಂದು ನುಡಿದರು
ದೊಡ್ಬೆಲೆ ನರಸಿಂಹಾಚಾರ್ಯ

ತರಗತಿ ಮುಗಿಸಿ ಕ್ಯಾಂಟೀನೆಡೆ ಹೊರಟಾಗ
ತರಿಸಿದ ಇಡ್ಲಿಯ ಕಂಡು
ಸೊರಗಿದ ಮುಖಗಳ ನಮಗೆಲ್ಲ ಅನಿಸಿತು
ಖರೆಖರೆ ಇದು ಅಂದಿನದೇ!

ಇದೇ ರೀತಿ ಸ್ರಗ್ಧರಾ ಎಂಬ 21 ಅಕ್ಷರಗಳ ವೃತ್ತಕ್ಕೊಂದು ಹಾಸ್ಯ ಬೆರೆತ ಉದಾಹರಣೆ –

‘ದ್ವೈತಂ ನಮ್ಮೊಂದು ತತ್ವಂ ಮಗಳೆ ತಿಳಿದಿರೈ ಗೀತವೇ ಬೇರೆ ಆ ಸಂ
ಗೀತಂ ಪೇಳ್ವಾತನೇ ಬೇರೆ ಮನೆತನದ ಮರ್ಯಾದೆಯೂ ಮುಖ್ಯ ಗೊತ್ತೇ?’
-ಇಂತೆಲ್ಲಂ ತಂದೆ ಮುನ್ನಂ ತಿಳಿಸಿ ಕಲಿಯಲಿಕ್ಕೆಂದು ಬಿಟ್ಟಿರ್ದೊಡಂ ಆ
ಗೀತಾಚಾರ್ಯಂಗೆ ಸೋತಳ್‌ ಮಗಳು ನಿಜದಿನದ್ವೈತಮಂ ಸಾಧಿಸಿರ್ದಳ್‌

ಪ್ರಾಚೀನ ಕಾವ್ಯಗಳನ್ನು ಆಳವಾಗಿ ಅಭ್ಯಾಸ ಮಾಡಿರುವ ಅ. ರಾ. ಮಿತ್ರರು ‘ಅಜಿತನಾಥ ಪುರಾಣ’ ಮತ್ತು ‘ಪಂಪ ಭಾರತ ಸಂಗ್ರಹ’ ಕೃತಿಗಳನ್ನು ಸಂಪಾದಿಸಿದ್ದಾರೆ. ಮಿತ್ರ ಅವರ ಮಹಾಭಾರತವನ್ನು ಕುರಿತ ಪ್ರೌಢ ಮಟ್ಟದ ಸರಣಿ ಉಪನ್ಯಾಸಗಳು ಬಹುಜನರನ್ನು ಆಕರ್ಷಿಸಿದ್ದವು. ಈ ಉಪನ್ಯಾಸಗಳ ಫಲ ಮಿತ್ರರ ಮೂರು ಸಂಪುಟಗಳ ಬೃಹಸ್ಪತಿ – ‘ಮಹಾಭಾರತ ಪಾತ್ರಸಂಗತಿಗಳು’. ಮಿತ್ರರು ತಮ್ಮ ನವಿರಾದ ನಗೆ ಸಾಹಿತ್ಯದಿಂದ ಬಹು ಜನಪ್ರಿಯರಾಗಿರುವ ಲೇಖಕ. ‘ಬಾಲ್ಕನಿಯ ಬಂಧುಗಳು’ ಮತ್ತು ‘ಯಾರೋ ಬಂದಿದ್ದರು’ ಅವರ ಪ್ರಾರಂಭದ ಹಾಸ್ಯ ಲೇಖನಗಳ ಸಂಗ್ರಹಗಳು. ಅವರ ಇನ್ನೊಂದು ಕೃತಿ – ವಿಶ್ವದ ಪ್ರಸಿದ್ಧ ಪ್ರೇಮಕಥೆಗಳನ್ನು ಆಧರಿಸಿದ ‘ಪ್ರೇಮನದಿಗಳ ದಡದಲ್ಲಿ’. ವಚನಕಾರರು ಮತ್ತು ಶಬ್ದಕಲ್ಪ, ಒಳನೋಟಗಳು-ವಿಮರ್ಶಾಕೃತಿಗಳು. ಜರ್ಮನ್ ಸಂಪ್ರದಾಯ ದರ್ಪಣ, ಶಿಕ್ಷಣ ಚಿಂತನ, ಕಾಲಿಗುಲ ಮತ್ತು ತಪ್ಪಿದ ಎಳೆ ಇತರರೊಡನೆ ಕೂಡಿ ಮಾಡಿದ ಅನುವಾದ. ನಾನೇಕೆ ಕೊರೆಯುತ್ತೇನೆ. ಆರತಕ್ಷತೆ ಇವರ ಸಮಗ್ರ ಪ್ರಬಂಧದ ಎರಡು ಸಂಪುಟಗಳು.

ತಮ್ಮ ಕೃತಿಗಳಿಂದ ಹೆಸರುಮಾಡಿರುವ, ನಿಯತಕಾಲಿಕ ಪತ್ರಿಕೆಗಳಿಗೆ ಬರೆಯುವ ತಮ್ಮ ಅಂಕಣ ಬರಹ, ಧಾರವಾಹಿ ಲೇಖನ, ಹರಟೆಗಳಿಂದ ಮನೆಮಾತಾಗಿರುವ ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ ಅವರು ಮೈಸೂರು ವಿಶ್ವ ವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ಕನ್ನಡ ಎಂ. ಎ. ವ್ಯಾಸಂಗ ಮಾಡಿ, ಬೆಂಗಳೂರಿನ ಸೇಂಟ್‌ ಜೊಸೆಫ್‌ ಕಾಲೇಜಿನಲ್ಲಿ 1955ರಲ್ಲಿ ಕನ್ನಡ ಅಧ್ಯಾಪಕರಾಗಿ ಉದ್ಯೋಗ ಪ್ರಾರಂಭಿಸಿ, 1973 ರವರೆಗೆ ಅಲ್ಲಿದ್ದು, ನಂತರ ಸರಕಾರೀ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಪ್ರವಾಚಕ (ರೀಡರ್‌)ರಾಗಿ ನೇಮಕಗೊಂಡು, ಮಡಿಕೇರಿ ತುಮಕೂರು ಬೆಂಗಳೂರಿನ ಸರಕಾರಿ ಕಾಲೇಜುಗಳಲ್ಲಿ ಅವರು ಕೆಲಸ ಮಾಡಿದರು, ಪ್ರಾಧ್ಯಾಪಕರಾದರು. ಈ ಮಧ್ಯೆ, ‘ಅಮೇರಿಕನ್‌ ಪೀಸ್‌ ಕೋರ್‌’ ನಲ್ಲಿ ಕನ್ನಡ ಶಿಕ್ಷಕರೂ ಆಗಿದ್ದರು. ಕೊನೆಗೆ, ಬೆಂಗಳೂರಿನ ಮಹಾರಾಣಿ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದರು, ಒಮ್ಮೆ ದೂರದರ್ಶನದ ಕಾರ್ಯಕ್ರಮದಲ್ಲಿ ಅವರು ಹೇಳುತ್ತಿದ್ದರು “ನನ್ನ ಕಾಲೇಜಿನಲ್ಲಿ ಹೆಣ್ಣು ಮಕ್ಕಳು ಬಣ್ಣ ಬಣ್ಣದ ವಸ್ತ್ರ ವಿನ್ಯಾಸಗಳಲ್ಲಿ, ಕಿಲ ಕಿಲನೆ ಹಬ್ಬದ ಕಲಿಕೆಯ ವಾತಾವರಣದಲ್ಲಿ ನಲಿಯುತ್ತಿದ್ದುದು ನನಗೆ ತುಂಬಾ ಇಷ್ಟವಾಗಿತ್ತು”. ಇದು ತನ್ನ ಕಾರ್ಯಕ್ಷೇತ್ರವನ್ನು ಆತ್ಮೀಯವಾಗಿ ಕಂಡು ತನ್ನ ಪರಿಸರವನ್ನು ಮೆಚ್ಚುವ ಸೌಹಾರ್ದತೆಯ ಗುಣಲಕ್ಷಣ ಎಂದು ನನಗನ್ನಿಸಿತ್ತು.

ಸಾಮಾನ್ಯವಾಗಿ ನಮ್ಮ ಕಾಲದ ಹುಡುಗರಿಗೆ ಮೇಷ್ಟರ ಪಾಠ ಅಂದರೆ ಬೋರು. ಆದರೆ ಮಿತ್ರರ ಪಾಠದ ಗಮ್ಮತ್ತೇ ಬೇರೆ. ಮಿತ್ರರು ವೃತ್ತಿಯಲ್ಲಿ ಇದ್ದಾಗಲೂ, ನಿವೃತ್ತರಾದಮೇಲೂ ಅವರ ಮಾತುಗಾರಿಕೆಗೆ ಬಹಳ ಬೇಡಿಕೆ. ನಿರರ್ಗಳವಾಗಿ ಹಳಗನ್ನಡ ನಡುಗನ್ನಡ, ನವೋದಯ ನವ್ಯ ನವ್ಯೋತ್ತರ ಸಾಹಿತ್ಯಪ್ರಕಾರಗಳ ಬಗೆಗೆ ನುಡಿ ಚಿಂತನೆಗಳನ್ನ ಹರಿಯಬಿಡಬಲ್ಲ ಅವರನ್ನು ಕರ್ನಾಟಕದ ಎಲ್ಲೆಡೆ ವಿವಿಧ ಶಾಲಾ ಕಾಲೇಜುಗಳಲ್ಲಿ ವಿಚಾರ ಸಂಕಿರಣ ಸಾಹಿತ್ಯೋತ್ಸವಗಳಲ್ಲಿ ನಾನಾ ವಿಷಯಗಳ ಬಗ್ಗೆ ಭಾಷಣಕ್ಕಾಗಿ ಜನ ಆಹ್ವಾನಿಸುತ್ತಾರೆ. ಅವರ ಹಾಸ್ಯಪೂರಿತ ಚಿಂತನಶೀಲ ಮಾತುಗಳನ್ನು ಕೇಳಲು ಜನ ಕಿಕ್ಕಿರಿದು ನೆರೆಯುತ್ತಾರೆ. ಕಳೆದ ದಶಕದಲ್ಲಿ ಕೆಲವು ಹಾಸ್ಯಗೋಷ್ಠಿಗಳನ್ನು ನಿಯೋಜಿಸಿ ನಡೆಸಿಕೊಡುತ್ತಿರುವ ಪರಿಪಾಠವೂ ಇವರ ಬೆನ್ನಿಗೆ ಬಿದ್ದಿದೆ; ‘ಅಖಂಡ ಕರ್ನಾಟಕದಲ್ಲಿ ಹಾಸ್ಯ ಉಪನ್ಯಾಸಕಾರರನ್ನು ತಯಾರಿಸಿ ಬೆಳೆಸಿದ ಅಪವಾದವೂ ನನ್ನ ಮೇಲಿದೆ,’- ಎನ್ನುತ್ತಾರೆ ಮಿತ್ರ ಅವರು.

ಭಾರತೀಯ ವಿದ್ಯಾಭವನದಲ್ಲಿ ಕನ್ನಡ ಕಾವ್ಯದ ಸವಿವರ ಉಪನ್ಯಾಸ ಮಾಲಿಕೆಯಲ್ಲಿ ನೂರಾರು ಉಪನ್ಯಾಸಗಳನ್ನು ನೀಡಿದ ಹೆಗ್ಗಳಿಕೆ ಇವರದು. ಬೆಂಗಳೂರಿನ ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ ಕುಮಾರವ್ಯಾಸ, ಲಕ್ಷ್ಮೀಶ, ಡಿವಿಜಿ ಮೊದಲಾದವರ ಬಗೆಗೆ ನೂರಾರು ಉಪನ್ಯಾಸಗಳನ್ನು ಮಾಡಿ ಪಂಡಿತ ಪಾಮರರನ್ನು ರಂಜಿಸಿದ್ದಾರೆ. ದೂರದರ್ಶನದ ಚಾನೆಲ್ಲುಗಳಲ್ಲಿ ಕುಮಾರವ್ಯಾಸ ಭಾರತದ ಬಗೆಗೆ ಡಾ. ನಾಗವಲ್ಲಿ ನಾಗರಾಜ್‌ರವರ ಗಮಕ ವಾಚನದ ಜೊತೆಗೆ ಅ ರಾ ಮಿತ್ರ ಅವರ ವ್ಯಾಖ್ಯಾನ-ಪರಂಪರೆ ಸತತವಾಗಿ ನಡೆದು ವಿಕ್ರಮ ಸ್ಥಾಪಿಸಿದೆ.

ಮಿತ್ರರ ಉಪನ್ಯಾಸಗಳಿಗೂ ಹಲವಾರು ಧಾರ್ಮಿಕ ಉಪನ್ಯಾಸಗಳಿಗೂ ಬಹಳಷ್ಟು ವೆತ್ಯಾಸಗಳಿವೆ. ಇತ್ತೀಚಿಗೆ ಉಡುಪಿಯಲ್ಲಿ ಮಾಡಿದ ಒಂದು “ಕುಮಾರವ್ಯಾಸ ಭಾರತ ಕುರಿತಾದ ಉಪನ್ಯಾಸ”ದಲ್ಲಿನ ತುಣುಕನ್ನು ಇಲ್ಲಿ ಉಲ್ಲೇಖಿಸಬಹುದು.

“ಕುಮಾರವ್ಯಾಸ ಭಾರತದಲ್ಲಿ ಜಾನಪದೀಯತೆ ಎದ್ದು ಕಾಣುತ್ತದೆ. ಕುಮಾರವ್ಯಾಸನೇ ಹೇಳುವಂತೆ ಅದು ಸವೆಯದ ಅಮೃತ ಮೊಗೆಮೊಗೆದಷ್ಟು ಬರುತ್ತದೆ. ಅವಿದ್ಯಾವಂತರು ಮತ್ತು ಅನಕ್ಷರಸ್ಥರು ಎನ್ನುವುದು ಬೇರೆ ಬೇರೆ. ವಿದ್ಯೆ ಇಲ್ಲದಿದ್ದರೂ ಜಾನಪದೀಯವಾಗಿ ಜ್ಞಾನವನ್ನು ಹಿಂದಿನವರು ಹೊಂದಿದ್ದರು. ಕುಮಾರವ್ಯಾಸನಲ್ಲಿಯೂ ಜಾನಪದ ಶೈಲಿ ಕಂಡುಬರುತ್ತದೆ.

ಕಾಮದ ತೀಟೆಗೆ ಅಶ್ವತ್ಥಾಮ ಹುಟ್ಟಿದ, ದಿಟದ ಕಂದ ನೀನೇ ಎಂದು ಅರ್ಜುನನ್ನು ಉದ್ದೇಶಿಸಿ ದ್ರೋಣ ಒಂದೆಡೆ ಹೇಳುತ್ತಾನೆ. ‘ಧರ್ಮದ ಮಾತಿಗೆ ಹಾದರ ಇರಬಾರದು’ ಎಂದು ವ್ಯಾಸರ ಮೂಲಕ ಹೇಳಿಸುತ್ತಾನೆ. ‘ಬಡವರ ಭಿನ್ನಪವ ಇನ್ನಾರು ಕೇಳುವರು’ ಎಂಬ ಮಾತು ಇಂದಿನ ಸಮಸ್ಯೆ ಆ ಕಾಲದಲ್ಲಿಯೂ ಇತ್ತು ಎಂಬುದನ್ನು ಸೂಚಿಸುತ್ತದೆ. ‘ಓದಿಸುವ ಅಯ್ಯಂಗಳೆಲ್ಲ ಮಾತನಾಡಲು ಕಲಿಸಿದರು, ಮನ ಮಾತನಾಡ ಕಲಿಸಲಿಲ್ಲ’ ಎಂದು ಬಸವಣ್ಣನವರು ಹೇಳುತ್ತಾರೆ.

ದ್ರೌಪದಿ ತನ್ನೆಲ್ಲ ಮಕ್ಕಳನ್ನು ಕೊಂದ ಅಶ್ವತ್ಥಾಮನನ್ನು ಕೊಲ್ಲುವುದು ಬೇಡ. ಆತನ ತಾಯಿಗೆ ಎಷ್ಟು ಕಷ್ಟವಾಗಬಹುದು ಎನ್ನುವ ಮೂಲಕ ಮಾತೃ ಹೃದಯವನ್ನು ತೋರಿಸುತ್ತಾಳೆ. ಇದು ಭಾಗವತದಲ್ಲಿಂದ ಕುಮಾರವ್ಯಾಸ ತೆಗೆದುಕೊಂಡಿದ್ದಾನೆ.”

ಹೀಗೆ ಸಾಗುತ್ತದೆ ಮಿತ್ರರ ಉಪನ್ಯಾಸದ ಆತ್ಮೀಯ ವೈಖರಿ..

ಅ. ರಾ. ಮಿತ್ರರ ಸಾಧನೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಅವರಿಗೆ ಹಲವಾರು ಪ್ರಶಸ್ತಿಗಳನ್ನಿತ್ತು ಗೌರವಿಸಿವೆ: ಇವುಗಳಲ್ಲಿ ಗೊರೂರು ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ನವರತ್ನರಾಮ ಪ್ರಶಸ್ತಿ ಮತ್ತು ನಗೆರಾಜ ಪ್ರಶಸ್ತಿಗಳು ಮುಖ್ಯವಾದವು. ಕರ್ನಾಟಕ ಸಾಹಿತ್ಯ ಅಕಾಡೆಮಿಯು ವಿಮರ್ಶಾ ಕ್ಷೇತ್ರದಲ್ಲಿನ ಅವರ ಗಣನೀಯ ಸಾಧನೆಯನ್ನು ಗೌರವದಿಂದ ಪುರಸ್ಕರಿಸಿದೆ.

ಹಲವು ಬಾರಿ ಅ. ರಾ. ಮಿತ್ರರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಯಃಕಶ್ಚಿತ್ ನನ್ನಂತಹವನ ಮೇಲೆ ಕೂಡಾ ಅವರು ಹರಿಸಿದ ಪ್ರೀತಿ, ಸಜ್ಜನಿಕೆ, ಆತ್ಮೀಯತೆಗಳ ಪ್ರೇಮ ಸಿಂಚನ ಈ ಕಾಲದಲ್ಲಿ ಅಪರೂಪವಾದದ್ದು ಎಂಬ ಧನ್ಯತೆ ನನ್ನಲ್ಲಿ ಮೂಡಿಸಿದೆ. ನಾನು ಅಂದಿನ ದಿನಗಳಲ್ಲಿ ನಮ್ಮ ಎಚ್ ಎಮ್ ಟಿ ಗೆಳೆಯರೊಡನೆ ಕೂಡಿ ಸಂಪಾದಿಸಿದ ‘ಸಾಹಿತ್ಯ ರತ್ನ’ಗಳು ಕೃತಿಯನ್ನು ಬಿಡುಗಡೆ ಮಾಡಿ ಹರಸಿ ಕನ್ನಡ ಸಾಹಿತ್ಯ ಲೋಕದ ಬಗ್ಗೆ ಅವರು ನೀಡಿದ ಉಪನ್ಯಾಸ ಎಂದೆಂದೂ ನಮ್ಮ ಹೃದಯದಲ್ಲಿ ಹಸುರಾಗಿ ಉಳಿಯುವಂತಿದೆ. ಅವರ ಮನೆಯ ಕಾಫಿಯ ಸ್ವಾದ ಕೂಡಾ.

ಲೇಖನ: ತಿರು ಶ್ರೀಧರ.

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)