ಬಿ. ಎಂ. ಶ್ರೀಕಂಠಯ್ಯ

b-m-sri

ಉಪಾಧ್ಯಕ್ಷರು : ಬಿ. ಎಂ. ಶ್ರೀಕಂಠಯ್ಯ (೧೯೩೮೧೯೪೨)

ಸಾಧನೆ :

ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಲ್ಲಿ ಹೊಸಶಕೆಯನ್ನು ಡಿ.ವಿ.ಜಿ ಪ್ರಾರಂಭಿಸಿದರು.  ಅನಂತರ ಬಿ.ಎಂ.ಶ್ರೀ ಅವರು ನವಚೈತನ್ಯದ ನವೀನ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಪ್ರಾರಂಭಿಸಿದರು.  ಡಿ.ವಿ.ಜಿ. ಅವರು ಇದ್ದ ಕಡೆಯೇ ಬೆಂಗಳೂರಿನಲ್ಲಿ ಪರಿಷತ್ತನ್ನು ಪ್ರಬಲಗೊಳಿಸಿದರು. ಪರಿಷತ್ತಿಗೆ ಹೊಸಕಳೆ ತಂದರು.  ಬಿ.ಎಂ.ಶ್ರೀ ಅವರು ನಾಡಿನಾದ್ಯಂತ ಸಂಚರಿಸಿ ತಮ್ಮ ಅಸಾಧಾರಣ ಪಾಂಡಿತ್ಯ, ಅಮೋಘ ಕಂಠ, ಅದ್ಭುತ ವಾಗ್ವೈಖರಿಗಳಿಂದ ಕನ್ನಡನಾಡಿನ ಜನರನ್ನು ಹುರಿದುಂಬಿಸಿ ಜಾಗೃತಗೊಳಿಸಿದರು. ಆ ಮೂಲಕ ಪರಿಷತ್ತನ್ನು ಜನಮಾನಸದಲ್ಲಿ ಉಳಿಯುವಂತೆ  ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಬಗ್ಗೆ ಕನ್ನಡ ಜನತೆಯಲ್ಲಿ ಆಸಕ್ತಿ ಅಭಿಮಾನ ಮೂಡುವಂತೆ ಮಾಡಿದವರಲ್ಲಿ ಬಿಎಂಶ್ರೀ ಅಗ್ರಗಣ್ಯರು. ಮೂಲೆಯೊಂದರಲ್ಲಿ ವಿದ್ವಜ್ಜನರ ಮಂಡಳಿಗೆ ಸೀಮಿತವಾದ ಸಂಸ್ಥೆಯನ್ನು ಜನತಾ ಸಂಸ್ಥೆಯಾಗಲು ಶ್ರಮಿಸಿದರು.

ಪರಿಷತ್ತಿನ ಬಗ್ಗೆ ನಿರ್ದಿಷ್ಟ ಗುರಿಗಳನ್ನು ಇಟ್ಟುಕೊಂಡು ಬಿಎಂಶ್ರೀ ಕೆಲಸ ಮಾಡಿದರು. ಅವರು ತಿಳಿಸಿದ ಪರಿಷತ್ತಿನ ಗುರಿಗಳು ಹೀಗಿವೆ:

  • ಕನ್ನಡವನ್ನು ಬೆಳೆಸಿ, ಕನ್ನಡ ನಾಡಿನಲ್ಲೆಲ್ಲಾ ಒಂದು ರೂಪಕ್ಕೆ ತಂದು, ಅದರ ಮೂಲಕ ಕನ್ನಡಿಗರನ್ನೆಲ್ಲಾ ಒಂದು ಗೂಡಿಸುವುದು.
  • ಈ ಹೊಸಕಾಲದಲ್ಲಿ ಕನ್ನಡಿಗರಿಗೆ ಬೇಕಾದ ತಿಳಿವಳಿಕೆಯನ್ನೆಲ್ಲಾ ಕೊಟ್ಟು ಅದರ ಮೂಲಕ ಕನ್ನಡಿಗರನ್ನೆಲ್ಲಾ ಒಂದುಗೂಡಿಸುವುದು.
  • ಹಳೆಯ ಸಾಹಿತ್ಯ ಪ್ರಚಾರ, ಹೊಸ ಸಾಹಿತ್ಯದ ಪೋಷಣೆ, ವ್ಯಾಸಂಗ ಗೋಷ್ಠಿ, ಪರೀಕ್ಷೆ, ವಿಮರ್ಶೆ, ಪರಿಶೋಧನೆ.
  • ಸಮ್ಮೇಳನ, ವಸಂತೋತ್ಸವ, ಉಪನ್ಯಾಸ, ನಾಟಕ, ಗಮಕ ಕಲೆ ಜನ ಸಂಸ್ಕೃತಿ, ವಿನೋದ, ಸ್ಪರ್ಧೆ, ಮಕ್ಕಳ ನಲಿವು, ಕನ್ನಡ ಸಂಘಗಳ ಒಕ್ಕೂಟ, ಮತ್ತು ಕೈವಾಡದಿಂದ ಊರೂರು ಹಳ್ಳಿಹಳ್ಳಿಗಳಲ್ಲಿ ಬೆಳಕು, ಹುರುಪು, ಹೊಸಬಾಳು, ಹಬ್ಬ ಇತ್ಯಾದಿ.
  • ಒಂದು ಮಾತಿನಲ್ಲಿ ಕನ್ನಡಿಗರ ಪುನರುಜ್ಜೀವನ ಒಟ್ಟಿನಲ್ಲಿ ಪರಿಷತ್ತು ಕನ್ನಡಿಗರ ಸಾರ್ವಜನಿಕ ವಿದ್ಯಾಪೀಠ

ಹೀಗೆ ನಿರ್ದಿಷ್ಟ ಗುರಿಯಲ್ಲಿ ಪರಿಷತ್ತಿನ ಕೆಲಸವನ್ನು ಬಿಎಂಶ್ರೀ ಪ್ರಾರಂಭಿಸಿದರು. ಪ್ರಾರಂಭದಿಂದಲೂ ಪರಿಷತ್ತಿನ ಒಳಗನ್ನು ಹೊರಗನ್ನು ಚೆನ್ನಾಗಿ ಬಲ್ಲವರಾಗಿದ್ದರು ಬಿಎಂಶ್ರೀ.

ಅಚ್ಚುಕೂಟ ಸ್ಥಾಪನೆ: ಪರಿಷತ್ತಿನ ಪ್ರಕಟಣೆಗಳಲ್ಲದೆ, ನುಡಿ, ಪರಿಷತ್ಪತ್ರಿಕೆಗಳನ್ನು ಪರಿಷತ್ತಿನಿಂದ ಹೊರಗೆ ಅಚ್ಚಿಗೆ ಕೊಡುತ್ತಿದ್ದುದರಿಂದ ಕಾರ್ಯವಿಳಂಬದ ಜತೆಗೆ ಅಚ್ಚಿನ ವೆಚ್ಚ ಅಧಿಕವಾಗುತ್ತಿತ್ತು ಹೀಗಾಗಿ ಪರಿಷತ್ತಿಗೇ ಒಂದು ಸ್ವಂತ ಅಚ್ಚುಕೂಟ ಆವಶ್ಯಕತೆ ಇದೆ ಎಂಬುದನ್ನು ಬಿಎಂಶ್ರೀ ಮನಗಂಡರು. ಈ ಬಗ್ಗೆ ಕಾರ್ಯಕಾರಿ ಸಮಿತಿ ಚರ್ಚಿಸಿ ನಿರ್ಧಾರ ತೆಗೆದುಕೊಂಡ ನಂತರ ೬೫00 ರೂ ಅಂದಾಜು ವೆಚ್ಚದಲ್ಲಿ ಅಚ್ಚುಕೂಟವನ್ನು ಪ್ರಾರಂಭಿಸಲಾಯಿತು. ಆರಂಭದ ಬಂಡವಾಳಕ್ಕೆ ಬಿಎಂಶ್ರೀ ಅವರೇ ೫000ರೂ ಗಳನ್ನು ಮತ್ತೆ ಮರುವರ್ಷ ೧000ರೂಗಳನ್ನು ಕೊಟ್ಟರು. ಒಂದು ಕಾಲದಲ್ಲಿ ಅತಿಥಿ ಕೊಠಡಿಯಾಗಿದ್ದ ಭಾಗದಲ್ಲಿ ಮುದ್ರಣಾಲಯದ ಸ್ಥಾಪನೆ ಆಯಿತು. ಅದಕ್ಕಾಗಿ ಕಟ್ಟಡ ನಿರ್ಮಾಣಕ್ಕೆ ೧೯೪0ರಲ್ಲಿ ೧೨00ರೂ ವೆಚ್ಚ ಮಾಡಲಾಯಿತು. ಮುದ್ರಣಾಲಯದ ಮೇಲ್ವಿಚಾರಣೆಗೆ ಮೈಸೂರು ಸರ್ಕಾರದ ಮುದ್ರಣಾಲಯದ ಮುಖ್ಯಾಧಿಕಾರಿಗಳಾಗಿದ್ದ ಬಿ.ಪುಟ್ಟಯ್ಯನವರನ್ನು ನೇಮಿಸಿದರು. ಮುದ್ರಣ ಕಲೆಯ ವಿಶೇಷ ವ್ಯಾಸಂಗಕ್ಕೆ ವಿದೇಶಕ್ಕೆ ಹೋಗಿ ಪರಿಣಿತಿ ಪಡೆದು ಬಂದಿದ್ದವರು ಪುಟ್ಟಯ್ಯನವರು. ಕನ್ನಡ ಸಾಹಿತ್ಯ ಪರಿಷತ್ತಿನ ಅಚ್ಚುಕೂಟ ಎಂದು ಹೆಸರಾಗಿದ್ದುದನ್ನು ಬಿಎಂಶ್ರೀ ಅವರ ಅಧ್ಯಕ್ಷಾವಧಿ ನಂತರ ಬಿಎಂಶ್ರೀ ಅಚ್ಚುಕೂಟವೆಂದು ನಾಮಕರಣ ಮಾಡಲಾಯಿತು. ಇಂದು ಅಚ್ಚುಕೂಟವನ್ನು ವಿದ್ಯುನ್ಮಾನ ಯಂತ್ರಗಳಿಂದ ಆಧುನೀಕರಣಗೊಳಿಸಲಾಗಿದೆ. ಈಗ ಇದು ಹಳೆಯ ಕಟ್ಟಡದಿಂದ ಸ್ವರ್ಣಮಹೋತ್ಸವದ ನೆಲಮಹಡಿಯ ವಿಶಾಲ ಸಭಾಂಗಣಕ್ಕೆ ಬಂದಿದೆ. ಪರಿಷತ್ತಿನ ಪ್ರಕಟಣೆಗಳು, ಪತ್ರಿಕೆಗಳು, ಗ್ರಂಥಗಳು, ನಿಘಂಟು ಮಾತ್ರ ಪರಿಷತ್ತಿನ ಮುದ್ರಣಾಲಯದಲ್ಲೇ ಮುದ್ರಣವಾಗುತ್ತಿವೆ. ಮೊದಲು ಪರಿಷತ್ತಿನ ಪ್ರಕಟಣೆಗಳ ಜೊತೆಗೆ ಇತರರ ಗ್ರಂಥಗಳನ್ನೂ ಅಚ್ಚುಮಾಡಲಾಗುತ್ತಿತ್ತು. ಶೇಷನಾರಾಯಣರು ಮುದ್ರಣಾಲಯದ ಮೇಲ್ವಿಚಾರಕರಾಗಿದ್ದಾಗ, ಮಾಸ್ತಿ ಮೊದಲಾದ ಪ್ರಖ್ಯಾತರ ಗ್ರಂಥಗಳೆಲ್ಲ ಪರಿಷತ್ತಿನ ಮುದ್ರಣಾಲಯದಲ್ಲೇ ತಪ್ಪಿಲ್ಲದೆ ಅಚ್ಚಾಗುತ್ತಿದ್ದವು.

ಹೊಸ ಕಲ್ಪನೆಗಳು ಸೃಜನಕವಿಗಳಾದ ಬಿ.ಎಂ.ಶ್ರೀ ಅವರಲ್ಲಿ ಧಾರಾಳವಾಗಿದ್ದವು.  ಕನ್ನಡ  ಸಾಹಿತ್ಯ ಪರಿಷತ್ತಿಗೆ ಒಂದು ಲಾಂಛನ ಇರಬೇಕು. ಒಂದು ಧ್ಯೇಯವಾಕ್ಯ ಇರಬೇಕು ಎಂಬ ಉದ್ದೇಶದಿಂದ ಕಲಾವಿದ ಇನಾಮತಿ ಅವರಿಂದ ಪರಿಷತ್ತಿನ ಲಾಂಛನವೊಂದನ್ನು ಮಾಡಿಸಿದರು. ಅದರಲ್ಲೂ ‘ಸಿರಿಗನ್ನಡಂಗೆಲ್ಗೆ’ಯನ್ನು  ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕರಲ್ಲಿ ಒಬ್ಬರಾದ ರಾ.ಹ. ದೇಶಪಾಂಡೆಯವರು  ವಿಶೇಷವಾಗಿ ಬಳಸಿದರು. ಪರಿಷತ್ತು, ಬಿ.ಎಂ.ಶ್ರೀ ಹಾಗೂ ಇತರರು ಇದಕ್ಕೆ ವ್ಯಾಪಕ ಪ್ರಚಾರವನ್ನು ನೀಡಿದರು ಹಾಗಾಗಿ ಎಲ್ಲ ಕಡೆ ಇದು ಪ್ರಚಾರಕ್ಕೆ ಬಂದಿತು.

ಮಹಿಳಾ ಶಾಖೆ ಪಾರಂಭ: ಸಾಹಿತ್ಯ ಪರಿಷತ್ತು, ಸ್ಥಾಪನೆ ಆಗುವ ಕಾಲಕ್ಕೆ ತಿರುಮಲಾಂಬ ಎನ್ನುವ ಗಣ್ಯ ಲೇಖಕಿಯರು ಕನ್ನಡದಲ್ಲಿದ್ದರು. ಡಿ. ಬಿಂದೂಬಾಯಿ ಎನ್ನುವ ಉತ್ಸಾಹೀ ಲೇಖಕಿಯರಿದ್ದರು. ಆದರೆ ಅವರಿಗೆಲ್ಲ ವೇದಿಕೆ ಇರಲಿಲ್ಲ. ಅದರ ಕೊರತೆಯನ್ನು ಹೋಗಲಾಡಿಸಿದರು. ಬಿ.ಎಂ.ಶ್ರೀ ಅವರು  ಮೊದಲಬಾರಿಗೆ ೧೯೩೮ರಲ್ಲಿ ಮಹಿಳಾ ಶಾಖೆಯನ್ನು ಡಿ. ಬಿಂದೂಬಾಯಿ ಅವರ ನೇತೃತ್ವದಲ್ಲಿ, ಪರಿಷತ್ತಿನಲ್ಲಿ ಪ್ರಾರಂಭಿಸಿದರು. ಮಹಿಳಾ ಕಾರ್ಯಕ್ರಮಗಳಿಗೆ ಒಂದು ಸ್ವತಂತ್ರ ನೆಲೆಮಾಡಿಕೊಟ್ಟರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಇರಲಿಲ್ಲ. ಪರಿಷತ್ತಿನ ಕಾರ್ಯಕಾರಿ ಸಮಿತಿಯಲ್ಲಿ ಒಬ್ಬರಾದರೂ ಮಹಿಳೆ ಪ್ರಾರಂಭದಲ್ಲಿ ಇರಲಿಲ್ಲ. ಸಾಹಿತ್ಯ ಸ್ಮಮೇಳನದ ಅಧ್ಯಕ್ಷತೆ ಮಹಿಳೆಯರಿಗೆ ಸಿಕ್ಕಿದ್ದು ಜಯದೇವಿ ತಾಯಿ ಲಿಗಾಡೆ ಅಧ್ಯಕ್ಷರಾದಂದಿನಿಂದ. ಪರಿಸ್ಥಿತಿ ಹೀಗಿದ್ದಾಗ ಮಹಿಳೆಯರ ಕಾರ್ಯಕ್ರಮಗಳನ್ನು ನಡೆಸಲು ಮತ್ತು ಪರಿಶೀಲಿಸಲು ಮಹಿಳಾ ಶಾಖೆಯೊಂದನ್ನು ಮೊದಲಿಗೆ ಪ್ರಾರಂಭಿಸಿದವರು ಬಿಎಂಶ್ರೀ. ಡಿ. ಚಂಪಾಬಾಯಿ ಅವರು ಮೊದಲ ಕಾರ್ಯದರ್ಶಿನಿ ಆದರು. ಸಾಮಾಜಿಕ ಕಾರ್ಯಕರ್ತೆ ಆರ್. ಕಲ್ಯಾಣಮ್ಮನವರು ಸಕ್ರಿಯರಾಗಿ ಭಾಗವಹಿಸಿದರು.

ಕನ್ನಡ ಬಾವುಟ ಪ್ರಕಟಣೆ: ಪರಿಷತ್ತಿನ ವಿಶೇಷ ಕೊಡುಗೆಯಾಗಿ ಕನ್ನಡ ಬಾವುಟವೆಂಬ ಕಾವ್ಯ ಸಂಕಲನವೊಂದನ್ನು ಪರಿಶ್ರಮದಿಂದ  ಸಿದ್ಧಪಡಿಸಿದರು ಇದರ ಪ್ರಕಟಣೆಯ ಉದ್ದೇಶವನ್ನು ಹೀಗೆ ಹೇಳಿದ್ದಾರೆ :

“ಕನ್ನಡ ನಾಡು ಎಚ್ಚೆತ್ತು, ಕೂಡಿಕೊಳ್ಳುತ್ತಿರುವ ದೊಡ್ಡ ಸಡಗರದಲ್ಲಿ ಕನ್ನಡ ನಾಡಿನ ಹೆಮ್ಮೆಯನ್ನು ಹಾಡಿರುವ ಕವಿಗಳಿಂದ ಆಯ್ದ ತಿರುಳೊಂದನ್ನು ಹಂಚಬೇಕೆಂಬ ಬಯಕೆ ಬಹುಕಾಲದಿಂದ ಕಡೆದು ಕುದಿಯುತ್ತಿತ್ತು. ಕನ್ನಡ ತಾಯಿ ಪಾದದಲ್ಲಿ ಹಿಂದಿನ ಹಿರಿಯ ಕವಿಗಳು, ಈಗಿನ ಕವಿಗಳು ಒಪ್ಪಿಸಿದ ಹೂಗಳನ್ನು ಬಾಚಿ ತೆಗೆದು ೩0 ವರುಷಗಳಿಂದ ನನ್ನ ಎದೆಯಲ್ಲಿ ತುಂಬಿ ಚಿಮ್ಮುತ್ತಿದ್ದವುಗಳನ್ನು ಇಲ್ಲಿ ದಂಡೆಗಟ್ಟಿದ್ದೇನೆ…. ತಾಯಡಿಯ ಹೂವುಗಳಿವು ನಾನು ನಾರು”. ೭ನೇ ಶತಮಾನದಿಂದ ಇತ್ತೀಚಿನವರೆಗೆ ಶಾಸನಗಳು, ಪೂರ್ವಸಾಹಿತ್ಯ, ನಾಡಪದಗಳು, ಇಂದಿನ ಹೊಸ ಕವಿತೆ ಎಂಬ ನಾಲ್ಕು ತೆನೆಗಳಲ್ಲಿ ಆಯ್ದ ಕವನಗಳು ಇಲ್ಲಿವೆ. ಹತ್ತಾರು ಮರುಮುದ್ರಣಗಳಾದ ಈ ಜನಪ್ರಿಯ ಕೃತಿ, ಪರಿಷತ್ತಿನ ಹೆಮ್ಮೆಯ ಪ್ರಕಟಣೆಗಳಲ್ಲಿ ಒಂದು.

ಕನ್ನಡ ಸಾಹಿತ್ಯ ಪರೀಕ್ಷೆಗಳು: ಕನ್ನಡ ಸಾಹಿತ್ಯವನ್ನು ಶಾಲಾ ಕಾಲೇಜುಗಳಲ್ಲಿ ಓದಲಾಗದವರಿಗಾಗಿ ಅಕ್ಷರಾಭ್ಯಾಸದಿಂದ ಹಿಡಿದು ವಿಶ್ವವಿದ್ಯಾಲಯದ ಪದವೀಮಟ್ಟದವರೆಗೆ ಕನ್ನಡ ಸಾಹಿತ್ಯವನ್ನು ತಿಳಿಯುವ ಕಲಿಯುವ ಆಸಕ್ತರಿಗಾಗಿ ೧೯೪0 ಜೂನ್‍ನಲ್ಲಿ ಕನ್ನಡ ಅಣುಗ, ಕನ್ನಡ ಕಾವ, ಕನ್ನಡ ಜಾಣ, ಎಂಬ ಪರೀಕ್ಷೆಗಳನ್ನು ಬಿಎಂಶ್ರೀ ಪ್ರಾರಂಭಿಸಿದರು. ಅತ್ಯಂತ ಪ್ರಾಥಮಿಕ ಹಂತವಾದ ಅಕ್ಷರ ಕಲಿಕೆಯ ಹಂತವಾದ ಅಣುಗ ಪರೀಕ್ಷೆಯನ್ನು ೧೯೪೮ರ ಸುಮಾರಿಗೆ ಕೈಬಿಡಲಾಯಿತು. ೧೯೯೨ರಲ್ಲಿ ಪ್ರವೇಶ ಎಂಬ ಹೆಸರಿನಲ್ಲಿ ಪರೀಕ್ಷೆ ಪ್ರಾರಂಭವಾಯಿತು. ೧೯೬೬ರಲ್ಲಿ ಕನ್ನಡರತ್ನ ಪರೀಕ್ಷೆಯನ್ನು ಪ್ರಾರಂಭಿಸಲಾಯಿತು. ಸರ್ಕಾರಿ ಉದ್ಯೋಗಕ್ಕೆ ಸೇರಿದವರು ಪಾಸುಮಾಡಬೇಕಾದ ಕನ್ನಡ ಪರೀಕ್ಷೆಗೆ ಸಮಾನ ಎಂದು ಪರಿಗಣಿಸಿ ಸರ್ಕಾರ ಈಚೆಗೆ ಮನ್ನಣೆ ಕೊಟ್ಟಿರುವುದರಿಂದ ಹೆಚ್ಚು ಜನರು ಈ ಪರೀಕ್ಷೆಗೆ ಕೂಡುತ್ತಾರೆ. ಪ್ರಾರಂಭದಲ್ಲಿ ಪರಿಷತ್ತಿನಲ್ಲಿ ಈ ಹಿಂದೆ ಪರೀಕ್ಷೆಗಳಿಗೆ ತರಗತಿಗಳು ನಡೆಯುತ್ತಿದ್ದವು. ಈಗ ಪರಿಷತ್ತು ಪರೀಕ್ಷೆಗಳನ್ನು ಮಾತ್ರ ನಡೆಸುತ್ತಿದೆ. ಈ ಪರೀಕ್ಷೆಗಳು ಒಂದು ಕಾಲದಲ್ಲಿ ಎಷ್ಟು ಜನಪ್ರಿಯವಾಗಿತ್ತು ಎಂದರೆ ಮನೆಯ ಮುಂದೆ ಕನ್ನಡ ಜಾಣ ಎಂದು ಬೋರ್ಡು ಹಾಕಿಕೊಳ್ಳುತ್ತಿದ್ದರು ಮತ್ತು  ಪುಸ್ತಕಗಳಲ್ಲಿ ಹಾಗೆಂದು ಅಚ್ಚು ಮಾಡಿಸಿಕೊಳ್ಳುತ್ತಿದ್ದರು.

‘ಕನ್ನಡನುಡಿ’ ಪ್ರಾರಂಭ: ಪರಿಷತ್ತು ಮೊದಲಿನಿಂದಲೂ ಪರಿಷತ್ ಪತ್ರಿಕೆಯನ್ನು ಪ್ರಕಟಿಸುತ್ತಿದೆ. ಪರಿಷತ್ತಿನ ಸಮ್ಮೇಳನಗಳ ವಿವರ ಕಾರ್ಯಕಾರಿಸಮಿತಿ ವಾರ್ಷಿಕಾಧಿವೇಶನ ಸಾಧನೆಗಳು, ಗ್ರಂಥ ವಿಮರ್ಶೆ, ಹೊಸಪುಸ್ತಕಗಳ ಪಟ್ಟಿ, ವಿದ್ವತ್ಪೂರ್ಣ ವಿವರಗಳು, ಲೇಖನಗಳು ಇತ್ಯಾದಿ ಪರಿಷತ್ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದವು.

ಈ ಪತ್ರಿಕೆ ಬಹುಮಟ್ಟಿಗೆ ವಿದ್ವತ್ ಪತ್ರಿಕೆಯಾಗಿತ್ತು. ವಿದ್ವಜ್ಜನವಲ್ಲದ ಸಾಮಾನ್ಯ ಸದಸ್ಯರು ಮತ್ತು ಸಾರ್ವಜನಿಕರೊಡನೆ  ಸಂಪರ್ಕ ಹೊಂದಲು ಒಂದು ಪ್ರತ್ಯೇಕ ಪತ್ರಿಕೆಯನ್ನು ಹೊರಡಿಸುವ ಯೋಚನೆ ಡಿವಿಜಿ ಅವರಿಗಿತ್ತು. ಆದರೆ ಅವರ ಕಾಲದಲ್ಲಿ ಆರ್ಥಿಕ ಕೊರತೆಯಿಂದ ಪ್ರತ್ಯೇಕ ಪತ್ರಿಕೆ ಹೊರಡಿಸಲಾಗಲಿಲ್ಲ. ಆದ್ದರಿಂದ ಪರಿಷತ್ ಪತ್ರಿಕೆಯ ಭಾಗಗಳನ್ನೇ ಸಂಗ್ರಹ ಪ್ರತಿಯಾಗಿ ಪ್ರಕಟಿಸುವ ಯೋಜನೆ ರೂಪಿತವಾಗಿತ್ತು. ಸಾಮಾನ್ಯ ಸದಸ್ಯರಲ್ಲಿ ೬ ರೂ ವಾರ್ಷಿಕ ಕೊಟ್ಟರೆ ಪರಿಷತ್ಪತ್ರಿಕೆ (ಪೂರಾ), ೩ರೂ ಚಂದಾ ಕೊಟ್ಟವರಿಗೆ ಸಂಗ್ರಹಪ್ರತಿ ಕೊಡುವ ವ್ಯವಸ್ಥೆ ಮಾಡಲಾಯಿತು. ಈ ಸಂಗ್ರಹಪ್ರತಿಯಲ್ಲಿ “ಪರಿಷತ್ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಪರಿಷತ್ತಿನ ಸುದ್ದಿಗಳು, ಸಂಪಾದಕೀಯ ಟಿಪ್ಪಣಿಗಳು, ಕಾರ್ಯ ನಿರ್ವಾಹಕ ಮಂಡಳಿಯ ಮುಖ್ಯನಿರ್ಣಯಗಳು, ಪರಿಷತ್ತಿನ ಪ್ರಚಾರದ ದೃಷ್ಟಿಯಿಂದ ಆವಶ್ಯಕವೆಂದು ಕಂಡು ಬಂದ ಲೇಖನಗಳನ್ನು ಕೊಡಲಾಗುತ್ತಿತ್ತು.

ಬಿಎಂಶ್ರೀ ಅವರು ಉಪಾಧ್ಯಕ್ಷರಾದ ಕೂಡಲೇ ಈ ಸಂಗ್ರಹ ಪ್ರತಿಗೆ ಬದಲಾಗಿ ಪ್ರತ್ಯೇಕ ಪತ್ರಿಕೆಯನ್ನೇ ಪ್ರಾರಂಭಿಸಿದರು. ೧೯೩೮ ಅಕ್ಟೋಬರ್ ೪ ವಿಜಯದಶಮಿ ದಿನದಂದು ‘ಕನ್ನಡ ನುಡಿ’ ವಾರಪತ್ರಿಕೆ ಪ್ರಾರಂಭವಾಯಿತು. ಅನಕೃ ಅವರು ಪ್ರಥಮ ಸಂಪಾದಕರಾದರು. ಆಗಾಗಿನ ಪರಿಷತ್ತಿನ ಕಾರ್ಯಕಲಾಪಗಳು, ಉತ್ಸವಾದಿ ಉಪನ್ಯಾಸಗಳೂ ಸುದ್ದಿಗಳು ಕನ್ನಡ ಚಟುವಟಿಕೆಗಳು ಮಹಾಜನರ ಗಮನಕ್ಕೆ ಬರಲು ಇದರಿಂದ ಸಾಧ್ಯವಾಯಿತು. ಅನಂತರ ನಿಬಂಧನೆಗಳಲ್ಲಿ ಸದಸ್ಯರಿಗೆ ಉಚಿತವಾಗಿ ಕೊಡತಕ್ಕದ್ದೆಂದು ನಿಯಮ ಸೇರಿತು. ಈಗಲೂ ಸದಸ್ಯರಿಗೆ ಕನ್ನಡ ನುಡಿ ಉಚಿತ. ಮೊದಲು ವಾರಪತ್ರಿಕೆಯಾಗಿ ಬರುತ್ತಿದ್ದ ಪತ್ರಿಕೆ ಆರ್ಥಿಕ ಅನಾನುಕೂಲತೆಯಿಂದ ಮಾಸಪತ್ರಿಕೆ ಆಯಿತು. ೧೯೬೯ರಿಂದ ಪಕ್ಷಪತ್ರಿಕೆಯಾಗಿ ೧೯೯೧ರಿಂದ ಮಾಸಪತ್ರಿಕೆ ಆಗಿರುತ್ತೆ. ಇತ್ತೀಚೆಗೆ  ಇದು ತ್ರೈಮಾಸಿಕ ಪತ್ರಿಕೆಯಾಗಿ ಬರುತ್ತಿದೆ.

ಬಿ.ಎಂ.ಶ್ರೀ ಅವರು ಉಪಾಧ್ಯಕ್ಷರಾಗಿದ್ದಾಗ ಪರಿಷತ್ತಿಗೆ ೨೫ ವರುಷ ತುಂಬಿತು. ೩0-೬-೧೯೪0ರಿಂದ ೧-೭-೧೯೪0 ರವರೆಗೆ ಬೆಂಗಳೂರು ಪುರಭವನದಲ್ಲಿ ಒಂದು ವಾರದ ಕಾಲ ವಿಜೃಂಭಣೆಯಿಂದ ಬೆಳ್ಳಿ ಹಬ್ಬದ ಕಾರ್ಯಕ್ರಮಗಳು ನಡೆದವು. ನಾಲ್ವಡಿ ಕೃಷ್ಣರಾಜ ಒಡೆಯರ್ ಸಮಾರಂಭವನ್ನು ಉದ್ಘಾಟಿಸಿದರು.

Tag: B.M.Srikantaiah, B. M. Srikantaiah

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)